ಭಾನುವಾರ, ಜೂನ್ 26, 2022
22 °C

ಉದ್ಯೋಗಿಗಳ ಅಭಿವೃದ್ಧಿ ನಿಧಿಗೆ 5 ಕೋಟಿ ಡಾಲರ್ ಮೀಸಲಿರಿಸಿದ ಆ್ಯಪಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

PV Photo

ಕ್ಯುಪರ್ಟಿನೊ, ಕ್ಯಾಲಿಫೋರ್ನಿಯಾ: ಉದ್ಯೋಗಿಗಳ ಅಭಿವೃದ್ಧಿ ನಿಧಿಯಡಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 5 ಕೋಟಿ ಡಾಲರ್ (ಸುಮಾರು ₹3,788,774,650) ಮೊತ್ತವನ್ನು ಆ್ಯಪಲ್ ಘೋಷಿಸಿದೆ.

ಈ ಕಾರ್ಯಕ್ರಮಕ್ಕಾಗಿ ಆ್ಯಪಲ್, ಜಾಗತಿಕವಾಗಿ ಅಂತರರಾಷ್ಟ್ರೀಯ ಕಾರ್ಮಿಕರ ಒಕ್ಕೂಟ, ಅಂತರರಾಷ್ಟ್ರೀಯ ವಲಸಿಗರ ಒಕ್ಕೂಟ ಮತ್ತು ವಿವಿಧ ಕ್ಷೇತ್ರಗಳ ಶಿಕ್ಷಣ ತಜ್ಞರು ಹಾಗೂ ಎನ್‌ಜಿಒಗಳ ಸಹಯೋಗ ಪಡೆದುಕೊಂಡಿದೆ.

ಪೂರೈಕೆದಾರರ ಸರಪಣಿಯಲ್ಲಿ ಬರುವ ಎಲ್ಲ ವರ್ಗದ ಕಾರ್ಮಿಕರು ಮತ್ತು ವಿವಿಧ ವಿಭಾಗಗಳಲ್ಲಿನ ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಕೌಶಲ ಅಭಿವೃದ್ಧಿ ತರಬೇತಿ, ಹೊಸ ವಿಚಾರಗಳ ಬಗ್ಗೆ ಅರಿವು ಮತ್ತು ಉದ್ಯೋಗದ ಸ್ಥಳದಲ್ಲಿನ ಹಕ್ಕುಗಳು, ಸೌಲಭ್ಯಗಳ ಕುರಿತು ಈ ಯೋಜನೆಯಡಿ ಆ್ಯಪಲ್ ಕಾರ್ಯಕ್ರಮ ಜಾರಿಗೊಳಿಸಲಿದೆ.

ಅಂತರರಾಷ್ಟ್ರೀಯ ಸಂಸ್ಥೆಗಳ ಮಾನದಂಡಕ್ಕೆ ಅನುಗುಣವಾಗಿ ಉದ್ಯೋಗಿಗಳ ಕೌಶಲ ಅಭಿವೃದ್ಧಿ ಮತ್ತು ಯೋಜನೆಗಳನ್ನು ಒದಗಿಸಲು ಆ್ಯಪಲ್ ಬದ್ಧವಾಗಿದೆ ಎಂದು ಕಂಪನಿ ಹೇಳಿದೆ.

ನಮ್ಮ ಉದ್ಯೊಗಿಗಳಿಗೆ ಅಗತ್ಯ ಕೌಶಲ ತರಬೇತಿ, ಸೌಲಭ್ಯಗಳನ್ನು ಒದಗಿಸಿ, ಅವರಿಗೆ ತರಬೇತಿ ಕಾರ್ಯಕ್ರಮ ರೂಪಿಸುವ ಮೂಲಕ, ಅಭಿವೃದ್ಧಿ ಸಾಧಿಸಲು ಎಲ್ಲ ರೀತಿಯಲ್ಲೂ ಕಂಪನಿ ನೆರವಾಗಲಿದೆ ಎಂದು ಆ್ಯಪಲ್‌ನ ಪೂರೈಕೆ ಸರಪಣಿ ನಾವೀನ್ಯತೆ ಮತ್ತು ಪರಿಸರ ವಿಭಾಗದ ಹಿರಿಯ ನಿರ್ದೇಶಕರಾದ ಸಾರಾ ಚಾಂಡ್ಲರ್ ತಿಳಿಸಿದ್ದಾರೆ.

ಕಂಪನಿಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕ್ಷೇಮಾಭಿವೃದ್ಧಿಗಾಗಿ ಆ್ಯಪಲ್ ಕೈಗೊಳ್ಳುವ ಕಾರ್ಯಕ್ರಮಗಳು, ಇತರರಿಗೂ ಮಾದರಿಯಾಗಲಿವೆ. ಬದಲಾವಣೆಯನ್ನು ತರಲು, ನಾವು ಜಾಗತಿಕ ಸಂಸ್ಥೆಗಳು, ಸರ್ಕಾರ, ಎನ್‌ಜಿಒ ಮತ್ತು ಉದ್ಯಮ ತರಬೇತಿ ಸಂಸ್ಥೆಗಳ ಜತೆ ಸಹಯೋಗ ಹೊಂದಿದ್ದೇವೆ, ಇದು ಆ್ಯಪಲ್ ಉದ್ಯೋಗಿಗಳಿಗೆ ಅಗತ್ಯ ಪ್ರಯೋಜನ ಒದಗಿಸಲಿದ್ದು, ಜಾಗತಿಕವಾಗಿ ಏಕರೂಪದಲ್ಲಿ ಜಾರಿಯಾಗಲಿದೆ ಎಂದು ಅಂತರರಾಷ್ಟ್ರೀಯ ವಲಸಿಗರ ಒಕ್ಕೂಟದ ಆ್ಯಮಿ ಪೋಪ್ ತಿಳಿಸಿದ್ದಾರೆ.

ಆ್ಯಪಲ್, ಪೂರೈಕೆ ಸರಪಣಿಯಲ್ಲಿ ಜನರು ಮತ್ತು ಪರಿಸರದ ಕುರಿತ 16ನೇ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸುತ್ತಿದೆ. ಇದರ ಮೂಲಕ ಕಂಪನಿ ಹೇಗೆ ಉದ್ಯೋಗಿಗಳ ಬೆಂಬಲಕ್ಕೆ ವಿವಿಧ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದೆ, ಹೊಸ ತಂತ್ರಜ್ಞಾನ ಬಳಕೆ ಮತ್ತು ಪರಿಸರಕ್ಕೆ ಪೂರಕ ತಾಂತ್ರಿಕತೆ ಅಳವಡಿಸಿದೆ ಎನ್ನುವುದನ್ನು ತಿಳಿಸಲಿದೆ.

ಕೌಶಲ ಮತ್ತು ಉದ್ಯೋಗ ಅಭಿವೃದ್ಧಿ ಕಾರ್ಯಕ್ರಮಗಳು
ಆ್ಯಪಲ್, 2008ರಿಂದ ವೈಯಕ್ತಿಕ, ವರ್ಚುವಲ್ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮ ಮೂಲಕ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದೆ.

ಹೊಸ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಯೋಜನೆಗಳ ಪ್ರಯೋಜನಗಳು ಆರಂಭದಲ್ಲಿ ಅಮೆರಿಕ, ಚೀನಾ, ಭಾರತ ಮತ್ತು ವಿಯೆಟ್ನಾಂನಲ್ಲಿನ ಆ್ಯಪಲ್ ಉದ್ಯೋಗಿಗಳಿಗೆ ಲಭ್ಯವಾಗಲಿದೆ. 2023ರ ವೇಳೆಗೆ, 1 ಲಕ್ಷಕ್ಕೂ ಅಧಿಕ ಪೂರೈಕೆದಾರ ಉದ್ಯೋಗಿಗಳು ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಜತೆಗೆ ಅಗತ್ಯ ತಾಂತ್ರಿಕ ತರಬೇತಿ ಪಡೆಯುವ ನಿರೀಕ್ಷೆಯಿದೆ ಎಂದು ಆ್ಯಪಲ್ ಹೇಳಿದೆ. ಅದರಲ್ಲಿ ಕೋಡಿಂಗ್, ರೊಬೊಟಿಕ್ಸ್ ಮತ್ತು ಅತ್ಯಾಧುನಿಕ ಉತ್ಪಾದನಾ ಚಟುವಟಿಕೆ, ಪರಿಸರ ಸ್ನೇಹಿ ಕ್ರಮಗಳೂ ಇರಲಿವೆ. ಈವರೆಗೆ, 50 ಲಕ್ಷಕ್ಕೂ ಅಧಿಕ ಮಂದಿ ಆ್ಯಪಲ್ ಉದ್ಯೋಗಿಗಳ ಕೌಶಲ ತರಬೇತಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಉದ್ಯೋಗಿಗಳ ಹಕ್ಕುಗಳ ತರಬೇತಿ
ಆ್ಯಪಲ್ ಉತ್ಪಾದನಾ ಘಟಕ ಮತ್ತು ಪೂರೈಕೆ ಸರಪಣಿಯಲ್ಲಿನ ಎಲ್ಲ ಉದ್ಯೋಗಿಗಳಿಗೆ, ಕಂಪನಿ ನಿಯಮದ ಪ್ರಕಾರ, ಉದ್ಯೋಗಿಗಳ ಹಕ್ಕು ಮತ್ತು ಸೌಲಭ್ಯಗಳ ಕುರಿತು ತರಬೇತಿ ನೀಡಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳ ನಿಯಮದಂತೆ, ಉದ್ಯೋಗಿಗಳಿಗೆ ನೀಡಲಾಗುವ ಎಲ್ಲ ಹಕ್ಕುಗಳು, ಸೌಲಭ್ಯ ದೊರೆಯುವಂತೆ ಕಂಪನಿ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದೆ. ಈವರೆಗೆ 2.3 ಕೋಟಿ ಮಂದಿ ಉದ್ಯೋಗಿಗಳ ಹಕ್ಕುಗಳ ತರಬೇತಿ ಪಡೆದಿದ್ದಾರೆ ಎಂದು ಆ್ಯಪಲ್ ಹೇಳಿದೆ.

ಅಲ್ಲದೆ, ಸುರಕ್ಷಿತ ಮತ್ತು ಗೌರವಯುತ ಕೆಲಸದ ವಾತಾವರಣ, ಅವಕಾಶ ಇರುವಂತೆ ಆ್ಯಪಲ್ ಕ್ರಮ ಕೈಗೊಳ್ಳಲಿದೆ.

ಜತೆಗೆ, ಕೆಲಸದ ಸ್ಥಳಗಳಲ್ಲಿನ ಕುಂದುಕೊರತೆ, ಸಲಹೆ ಮತ್ತು ಸೂಚನೆಯನ್ನು ಉದ್ಯೋಗಿಗಳು ಮುಕ್ತವಾಗಿ ದಾಖಲಿಸುವಂತೆ ಮಾಡಲು ಹಾಟ್‌ಲೈನ್, ವಿವಿಧ ಸಂವಹನ ವೇದಿಕೆಯನ್ನು ಆ್ಯಪಲ್ ಕಲ್ಪಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು