ಸೋಮವಾರ, ಸೆಪ್ಟೆಂಬರ್ 27, 2021
25 °C
ಆಳಿನ ಸಮಸ್ಯೆಗೆ ಎಂಜಿನಿಯರ್‌ ಹುಡುಗರಿಂದ ಪರಿಹಾರ

ಕೃಷಿ ಕ್ಷೇತ್ರಕ್ಕೆ‘ಫಾರ್ಮ್‌ಬೊಟ್‌’

ಶರತ್‌ ಹೆಗ್ಡೆ  Updated:

ಅಕ್ಷರ ಗಾತ್ರ : | |

Prajavani

ಕೃಷಿ ಕ್ಷೇತ್ರದಲ್ಲಿ ಎದುರಾಗಿರುವ ಕೂಲಿಯಾಳುಗಳ ಕೊರತೆಗೆ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿ ಫಾರ್ಮ್‌ಬೋಟ್‌ (FARMBOT) ಎಂಬ ರೋಬೊ ತಯಾರಿಸಿದ್ದಾರೆ.

ಬೆಂಗಳೂರಿನ ಗ್ಲೋಬಲ್‌ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿ ಪ್ರತೀಕ್‌ ಮತ್ತು ಅವರ ತಂಡ ಈ ರೋಬೊವನ್ನು ನಿರ್ಮಿಸಿದೆ. ಸದ್ಯ ಅಧ್ಯಯನ ಯೋಜನೆಗಾಗಿ ಇದನ್ನು ರೂಪಿಸಿದ್ದಾರೆ. ಈ ರೋಬೊವನ್ನು ಮತ್ತಷ್ಟು ಸುಧಾರಣೆಗಳೊಂದಿಗೆ ರೈತರಿಗೆ ತಲುಪಿಸುವ ಉದ್ದೇಶ ಈ ಹುಡುಗರದ್ದು.

ರೋಬೊ ಹೇಗಿದೆ?

ದೂರದಿಂದ ನೋಡಿದರೆ ಕನ್ವೇಯರ್‌ ಬೆಲ್ಟ್‌ (ಚೈನ್‌) ಮೂಲಕ ಚಲಿಸುವ ಪುಟ್ಟ ಹಿಟಾಚಿ ಯಂತ್ರದ ರೀತಿ ಕಾಣಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾಲಿತವಾಗಿ ಕೆಲಸ ಮಾಡುತ್ತದೆ. ರೋಬೊ ಮುಂಭಾಗದಲ್ಲಿ ಕತ್ತರಿಯಂತಿರುವ ಬ್ಲೇಡ್‌ ಇದೆ. ಇದು ಭತ್ತ, ರಾಗಿಯಂತಹ ಬೆಳೆ ಕಟಾವಿಗೆ ಅನುಕೂಲ. ಯಂತ್ರದ ಮೇಲ್ಭಾಗದಲ್ಲಿರುವ ಪುಟ್ಟ ಕಂಪಾರ್ಟ್‌ಮೆಂಟ್‌ (ಈಗ ಮಾದರಿ ಮಾತ್ರ. ಬೇಕಾದಂತೆ ರೂಪಿಸುವ ಅವಕಾಶವಿದೆ) ಮೇಲೆ ಉತ್ಪನ್ನಗಳನ್ನು ಮನೆಯಂಗಳಕ್ಕೆ ಸಾಗಿಸಬಹುದು.

ಬಾಳೆ, ಅಡಿಕೆಗೊನೆ, ತೆಂಗಿನಕಾಯಿ, ತರಕಾರಿ ಹೀಗೆ ಯಾವುದೇ ಸಾಮಗ್ರಿಯನ್ನು ಒಯ್ಯಬಹುದು. ಸದ್ಯದ ರೋಬೊ 2 ಕ್ವಿಂಟಲ್‌ನಷ್ಟು ಭಾರ ಎಳೆಯುತ್ತದೆ. ಪ್ರತ್ಯೇಕ ಟ್ರಾಲಿಯನ್ನು ಜೋಡಿಸುವ ಅವಕಾಶವೂ ಇದೆ. ’ಇದರಿಂದ ಬೆಳೆಗಳಿಗೆ ಔಷಧ ಸಿಂಪಡಿಸಲೂ ಸಾಧ್ಯ’ ಎನ್ನುತ್ತಾರೆ ಇದರ ನಿರ್ಮಾಣ ತಂಡದವರು. 

ಕಾರ್ಯವೈಖರಿ ಹೇಗೆ?

ಮಾಡಬೇಕಾದ ಕೆಲಸವೇನು ಎಂಬುದನ್ನು ಎಲೆಕ್ಟ್ರಾನಿಕ್‌ ಪರದೆಯ ಮೇಲೆ ಸೂಚನೆ ಕೊಟ್ಟರೆ ಸಾಕು. ಯಂತ್ರ ಎಲ್ಲೆಲ್ಲಿ ಹೋಗಬೇಕು?, ಏನು ಮಾಡಬೇಕು ಎಂದು ಕೊಟ್ಟ ಕೆಲಸ ಚಾಚೂ ತಪ್ಪದೆ ಮಾಡುತ್ತದೆ ರೋಬೊ. ಅದು ಎಲ್ಲೆಲ್ಲಿ ಹೋಗುತ್ತಿದೆ ಎಂಬುದರ ನೇರ ಪ್ರಸಾರವನ್ನೂ ಕಾಣಬಹುದು.

ರೋಬೊ ಮುಂಭಾಗ ಅಳವಡಿಸಿರುವ ಕ್ಯಾಮೆರಾದ ದೃಶ್ಯಗಳು ಮನೆ/ ನಿಯಂತ್ರಣ ಕೇಂದ್ರದಲ್ಲಿರುವ ಟಿವಿ ಪರದೆಯ ಮೇಲೆ ಮೂಡುತ್ತವೆ. ಮುಂದೆ ಮೊಬೈಲ್‌ನಲ್ಲಿ ಕಾಣಿಸುವ ಸಾಧ್ಯತೆಯತ್ತಲೂ ಈ ತಂಡ ಕೆಲಸ ಮಾಡುತ್ತಿದೆ.

ಯಂತ್ರದ ಸ್ವಯಂ ಚಾಲನೆ ಬೇಡ ಎಂದಾದರೆ ಮ್ಯಾನುವಲ್‌ ಮೋಡ್‌ನಲ್ಲಿಯೂ ಬಳಸಲು ಅವಕಾಶವಿದೆ. ಡ್ರೋಣ್‌ಗಳನ್ನು ನಿಯಂತ್ರಿಸುವ ಮಾದರಿಯಲ್ಲೇ ರಿಮೋಟ್‌ ಕಂಟ್ರೋಲ್‌ ಬಳಸಿ ಯಂತ್ರವನ್ನು ನಿಯಂತ್ರಿಸಬಹುದು. ಕಠಿಣ ದಾರಿಯಲ್ಲೂ ಸಂಚರಿಸಲು ಅನುಕೂಲವಾಗುವಂತೆ ಸ್ಕಿಡ್‌ ಸ್ಟೀರಿಂಗ್‌ ತಂತ್ರಜ್ಞಾನವನ್ನು ರೋಬೊದಲ್ಲಿ ಅಳವಡಿಸಲಾಗಿದೆ.

ಆತಂಕ ಬೇಡ  

ಕಾರ್ಯಾಚರಣೆಯ ವೇಳೆ ಯಾರಾದರೂ ರೋಬೊ ಹತ್ತಿರ ಬಂದರೆ ತಕ್ಷಣ ಸ್ಥಗಿತಗೊಳ್ಳುವ ವ್ಯವಸ್ಥೆಯೂ ಇದೆ. ಏನಾದರೂ ಅಪಾಯವಾಗದಂತೆ ಮುಂಜಾಗೃತಾ ಕ್ರಮ ಇದು. ಯಂತ್ರದ ಸಮೀಪ ಬಂದವರು ದೂರ ಹೋದ ಬಳಿಕ ಮತ್ತೆ ಕಾರ್ಯ ಮುಂದುವರಿಸುತ್ತದೆ. ಸದ್ಯ ಚಾಲ್ತಿಗೆ ಬರುತ್ತಿರುವ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಇಂಟರ್‌ನೆಟ್‌ ಮೂಲಕ ವಸ್ತು ನಿಯಂತ್ರಣ) ಪರಿಕಲ್ಪನೆಯನ್ನೂ ಇದಕ್ಕೆ ಅಳವಡಿಸಬಹುದು. ‘ದೂರದ ಊರಿನಲ್ಲಿ ಕುಳಿತು ರೋಬೊ ಚಾಲನೆ ಮಾಡಲು ಸಾಧ್ಯವಿದೆ’ ಎನ್ನುತ್ತಾರೆ ಪ್ರತೀಕ್‌. 

ಬಳಸಿರುವ ಪರಿಕರಗಳು
500 ವಾಟ್‌, 60 ವೋಲ್ಟ್‌ ಸಾಮರ್ಥ್ಯದ ಬಿಎಲ್‌ಡಿಸಿ ಹಬ್‌ ಮೋಟಾರ್‌, ವೈರ್‌ಲೆಸ್‌ ಎಫ್‌ಪಿವಿ ವಿಡಿಯೊ ಕ್ಯಾಮೆರಾ ಇದೆ. 2.4 ಗಿಗಾಹರ್ಟ್ಸ್‌ ಸಾಮರ್ಥ್ಯದ ಟ್ರಾನ್ಸ್‌ಮೀಟರ್‌, ಡ್ರೋಣ್‌ನಲ್ಲಿ ಬಳಸುವ ಆಟೊ ಪೈಲಟ್‌ ತಾಂತ್ರಿಕ ವ್ಯವಸ್ಥೆ, 60 ವೋಲ್ಟ್‌, 120 ಎಎಚ್‌ ಸಾಮರ್ಥ್ಯದ ಬ್ಯಾಟರಿ ಮತ್ತು ಸೆನ್ಸರ್‌ಗಳಿವೆ. ಇದನ್ನು ಸಿದ್ಧಪಡಿಸಲು ಒಟ್ಟು ₹ 65 ಸಾವಿರ ವೆಚ್ಚವಾಗಿದೆಯಂತೆ. ಮುಂದೆ ಈ ಯಂತ್ರವನ್ನು ಬಿತ್ತನೆ, ನಾಟಿಗೂ ಅನುಕೂಲವಾಗುವಂತೆ ಯಂತ್ರದಲ್ಲಿ ಸುಧಾರಣೆ ಮಾಡುವ ಗುರಿ ಈ ತಂಡಕ್ಕಿದೆ. 

ಕೃಷಿ ಕುಟುಂಬದ ಹುಡುಗರು
ಪ್ರತೀಕ್‌ ಹುಟ್ಟೂರು ಹಲಗೂರು, ಅವರ ಗೆಳೆಯ ಕೀರ್ತಿ ಪ್ರಸಾದ್‌ ಅವರು ಗುಬ್ಬಿಯವರು. ಇಬ್ಬರೂ ರೈತ ಕುಟುಂಬದವರು. ರೈತರ ಕಷ್ಟಗಳನ್ನು ಬಲ್ಲವರು, ಅನುಭವಿಸಿರುವವರು. ಹಾಗಾಗಿ ಇಂತಹ ಯಂತ್ರದ ಆಲೋಚನೆ ಇವರಿಗೆ ಮೂರು ವರ್ಷಗಳಿಂದಲೂ ಇತ್ತು. ಈಗ ಸಾಕಾರಗೊಂಡಿದೆ. ‘ ಆದಿತ್ಯ ಮತ್ತು ಮಂಜು ನನ್ನ ಜೊತೆ ಕೈಜೋಡಿಸಿದರು. ಜೊತೆಗೆ ಮನೆಯಲ್ಲೂ ನನ್ನ ಅಣ್ಣ ಮತ್ತು ಅಪ್ಪ ಪ್ರೋತ್ಸಾಹ ನೀಡಿದರು. ಕಾಲೇಜಿನ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರಾಧ್ಯಾಪಕರು, ಮೆಕ್ಯಾನಿಕಲ್‌ ವಿಭಾಗದ ಫ್ರಾನ್ಸಿಸ್‌ ನೆರವಾದರು’ ಎಂದು ಪ್ರತೀಕ್ ಸ್ಮರಿಸುತ್ತಾರೆ.

ಮಾಹಿತಿಗೆ ಪ್ರತೀಕ್‌ ಮೊಬೈಲ್:  91 97421 29812

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು