ಗುರುವಾರ , ಜನವರಿ 21, 2021
29 °C

PV Web Exclusive | ಕೃತಕ ಬುದ್ಧಿಮತ್ತೆ: ಉದ್ಯೋಗ ಕಳೆಯುವುದೇ ಅಥವಾ ಸೃಜಿಸುವುದೇ?

ಇ.ಎಸ್. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಮನುಷ್ಯನ ಬುದ್ದಿ ವಿಕಾಸವಾಗುತ್ತಿದ್ದಂತೆ ಯಂತ್ರ ಹಾಗೂ ತಂತ್ರಜ್ಞಾನಗಳ ಆವಿಷ್ಕಾರಗಳು ನಡೆಯುತ್ತಲೇ ಇವೆ. ಕೈಯಲ್ಲೇ ನೇಯುವ ಸಾಧನಗಳನ್ನು ಆಧುನಿಕ ಪವರ್‌ಲೂಮ್‌ಗಳು ಆವರಿಸಿದವು. ಒಂದು ಗುಂಡಿ ಲಿಫ್ಟ್ ಸಹಾಯಕರನ್ನು ಮನೆಗೆ ಕಳುಹಿಸಿತು. ಅಂತರ್ಜಾಲದ ಬಳಕೆಯಿಂದ ಬಹಳಷ್ಟು ಟ್ರಾವೆಲ್ ಏಜೆನ್ಸಿಗಳನ್ನು ತಮ್ಮ ಸ್ವರೂಪವನ್ನೇ ಬದಲಿಸಿಕೊಳ್ಳುವಂತಾಯಿತು. ಸದ್ಯ ಪ್ರಚಲಿತದಲ್ಲಿರುವ ಹಾಗೂ ಭವಿಷ್ಯದ ತಂತ್ರಜ್ಞಾನ ಎಂದೇ ಭಾವಿಸಿರುವ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ತಂತ್ರಗಳಿಂದ ಸಾವಿರ ಮಂದಿ ಕೆಲಸ ಮಾಡುವ ಜಾಗದಲ್ಲಿ ಕೆಲವರಷ್ಟೇ ಸಾಕು ಎನ್ನುವ ದಿನಗಳು ದೂರವಿಲ್ಲ. ಭಾರತದಂತ ಅತಿ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಅನುಕೂಲದ ಜತೆಗೆ, ಇದನ್ನು ಉದ್ಯೋಗ ಸೃಜಿಸುವ ತಂತ್ರಜ್ಞಾನವನ್ನಾಗಿಸುವ ಬಗ್ಗೆ ಹೇಗೆ ಎಂಬ ಪ್ರಶ್ನೆಯೂ ತಂತ್ರಜ್ಞರನ್ನು ಕಾಡುತ್ತಿದೆ.

ಅದರಲ್ಲೂ ಕೋವಿಡ್–19 ಸೋಂಕು ವ್ಯಾಪಿಸಿದ ನಂತರ ಮನುಷ್ಯರ ನಡುವಿನ ಅಂತರ ಹೆಚ್ಚಿಸಿರುವುದರ ಜತೆಗೆ ಯಂತ್ರಗಳು ಮನುಷ್ಯರ ಜಾಗಗಳನ್ನು ಆಕ್ರಮಿಸಿವೆ. ಸ್ಯಾನಿಟೈಸರ್‌ ಸಿಂಪಡಿಸಲು ವಸ್ತ್ರ ಮಳಿಗೆಯೊಂದು ರೊಬೊ ನಿಯೋಜಿಸಿದ್ದರಿಂದ, ಆ ಕೆಲಸ ಮನುಷ್ಯನೊಬ್ಬನಿಂದ ಕಸಿದುಕೊಂಡಂತಾಯಿತು. 1990ರಿಂದ 2007ರ ಅವಧಿಯಲ್ಲಿ ಯಾಂತ್ರೀಕರಣಗೊಂಡ ಪರಿಣಾಮ ಅಮೆರಿಕದಲ್ಲಿ ನಾಲ್ಕು ಲಕ್ಷ ಉದ್ಯೋಗಕ್ಕೆ ಕತ್ತರಿ ಬಿತ್ತು. ಅಮೆರಿಕದಂತ ರಾಷ್ಟ್ರದಲ್ಲೇ ಕೋವಿಡ್ ಅವಧಿಯಲ್ಲಿ ಶೇ 42ರಷ್ಟು ಉದ್ಯೋಗ ನಷ್ಟವಾಗಿದೆ ಎಂದು ಟೈಮ್‌ ಪತ್ರಿಕೆ ವರದಿ ಮಾಡಿದೆ.

ಒಂದು ಕಾಲದಲ್ಲಿ ವೈಟ್‌ ಕಾಲರ್ ಕೆಲಸ ಎಂದೇ ಬಿಂಬಿತವಾಗಿದ್ದ ಬ್ಯಾಂಕ್‌ ನೌಕರಿ ಎಟಿಎಂ ಯಂತ್ರಗಳ ಆವಿಷ್ಕಾರದಿಂದ ಅರ್ಧ ಕುಸಿದಿದೆ. ಇದೀಗ ಮೊಬೈಲ್ ಬ್ಯಾಂಕಿಂಗ್‌ನಿಂದಂತೂ ಕಚೇರಿಯ ಇನ್ನಿತರ ಕೆಲಸಗಳಿಗಷ್ಟೇ ಬ್ಯಾಂಕ್‌ ಅಧಿಕಾರಿಗಳು ಸೀಮಿತವಾಗಿದ್ದಾರೆ. ಗ್ರಾಹಕರ ನಿರ್ವಹಣೆ ಎಲ್ಲವೂ ಕೃತಕ ಬುದ್ಧಿಮತ್ತೆಯೇ ನಿರ್ವಹಿಸುತ್ತಿರುವುದೂ ಈ ಕ್ಷೇತ್ರದ ವಿಸ್ತರಣೆಗೆ ಮತ್ತೊಂದು ಉದಾಹರಣೆ.

ಅದರಂತೆಯೇ ಕಂಪ್ಯೂಟರಿಕರಣಗೊಂಡಿದ್ದರಿಂದ ರಾಜ್ಯ ಸರ್ಕಾರದಲ್ಲಿ 6ಲಕ್ಷ ಇದ್ದ ಸರ್ಕಾರಿ ನೌಕರರ ಸಂಖ್ಯೆ ಈಗ 5ಲಕ್ಷಕ್ಕೆ ಕುಸಿದಿದೆ. ಆದರೆ ಜನಸಂಖ್ಯೆ ಮಾತ್ರ ನಾಗಾಲೋಟದಲ್ಲಿ ಏರುತ್ತಿರುವುದರಿಂದ ಉದ್ಯೋಗ ಸೃಜಿಸುವ ಪ್ರಕ್ರಿಯೆ ತಂತ್ರಜ್ಞಾನಗಳು ಎಷ್ಟು ಪೂರಕ ಎಂಬ ಚರ್ಚೆಗಳು ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿವೆಯಷ್ಟೇ.

ಆದರೆ, ಕೋವಿಡ್ ಮಾದರಿಯ ದುರಂತ ಮತ್ತೊಮ್ಮೆ ಎದುರಾದರೆ ನೌಕರರಿಲ್ಲದೇ ಕೆಲಸ ನಿರ್ವಹಿಸುವುದು ಹೇಗೆ? ಎಂಬ ಪ್ರಶ್ನೆಯನ್ನೇ ಇಟ್ಟುಕೊಂಡು ಕೈಗಾರಿಕೆಗಳು ಚಿಂತನೆ ಆರಂಭಿಸಿವೆ. ಒಂದು ಅಂದಾಜಿನ ಪ್ರಕಾರ 2025ರ ಹೊತ್ತಿಗೆ ರೊಬೊಗಳು 20ಲಕ್ಷ ಕಾರ್ಮಿಕರ ಜಾಗವನ್ನು ಆಕ್ರಮಿಸಲಿವೆ ಎಂದು ಬೋಸ್ಟನ್ ವಿಶ್ವವಿದ್ಯಾಲಯದ ವರದಿಯೊಂದು ಹೇಳಿದೆ. ‘ಯಂತ್ರಗಳಿಗೆ ಅನಾರೋಗ್ಯ ಕಾಡದು, ಅಂತರ ಕಾಪಾಡಿಕೊಳ್ಳುವ ಗೋಜು ಇಲ್ಲ, ಕೆಲಸದ ನಂತರ ವಿಶ್ರಾಂತಿಯ ಅಗತ್ಯವೂ ಬೇಕಿಲ್ಲ’ ಎಂಬ ಸಿದ್ಧಾಂತಗಳಿಗೆ ಕಂಪನಿಗಳು ಬಂದಿವೆ ಎಂದು ‘ವರ್ಲ್ಡ್ ವಿಥೌಟ್ ವರ್ಕ್’ ಪುಸ್ತಕದ ಲೇಖಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡೇನಿಯಲ್ ಸುಸ್ಕಿಂಡ್ ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯರೇ ಯಂತ್ರಗಳಾದರೆ...?

ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರದೀಪ ಜೆ. ರಾಮಾವತ್ ಅವರು ಈ ಕುರಿತು ಪಿವಿ ವೆಬ್ ಎಕ್ಸ್‌ಕ್ಲೂಸಿವ್‌ಗೆ ಪ್ರತಿಕ್ರಿಯಿಸಿ, ‘ಮನುಷ್ಯರು ಪ್ರಕೃತಿಗೆ ಹತ್ತಿರವಾದ ತಂತ್ರಜ್ಞಾನವನ್ನು ಬಳಸಬೇಕಾಗಿತ್ತು. ಆದರೆ ಅದರ ಬದಲು ಮನುಷ್ಯರೇ ಯಂತ್ರಗಳಾಗುವತ್ತ ಹೆಜ್ಜೆ ಹಾಕುತ್ತಿರುವುದು ಮನುಕುಲದ ಮಾರಕವೇ ಆಗಿದೆ. ದೇಶದಲ್ಲಿ ಪ್ರಾಥಮಿಕ ಶಿಕ್ಷಣವನ್ನೇ ಸಮರ್ಪಕವಾಗಿ ಈವರೆಗೂ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ ಅಳವಡಿಸಿ ಭವಿಷ್ಯದ ನಾಗರಿಕರ ಉದ್ಯೋಗ ಕಸಿಯುವ ಕೆಲಸ ಇದಾಗುವ ಅಪಾಯವೂ ಇದೆ’ ಎಂದು ಅಭಿಪ್ರಾಯಪಟ್ಟರು.

‘ಒಂದೆಡೆ ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿ ಬಹಳಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಕೃತಕ ಬುದ್ಧಮತ್ತೆ ಮೂಲಕ ಸಾವಿರಾರು ಎಕರೆ ಜಮೀನನ್ನು ಒಂದು ಯಂತ್ರ ನಿರ್ವಹಿಸುವಂತಾದರೆ ಉಳಿದವರ ಪಾಡೇನು? ಇಷ್ಟು ಮಾತ್ರವಲ್ಲ ರೈತರು ತಾವೇ ಕಂಡುಕೊಳ್ಳುತ್ತಿದ್ದ ಹೊಸ ಆವಿಷ್ಕಾರಗಳೂ ನಶಿಸಿ, ತಮ್ಮನ್ನೂ ಯಂತ್ರಗಳಿಗೆ ಅರ್ಪಿಸುಬೇಕಾಗಬಹುದು ಎಂಬ ಆತಂಕವೂ ಇದೆ’ ಎಂದರು.

‘ಗಾಂಧೀಜಿ ಹೇಳುವಂತೆ ಸಾವಿರ ಮನೆಯಲ್ಲಿ ಚರಕವಿದ್ದರೆ ಸಾವಿರ ಕುಟುಂಬಕ್ಕೆ ಕೆಲಸ ನೀಡಿದಂತೆ. ಆದರೆ ಆ ಅಷ್ಟೂ ಕೆಲಸವನ್ನು ಒಂದು ಯಂತ್ರ ಮಾಡಬಹುದಾದರೂ, ಅದು ಆ ಸಾವಿರ ಕುಟುಂಬಗಳ ಉದ್ಯೋಗವನ್ನು ಕಸಿಯುವುದು ಸುಳ್ಳಲ್ಲ. ಕೃತಕ ಬುದ್ಧಿಮತ್ತೆ ಒಂದಷ್ಟು ಕಾರ್ಪೊರೇಟ್‌ಗಳಿಗೆ ಆರಾಮ ನೀಡಬಹುದು. ಆದರೆ ಲಕ್ಷಾಂತರ ಸಾಮಾನ್ಯ ಜನರು ಉದ್ಯೋಗ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ. ಹೀಗಾಗಿ ಈ ವಿಚಿತ್ರ ಕಾಲಘಟ್ಟದಲ್ಲಿ ನಾವಿದ್ದೇವೆ. ಎಚ್ಚರದಿಂದ ಹೆಜ್ಜೆ ಇಡಬೇಕಾದ್ದು ಬಹಳಾ ಅಗತ್ಯ’ ಎಂದು ಡಾ. ಪ್ರದೀಪ ಅಭಿಪ್ರಾಯಪಟ್ಟರು.


ಡಾ. ಪ್ರದೀಪ

ಯಾಂತ್ರೀಕರಣ ಆಗುವ ಹೊತ್ತಿನಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ಬಿಗ್ ಡಾಟಾ ಬಳಕೆಯಿಂದಲೂ ಒಂದಷ್ಟು ಜನರಿಗೆ ತೊಂದರೆ ಆಗಲಿದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ಉದಾಹರಣೆಗೆ ಅಮೆರಿಕದಲ್ಲಿ ಕಪ್ಪು ವರ್ಣೀಯರು ಹಾಗೂ ಕಡಿಮೆ ವೇತನಕ್ಕೆ ದುಡಿಯುತ್ತಿರುವವರಿಗೆ ಕೃತಕ ಬುದ್ಧಿಮತ್ತೆ ಮಾರಕವಾಗಬಹುದು. ಮಳಿಗೆಯಲ್ಲಿ ಕ್ಯಾಷಿಯರ್ ಆಗಿರುವ, ಆಹಾರ ಸೇವೆಯಲ್ಲಿರುವ ನೌಕರರು, ಗ್ರಾಹಕರಸೇವಾ ವಿಭಾಗದಲ್ಲಿ ದುಡಿಯುತ್ತಿರುವವರು ಸೇರಿದಂತೆ 15 ಪ್ರಮುಖ ಉದ್ಯೋಗಗಳಲ್ಲಿ ದುಡಿಯುತ್ತಿರುವ ನೌಕರಿಗೆ ಕುತ್ತು ತರುವ ಸಾಧ್ಯತೆಗಳೇ ಹೆಚ್ಚು ಎಂದೆನ್ನಲಾಗುತ್ತಿದೆ. ಮಿಷನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯಿಂದ 2030ರ ಹೊತ್ತಿಗೆ 1.32ಲಕ್ಷ ಕಪ್ಪು ವರ್ಣೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಆ ನಿಟ್ಟಿನಲ್ಲಿ ಭಾರತದಲ್ಲಿ ಯಾವ ವರ್ಗ ಇಂಥ ಭೀತಿ ಎದುರಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಈ ನಡುವೆ ರೊಬೊಗಳ ಬಳಕೆ ವ್ಯಾಪಕವಾಗುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ನೆಲ ಒರೆಸುವ, ಪ್ರಯಾಣಿಕರ ತಾಪಮಾನ ಪರೀಕ್ಷಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ರೊಬೊಗಳ ಬಳಕೆ ವ್ಯಾಪಕವಾಗುತ್ತಿದೆ. ಕಂಪನಿಗಳು ತಮ್ಮ ಅಂತರ್ಜಾಲ ತಾಣದ ಮೂಲಕ ಚಾಟ್‌ಬೋಟ್‌ಗಳನ್ನು ತೆರೆದ ಪರಿಣಾಮ ಕಾಲ್‌ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವವರೂ ಉದ್ಯೋಗ ವಂಚಿತರಾಗುತ್ತಿದ್ದಾರೆ. ಮಾಲ್ ಮತ್ತು ಕ್ರೀಡಾಂಗಣಗಳಲ್ಲಿ ನೈಟ್‌ಸ್ಕೋಪ್ ಭದ್ರತಾ ಸಿಬ್ಬಂದಿಯ ಕೆಲಸವನ್ನೂ ರೊಬೊಗಳಿಗೆ ವಹಿಸಲಾಗುತ್ತಿದೆ.

ಇಷ್ಟೇ ಏಕೆ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಹಂಚಿಕೆ, ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇದೆಯೇ ಇಲ್ಲವೇ ಎಂಬ ಮಾಹಿತಿ ಒದಗಿಸುವ ಪರಿಚಾರಕರ ಕೆಲಸವನ್ನು ರೊಬೊಗಳೇ ನಿರ್ವಹಿಸುತ್ತಿವೆ. ಕಟ್ಟಡ ನಿರ್ಮಾಣದಲ್ಲೂ ರೊಬೊಗಳು ಕಾರ್ಯ ನಿರ್ವಹಿಸುತ್ತಿವೆ. ಹತ್ತು ಜನ ಮಾಡುವ ಕೆಲಸವನ್ನು ಇದೊಂದೇ ಮಾಡುತ್ತಿದೆ. ಹೀಗಾಗಿ ಕೃತಕ ಬುದ್ಧಿ ಮತ್ತೆ ಮತ್ತು ಮಷಿನ್ ಲರ್ನಿಂಗ್ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿವೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಉದ್ಯೋಗಾವಕಾಶ

ಮತ್ತೊಂದೆಡ 2023ರ ಹೊತ್ತಿಗೆ ಮಷಿನ್ ಲರ್ನಿಂಗ್ ಮತ್ತು ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಬಹಳಷ್ಟು ತಜ್ಞರ ಅಗತ್ಯವಿದೆ ಎಂದು ದೊಡ್ಡ ದೊಡ್ಡ ಕಂಪನಿಗಳು ಹೇಳಿಕೊಂಡಿವೆ. ಡಿಜಟಲೀಕರಣದ ಮತ್ತೊಂದು ಹಂತಕ್ಕೆ ನಾವೆಲ್ಲರೂ ತಲುಪಿರುವ ಈ ಕಾಲಘಟ್ಟದಲ್ಲಿ 2030ರವರೆಗೆ ಕೃತಕ ಬುದ್ಧಿಮತ್ತೆ ಮತ್ತಷ್ಟು ಪ್ರಚಲಿತಕ್ಕೆ ಬರಲಿದೆ. ಇ–ಕಾಮರ್ಸ್‌ನಿಂದ ಹಿಡಿದು ಬಹಳಷ್ಟು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತನ್ನ ಪಾರಮ್ಯ ಮೆರೆಯಲಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಬಹಳಷ್ಟು ತಜ್ಞರ ಅವಶ್ಯಕತೆ ಇದೆ.

ಬ್ಯುಸಿನೆಸ್ ಅಥವಾ ಮ್ಯಾನೇಜ್ಮೆಂಟ್ ಅನಲಿಸ್ಟ್ ಹುದ್ದೇ ಶೇ 14.3ರ ದರದಲ್ಲಿ ಏರಿಕೆ ಕಂಡಿದೆ. ಡಾಟಾಬೇಸ್ ಆರ್ಕಿಟೆಕ್ಟ್‌ ಶೇ 9, ಪ್ರಾಡಕ್ಟ್ ಮ್ಯಾನೇಜರ್ ಶೇ 10, ಸಂಶೋಧಕರು ಶೇ 27, ಕಂಪ್ಯೂಟರ್ ಸಿಸ್ಟಂ ಆರ್ಕಿಟೆಕ್ಟ್ ಶೇ 9ರಷ್ಟು, ನೆಟ್‌ವರ್ಕ್ ಎಂಜಿನಿಯರ್‌ಗಳು ಶೇ 6, ಡಾಟಾ ಎಂಜಿನಿಯರ್ ಶೇ 11, ಡಾಟಾ ವಿಜ್ಞಾನಿಗಳು ಶೇ 19 ಹಾಗೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಶೇ 30ರಷ್ಟು ದರದಲ್ಲಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನ ಇಂದು ನಿಂತ ನೀರಲ್ಲ. ಮಾನವ ಕಂಪ್ಯೂಟರ್ ಎಂದೇ ಕರೆಯಲಾಗುತ್ತಿದ್ದ ಶಕುಂತಲಾ ದೇವಿ ಅವರಂಥ ಚುರುಕು ಬುದ್ಧಿಗಳುಳ್ಳ ಮನುಷ್ಯರನ್ನು ಸೃಷ್ಟಿಸಬೇಕಾದ ಪರಿಸ್ಥಿತಿಯಲ್ಲಿ, ಮನುಷ್ಯರನ್ನೇ ನಗಣ್ಯರನ್ನಾಗಿಸಿ, ಯಂತ್ರಗಳನ್ನೇ ಮುನ್ನೆಲೆಗೆ ತಂದರೆ ಆಗಬಹುದಾದ ತೊಂದರೆಗಳನ್ನು ಭಾರತದಂತ ರಾಷ್ಟ್ರಗಳು ಎಚ್ಚರದಿಂದ ಅವಲೋಕಿಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು