ಮಂಗಳವಾರ, ಮಾರ್ಚ್ 21, 2023
20 °C

ಬೈನಾಕುಲರ್: ದುರ್ಬೀನು ದರ್ಶನ!

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಬೈನಾಕುಲರ್ ಪದದ ಅರ್ಥ, ಎರಡು ಕಣ್ಣಿನಿಂದಲೂ ನೋಡಲು ಅನುವು ಮಾಡಿಕೊಡುವ ಸಾಧನ ಎಂದು. ಎರಡು ಕಣ್ಣುಗಳಿಂದ ನೋಡಲು ಸಹಾಯ ಮಾಡುವ ಬೈನಾಕುಲರ್‌ಗಳು ಮೂಲತಃ ಸಂಕ್ಷಿಪ್ತ ರೂಪದ ಟೆಲಿಸ್ಕೋಪುಗಳೇ!

ಪಕ್ಷಿವೀಕ್ಷಕರನ್ನು, ಕಾಡಿನ ಸಕಲವನ್ನೂ ಕಣ್ಣೊಳಗೆ ತುಂಬಿಕೊಳ್ಳುವ ಇರಾದೆಯಿಂದ ಸಫಾರಿ ಹೊರಡುವವರನ್ನು ಕೇಳಿ ನೋಡಿ? ಅವರಿಗೆ ಕ್ಯಾಮೆರಾಗಿಂತಾ ಬೈನಾಕುಲರ್ ಮುಖ್ಯವೆನಿಸುತ್ತದೆ. ಇನ್ನು ನಕ್ಷತ್ರವೀಕ್ಷಣೆಯನ್ನು, ಗ್ರಹಗಳ, ತಾರೆಗಳ, ಅಂತರಿಕ್ಷದ ಅದ್ಭುತಗಳನ್ನು ಕಲಿಯುವ, ತಿಳಿಯುವ ಆಸಕ್ತಿ ಇದ್ದವರನ್ನು ಕೇಳಿ ನೋಡಿ? ಇತ್ತೀಚಿಗೆ ಸಾಲಾಗಿ ಒಂದೇ ಗೆರೆಯಲ್ಲಿ ಬಂದು ನಿಂತ ಗ್ರಹಗಳನ್ನು ನೋಡಿ ಉದ್ಘರಿಸಿದವರೆಲ್ಲರೂ ಟೆಲಿಸ್ಕೋಪನ್ನು ಬಳಸಿದ್ದರೇ?

ಈಗ ಉದ್ದದ ಟೆಲಿಸ್ಕೋಪೇ ಬೇಕೆಂದಿಲ್ಲ, ಕೈಯಲ್ಲಿ ಸುಲಭವಾಗಿ ಹಿಡಿಯಬಹುದಾದ ಪುಟ್ಟ ದುರ್ಬೀನು ಅಥವಾ ಬೈನಾಕುಲರ್‌ನ ಸಹಾಯದಿಂದ ಅನೇಕ ಅಚ್ಚರಿದಾಯಕ ವಿದ್ಯಮಾನಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈಗ ಟೆಲಿಸ್ಕೋಪುಗಳೂ ಪುಟಾಣಿ ಗಾತ್ರದ್ದು ದೊರಕುತ್ತವಾದರೂ, ಎರಡು ಕಣ್ಣುಗಳಿಂದ ನೋಡೋದೇ ಬೇರೆ ಅನುಭವವಲ್ಲವೇ? ಬರಿಗಣ್ಣಿಗೇ ಕಾಣುವ ಚೆಂದದ ಪಕ್ಷಿಯನ್ನು, ಬರಿಗಣ್ಣಿಗೇ ಕಾಣುವ ಮಂಗಳ, ಶುಕ್ರನಂತಹ ಗ್ರಹಗಳನ್ನು ಹತ್ತಿರದಿಂದ ಕೂಲಂಕಷವಾಗಿ ಗಮನಿಸಿ, ಮತ್ತಷ್ಟು ಅರ್ಥಮಾಡಿಕೊಳ್ಳಲು ಕುಳಿತಲ್ಲಿಂದಲೇ ಸಹಾಯ ಮಾಡುವ ಈ ಬೈನಾಕುಲರ್‌ಗಳದ್ದು ಒಂದು ಅದ್ಭುತ ಪ್ರಪಂಚ. ಇವುಗಳ ಸಹಾಯದಿಂದ ದೂರದ ಪ್ಲೂಟೋನಂತಹ ಕುಬ್ಜಗ್ರಹಗಳನ್ನೂ, ನಮ್ಮ ಕ್ಷೀರಪಥದ ಹೊರಗಿನ ಅಚ್ಚರಿಗಳನ್ನೂ ಕಾಣಬಹುದಾಗಿದೆ. 

ಬೈನಾಕುಲರ್ ಪದದ ಅರ್ಥ, ಎರಡು ಕಣ್ಣಿನಿಂದಲೂ ನೋಡಲು ಅನುವು ಮಾಡಿಕೊಡುವ ಸಾಧನ ಎಂದು. ಎರಡು ಕಣ್ಣುಗಳಿಂದ ನೋಡಲು ಸಹಾಯ ಮಾಡುವ ಬೈನಾಕುಲರ್‌ಗಳು ಮೂಲತಃ ಸಂಕ್ಷಿಪ್ತ ರೂಪದ ಟೆಲಿಸ್ಕೋಪುಗಳೇ! ಎರಡು ದೂರದರ್ಶಕಗಳನ್ನು ಅಕ್ಕ ಪಕ್ಕದಲ್ಲಿ ಒಟ್ಟಿಗೆ ಸೇರಿಸಿ ಬೈನಾಕುಲರ್ ತಯಾರಾದಾಗ, ಎರಡು ಕಣ್ಣುಗಳಿಗೂ ಒಟ್ಟಾರೆಯಾಗಿ ಒಂದೇ ದೃಶ್ಯವು ಕಾಣುತ್ತದೆ; ಇಲ್ಲಿ ಉದ್ದ, ಅಗಲ ಹಾಗೂ ಆಳವೆಂಬ ಮೂರು ಆಯಾಮದಲ್ಲಿ ನಿಮ್ಮ ಮುಂದಿನ ದೃಶ್ಯ ನಿಮ್ಮ ದೃಷ್ಟಿಗೆ, ಅರಿವಿಗೆ ನಿಲುಕುತ್ತದೆ. ಇದನ್ನು ಸಾಧ್ಯವಾಗಿಸುವುದು, ಬೆಳಕು ಮತ್ತು ಮಸೂರಗಳ ಜೊತೆಯಾಟ. ತಂತ್ರಜ್ಞಾನವು ಮುಂದುವರಿದ ಹಾಗೆ, ಅವಶ್ಯಕತೆಗೆ ತಕ್ಕಂತೆ ಬೈನಾಕುಲರ್‌ಗಳ ತಯಾರಿಯಲ್ಲೂ ಅನೇಕ ಬದಲಾವಣೆಗಳು ಆಗಿವೆ. ಬಾಹ್ಯಾಕಾಶದ ಕಲಿಕೆಗೆ ಒಂದು ಬಗೆಯದ್ದಾದರೇ, ಸಮುದ್ರಯಾನಕ್ಕೆ ಮತ್ತೊಂದು, ಪಕ್ಷಿವೀಕ್ಷಣೆಗೆ ಒಂದು ಬಗೆಯದ್ದಾದರೇ ಭೂವೈಜ್ಞಾನಿಕ ಸಮೀಕ್ಷೆಗಳ ಬಳಕೆಗೆ ಮತ್ತೊಂದು ಬಗೆ, ಇನ್ನು ಸೈನ್ಯದಲ್ಲಿ ಅಪಾಯವನ್ನು ಮುಂಚಿತವಾಗಿ ಗುರುತಿಸಲು ಬಳಸುವ ಬೈನಾಕುಲರ್‌ನ ತಂತ್ರಜ್ಞಾನ – ಇವೆಲ್ಲ ಬೈನಾಕುಲರ್‌ಗಳಿಗಿಂತ ಭಿನ್ನವೇ. ಇಲ್ಲಿ ಶತ್ರುಗಳು ಬಳಸುವ ಲೇಸರ್ ಆಯುಧಗಳ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳೋಕೆ ಫಿಲ್ಟರ್‌ಗಳು, ನಿಗದಿತ ಗುರಿಯನ್ನು ಗುರುತಿಸಲು ಲೇಸರ್‌ನ ಬಳಕೆ ಇತ್ಯಾದಿ ನವೀನತೆಯನ್ನು ದಿನದಿನಕ್ಕೂ ಹೊಸ ಸಂಶೋಧನೆಗಳ ಮೂಲಕ ಸಾಧ್ಯವಾಗಿಸಲಾಗುತ್ತಿದೆ.

ನಿಮ್ಮೆದುರಿಗಿನ ದೃಶ್ಯವನ್ನು 7ರಿಂದ 8 ಪಟ್ಟು ವರ್ಧನೆಯಿಂದ ಮೊದಲ್ಗೊಂಡು 80 ಪಟ್ಟು ಹಿರಿದಾಗಿಸುವಿಕೆಯವರೆಗೂ ಸಾಧ್ಯವಾಗಿಸಿದೆ ಇಂದಿನ ಮುಂದುವರೆದ ತಂತ್ರಜ್ಞಾನ. ಅತ್ಯಂತ ಕಡಿಮೆ ಬೆಳಕಿನಲ್ಲೂ ಅಥವಾ ಸಂಪೂರ್ಣ ಕತ್ತಲೆಯಲ್ಲೂ ದೂರದ ವಸ್ತುವೋ ಜೀವಿಯೋ ನಮ್ಮ ಕಣ್ಣಿಗೆ ವಿಷದವಾಗಿ ಕಾಣುವಂತೆ ಮಾಡುವ ಬಗೆಬಗೆಯ ಬೈನಾಕುಲರ್‌ಗಳಿವೆ. ಇರುವ ಅತ್ಯಂತ ಕಡಿಮೆ ಬೆಳಕನ್ನೇ ಬಳಸಿಕೊಂಡು, ಅದನ್ನು ಅನೇಕ ಪಟ್ಟು ಹೆಚ್ಚಿಸಿಕೊಂಡು, ಎದುರಿಗಿನ ದೃಶ್ಯ ಕಾಣುವಂತೆ ಮಾಡುವುದು ನೈಟ್ ವಿಶನ್ ಬೈನಾಕುಲರ್‌ಗಳಾದರೆ, ಸಂಪೂರ್ಣ ಕತ್ತಲೆಯಲ್ಲೂ ಎದುರಿಗಿನ ವಸ್ತು ಅಥವಾ ಜೀವಿಯ ತಾಪಮಾನವನ್ನು ಆಧರಿಸಿ, ನಮಗೆ ಅವು ಗೋಚರಿಸುವಂತೆ ಮಾಡುವುದು ಥರ್ಮಲ್ ಬೈನಾಕುಲರ್‌ಗಳು. ಕಡಿಮೆ ಬೆಳಕಿನಲ್ಲೂ ಕೆಲಸ ಮಾಡುವ ಬೈನಾಕುಲರ್‌ಗಳಲ್ಲಿ ಶಕ್ತ ಮಸೂರಗಳನ್ನು ಬಳಸಲಾಗಿದ್ದರೆ, ಈ ಉಷ್ಣತೆ ಆಧಾರಿತ ಬೈನಾಕುಲರ್‌ಗಳಲ್ಲಿ ಇನ್‌ಫ್ರಾರೆಡ್ ಸಂವೇದಕಗಳನ್ನು ಬಳಸಲಾಗುತ್ತದೆ. ಪ್ರತಿ ಜೀವಿಯೂ ಅಥವಾ ವಸ್ತುವೂ ಒಂದು ಮಟ್ಟದಲ್ಲಿ ಶಾಖವನ್ನು ಹೊರಹಾಕುವುದು ನಡೆದೇ ಇರುತ್ತದೆ. ಅದು ಸಾಮಾನ್ಯವಾಗಿ ಅತಿಗೆಂಪು ಕಿರಣಗಳಾಗಿದ್ದು, ಅದನ್ನು ಈ ಥರ್ಮಲ್ ಬೈನಾಕುಲರ್‌ಗಳಲ್ಲಿರುವ ಸಂವೇದಕಗಳು ಗುರುತಿಸುತ್ತವೆ. ಹಾಗಾಗಿ, ಒಂದು ಜೀವಿಯು ಚಲಿಸಿದರೆ, ಅದರ ಮೈಯ ಪ್ರಭಾವಳಿಯಂತೆ ಕಾಣಿಸುತ್ತಿರುವ ಅತಿಗೆಂಪು ಕಿರಣಗಳು ಕೂಡ ಚಲಿಸುತ್ತವೆ. ಇಂತಹ ವಿಶಿಷ್ಟ ಬೈನಾಕುಲರ್‌ಗಳ ಮೂಲಕ, ಆ ಜೀವಿಯ ಆಕಾರ ಮತ್ತು ಗಾತ್ರದಲ್ಲಿಯೇ ಈ ಅತಿಗೆಂಪು ಕಿರಣಗಳ ಪ್ರಭಾವಳಿಯು ನಮಗೆ ಕಾಣಿಸುತ್ತದೆ. ಆದರೆ, ನೈಟ್ ವಿಷನ್ ಬೈನಾಕುಲರ್‌ಗಳಿಗೆ ಕೊಂಚವಾದರೂ ಬೆಳಕು ಬೇಕಲ್ಲ? ಆ ಬೆಳಕು ಹೊರಗಿನ ಇಂತಹ ಶಾಖದ ಕಿರಣಗಳಿಂದ ದೊರೆತರೂ ಆಯ್ತು ಅಥವಾ ಒಳಗಿನ ಇನ್‌ಫ್ರಾರೆಡ್ ಇಲ್ಯುಮಿನೇಟರ್‌ನ ಸಹಾಯದಿಂದಲೂ ಆದೀತು. ಇಂತಹ ವಿನೂತನ ಬೈನಾಕುಲರ್‌ಗಳಲ್ಲಿ ಐ.ಆರ್.ಐ. ಎಂಬ ಗುಂಡಿಯನ್ನು ಒತ್ತಿದರೆ ಸಾಕು, ಎಂತಹ ಕತ್ತಲಲ್ಲೂ ನಿಮ್ಮೆದುರಿಗಿನ ದೃಶ್ಯವು ವಿವರವಾಗಿ ನಿಮಗೆ ಗೋಚರಿಸುತ್ತದೆ. ಇಲ್ಲಿ, ಇಂತಹ ಬೈನಾಕುಲರ್‌ನ ಒಳಗೇ ಬೆಳಗಲು ಸಿದ್ಧವಾಗಿರುವ ಅತಿಗೆಂಪು ಕಿರಣಗಳ ಮೂಲವಿರುತ್ತದೆ. ಅದು, ನಿಮಗೆ ಬೇಕೆಂದಾಗ ಅತಿಗೆಂಪು ಕಿರಣಗಳ ಹೊನಲು ಹರಿಸಿ, ಕಾಣದ್ದನ್ನು ಕಾಣುವ ಹಾಗೆ ಮಾಡುತ್ತದೆ. ಇನ್ನು, ಕಾಣದ್ದು ದೊಡ್ಡದಾಗಿ ಕಾಣುವಂತೆ ಮಾಡಲು ಹಿರಿದಾಗಿಸುವ ಮಸೂರಗಳು ಇದ್ದೇ ಇವೆಯಲ್ಲ!

ಈ ಮಸೂರಗಳಂತೂ ಅವೆಷ್ಟು ಬಗೆಬಗೆ! ಬೈನಾಕುಲರ್‌ಗಳಲ್ಲಿ ನಿಮ್ನ, ಪೀನಮಸೂರಗಳಲ್ಲದೇ ವಿವಿಧ ಬಗೆಯ, ಗಾತ್ರದ ಪ್ರಿಸಮ್‌ಗಳನ್ನೂ ಬಳಕೆ ಮಾಡಲಾಗುತ್ತದೆ. ಇಲ್ಲಿ ಪ್ರಿಸಮ್‌ಗಳ ಮುಖಾಂತರ ಬೆಳಕನ್ನು ಕೇಂದ್ರೀಕರಿಸಲು ಮತ್ತು ಪ್ರತಿಫಲಿತ ಚಿತ್ರವನ್ನು ಸರಿಯಾದ ಕೋನದಲ್ಲಿ ಕಾಣಿಸಲು ಸಾಧ್ಯವಾಗುತ್ತದೆ. ನಮ್ಮ ಮುಂದಿರುವ ದೃಶ್ಯವು ದುರ್ಬೀನಿನ ಮಸೂರಗಳು ಮತ್ತು ಪ್ರಿಸಮ್ ಇರುವ ಕೊಳವೆಗಳ ಮೂಲಕ ಹಾಯ್ದು ಬರುವಾಗ, ಸಣ್ಣ ಗಾತ್ರದ ಅಥವಾ ದೂರದ ದೃಶ್ಯವು ತಲೆಕೆಳಗಾಗಿ, ನಂತರ ಮತ್ತೆ ನೇರವಾಗಿ, ಹಿರಿದಾಗಿ ಗೋಚರಿಸುತ್ತದೆ. ಇಲ್ಲಿ, ಅಗತ್ಯಕ್ಕಿಂತ ಹೆಚ್ಚಿನ ಬೆಳಕು ಮಸೂರಗಳ ಮೂಲಕ ಹಾದು, ನಮ್ಮ ಕಣ್ಣಿಗೆ ಸಮಸ್ಯೆ ಒಡ್ಡಬಾರದೆಂದು ಅನೇಕ ಭೌತರಾಸಾಯನಿಕ ಲೇಪನಗಳನ್ನು, ಶೋಧಕಗಳನ್ನು ಅಳವಡಿಸಲಾಗುತ್ತದೆ ಕೂಡ. ಅವು ಈ ಪ್ರತಿಫಲನಕ್ಕೊಂದು ಲಗಾಮು ಹಾಕಿ, ಹೆಚ್ಚುವರಿ ಕಿರಣಗಳನ್ನು ನಿಯಂತ್ರಿಸುತ್ತವೆ.

ಕ್ಯಾಮೆರಾ ಒಂದು, ಬೈನಾಕುಲರ್ ಮತ್ತೊಂದು, ಎಂದು ಹೊತ್ತೊಯ್ಯುವ ಅಗತ್ಯವಿಲ್ಲದಂತೆ ಮಾಡಿರುವುದು ಎರಡೂ ತಂತ್ರಜ್ಞಾನವನ್ನು ಮಿಳಿತಗೊಳಿಸಿರುವ ಡಿಜಿಟಲ್ ಬೈನಾಕುಲರ್‌ಗಳು. ಇಲ್ಲಿ ದುರ್ಬೀನುಗಳ ಜೊತೆಗೆ ಕ್ಯಾಮೆರಾದ ಜೋಡಣೆಯಿರುವ ಕಾರಣ, ನಿಮಗೆ ಒಂದು ಪುಟ್ಟ ಪರದೆಯ ಮೇಲೆ ವರ್ಧಿತ ಚಿತ್ರ ಗೋಚರಿಸುತ್ತದೆ. ಕಣ್ಣುಗಳನ್ನು ಕಿರಿದಾಗಿಸಿ, ಲೆನ್ಸ್‌ನ ಮೂಲಕ ಕೇಂದ್ರೀಕರಿಸಬೇಕಿಲ್ಲ. ಇಲ್ಲಿ ದುರ್ಬೀನು ಹಾಗೂ ಕ್ಯಾಮೆರಾ – ಎರಡರದ್ದೂ ಒಂದೇ ಮಟ್ಟದ ವರ್ಧನೆಯಿದ್ದು, ಹಿರಿದಾಗಿಸಲಾದ ದೃಶ್ಯದ ಚಿತ್ರವನ್ನೂ ಕ್ಲಿಕ್ಕಿಸಬಹುದು, ವಿಡಿಯೊ ಮಾಡಬಹುದು ಕೂಡ. ಬೈನಾಕುಲರ್ ಕೊಳ್ಳುವ ಇರಾದೆಯಿದ್ದರೆ, ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ನಿಮ್ಮ ಆಸಕ್ತಿ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಖರೀದಿ ಮಾಡುವುದು ಸೂಕ್ತ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು