ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್ಚರಿಕೆ: ವಾಟ್ಸ್ಆ್ಯಪ್ ಬಳಕೆದಾರರನ್ನು ವಂಚಿಸುತ್ತಿದೆ Pink WhatsApp ಸಂದೇಶ!

Cyber Alert
Last Updated 17 ಏಪ್ರಿಲ್ 2021, 10:37 IST
ಅಕ್ಷರ ಗಾತ್ರ

ಶುಕ್ರವಾರದಿಂದೀಚೆಗೆ ವಾಟ್ಸ್ಆ್ಯಪ್ ಬಳಕೆದಾರರನೇಕರು ಬೇಸ್ತು ಬಿದ್ದಿದ್ದಾರೆ. ಇದಕ್ಕೆಲ್ಲ ಕಾರಣ, "ನಿಮ್ಮ ವಾಟ್ಸ್ಆ್ಯಪ್ ನೋಟವನ್ನೇ ಪಿಂಕ್ (ತಿಳಿಗುಲಾಬಿ) ಬಣ್ಣಕ್ಕೆ ಬದಲಾಯಿಸಿ ಆನಂದಿಸಬೇಕೇ? ಈ ಲಿಂಕ್ ಕ್ಲಿಕ್ ಮಾಡಿ" ಎಂದು ಬಂದಿರುವ ಒಂದು ಸಂದೇಶ.

ರಾಜ್ಯದಾದ್ಯಂತ ಲಕ್ಷಾಂತರ ಬಳಕೆದಾರರು ಈ ಸಂದೇಶವು ಹಲವಾರು ಗ್ರೂಪ್‌ಗಳಲ್ಲಿ ಬಂದಿರುವುದನ್ನು ಮತ್ತು ವೈಯಕ್ತಿಕವಾಗಿ ಸಂದೇಶರೂಪದಲ್ಲಿ ಬಂದಿರುವುದನ್ನು ನೋಡಿದ್ದಾರೆ. ಕೆಲವರು ಲಿಂಕ್ ಕ್ಲಿಕ್ ಮಾಡಿದ್ದಾರೆ. ಇನ್ನು ಕೆಲವು ವಿದ್ಯಾವಂತ ಮಂದಿ, 'ಇಂಥ ಲಿಂಕ್‌ಗಳೆಲ್ಲವೂ ಸೈಬರ್ ಕಳ್ಳರ ಕುತಂತ್ರ' ಎಂದುಕೊಂಡು ಸುಮ್ಮನಾಗಿದ್ದಾರೆ.ಇದು ಹೇಗೆ ನಡೆಯಿತು ಅಂತಲಿಂಕ್ ಕಳುಹಿಸಿದವರನ್ನೇ ಮಾತನಾಡಿಸಿದಾಗ ಸತ್ಯ ವಿಷಯ ಬಯಲಾಯಿತು. ಅವರಿಗೆ ತಿಳಿಯದೆಯೇ ಇದು ಹರಿದಾಡಿದೆ ಅಂತ.

ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ?
'ವಾಟ್ಸ್ಆ್ಯಪ್ ಅನ್ನು ಗುಲಾಬಿ ಬಣ್ಣಕ್ಕೆ ತಿರುಗಿಸೋಣ, ನೋಡಲು ಚಂದವಾಗಿರುತ್ತದೆ' ಎಂದುಕೊಂಡು ಲಿಂಕ್ ಕ್ಲಿಕ್ ಮಾಡಿದ ತಕ್ಷಣವೇ ಅದು ಯಾವುದೋ ಫೈಲ್ ಇನ್‌ಸ್ಟಾಲ್ ಮಾಡಬೇಕೇ ಎಂದು ಕೇಳುತ್ತದೆ. ಓದದೆ, ಕ್ಲಿಕ್ ಮಾಡುತ್ತೀರಿ. ಆ ನಂತರ, ನಿಮ್ಮ ವಾಟ್ಸ್ಆ್ಯಪ್ ಸಂಪರ್ಕ ಸಂಖ್ಯೆಗಳು, ನೀವಿರುವ ಗ್ರೂಪುಗಳಿಗೆಲ್ಲವೂ ಈ ಸಂದೇಶವು ತನ್ನಿಂತಾನಾಗಿಯೇ ರವಾನೆಯಾಗುತ್ತದೆ.

ಪ್ರತೀ ಹತ್ತು ನಿಮಿಷಗಳಿಗೊಮ್ಮೆ ಈ ಸಂದೇಶ ರವಾನೆಯಾಗುತ್ತಿರುತ್ತದೆ ಎಂದು ಮಂಗಳೂರಿನ ಕೊಟ್ಟಾರದ ಶಿಕ್ಷಕಿ ರಶ್ಮಿ ರೈ ವಿವರಿಸಿದ್ದಾರೆ. ಅವರೀಗ ತಜ್ಞರ ಸಲಹೆ ಪಡೆದು ಈ ಕುತಂತ್ರಾಂಶವನ್ನು ತಮ್ಮ ಮೊಬೈಲ್ ಫೋನ್‌ನಿಂದ ಅಳಿಸಿಹಾಕಿದ್ದಾರೆ. ಮತ್ತು ತಾವಿರುವ ಗ್ರೂಪುಗಳಿಗೆ ಮತ್ತು ತಮ್ಮ ಎಲ್ಲ ಸ್ನೇಹಿತರಿಗೂ ಇದನ್ನು ಇನ್‌ಸ್ಟಾಲ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಇದೇ ಅನುಭವ ಮಂಗಳೂರಿನ ಛಾಯಾಗ್ರಾಹಕ ಸತೀಶ್ ಇರಾ ಅವರದು ಕೂಡ. ಅವರು ಇನ್‌ಸ್ಟಾಲ್ ಮಾಡಿದ ಕಾರಣದಿಂದಾಗಿ ಸಾಕಷ್ಟು ಮಂದಿಗೆ ಈ ಲಿಂಕ್ ಸ್ವಯಂಚಾಲಿತವಾಗಿ ರವಾನೆಯಾಗಿದೆ. 'ಸ್ನೇಹಿತರಿಗೆ, ಗ್ರೂಪುಗಳಿಗೆ ಈ ಲಿಂಕ್ ಕ್ಲಿಕ್ ಮಾಡದಂತೆ ತಿಳಿಸಿದ್ದೇವೆ. ಕೆಲವರು ಕರೆ ಮಾಡಿ, ಆ ಲಿಂಕ್ ಏನಂತ ವಿಚಾರಿಸಿದ್ದಾರೆ' ಎಂದು ಸತೀಶ್ ವಿವರ ನೀಡಿದ್ದಾರೆ.

ಏನಿದು?
ಇವೆಲ್ಲವೂ ಕುತಂತ್ರಾಂಶಗಳು ಅಥವಾ ಮಾಲ್‌ವೇರ್‌ಗಳು (ಮಾಲಿಷಿಯಸ್ ಸಾಫ್ಟ್‌ವೇರ್‌ಗಳು) . ಸಾಮಾನ್ಯವಾಗಿ ಇವನ್ನು ವೈರಸ್ ಎಂದೇ ಕರೆಯಲಾಗುತ್ತದೆ. ಸೈಬರ್ ಕ್ರಿಮಿನಲ್‌ಗಳು ಯಾವುದೇ ಮೊಬೈಲ್ ಫೋನ್‌ನಲ್ಲಿ ಅಡಕವಾಗಿರುವ ಮಾಹಿತಿಯನ್ನು, ವಿಶೇಷವಾಗಿ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯಲು ಇಂತಹಾ ಅದೆಷ್ಟೋ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಈ ಪಿಂಕ್ ವಾಟ್ಸ್ಆ್ಯಪ್ ಹೆಸರಿನಲ್ಲಿ ಬಂದಿರುವ ಲಿಂಕ್‌ನ ವಿಶೇಷತೆಯೆಂದರೆ, ಇನ್‌ಸ್ಟಾಲ್ ಮಾಡಿದಾಕ್ಷಣ ಎಲ್ಲ ಸಂಪರ್ಕ ಸಂಖ್ಯೆಗಳಿಗೆ ಮೊದಲೇ ನಿಗದಿಪಡಿಸಿದ ಸಂದೇಶವೊಂದು ರವಾನೆಯಾಗುತ್ತದೆ.

ಇದೊಂದು ಫೇಕ್ ಆ್ಯಪ್ ಅಥವಾ ಮಾಲ್‌ವೇರ್ ತಂತ್ರಾಂಶ. ನಾವಾಗಿಯೇ ಡೌನ್‌ಲೋಡ್ ಮಾಡಿಕೊಂಡು ನಮ್ಮ ಮಾಹಿತಿಯನ್ನು ಸೈಬರ್ ಕಳ್ಳರಿಗೆ ಬಿಟ್ಟುಕೊಡುವಂತೆ ಪ್ರಚೋದಿಸುವ ಆ್ಯಪ್. ಬಣ್ಣ ಬದಲಾಯಿಸಲು ಇಂಥ ಲಿಂಕೇ ಬೇಕೇ? ನಾವೇ ವಾಟ್ಸ್ಆ್ಯಪ್ ವಾಲ್‌ಪೇಪರ್ ಬದಲಿಸಿಕೊಳ್ಳಬಹುದು. ಆದರೆ, ಈ ರೀತಿಯ ಕು-ತಂತ್ರಾಂಶಗಳನ್ನು ಕ್ಲಿಕ್ ಮಾಡಿದರೆ, ಅದರ ಮೂಲಕ ಸೈಬರ್ ಕಳ್ಳರು ನಮ್ಮ ಮೊಬೈಲ್‌ನಲ್ಲಿರುವ ಬ್ಯಾಂಕಿಂಗ್ ಆ್ಯಪ್‌ಗಳ ಮಾಹಿತಿ ಕದಿಯಬಹುದು, ನಮ್ಮ ಸ್ನೇಹಿತರ ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳೂ ಅವರ ಪಾಲಾಗಬಹುದು, ನಮಗೆ ಅಗತ್ಯವಿಲ್ಲದ ಜಾಹೀರಾತುಗಳನ್ನು ಸೈಬರ್ ಕಳ್ಳರು ಎಲ್ಲ ಕಡೆ ತೋರಿಸುತ್ತಾ, ಅದರಿಂದಲೂ ಅವರು ಹಣ ಮಾಡಬಹುದು. ಅಥವಾ ಯಾವುದಾದರೂ ಸೇವೆಗೆ ನಿಮಗೆ ತಿಳಿಯದೆಯೇ ಸಬ್‌ಸ್ಕ್ರೈಬ್ ಆಗುವಂತೆ ಮಾಡಲೂಬಹುದು.

ಹೇಗೆ ಸುರಕ್ಷಿತವಾಗಿರಬೇಕು?
ಮೊದಲನೇ ಸಂಗತಿಯೆಂದರೆ, ಯಾವುದೇ ರೀತಿಯ ಆಸೆ, ಆಮಿಷ ಒಡ್ಡುವ ಯಾವುದೇ ಲಿಂಕ್‌ಗಳನ್ನು ಯಾವತ್ತೂ ಕ್ಲಿಕ್ ಮಾಡಲೇಬಾರದು. ಉದಾ. ಜಿಯೋ ನಿಮಗೆ ವರ್ಷ ಪೂರ್ತಿ ಡೇಟಾ ಉಚಿತವಾಗಿ ಕೊಡುವಂತಾಗಲು ಇಲ್ಲಿ ಕ್ಲಿಕ್ ಮಾಡಿ, ಅಮೆಜಾನ್‌ನಲ್ಲಿ ಶೇ.100ರಷ್ಟು ಡಿಸ್ಕೌಂಟ್ ಪಡೆಯಲು ಇದನ್ನು ಕ್ಲಿಕ್ ಮಾಡಿ, ಕೋವಿಡ್ ಲಸಿಕೆಯನ್ನು ತಕ್ಷಣವೇ ಪಡೆಯಲು ಇಲ್ಲಿ ಕ್ಲಿಕ್ ಮಾಡಿ... ಅಂತ ಯಾವುದೇ ರೂಪದಲ್ಲಿಯೂ ಆಮಿಷವೊಡ್ಡುವ ಸಂದೇಶಗಳು ಬರಬಹುದು. ಕ್ಲಿಕ್ ಮಾಡಲೇಬೇಡಿ.

ಸೆಟ್ಟಿಂಗ್ಸ್ > ಆ್ಯಪ್ಸ್ ಎಂಬಲ್ಲಿ ವಾಟ್ಸ್ಆ್ಯಪ್ ಪಕ್ಕದಲ್ಲೇ ಪಿಂಕ್ ವಾಟ್ಸ್ಆ್ಯಪ್ ಇರುತ್ತದೆ
ಸೆಟ್ಟಿಂಗ್ಸ್ > ಆ್ಯಪ್ಸ್ ಎಂಬಲ್ಲಿ ವಾಟ್ಸ್ಆ್ಯಪ್ ಪಕ್ಕದಲ್ಲೇ ಪಿಂಕ್ ವಾಟ್ಸ್ಆ್ಯಪ್ ಇರುತ್ತದೆ

ವಾಟ್ಸ್ಆ್ಯಪ್‌ನಲ್ಲಿ ಪಿಂಕ್ ಬಣ್ಣದ ಸೌಕರ್ಯವನ್ನು ವಾಟ್ಸ್ಆ್ಯಪ್ ಈ ರೀತಿಯಾಗಿ ಪ್ರತ್ಯೇಕ ಲಿಂಕ್ ಮೂಲಕ ನೀಡುವುದಿಲ್ಲ. ತನ್ನದೇ ಆ್ಯಪ್ ಅಪ್‌ಡೇಟ್ ಮೂಲಕವೇ ಒದಗಿಸುತ್ತವೆ ಎಂಬ ಸಾಮಾನ್ಯ ಜ್ಞಾನ ನಮ್ಮದಾಗಿರಬೇಕು.

ಹೇಗೆ ತೆಗೆಯುವುದು?
ಕೊರೊನಾ ವೈರಸ್‌ಗಿಂತಲೂ ವೇಗವಾಗಿ ಹರಡಿದ ಈ ಕುತಂತ್ರಾಂಶವನ್ನು ಅಂದರೆ ಫೇಕ್ ಆ್ಯಪ್ ಅನ್ನು ನಿಮ್ಮ ಮೊಬೈಲ್ ಫೋನ್‌ನಿಂದ ಅಳಿಸುವುದು ಸೂಕ್ತ. ಅದನ್ನು ಹೋಂ ಸ್ಕ್ರೀನ್‌ನಿಂದ ಡಿಲೀಟ್ ಮಾಡಿದ ತಕ್ಷಣ ಅದು ಫೋನ್‌ನಿಂದಲೇ ಹೋಗುವುದಿಲ್ಲ. ಪೂರ್ತಿಯಾಗಿ ಅಳಿಸಬೇಕಿದ್ದರೆ, ಸೆಟ್ಟಿಂಗ್‌ಗೆ ಹೋಗಿ, ಆ್ಯಪ್ಸ್ ಎಂಬಲ್ಲಿಗೆ ಹೋಗಿ, ಪಿಂಕ್ ಬಣ್ಣದ ವಾಟ್ಸ್ಆ್ಯಪ್ ಲೋಗೋ ಇರುವ ಆ್ಯಪ್ ಕ್ಲಿಕ್ ಮಾಡಿ, ಅನ್ಇನ್‌ಸ್ಟಾಲ್ ಎಂಬ ಬಟನ್ ಒತ್ತಬೇಕು.

ಇಂಟರ್ನೆಟ್ ಬಳಸುತ್ತೀರೆಂದಾದರೆ, ಸದಾ ಕಾಲ ಎಚ್ಚರಿಕೆ ಅತ್ಯಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT