ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಸಿಜನ್‌ ಬೇಕಾ ಆಕ್ಸಿಜನ್‌: ಕ್ಷಮಾ ವಿ. ಭಾನುಪ್ರಕಾಶ್‌ ಅವರ ಲೇಖನ

Last Updated 9 ನವೆಂಬರ್ 2022, 9:28 IST
ಅಕ್ಷರ ಗಾತ್ರ

‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ ಎಂಬ ಹೆಸರು ವೈದ್ಯಕೀಯ ಕ್ಷೇತ್ರಕ್ಕೆ ಗೊತ್ತಿತ್ತು; ಆದರೆ ಜನಸಾಮಾನ್ಯರಿಗೆ ತಿಳಿದಿರಲಿಲ್ಲ. ಕೋವಿಡ್‌ ಮೊದಲನೆಯ ಅಲೆಯ ಕೊನೆಯಲ್ಲಿ ಎಲ್ಲರಿಗೂ ಗೊತ್ತಾಗುವಂತಾಯಿತು...

******

‘ಮಕ್ಕಳಿರಲವ್ವ ಮನೆ ತುಂಬ’ ಎನ್ನುತ್ತದೆ ಜಾನಪದ. ಜಗತ್ತಿನ ಜನಸಂಖ್ಯೆ ಏರುಗತಿಯಲ್ಲಿ ಸಾಗಿದ್ದರೂ, ‘ಮನೆಗೊಂದಾದರೂ ಮಗುವಿರಲಿ’ ಎಂಬುದು ತಾಯಿಯ ಹೃದಯಪದ.

ಕನಸಿನ ಕೂಸುಗಳಾಗಿ ಹುಟ್ಟಿದ ಮಕ್ಕಳು, ಕೈಗೂಸಾಗಿರುವಾಗಲೇ ಲೋಕ ತೊರೆಯುವುದುಂಟು; ಹೀಗೆ, ಪುಟಾಣಿ ಮಕ್ಕಳ ಪ್ರಾಣಕ್ಕೆ ಎರವಾಗುವ ಅನೇಕ ಆರೋಗ್ಯಸಮಸ್ಯೆಗಳಲ್ಲಿ ‘ನ್ಯುಮೋನಿಯಾ’ ಕೂಡ ಒಂದು; ಕಡಿಮೆಯೆಂದರೂ ವರ್ಷಕ್ಕೆ ಬರೋಬ್ಬರಿ ಎಂಟು ಲಕ್ಷ ಮಕ್ಕಳು ನ್ಯುಮೋನಿಯಾದಿಂದ ಸಾವನ್ನಪ್ಪುತ್ತಾರೆ ಎನ್ನುತ್ತವೆ, ಯುನಿಸೆಫ್‌ನ ಸಮೀಕ್ಷೆಗಳು. ನ್ಯುಮೋನಿಯಾ, ಇತರ ಉಸಿರಾಟದ ಸಮಸ್ಯೆಗಳು ಮತ್ತು ಇತ್ತೀಚಿಗೆ ಜಗತ್ತನ್ನೇ ಕಾಡಿದ ಕೋವಿಡ್‌–19 ಚಿಕಿತ್ಸೆಯಲ್ಲಿ ಕೂಡ ಪ್ರಮುಖವಾಗಿ ಬೇಕಾಗಿದ್ದುದು ‘ಆಮ್ಲಜನಕ’. ಆಮ್ಲಜನಕವನ್ನು ಪಡೆಯಲು ಆಸ್ಪತ್ರೆಗಳಲ್ಲೇ ವಾರಗಟ್ಟಲೆ ಇರಲು ಎಲ್ಲರಿಗೂ ಸಾಧ್ಯವಿಲ್ಲ; ಪ್ಯಾಂಡೆಮಿಕ್‌ನ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಸ್ಥಳವೂ ಇರಲಿಲ್ಲ ಎಂಬ ಪರಿಸ್ಥಿತಿಯಿತ್ತು; ಆಗ ಸಹಾಯಕ್ಕೆ ಬಂದದ್ದು ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’; ಎಂದರೆ ಆಮ್ಲಜನಕದ ಕಾನ್ಸಂಟ್ರೇಟರ್‌.

‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ ಎಂಬ ಹೆಸರು ವೈದ್ಯಕೀಯ ಕ್ಷೇತ್ರಕ್ಕೆ ಗೊತ್ತಿತ್ತುಬಿಟ್ಟರೆ, ಜನಸಾಮಾನ್ಯರಿಗೆ ತಿಳಿದಿರಲಿಲ್ಲ; ಕೋವಿಡ್‌ ಮಹಾಮಾರಿಯ ಮೊದಲನೆಯ ಅಲೆಯ ಕೊನೆಕೊನೆಗೆ ಆಸ್ಪತ್ರೆಗಳು ತುಂಬಿತುಳುಕಿದಾಗ, ಮನೆಯಲ್ಲೇ ಚಿಕಿತ್ಸೆ ಪಡೆಯಲು ಸಹಾಯಕ ಎಂದು ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ನ ಬಗ್ಗೆ ವೈದ್ಯರು, ಸರ್ಕಾರಗಳು ಸುದ್ದಿಮಾಧ್ಯಮಗಳ ಮೂಲಕ ಜನರಿಗೆ ತಿಳಿಸಲು ಪ್ರಾರಂಭಿಸಿದರು; ಹೀಗೆ, ಈ ಹೆಸರು ಚಿರಪರಿಚಿತವಾಯ್ತು. ಇದೇನು ನೂರಿನ್ನೂರು ರೂಪಾಯಿಗಳಿಗೆ ಸಿಗಲು ಸಾಧ್ಯವೇ? ಹಾಗಾಗಿ, ಅನೇಕ ಸಮಾಜಸೇವಕ ಸಂಸ್ಥೆಗಳು ಬಾಡಿಗೆಗೆ ಅಥವಾ ಉಚಿತವಾಗಿ ಇವುಗಳ ವಿತರಣೆಯನ್ನು ಕೈಗೊಂಡವು. ಇದನ್ನು ಬಳಸಿ ಬದುಕುಳಿದವರಿಗೇ, ಅವರನ್ನು ಉಳಿಸಿಕೊಂಡವರಿಗೇ ಗೊತ್ತು, ಈ ಆವಿಷ್ಕಾರದ ಮಹತ್ವ.


ಆಮ್ಲಜನಕವನ್ನು ಕ್ರೋಡೀಕರಿಸುವ ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು, ಗಾಳಿಯಿಂದ ಆಮ್ಲಜನಕವನ್ನು, ಜೊತೆಗೆ ಚೂರೇ ಇಂಗಾಲದ ಡೈಆಕ್ಸೈಡನ್ನು ಬೇರ್ಪಡಿಸಿ, ಉಸಿರಾಡಲು ಬೇಕಾದಂತಹ ಪೂರಕ ಮಿಶ್ರಣವನ್ನು ತಯಾರಿಸಿ ರೋಗಿಗೆ ನೀಡುತ್ತವೆ. ಮುಖ್ಯವಾಗಿ ಗಾಳಿಯ ಪ್ರಮುಖ ಅಂಶವಾಗಿರುವ ‘ಸಾರಜನಕ’ವನ್ನು ಬೇರ್ಪಡಿಸುತ್ತದೆ. ಇವುಗಳಲ್ಲಿ ಸ್ಥೂಲವಾಗಿ ಎರಡು ಬಗೆ: ಒತ್ತಡವನ್ನು ಹಾಕಿ, ವಿವಿಧ ತಾಪಮಾನಗಳಲ್ಲಿ ವಿವಿಧ ಅನಿಲಗಳನ್ನು ಬೇರ್ಪಡಿಸುವ ತಂತ್ರವನ್ನು ಬಳಸುವ ‘ಪಿಎಸ್‌ಎ’ಗಳು ಒಂದೆಡೆಯಾದರೆ, ವಿವಿಧ ಪಾಲಿಮರ್‌ಗಳ ಪದರಗಳನ್ನು ಬಳಸಿ, ಬೇಡದ ಅನಿಲಗಳನ್ನು ಬೇರ್ಪಡಿಸಿ, ಆಮ್ಲಜನಕವನ್ನು ನಮಗೆ ನೀಡುವ ‘ಎಂಜಿಎಸ್‌’ಗಳು ಮತ್ತೊಂದು ಬಗೆ.

‘ಪಿಎಸ್‌ಎ’ ಎಂದರೆ ‘ಪ್ರೆಶರ್‌ ಸ್ವಿಂಗ್‌ ಅಡ್ಸಾರ್ಪ್ಶನ್‌’ ಎಂದರ್ಥ; ಇದರಲ್ಲಿ ಎರಡು ಸಿಲಿಂಡರ್‌ಗಳಿರುತ್ತವೆ. ಈ ಸಿಲಿಂಡರ್‌ಗಳ ಒಳಗೆ, ಹೊರಗಿನ ವಾತಾವರಣಕ್ಕಿಂತಲೂ ಎರಡೂವರೆ ಪಟ್ಟು ಹೆಚ್ಚು ಒತ್ತಡವಿರುತ್ತದೆ; ಜೊತೆಗೆ ‘ಝಿಯೋಲೈಟ್‌’ಗಳೆಂಬ ಖನಿಜಗಳ ಹರಳುಗಳು ಇರುತ್ತವೆ; ಒತ್ತಡವನ್ನು ಬಳಸಿ ಅನಿಲಗಳನ್ನು ಬೇರ್ಪಡಿಸಿ, ‘ಝಿಯೋಲೈಟ್‌’ನ ಸಹಾಯದಿಂದ ಸಾರಜನಕವನ್ನು ಹೀರಿಕೊಂಡು ಉಳಿದ ಮಿಶ್ರಣವನ್ನು ರೋಗಿಗೆ ನೀಡುತ್ತದೆ. ಇಲ್ಲಿ ಒಂದು ಸಿಲಿಂಡರ್‌ನಿಂದ ಆಮ್ಲಜನಕವಿರುವ ಮಿಶ್ರಣವು ಮೂಗಿನ ಕೊಳವೆಯ ಮೂಲಕ ರೋಗಿಗೆ ತಲುಪುವಷ್ಟರಲ್ಲಿ, ಮತ್ತೊಂದು ಸಿಲಿಂಡರ್‌ನಲ್ಲಿ ಇದೇ ಪ್ರಕ್ರಿಯೆ ನಡೆದು ಆಮ್ಲಜನಕದ ಕ್ರೋಡೀಕರಣ ನಡೆಯುತ್ತಿರುತ್ತದೆ.

ಎರಡನೆಯ ಬಗೆಯ ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ಗಳೆಂದರೆ, ‘ಎಂಜಿಎಸ್‌’ಗಳು; ‘ಎಂಜಿಎಸ್‌’ ಎಂದರೆ ‘ಮೆಂಬ್ರೇನ್‌ ಗ್ಯಾಸ್‌ ಸೆಪರೇಶನ್‌’ ಎಂದರ್ಥ; ಇಲ್ಲಿ ವಿಶೇಷವಾದ ಪದರಗಳನ್ನು ಬಳಸಿ ಗಾಳಿಯಿಂದ ಅದರ ವಿವಿಧ ಘಟಕಗಳಾದ ಅನಿಲಗಳನ್ನು ಬೇರ್ಪಡಿಸಲಾಗುತ್ತದೆ. ನಮ್ಮ ಸುತ್ತಲಿನ/ಒಳಗಿನ ಎಲ್ಲಾ ವಸ್ತುಗಳಂತೆ, ಅನಿಲಗಳಲ್ಲೂ ಪರಮಾಣುಗಳು/ಅಣುಗಳೇ ಇರುತ್ತವೆ ತಾನೇ? ಇಂತಹ ಪುಟಾಣಿ ಅಣುಗಳನ್ನು ಬೇರ್ಪಡಿಸಬೇಕಿದ್ದರೆ, ಅದಕ್ಕೆ ಬಳಕೆಯಾಗುವ ಪದರಗಳೂ ಆಣ್ವಿಕ ಮಟ್ಟದ ರಂಧ್ರಗಳನ್ನೇ ಹೊಂದಿರಬೇಕಲ್ಲವೇ? ಹಿಟ್ಟು ಜರಡಿ ಹಿಡಿಯುವುದಕ್ಕೂ, ಕಾಳುಗಳನ್ನು ಜರಡಿ ಹಿಡಿಯುವುದಕ್ಕೂ ಒಂದೇ ಜರಡಿ ಬಳಸಲು ಸಾಧ್ಯವಿಲ್ಲವಲ್ಲ, ಹಾಗೇ! ವಿವಿಧ ಅನಿಲಗಳಿಗಾಗಿಯೇ ವಿಶೇಷವಾದ ಆಣ್ವಿಕ ಜರಡಿಗಳನ್ನು ತಯಾರು ಮಾಡಿ ಬಳಸಲಾಗುತ್ತದೆ. ಹಾಗೆ, ಬೇಡದ ಅನಿಲಗಳನ್ನು ತೆಗೆದು, ಆಮ್ಲಜನಕವನ್ನು ರೋಗಿಗೆ ತಲುಪಿಸಲಾಗುತ್ತದೆ. ಆಮ್ಲಜನಕವು ರೋಗಿಯ ಅನುಕೂಲತೆಗೆ ತಕ್ಕಂತೆ ವಿವಿಧ ವೇಗಗಳಲ್ಲಿ ಅವರನ್ನು ತಲುಪಬಹುದು; ಉಸಿರಾಟದ ವೇಗಕ್ಕೆ ತಕ್ಕಂತೆ ಈ ಆಯ್ಕೆಗಳನ್ನು ಬದಲಾಯಿಸಿಕೊಳ್ಳಬಹುದು. ಇಂತಹ ಸಾಧನಗಳಲ್ಲಿ ಉತ್ಪಾದಿಸಲಾದ ಆಮ್ಲಜನಕವನ್ನು ವೈದ್ಯಕೀಯ ಬಳಕೆಗೆ ಮಾತ್ರವಲ್ಲ, ಅನೇಕ ಪ್ರಮುಖ ರಾಸಾಯನಿಕಗಳನ್ನು ಉತ್ಪಾದಿಸಲು ಕಚ್ಚಾವಸ್ತುವಾಗಿ, ಆಹಾರಸಂಸ್ಕರಣೆಯ ಭಾಗವಾಗಿ, ಗಾಜು ಮತ್ತು ಕಾಗದದ ಕಾರ್ಖಾನೆಯ ರಾಸಾಯನಿಕ ಪ್ರಕ್ರಿಯೆಗಳ ಭಾಗವಾಗಿ ಕೂಡ ಬಳಸಲಾಗುತ್ತದೆ.

‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ಗಳನ್ನು ತಯಾರಿಸಿದ್ದು ಯಾವುದೇ ಒಬ್ಬ ವಿಜ್ಞಾನಿಯಲ್ಲ, ಬದಲಿಗೆ ಒಂದು ವೈಜ್ಞಾನಿಕ ಸಮೂಹ; ಅನೇಕ ಭೌತವಿಜ್ಞಾನಿ, ರಸಾಯನ ವಿಜ್ಞಾನಿಗಳ ಕೊಡುಗೆ ಇದು.


ವಿಜ್ಞಾನವೆಂದೂ ನಿಂತ ನೀರಲ್ಲ. ಪ್ರತಿಯೊಂದು ಪ್ರಕ್ರಿಯೆ, ಆವಿಷ್ಕಾರ ಅಥವಾ ಅನ್ವೇಷಣೆಯು ಹೊಸ ರೂಪ ಪಡೆದುಕೊಳ್ಳುತ್ತಾ, ಹೊಸ ಸುಧಾರಣೆಗಳಿಗೆ ಒಳಗಾಗುತ್ತಾ ಸಾಗುತ್ತವೆ; ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ಗಳೂ ಇದಕ್ಕೆ ಹೊರತಲ್ಲ. ಈ ಎರಡೂ ಬಗೆಯ ‘ಆಕ್ಸಿಜನ್‌ ಕಾನ್ಸಂಟ್ರೇಟರ್‌’ಗಳನ್ನೂ ಮೊದಲು ತಯಾರಿಸಿದಾಗ, ಅವುಗಳ ಗಾತ್ರ, ಆಕಾರ, ತೂಕವು ಸುಲಭವಾಗಿ ಎಲ್ಲೆಂದರಲ್ಲಿ ಕೊಂಡೊಯ್ಯಲು ಸಹಕಾರಿಯಾಗಿರಲಿಲ್ಲ; 2000ದ ಇಸವಿಯ ನಂತರ ಪೋರ್ಟೆಬಲ್‌ ಕಾನ್ಸಂಟ್ರೇಟರ್‌ಗಳು ತಯಾರಾದವು.

ಯಾವುದೇ ಬಗೆಯ ಕಾನ್ಸಂಟ್ರೇಟರ್‌ಗಳಾದರೂ, ಅದರೊಳಗೊಂದು ಮೋಟಾರು ಓಡಲೇಬೇಕು. ಅದಕ್ಕೊಂದು ಶಕ್ತಿಯ ಮೂಲ ಬೇಕಲ್ಲವೇ? ಅದು ಸಾಮಾನ್ಯವಾಗಿ ವಿದ್ಯುತ್ತೇ! ಬ್ಯಾಟರಿಗಳ ಬಳಕೆ ಕೂಡ ಇತ್ತೀಚೆಗೆ ಸಾಧ್ಯವಾಗಿದೆ. ಆದರೆ, ಇಂದಿಗೂ ವಿದ್ಯುತ್‌ ಕಾಣದ ಅನೇಕ ಹಳ್ಳಿಗಳಿವೆ; ಅಲ್ಲೆಲ್ಲಾ ಬ್ಯಾಟರಿಗಳೂ ಸುಲಭವಾಗಿ ಲಭ್ಯವಿಲ್ಲ. ಜೀವ ಉಳಿಸಲು ಬೇಕಾದ ಇಂತಹ
ಒಂದು ಸಾಧನವು ಸರ್ಕಾರದ ಅಥವಾ ಸ್ವಯಂಸೇವಾ ಸಂಸ್ಥೆಗಳ ಮೂಲಕ ಸಿಕ್ಕರೂ, ಅವುಗಳನ್ನು ಬಳಸುವುದಕ್ಕೆ ಬೇಕಾದ
ಶಕ್ತಿಮೂಲದ ಕೊರತೆ ಎದ್ದುಕಾಣುತ್ತಿದೆ; ಇದಕ್ಕೆ ಪರಿಹಾರವಾಗಿ, ಯುನಿಸೆಫ್‌ ಮತ್ತು ಆಕ್ಸಿಜನ್‌ ಕೋಲ್ಯಾಬ್‌ನವರು ಸೌರವಿದ್ಯುತ್‌ ಚಾಲಿತ ಆಮ್ಲಜನಕ ಕಾನ್ಸಂಟ್ರೇಟರ್‌ಗಳನ್ನು ತಯಾರಿಸಿ, ಗ್ರಾಮಗಳಿಗೆ ತಲುಪಿಸಿದ್ದಾರೆ. ತೀರ ಇತ್ತೀಚೆಗೆ, ಅಂದರೆ
ಅಕ್ಟೋಬರ್‌ 2022ರಲ್ಲಿ, ಫ್ರೀಲ್ಯಾನ್ಸ್‌ ಸಂಶೋಧಕ ಡಾ. ಅಭಿಜಿತ್‌ ಲಾಲೆ ಅವರು ತಯಾರಿಸಿದ ಅತ್ಯಂತ ಚಿಕ್ಕ
‘ಆಮ್ಲಜನಕ ಕಾನ್ಸಂಟ್ರೇಟರ್‌’ ಮಾರುಕಟ್ಟೆಯಲ್ಲಿ ಲಭ್ಯವಾಗಿದ್ದು, ಉಸಿರಾಟದ ಸಮಸ್ಯೆಯಿರುವವರು ಇದನ್ನು ಆರಾಮಾಗಿ ಚೀಲದಲ್ಲಿಟ್ಟುಕೊಂಡು ಓಡಾಡಬಹುದಾಗಿದೆ; ಇದನ್ನೆಲ್ಲಾ ನೋಡಿದರೆ ಅನ್ನಿಸುವುದಿಷ್ಟೇ - ಯಾವುದೋ ಸಮಸ್ಯೆಗೆ ಉತ್ತರ ಸಿಗುತ್ತಿಲ್ಲವೇ? ವಿಜ್ಞಾನವನ್ನು ನಂಬಿರಿ, ಕಾಯಿರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT