ಸೋಮವಾರ, ಸೆಪ್ಟೆಂಬರ್ 27, 2021
21 °C

ಜಾಗತಿಕವಾಗಿ ಗಮನ ಸೆಳೆದ 'ಕೋವಿನ್‌'; ತಂತ್ರಜ್ಞಾನ ಬಳಕೆಗೆ 50 ರಾಷ್ಟ್ರಗಳ ಆಸಕ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿ ಕೋವಿಡ್‌–19 ಲಸಿಕೆ ಕಾರ್ಯಕ್ರಮಕ್ಕೆ ಸಹಕಾರಿಯಾಗಿರುವ 'ಕೋವಿನ್‌' (CoWin) ವೇದಿಕೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಸುಮಾರು 50 ರಾಷ್ಟ್ರಗಳು ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ.

ಕೋವಿನ್‌ ಪೋರ್ಟಲ್‌ನ ಮುಖ್ಯಸ್ಥ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ಎಸ್‌.ಶರ್ಮಾ, ಈ ಕುರಿತು ಟ್ವೀಟಿಸಿದ್ದಾರೆ. ಮಧ್ಯ ಏಷ್ಯಾ, ಲ್ಯಾಟಿನ್‌ ಅಮೆರಿಕ ಹಾಗೂ ಆಫ್ರಿಕಾದ ಸುಮಾರು 50 ರಾಷ್ಟ್ರಗಳು ಕೋವಿನ್‌ ತಂತ್ರಜ್ಞಾನದ ಬಗ್ಗೆ ಆಸಕ್ತಿ ತೋರಿವೆ ಎಂದಿದ್ದಾರೆ.

'ಆಸಕ್ತಿ ತೋರುವ ರಾಷ್ಟ್ರಗಳಿಗೆ ಉಚಿತವಾಗಿ ಕೋವಿನ್‌ ವೇದಿಕೆಯ ಮುಕ್ತ ಆವೃತ್ತಿಯನ್ನು ರೂಪಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯ ಸೂಚಿಸಿದೆ' ಎಂದು ತಿಳಿಸಿದ್ದಾರೆ.

ಸಾರ್ವಜನಿಕವಾಗಿ ಡಿಜಿಟಲ್‌ ಒಳಿತಿನ ಉದ್ದೇಶಗಳಿಗಾಗಿ ಜಗತ್ತಿನಾದ್ಯಂತ ಉಚಿತವಾಗಿ ಕೋವಿನ್‌ ಪ್ಲಾಟ್‌ಫಾರ್ಮ್ ಅನ್ನು ಭಾರತ ಪೂರೈಕೆ ಮಾಡಲಿದೆ. ಜುಲೈ 5ರಂದು 'ಕೋವಿನ್‌ ಗ್ಲೋಬಲ್‌ ಕಾನ್‌ಕ್ಲೇವ್‌ನಲ್ಲಿ' ಅದರ ಅನಾವರಣ ಆಗಲಿದೆ ಎಂದು ಆರ್‌.ಎಸ್‌.ಶರ್ಮಾ ತಿಳಿಸಿದ್ದಾರೆ.

ಸೋಂಕು ಸಂಪರ್ಕಿತರ ಪತ್ತೆ, ಕೋವಿಡ್‌ ಲಸಿಕೆ ನಿರ್ವಹಣೆಯನ್ನು ಕೋವಿನ್‌ ಪ್ಲಾಟ್‌ಫಾರ್ಮ್‌ ಮೂಲಕ ನಡೆಸಲಾಗುತ್ತಿದೆ. ಜೂನ್‌ 21ರಂದು ಒಂದೇ ದಿನದಲ್ಲಿ 1,08,949 ಬಾರಿ ಲಸಿಕೆ ಹಾಕುವವರು ಕೋವಿನ್‌ಗೆ ಲಾಗಿನ್‌ ಆಗಿದ್ದರು ಹಾಗೂ 86 ಲಕ್ಷ ಜನರಿಗೆ ಲಸಿಕೆ ಹಾಕಿರುವುದು ಹೊಸ ದಾಖಲೆಯಾಗಿದೆ.

ಮೂಲಗಳ ಪ್ರಕಾರ, ವಿಯೆಟ್ನಾಂ. ಪೆರು, ಮೆಕ್ಸಿಕೊ, ಇರಾಕ್‌, ಡೊಮಿನಿಕನ್‌ ರಿಪಬ್ಲಿಕ್‌, ಪನಾಮಾ, ಉಕ್ರೇನ್‌, ನೈಜೀರಿಯಾ, ಉಗಾಂಡ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಸೇರಿದಂತೆ ಹಲವು ರಾಷ್ಟ್ರಗಳು ಕೋವಿಡ್‌ ಲಸಿಕೆ ಕಾರ್ಯಕ್ರಮದ ನಿರ್ವಹಣೆಗಾಗಿ ಕೋವಿನ್‌ ಪೋರ್ಟಲ್‌ ಅಳವಡಿಸಿಕೊಳ್ಳಲು ಮುಂದಾಗಿವೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು