ಗುರುವಾರ , ಸೆಪ್ಟೆಂಬರ್ 23, 2021
27 °C
ಪೇರೆಂಟಿಂಗ್

ಕೊರೊನಾ ಕಾಲದಲ್ಲಿ ಮಕ್ಕಳ ಸ್ಕ್ರೀನ್‌ ಟೈಮ್‌ಗೆ ಇರಲಿ ಪೋಷಕರ ಕಡಿವಾಣ

ಡಾ.ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ಜೂನ್ ಎಂದರೆ ಶಾಲೆ ಪುನಃ ಪ್ರಾರಂಭವಾಗುವ ತಿಂಗಳು. ಶಾಲೆಗೆ ಹೋಗುವ ಸಡಗರ, ಸ್ನೇಹಿತರು, ಪುಸ್ತಕ, ಹೊಸ ಸಮವಸ್ತ್ರ ಎಂದೆಲ್ಲಾ ಸಂಭ್ರಮಿಸುವ ತಿಂಗಳು. ಆದರೆ ಕೋವಿಡ್-19ರ ಲಾಕ್‌ಡೌನ್‌ನ ಸಲುವಾಗಿ ಇದಾವುದೂ ಸಾಧ್ಯವಾಗುವಂತಿಲ್ಲ. ಮಕ್ಕಳ ಶೈಕ್ಷಣಿಕ ಸಮಯ ಕುಂಠಿತವಾಯಿತಲ್ಲಾ ಎಂಬ ಯೋಚನೆ ಒಂದೆಡೆಯಾದರೆ ಆರೋಗ್ಯವೇ ಮುಖ್ಯ ಎಂಬ ಆಲೋಚನೆ ಇನ್ನೊಂದೆಡೆ. ಪೋಷಕರ ಮತ್ತೊಂದು ದೊಡ್ಡ ಯೋಚನೆಯೆಂದರೆ ಮಕ್ಕಳ ಸ್ಕ್ರೀನ್ ಟೈಮ್.

ಏನಿದು ಸ್ಕ್ರೀನ್ ಟೈಮ್?

ಟಿವಿ, ವಿಡಿಯೊ ಗೇಮ್ಸ್, ಮೊಬೈಲ್‌ಗಳು, ಕಂಪ್ಯೂಟರ್‌ಗಳು ಮಕ್ಕಳನ್ನು ಅತಿಯಾಗಿ ಆಕರ್ಷಿಸುವ ಮಾಧ್ಯಮಗಳಾಗಿ ಪರಿಣಮಿಸಿವೆ. ಮಕ್ಕಳು ಎಲೆಕ್ಟ್ರಾನಿಕ್ ಸ್ಕ್ರೀನ್‌ಗಳನ್ನು ನೋಡುತ್ತಾ ಕೂಡುವ ಸಮಯವೇ ಸ್ಕ್ರೀನ್ ಟೈಮ್. ಮಕ್ಕಳ ರಜಾ ದಿನಗಳು ಹೆಚ್ಚಾದಂತೆಲ್ಲಾ ಅವರ ಸ್ಕ್ರೀನ್ ‌ಟೈಮ್ ಕೂಡ ಹೆಚ್ಚಾಗುತ್ತಿದೆ. ಮಕ್ಕಳು ಲಾಕ್‌ಡೌನ್‌ನಿಂದಾಗಿ ಮನೆಯಿಂದ ಹೊರ ಹೋಗಿ ಆಡಲೂ ಆಗದೆ, ಸ್ನೇಹಿತರ ಮನೆಗಳಿಗೆ ಹೋಗಲೂ ಆಗುತ್ತಿಲ್ಲ.

ಮನೆಯಲ್ಲೇ ಆಡುವ ಒಳ ಆಟಗಳನ್ನು ಆಡಿ ಬೇಸರವಾದಾಗ ಅತ್ಯಾಕರ್ಷಕವೆನಿಸುವ ಟಿವಿ, ಮೊಬೈಲ್‌ಗಳ ಮೊರೆ ಹೋಗಿ ಗಂಟೆಗಟ್ಟಲೆ ಸಮಯ ಕಳೆಯುವಂತಾಗಿದೆ. ಆನ್‌ಲೈನ್ ಕ್ಲಾಸ್‌ಗಳ ಹೆಸರಿನಲ್ಲಿ ಮಕ್ಕಳ ಸ್ಕ್ರೀನ್ ಟೈಮ್ ಇನ್ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಮೊಬೈಲ್‌ ವ್ಯಸನದ ‘ಕಾಯಿಲೆ’ಗಳು

ದುಷ್ಪರಿಣಾಮಗಳು

ಅಧ್ಯಯನಗಳ ಪ್ರಕಾರ ಅತಿಯಾದ ಸ್ಕ್ರೀನ್‌ಟೈಮ್‌ನಿಂದ ಮಕ್ಕಳ ಕ್ರಿಯಾಶಿಲತೆ, ಗ್ರಹಣ ಶಕ್ತಿ, ಯೋಚನಾ ಶಕ್ತಿಗಳು ಕುಂಠಿತವಾಗುವುದಲ್ಲದೆ, ದೈಹಿಕ ಜಡತ್ವ, ಬೊಜ್ಜು, ತಲೆನೋವು, ಕಣ್ಣುಗಳು ಒಣಗುವಿಕೆ, ಗಮನದ ಕೊರತೆ, ಮಾಂಸಖಂಡದ ಟೋನ್‌ನ ಕೊರತೆ, ಕೂರುವ ಅಥವಾ ನಿಲ್ಲುವ ಭಂಗಿಯಲ್ಲಿ ಬದಲಾವಣೆಗಳು, ದೃಷ್ಟಿದೋಷಗಳು, ಚಿಕ್ಕ ವಯಸ್ಸಿನಲ್ಲೇ ಬರುವಂತಹ ಸಕ್ಕರೆ ಕಾಯಿಲೆ, ಶಿಸ್ತಿನ ಕೊರತೆ, ನೆನಪಿನಶಕ್ತಿಯ ಕೊರತೆ ಮತ್ತು ನಡವಳಿಕೆ ಬದಲಾವಣೆಗಳನ್ನು ಕಾಣಬಹುದಾಗಿದೆ.

ಎಷ್ಟು ಸ್ಕ್ರೀನ್‌ಟೈಮ್ ಬೇಕು?

ಒಂದರಿಂದ ಎರಡು ವರ್ಷ ವಯಸ್ಸಿನ ತನಕ ಮಕ್ಕಳಿಗೆ ಸ್ಕ್ರೀನ್‌ಟೈಮ್ ಅವಶ್ಯಕತೆಯಿರುವುದಿಲ್ಲ. 2-5 ವರ್ಷದ ಮಕ್ಕಳಿಗೆ ಒಂದು ಗಂಟೆಯ ಸ್ಕ್ರೀನ್‌ಟೈಮ್ ಕೊಡಬಹುದು. ಮಕ್ಕಳು ವೀಕ್ಷಿಸುವ ಕಾರ್ಯಕ್ರಮಗಳನ್ನು ಪೋಷಕರು ಜೊತೆಯಲ್ಲಿ ಕುಳಿತು ವೀಕ್ಷಿಸಿ ಮೇಲ್ವಿಚಾರಣೆ ಮಾಡುವ ಅವಶ್ಯಕತೆ ಇರುತ್ತದೆ.

ಪೋಷಕರು ಏನು ಮಾಡಬಹುದು?

* ಮಕ್ಕಳು ನೋಡಿ ಕಲಿಯುವುದು ಹೆಚ್ಚಾಗಿರುವುದರಿಂದ ಪೋಷಕರಾದ ನಾವು ನಮ್ಮ ಸ್ಕ್ರೀನ್‌ಟೈಮ್ ಕಡಿತಗೊಳಿಸುವುದರಿಂದ ಮಕ್ಕಳಿಗೆ ಮಾದರಿಯಾಗಿ ವರ್ತಿಸಬೇಕು.

* ಪೋಷಕರಾದ ನಾವು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ, ಅವರರೊಂದಿಗೆ ಆಟವಾಡುವ, ಕಾಲ ಕಳೆಯುವ, ಓದಿಸುವ, ಬೋಧಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅಗತ್ಯ.

* ಮಕ್ಕಳ ಹವ್ಯಾಸಗಳನ್ನು ಅಂದರೆ ಚಿತ್ರಕಲೆ, ಕೈತೋಟ, ಸಂಗೀತ, ಆಟಗಳು ಮುಂತಾದವುಗಳನ್ನು ಪ್ರೋತ್ಸಾಹಿಸಬೇಕು. 

* ಊಟ ಅಥವಾ ತಿಂಡಿಯ ಸಮಯದಲ್ಲಿ ಮನೆಯವರೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಸ್ಕ್ರೀನ್‌ಟೈಮ್ ಕಡಿತ ಮಾಡುವುದಲ್ಲದೆ ಕುಟುಂಬದ ಸಮಯವನ್ನು ಸವಿಯಬಹುದಾಗಿದೆ.

ಇದನ್ನೂ ಓದಿ: ಮೊಬೈಲ್‌ ಗೀಳಿನತ್ತ ಮಕ್ಕಳು, ಪಾಲಕರ ಆತಂಕ

* ಮಕ್ಕಳಿಗೆ ಕ್ರಿಯಾಶೀಲ ಆಟಿಕೆಗಳು, ಬಣ್ಣಗಳು, ಆಟಗಳು ಆಕರ್ಷಕ ಪುಸ್ತಕಗಳನ್ನು ಒದಗಿಸುವುದರಿಂದ ಸ್ಕ್ರೀನ್‌ಟೈಮ್ ಕಡಿಮೆ ಮಾಡಬಹುದಾಗಿದೆ.

* ತಾಯಿ ತಂದೆಯರು ಮನೆಯ ಕೆಲಸಗಳಲ್ಲಿ ಮಕ್ಕಳ ಸಹಾಯವನ್ನು ಪಡೆಯುವುದರಿಂದ ಮಕ್ಕಳು ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಲು ಸಹಾಯವಾಗುತ್ತದೆ. ಮಕ್ಕಳು ಮನೆ ಕೆಲಸದಲ್ಲಿ ಸಹಾಯವನ್ನು ಮಾಡಿ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಪ್ರೋತ್ಸಾಹಿಸಬಹುದು.

* ಮನೆಗಳಲ್ಲಿ ಬೆಡ್ ರೂಂಗಳಲ್ಲಿ ಅಥವಾ ಇನ್ನಿತರೆ ಸ್ಥಳಗಳಲ್ಲಿ ಟಿವಿ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯನ್ನು ಮಿತಗೊಳಿಸಿ. ಟಿವಿ ವೀಕ್ಷಣೆಯನ್ನು ಒಂದು ಸ್ಥಳಕ್ಕೆ ಸೀಮಿತಗೊಳಿಸುವುದು ಒಳಿತು.

* ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಅತಿಯಾದ ಸ್ಕ್ರೀನ್‌ಟೈಮ್‌ನಿಂದ ಅಗುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಿ ತಿಳಿಹೇಳಿ.

* ಮಕ್ಕಳು ಗ್ಯಾಜೆಟ್‌ಗಳ ಬಳಕೆಯಲ್ಲಿ ಪೋಚಕರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಪೋಷಕರಾದ ನಾವು ಬಳಸುವ ಗ್ಯಾಜ್ಡೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಉತ್ತಮ.

* ಮನೆಯಲ್ಲಿ ಊಟದ ಮನೆ, ಮಲಗುವ ಕೋಣೆ ಮುಂತಾದ ಸ್ಥಳಗಳನ್ನು ಗ್ಯಾಜ್ಡೆಟ್ ಫ್ರೀ ವಲಯಗಳನ್ನಾಗಿಸುವುದು ಉತ್ತಮ.

ಪೋಷಕರಾದ ನಾವು ಮಕ್ಕಳ ಪಾಲನೆಯಂತಹ ಅತಿದೊಡ್ಡ ಜವಾಬ್ದಾರಿಯನ್ನು ಹೊತ್ತಿರುವವರಾಗಿರುತ್ತೇವೆ. ಈ ಮಹತ್ತರ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿ ಸಮಾಜದ ಒಳಿತಿಗಾಗಿ, ಆರೋಗ್ಯಕರ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುವ ಆಹ್ಲಾದವನ್ನು ಅನುಭವಿಸೋಣ.

(ಲೇಖಕರು ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು