ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹಿಗಳಿಗೆ ಹಿತವಾದ ಪಾದುಕೆ

Last Updated 21 ಜೂನ್ 2022, 19:30 IST
ಅಕ್ಷರ ಗಾತ್ರ

ಡಯಾಬಿಟೀಸಿನಿಂದ ನರಳುವ ರೋಗಿಗಳ ಕಾಲಿಗೆ ಹಿತಕರವಾಗಿರುವಂತಹ ಚಪ್ಪಲಿಯನ್ನು ಬೆಂಗಳೂರಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌’ನ ಮೆಕ್ಯಾನಿಕಲ್‌ ಎಂಜಿನಿಯರುಗಳು ರೂಪಿಸಿದ್ದಾರೆ.

ಡಯಾಬಿಟೀಸ್‌ ರೋಗಿಗಳಿಗೆ ಕಣ್ಣು ಮತ್ತು ಕಾಲಿಗೇ ಅಪಾಯ ಹೆಚ್ಚು. ಇದು ನರಮಂಡಲಕ್ಕೆ ಸಂವೇದನೆಗಳನ್ನು ಸಾಗಿಸುವ ಪೆರಿಫೆರಲ್‌ ನರಗಳಿಗೆ ಹಾನಿ ಆಗುವುದರಿಂದ ಉಂಟಾಗುವ ತೊಂದರೆ. ಈ ನರಗಳು ಸಂವೇದನೆಯನ್ನು ಕಳೆದುಕೊಂಡಾಗ, ಎಲ್ಲಿ ಎಷ್ಟು ಭಾರ ಬೀಳುತ್ತಿದೆ, ಬಿಸಿ ಆಗುತ್ತಿದೆ, ಶೀತ ತಗುಲುತ್ತಿದೆ ಎನ್ನುವುದು ತಿಳಿಯುವುದಿಲ್ಲ. ಹೀಗಾಗಿ ಸಾಮಾನ್ಯವಾಗಿ ಎಚ್ಚರವಾಗಿರುವ ನಮ್ಮ ಸಂವೇದನೆಗಳು ಮರಗಟ್ಟಿ, ಅಂಗಗಳಿಗೆ ಅಪಾಯವಾಗಿದ್ದೂ ತಿಳಿಯದಂತಾಗುತ್ತದೆ; ಗಾಯಗಳೂ ಆಗಬಹುದು. ಈ ಗಾಯಗಳು ರಕ್ತದಲ್ಲಿರುವ ಸಕ್ಕರೆಯಿಂದಾಗಿ ಮಾಯವುದೂ ನಿಧಾನ. ಕೆಲವೊಮ್ಮೆ ಕೊಳೆಯುವುದೂ ಉಂಟು; ರಕ್ತನಾಳಗಳಿಗೆ ತೊಂದರೆ ಆಗುವುದೂ ಉಂಟು. ಇವೆಲ್ಲದರ ಪರಿಣಾಮ ಕಾಲನ್ನೋ ಬೆರಳನ್ನೋ ತುಂಡರಿಸಬೇಕಾಗುವುದು ಸಾಮಾನ್ಯ.

ಮಧುಮೇಹಿಗಳ ಸಮಸ್ಯೆಗೆ ಪರಿಹಾರ ಚಪ್ಪಲಿಯಲ್ಲಿದೆ – ಎನ್ನುತ್ತಾರೆ ವೈದ್ಯರು. ಹೊಸದಾದ, ಸ್ವಲ್ಪ ಬಿಗುವಾದ ಚಪ್ಪಲಿಗಳು ಕಾಲನ್ನು ‘ಕಚ್ಚಿ’ ಗಾಯವಾಗದವರು ಉಂಟೇ? ಎಷ್ಟೋ ಬಾರಿ ರಾತ್ರಿ ಮಲಗಿದಾಗ ಕಾಣುವ ಕಾಲುನೋವಿಗೆ ವಯಸ್ಸಾಗಿದ್ದರಿಂದ ಇರಬೇಕು ಎಂದುಕೊಳ್ಳುತ್ತೇವಲ್ಲ; ಅದು ಕೂಡ ಚಪ್ಪಲಿ, ಶೂವಿನ ಮಹಿಮೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಚಪ್ಪಲಿ ಸವೆದು ದೇಹದ ಭಾರ ಪಾದದ ಎಲ್ಲ ಕಡೆಯೂ ಒಂದೇ ತೆರನಾಗಿ ಬೀಳದೇ ಹೋದಾಗ ಕಾಲು ನೋಯುತ್ತದೆ. ಮಧುಮೇಹಿಗಳಿಗೆ ಚಪ್ಪಲಿಯ ಈ ಮಹಿಮೆ ಬಲವಾಗಿಯೇ ತಟ್ಟುತ್ತದೆ.

ನಮ್ಮ ಪಾದದ ರಚನೆ ಸಪಾಟಾಗಿಲ್ಲ. ಆದರೆ ಚಪ್ಪಲಿಯ ಅಟ್ಟೆ ಸಪಾಟಾಗಿರುತ್ತದೆ. ಮಧುಮೇಹಿಗಳ ಪಾದದಲ್ಲಿ ಎಲ್ಲಿಯಾದರೂ ಗಾಯವಾದಾಗ, ಅವರ ನಡಿಗೆಯ ರೀತಿ ಬದಲಾಗುತ್ತದೆ. ನೋವು ಇಲ್ಲದ ಕಡೆಗೆ ಒತ್ತು ಹೆಚ್ಚು ಕೊಡುವಂತೆ ನಡಿಗೆಯನ್ನು ಬದಲಿಸಿಕೊಳ್ಳುವುದರಿಂದ, ಅಲ್ಲಿಗೆ ಭಾರ ಹೆಚ್ಚು ಬೀಳುತ್ತದೆ. ಪರಿಣಾಮ ಅಂತಹ ಕಡೆಯಲ್ಲಿ ಗಾಯವಾಗುತ್ತದೆ. ಹೀಗಾಗಿ ಮಧುಮೇಹಿಗಳ ಪಾದಗಳನ್ನು ರಕ್ಷಿಸಲು ವಿಶೇಷ ರೀತಿಯ ಪಾದರಕ್ಷೆಗಳ ಅವಶ್ಯಕತೆ ಇದೆ. ಅಂತಹ ಹಲವು ಉಪಾಯಗಳು ಈಗಾಗಲೇ ಪರಿಚಿತ. ಪಾದದ ರಚನೆಯನ್ನು ಅನುಸರಿಸಿ ರೂಪಿಸಲಾದವುಗಳು ಬಹಳ ಜನಪ್ರಿಯ. ಸ್ವಲ್ಪ ಅಗ್ಗವೂ ಕೂಡ. ಆದರೆ ಇವುಗಳನ್ನು ಆಯಾಯಾ ವ್ಯಕ್ತಿಗಳ ಪಾದಗಳ ಅಚ್ಚನ್ನು ತೆಗೆದು, ವಿಶೇಷವಾಗಿ ತಯಾರಿಸಬೇಕು. ‘ಮೆಮರಿ ಫೋಮ್‌’ ಎನ್ನುವ ವಸ್ತುಗಳಿಂದ ಹೀಗೆ ಅಟ್ಟೆ ಮಾಡುವುದೂ ಉಂಟು. ಇಂತಹ ಅಟ್ಟೆಗಳಲ್ಲಿ ಬಳಸುವ ವಸ್ತುವು ಒತ್ತಡ ಹೆಚ್ಚು ಬಿದ್ದೆಡೆ ತಗ್ಗುತ್ತದೆ. ಪಾದದ ಆಕಾರಕ್ಕೆ ಹೊಂದಿಕೊಳ್ಳುತ್ತದೆಯಾದ್ದರಿಂದ ತುಸು ಒತ್ತಡ ಕಡಿಮೆಯಾದಂತೆ ಅನಿಸುತ್ತದೆ. ಇದೇ ರೀತಿಯಲ್ಲಿ ಅಟ್ಟೆಯಲ್ಲಿ ಗುಬುಟುಗಳಿರುವಂತೆ ಮಾಡಿರುವ ಪ್ರೆಶರ್‌ ಸೋಲ್‌ ಡಯಾಬೆಟಿಕ್‌ ಚಪ್ಪಲಿಗಳು ದೊರೆಯುತ್ತವೆ. ಪಾದದ ಮೇಲೆ ಬೀಳುವ ಒತ್ತಡವನ್ನು ಇವು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಲ್ಲುವು. ಆದರೆ ಇವುಗಳ ಆಕಾರದಲ್ಲಿ ಅಲ್ಪ ಸ್ವಲ್ಪ ಹೆಚ್ಚು ಕಡಿಮೆ ಆದರೂ ಫಲ ಕೆಡುತ್ತದೆ. ಹಾಗೆಯೇ ಪಾದದ ಆಕಾರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾದರೂ ಫಲಿತಾಂಶ ನಿರೀಕ್ಷಿಸಿದಂತೆ ಇರುವುದಿಲ್ಲ. ಹೀಗಾಗಿ ಇಂತಹ ಚಪ್ಪಲಿಗಳನ್ನು ಆಗಾಗ್ಗೆ ಬದಲಿಸುತ್ತಲೇ ಇರಬೇಕು. ಇವನ್ನು ಸ್ಟೇಟಿಕ್‌ ಆಫ್‌ಲೋಡಿಂಗ್‌ ಅಟ್ಟೆಗಳು ಎನ್ನುತ್ತಾರೆ.

ಇನ್ನೂ ಒಂದು ಬಗೆ ಇದೆ. ಇವನ್ನು ‘ಆಕ್ಚುಯೇಟೆಡ್‌ ಪಾದರಕ್ಷೆ’ಗಳು ಎನ್ನಬಹುದು. ಇವುಗಳಲ್ಲಿ ಪಾದಗಳ ವಿವಿಧ ಭಾಗಗಳ ಮೇಲೆ ಬೀಳುವ ಒತ್ತಡವನ್ನೋ ಉಷ್ಣತೆಯನ್ನೋ ಅಳೆಯುವ ಎಲೆಕ್ಟ್ರಾನಿಕ್‌ ಸಾಧನಗಳಿರುತ್ತವೆ. ಹಾಗೆಯೇ ಅದಕ್ಕೆ ತಕ್ಕಂತೆ ಅಟ್ಟೆಯ ಆಕಾರವನ್ನು ಗಾಳಿ ತುಂಬಿಯೋ, ಬೇರೆ ದ್ರವಗಳನ್ನು ತುಂಬಿಯೋ ಬದಲಿಸುವ ಪಂಪಿನಂತಹ ಆಕ್ಚುವೇಟರುಗಳು ಇರುತ್ತವೆ. ಇವನ್ನು ಧರಿಸಿ ನಡೆಯುವಾಗ, ನಡಿಗೆಗೆ ತಕ್ಕಂತೆ ಪಾದದ ಮೇಲೆ ಬೀಳುವ ಒತ್ತಡವನ್ನು ಸೆನ್ಸಾರುಗಳು ಗ್ರಹಿಸಿ, ಆಕ್ಚುವೇಟರಿಗೆ ಮಾಹಿತಿಯನ್ನು ನೀಡುತ್ತವೆ. ಆ ಕ್ಷಣವೇ ಪಂಪು ಆ ಜಾಗಕ್ಕೆ ಮಾತ್ರ ಗಾಳಿಯನ್ನು ಒತ್ತಿ ಅಟ್ಟೆಯನ್ನು ದಪ್ಪವಾಗಿಸಿಯೋ, ಅಥವಾ ಗಾಳಿಯನ್ನು ಹೀರಿ ಅಟ್ಟೆಯನ್ನು ತೆಳ್ಳಗಾಗಿಸುವುದೋ ಮಾಡುತ್ತದೆ. ಇಂತಹ ವ್ಯವಸ್ಥೆಯನ್ನು ‘ಡೈನಾಮಿಕ್‌ ಆಫ್‌ಲೋಡಿಂಗ್‌’ ಎನ್ನುತ್ತಾರೆ. ಆದರೆ ಇವು ದುಬಾರಿ ಎಲೆಕ್ಟ್ರಾನಿಕ್‌ ವಸ್ತುಗಳು; ತಯಾರಿಕೆಯೂ ಕಷ್ಟ. ಇಂಗ್ಲೆಂಡಿನ ಬ್ರಿಸ್ಟಲ್‌ ವಿಶ್ವವಿದ್ಯಾನಿಲಯದ ತಜ್ಞರು ಐದು ವರ್ಷಗಳ ಹಿಂದೆ ರೂಪಿಸಿದ್ದ ‘ಇನ್‌ಫ್ಲಾಸೋಲ್‌’ ಇದಕ್ಕೆ ಉದಾಹರಣೆ. ಮೊಳಕಾಲಿಗೆ ಕಟ್ಟಿದ ಬ್ಯಾಟರಿ ಹಾಗೂ ಪಂಪು, ಪಾದದ ಅಡಿಯಲ್ಲಿ ಇಟ್ಟ ಗಾಳಿ ಮತ್ತು ಹಿಟ್ಟು ತುಂಬಿದ ಚೀಲಗಳನ್ನು ಅಗತ್ಯಕ್ಕೆ ತಕ್ಕಂತೆ ಒತ್ತಿ ದಪ್ಪಗೆ, ತೆಳ್ಳಗೆ ಮಾಡುತ್ತಿದ್ದುವು. ಆದರೆ ಈ ಇನ್‌ಫ್ಲಾಸೋಲ್‌ ಮಾರುಕಟ್ಟೆಗೆ ಬಂದಿತೋ ಇಲ್ಲವೋ ಇನ್ನೂ ಗೊತ್ತಿಲ್ಲ.

ಇಂಡಿಯನ್‌ ಇನ್ಸ್‌ಸ್ಟಿಟ್ಯೂಟ್‌ ಆಫ್‌ ಸೈನ್ಸಸಿನ ಮೆಕ್ಯಾನಿಕಲ್‌ ಎಂಜಿನೀಯರ್‌ ಕೊಂಡಯ್ಯ ಅನಂತಸುರೇಶ್‌ ಮತ್ತು ತಂಡದವರು ರೂಪಿಸಿರುವ ಪಾದರಕ್ಷೆ ಕೂಡ ಡೈನಾಮಿಕ್‌ ಆಫ್‌ಲೋಡಿಂಗ್‌ ಬಗೆಯದು. ಅಂದರೆ ಒತ್ತಡ ಬದಲಾದಂತೆ ತಾನೂ ಅದಕ್ಕೆ ಹೊಂದಿಕೊಂಡು ಒತ್ತಡವನ್ನು ಕಡಿಮೆ ಮಾಡಬಲ್ಲುದು. ಆದರೆ ಇದು ಎಲೆಕ್ಟ್ರಾನಿಕ್‌ ಸಾಧನವಲ್ಲ. ತ್ರೀ-ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಭವಾಗಿ ರಚಿಸಬಹುದಾದ ವಿನ್ಯಾಸದ ಪಾದರಕ್ಷೆ. ಮೃದುವಾದ ‘ಪಾಲಿಯುರಿಥೇನ್‌’ ಎನ್ನುವ ವಸ್ತುವಿನಿಂದ ಇದನ್ನು ತಯಾರಿಸಲಾಗಿದೆ. ಇದು ತನ್ನಂತಾನೇ ಧರಿಸಿದವರ ಪಾದದ ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತದೆ. ಈ ಅಟ್ಟೆಯ ವಿಶೇಷವೆಂದರೆ, ಅದು ಒಂದು ಹಾಳೆಯದಲ್ಲ. ಪಾದವನ್ನು ನೆಲಕ್ಕೆ ಊರಿದಾಗ ಎಲ್ಲೆಲ್ಲಿ ಭಾರ ಬೀಳುತ್ತದೆ ಎನ್ನುವುದನ್ನು ವಿಶೇಷವಾಗಿ ಗಮನಿಸಿ ಕೆಳಗಿನ ಹಾಳೆಯನ್ನು ರಚಿಸಿದ್ದಾರೆ. ಒತ್ತಡ ಹೆಚ್ಚು ಬೀಳುವ ಜಾಗಗಳಲ್ಲಿ ಮಾತ್ರವೇ ಪುಟ್ಟ, ಪುಟ್ಟ ಕಮಾನಿನಂತಹ ರಚನೆಗಳನ್ನು ರೂಪಿಸಿದ್ದಾರೆ. ಕಮಾನಿನ ಕೆಳಗೆ ಪೊಳ್ಳು ಇರುವುದರಿಂದ ಅದು ಒತ್ತಡ ಬಿದ್ದಾಗ ಕುಸಿದು, ಒತ್ತಡವಿಲ್ಲದಿದ್ದಾಗ ಪಟ್ಟನೆ ಪುಟಿದು ಮೊದಲಿನ ಆಕಾರಕ್ಕೆ ಮರಳುತ್ತದೆ. ಪುಟಿಯಲು ಸುಲಭವಾಗುವಂತೆ ಅವುಗಳ ಉದ್ದ ಮತ್ತು ಅಗಲಗಳನ್ನು ಲೆಕ್ಕ ಹಾಕಿ ರೂಪಿಸಲಾಗಿದೆ.

ಈ ಕಮಾನುಗಳ ಮೇಲೆ ಸಪಾಟಾದ ಪಾದರಕ್ಷೆಯ ಅಟ್ಟೆಯನ್ನು ಅಳವಡಿಸಲಾಗಿದೆ. ಹೀಗಾಗಿ, ನೋಡಲು ಸಾಮಾನ್ಯ ಪಾದರಕ್ಷೆಯಂತೆಯೇ ಕಂಡರೂ, ಅವರವರ ಪಾದದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲುದು. ನೂರು ಮಂದಿ ನಡೆಯುವಾಗ ಅವರ ಪಾದದ ಮೇಲೆ ಎಲ್ಲೆಲ್ಲಿ ಒತ್ತಡಗಳು ಹೆಚ್ಚಿರುತ್ತವೆ ಎಂದು ಅಳತೆ ಮಾಡಿ ನಂತರ ಈ ಅಟ್ಟೆಯನ್ನು ರಚಿಸಲಾಗಿದೆ. ಏಕೆಂದರೆ ಹಿಮ್ಮಡಿಯ ಮೇಲೆ ನಡೆಯುವಾಗ ಒತ್ತಡ ಬೀಳುವ ಜಾಗಗಳೇ ಬೇರೆ, ಬೆರಳುಗಳ ಮೇಲೆ ನಡೆಯುವಾಗ ಒತ್ತಡಕ್ಕೆ ಒಳಗಾಗುವ ಸ್ಥಾನವೇ ಬೇರೆ. ಅಷ್ಟೇ ಅಲ್ಲ; ‘ನಡಿಗೆಯ ರೀತಿ ಬದಲಾದರೂ, ಎಲ್ಲೆಲ್ಲಿ ಭಾರ ಬೀಳುತ್ತದೆಯೋ ಅಲ್ಲಿ ಮಾತ್ರ ಆಕಾರ ಬದಲಾಗುವುದರಿಂದ ಪಾದದ ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ’, ಎನ್ನುತ್ತಾರೆ ಅನಂತಸುರೇಶ್‌. ಅರವತ್ತೈದರಿಂದ ಎಪ್ಪತ್ತೈದು ಕಿಲೋಗ್ರಾಂ ತೂಕದವರೆಗೂ ಈ ಕಮಾನುಗಳು ಮುರಿಯುವುದಿಲ್ಲವಾದ್ದರಿಂದ, ರೋಗಿಯ ತೂಕ ಹೆಚ್ಚು ಕಡಿಮೆ ಆದರೂ ಪಾದರಕ್ಷೆಯನ್ನು ಬದಲಿಸುವ ಅವಶ್ಯಕತೆ ಇಲ್ಲ.

ಈ ಅಟ್ಟೆಗಳು ಬಳಕೆಗೆ ಬೇಗ ಬರಲಿ ಎಂದು ಆಶಿಸೋಣ.

ಪಾದರಕ್ಷೆಗಳು ಹೇಗಿರಬೇಕು?

ಮಧುಮೇಹಿಗಳಿಗೆ ಹಿತವಾಗಿರುವ ಪಾದರಕ್ಷೆಯ ವಿನ್ಯಾಸ ಹೇಗಿರಬೇಕು?

* ಪಾದವನ್ನು ಬಹಳ ಬಿಗಿಯಾಗಿಯೂ, ಬಹಳ ಸಡಿಲವಾಗಿಯೂ ಇಡದಂತೆ ತಕ್ಕಷ್ಟು ಸ್ಥಳಾವಕಾಶ ಇರುವಷ್ಟು ಉದ್ದಗಳು ಇರಬೇಕು.

* ಅತಿ ಉದ್ದದ ಕಾಲ್ಬೆರಳು ಹಾಗೂ ಶೂವಿನ ಒಳಭಾಗದ ನಡುವೆ ಕನಿಷ್ಠ ಒಂದು ಸೆಂ.ಮೀ. ಜಾಗವಿರಬೇಕು.

* ಕಾಲ್ಬೆರಳ ಬಳಿ ಶೂವಿನ ಒಳಾಂಗಣದ ಎತ್ತರ ತಳ ಗಟ್ಟಿಯಾಗಿ ಬೆರಳು ದಪ್ಪನಾದರೂ ಒತ್ತದಿರುವಷ್ಟು ದೊಡ್ಡದಾಗಿರಬೇಕು.

* ಅಟ್ಟೆಯ ಒಳಗೆ ಅಂಚುಗಳು ಮಡಿಚಿಕೊಂಡಂತೆ ಹೊಲಿಗೆ ಇರಬಾರದು. ಇವು ಕಾಲಿಗೆ ಉಜ್ಜಿ ಗಾಯವನ್ನುಂಟು ಮಾಡಬಹುದು.

* ಶೂವನ್ನು ಬಿಗಿಯಾಗಿ ಕಟ್ಟಲು ದಾರವಿರಬೇಕು. ಇಲ್ಲದಿದ್ದರೆ ವೆಲ್ಕ್ರೋದಿಂದ ಬಿಗಿಯುವಂತೆ ಇರಬೇಕು.

* ಪಾದವು ನೆಲವನ್ನು ಒತ್ತಿದಾಗ ಆ ಭಾರ ಪಾದದ ಮೇಲೆ ಬೀಳದಷ್ಟು ಮೃದುವಾಗಿರಬೇಕು.

* ಬಳಸಲು ಸುಲಭವಾಗುವಂತೆ ಬಹಳ ತೂಕವೂ ಇಲ್ಲದ, ಹಾಗೂ ಬೇಗನೆ ಸವೆಯದ ವಸ್ತುಗಳಿಂದ ಮಾಡಿರಬೇಕು.

* ಕಾಲುಗಳಲ್ಲಿ ಊತ ಹಾಗೂ ಗಾಯಗಳಿರುವ ಸಾಧ್ಯತೆಗಳಿರುವುದರಿಂದ ಆದಷ್ಟೂ ಹಿಮ್ಮಡಿಯನ್ನಷ್ಟೆ ಮುಚ್ಚುವಂತಿರಬೇಕು. ಒಂದು ವೇಳೆ ಹಿಮ್ಮಡಿಯ ಬಳಿ ಹೆಚ್ಚು ಮುಚ್ಚುವಂತಹ ಶೂ ಇದ್ದರೆ, ಆ ಭಾಗದಲ್ಲಿ ಒಳಗಡೆ ಮೃದುವಾದ ಮೆತ್ತೆಯನ್ನು ಅಳವಡಿಸಿರಬೇಕು.

* ಅಟ್ಟೆಯ ತಳಭಾಗದಲ್ಲಿ ಒಂದೂವರೆ ಸೆಂ.ಮೀ.ನಷ್ಟು ದಪ್ಪನೆಯ ಮೃದುವಾದ ಪದರವನ್ನು ಸೇರಿಸುವುದು ಒಳ್ಳೆಯದು. ಇದರಿಂದ ಪಾದ ಸ್ವಲ್ಪ ಊದಿದರೂ ಅದಕ್ಕೆ ಗಾಸಿ ಆಗುವುದಿಲ್ಲ. ಶೂವಿಗೆ ಹೊಂದಿಕೊಳ್ಳಬಹುದು.

ಇವೆಲ್ಲದರ ಜೊತೆಗೆ ‘ಆಕ್ಚುವೇಟರ್‌’ಗಳು ಹಾಗೂ ವಿಶೇಷವಾದ ಅಟ್ಟೆಗಳಿದ್ದರೆ ಇನ್ನೂ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT