ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ ಲೋಕದಲ್ಲಿ ಪಾತಾಳ ಗರಡಿ: ಆಸಕ್ತಿಯನ್ನು ಹಿಂಬಾಲಿಸುವ 'ಎಐ'

Last Updated 4 ಜನವರಿ 2022, 19:30 IST
ಅಕ್ಷರ ಗಾತ್ರ

ಶಿಫಾರಸು ಅನ್ನೋದು ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕಾರಣಿಗಳಿಗೆ ಮಾತ್ರ ಸೀಮಿತವಲ್ಲ! ಬಹಳಷ್ಟು ಕೆಲಸಗಳು ಶಿಫಾರಸಿನ ಮೇಲೆಯೇ ನಡೆಯುತ್ತಿರುತ್ತವೆ. ನಾವು ಒಂದು ಬೈಕ್ ಸರ್ವೀಸ್ ಮಾಡಿಸುವುದಕ್ಕೂ, ಸ್ನೇಹಿತರನ್ನು ಕೇಳುತ್ತೇವೆ. ಯಾವ ಬೈಕ್ ಸರ್ವೀಸ್ ಮಾಡುವವ ಚೆನ್ನಾಗಿದ್ದಾನೆ ಅಂತ. ‘ನಾನು 4-5 ವರ್ಷದಿಂದ ಇವನ್ಹತ್ರಾನೇ ಬೈಕ್ ಸರ್ವೀಸ್ ಮಾಡಿಸ್ತಿದ್ದೇನೆ. ಚೆನ್ನಾಗಿ ಮಾಡ್ತಾನೆ’ ಅಂತ ಅಂದ ಕೂಡಲೇ ನಾವು ಬೇರೆ ಯೋಚನೆ ಮಾಡದೇ ಅಲ್ಲಿಗೆ ಹೋಗುತ್ತೇವೆ.

ಇಂಥ ಶಿಫಾರಸು ವ್ಯವಸ್ಥೆ ಮಾಡುವ ವ್ಯವಸ್ಥೆಯನ್ನ ಅತ್ಯಂತ ಅದ್ಭುತವಾಗಿ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬಳಸಿದ್ದು ಒಟಿಟಿ ಪ್ಲಾಟ್‌ಫಾರಂಗಳು!

ಹೊಸದಾಗಿ ಒಟಿಟಿ ಪ್ಲಾಟ್‌ಫಾರಂವೊಂದಕ್ಕೆ ಒಂದು ವರ್ಷದ ಚಂದಾ ಕೊಟ್ಟು ಸೇರಿರುತ್ತೀರಿ ಅಂದುಕೊಳ್ಳಿ. ಅದರಲ್ಲಿ ಸಾವಿರಾರು ಸಿನಿಮಾ, ಸಿರೀಸ್‌ಗಳಿವೆ. ಟಾಪ್‌ ಟೆನ್‌ ಪಟ್ಟಿಯನ್ನೇನೋ ಕೊಟ್ಟಿದ್ದಾರೆ. ಆದರೆ, ಅದರಲ್ಲಿ ನಿಮ್ಮ ರುಚಿಗೆ ತಕ್ಕ ಸಿನಿಮಾ ಇಲ್ಲ. ನಿಮಗೆ ಇಷ್ಟವಾಗುವ ಸಿನಿಮಾ ಆ ಪ್ಲಾಟ್‌ಫಾರಂನಲ್ಲಿ ಇರಬಹುದು. ಆದರೆ, ಅದರ ಹೆಸರು ನಿಮಗೆ ಗೊತ್ತಿಲ್ಲ. ಹೀಗಾಗಿ, ನಿಮಗೆ ಯಾವುದನ್ನು ನೋಡಬೇಕು ಎಂಬುದು ಗೊತ್ತಿಲ್ಲ.

ಇಂಥ ಸಮಸ್ಯೆಯನ್ನು ನೀಗಿಸುವುದಕ್ಕೆಂದೇ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಜೊತೆಗೆ ಅಲ್ಗಾರಿದಂ ಅನ್ನು ಬಹುತೇಕ ಒಟಿಟಿ ಪ್ಲಾಟ್‌ಫಾರಂಗಳು ಬಳಸುತ್ತಿವೆ.

ವ್ಯಕ್ತಿಯೊಬ್ಬ ಹೊಸದಾಗಿ ಒಟಿಟಿ ಪ್ಲಾಟ್‌ಫಾರಂಗೆ ಸೇರುತ್ತಿದ್ದ ಹಾಗೆಯೇ ಜ್ಞಾನ ಆಧಾರಿತವಾದ ಅಲ್ಗಾರಿದಂ ಕೆಲಸ ಮಾಡುತ್ತದೆ. ವ್ಯಕ್ತಿಯ ವಯೋಮಾನಕ್ಕೆ ಸೂಕ್ತವಾದ ಒಂದಿಷ್ಟು ಸಿರೀಸ್ ಹಾಗೂ ಸಿನಿಮಾಗಳನ್ನು ಅದರಲ್ಲಿ ಶಿಫಾರಸು ಮಾಡಲಾಗುತ್ತದೆ. ಈ ಶಿಫಾರಸುಗಳಲ್ಲಿ ತೋರಿಸಿದ ಕೆಲವು ಟೈಟಲ್‌ಗಳನ್ನು ನೋಡುತ್ತಿದ್ದ ಹಾಗೆಯೇ, ನೀವು ಇದನ್ನು ನೋಡಿದ್ದರಿಂದ ನಿಮಗೆ ಇದೇ ವಿಭಾಗದ ಇನ್ನಷ್ಟು ಸಿನಿಮಾ, ಸಿರೀಸ್‌ಗಳನ್ನು ತೋರಿಸಲಾಗುತ್ತದೆ. ಇದು ಕಂಟೆಂಟ್ ಆಧಾರಿತ ಅಲ್ಗಾರಿದಂಗಳು. ನಂತರದ ಹಂತದಲ್ಲಿ ಸಂಯೋಜಿತ ಫಿಲ್ಟರ್‌ ಶಿಫಾರಸುಗಳನ್ನು ಒಟಿಟಿ ಪ್ಲಾಟ್‌ಫಾರಂಗಳು ನಿಮ್ಮ ಮುಂದಿಡುತ್ತವೆ!

ಎಲ್ಲಕ್ಕಿಂತ ಹೆಚ್ಚು ನಿಖರ ಮತ್ತು ಪಾರದರ್ಶಕವಾಗಿ ನೆಟ್‌ಫ್ಲಿಕ್ಸ್‌ ತನ್ನ ಅಲ್ಗಾರಿದಂಗಳನ್ನು ರೂಪಿಸಿಕೊಂಡಿದೆ. ನೀವು ಒಂದು ನಾಲ್ಕಾರು ಸಿನಿಮಾ ಅಥವಾ ಸಿರೀಸ್‌ಗಳನ್ನು ನೋಡಿದ ನಂತರ ನಿಮಗೆ ಅಷ್ಟೇ ನಿಖರವಾದ ಶಿಫಾರಸುಗಳನ್ನು ಅದು ಮಾಡುತ್ತದೆ. ತೀರಾ ಸಣ್ಣಪುಟ್ಟ ಒಟಿಟಿ ಪ್ಲಾಟ್‌ಫಾರಂಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಒಟಿಟಿ ಪ್ಲಾಟ್‌ಫಾರಂಗಳು ಈ ಅಲ್ಗಾರಿದಂ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಈ ವ್ಯವಸ್ಥೆಯೇನೂ ಹೊಸದಲ್ಲದಿದ್ದರೂ, ಒಟಿಟಿ ಪ್ಲಾಟ್‌ಫಾರಂಗಳು ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಎಲ್ಲ ಬಂದ ಮೇಲೆ ಈ ಅಲ್ಗಾರಿದಂಗೆ ಹೊಸ ರೂಪ ಸಿಕ್ಕಿದೆ.

ಅಲ್ಗಾರಿದಂಗಳಲ್ಲಿ ಹಲವು ಡೇಟಾ ಸೆಟ್‌ಗಳು ಕೆಲಸ ಮಾಡುತ್ತವೆ. ಗ್ರಾಹಕರ ಡೇಟಾ, ವೀಡಿಯೊ ಪ್ಲೇ ಆದ ಅಂಕಿ–ಅಂಶಗಳು, ಒಂದು ವಿಡಿಯೊವನ್ನು ವ್ಯಕ್ತಿ ಎಷ್ಟು ಹೊತ್ತು ನೋಡಿದ್ದಾನೆ, ಯಾವ ಸಾಧನಗಳನ್ನು ಬಳಸಿದಾಗ ಯಾವ ವಿಡಿಯೊ ನೋಡಿದ್ದಾನೆ (ಉದಾ.: ಟಿವಿಯಲ್ಲಿ ಒಂದು ರೀತಿಯ ಕಂಟೆಂಟ್‌, ಮೊಬೈಲ್‌ನಲ್ಲಿ ಒಂದು ರೀತಿಯ ಕಂಟೆಂಟ್‌), ಯಾವ ಪ್ರದೇಶದ ಜನರು ಯಾವ ಕಂಟೆಂಟ್ ನೋಡಿದ್ದಾರೆ (ಕರ್ನಾಟಕದ ಜನರು ಕನ್ನಡವನ್ನೂ, ತಮಿಳುನಾಡಿನವರು ತಮಿಳನ್ನೂ ನೋಡುವುದು) ಎಂಬ ಅಂಕಿ–ಅಂಶಗಳೆಲ್ಲವೂ ಇಲ್ಲಿ ಕೆಲಸ ಮಾಡುತ್ತವೆ. ಇವೆಲ್ಲವನ್ನೂ ಪರಿಗಣಿಸಿದಯೇ ಅಲ್ಗಾರಿದಂ ನಮಗೆ ಶಿಫಾರಸು ಮಾಡುತ್ತವೆ.

ಒಟಿಟಿ ಪ್ಲಾಟ್‌ಫಾರಂಗಳು ಒದಗಿಸುವ ಈ ಶಿಫಾರಸುಗಳೇ ಅವುಗಳಿಗೆ ಮುಳುವಾಗಬಹುದು ಎಂದೂ ಒಂದು ಅಭಿಪ್ರಾಯವಿದೆ. ಅದು ಹೇಗೆಂದರೆ, ನೀವು ಒಂದು ಕ್ರೈಂ ಸಿರೀಸ್‌ ನೋಡುತ್ತೀರಿ. ಅದನ್ನು ನೋಡಿ ಮುಗಿಸುತ್ತಿದ್ದ ಹಾಗೆಯೇ, ನಿಮಗೆ ಬರಿ ಕ್ರೈಂ ಸಿರೀಸ್‌ಗಳದ್ದೇ ಶಿಫಾರಸು ಬರುತ್ತದೆ. ಆದರೆ, ನೀವು ಆ ಮೂಡ್‌ಗೆ ಸರಿಯಾಗಿ ಆ ಕ್ರೈಂ ಸಿರೀಸ್ ನೋಡಿರುತ್ತೀರಿ. ಬೇರೆ ಸಿನಿಮಾ ನೋಡಬೇಕು ಎಂದಾದರೆ ನೀವೇ ಹುಡುಕಬೇಕು. ಹೀಗಾಗಿ, ಈ ಅಲ್ಗಾರಿದಂಗಳು ನಮ್ಮ ಮನಸ್ಸನ್ನೇನೂ ಓದುವುದಿಲ್ಲವಾದ್ದರಿಂದ ಬಹುಬೇಗ ರೇಜಿಗೆ ಹುಟ್ಟಿಸುವ ಸಾಧ್ಯತೆ ಇರುತ್ತದೆ.

ಇದನ್ನು ನಿವಾರಿಸುವುದಕ್ಕೆಂದೇ ಕೆಲವು ಒಟಿಟಿಗಳು ಇದಕ್ಕೊಂದು ಮಾನವೀಯ ಸ್ಪರ್ಶವನ್ನೂ ನೀಡಿವೆ. ಕೆಲವು ದೊಡ್ಡ ದೊಡ್ಡ ನಟರು, ನಿರ್ದೇಶಕರಿಂದ ಅವರ ಮೆಚ್ಚಿನ ಸಿನಿಮಾ, ಸಿರೀಸ್‌ಗಳ ಶಿಫಾರಸು ಪಟ್ಟಿಗಳನ್ನು ಇವು ಪ್ರಕಟಿಸುತ್ತವೆ. ಈ ತಂತ್ರವನ್ನು ಅಮೆರಿಕದ ಜನಪ್ರಿಯ ಟೆಲಿವಿಷನ್‌ ನೆಟ್‌ವರ್ಕ್‌ ಹಾಗೂ ಒಟಿಟಿ ಪ್ಲಾಟ್‌ಫಾರಂ ಎಚ್‌ಬಿಒ ಮಾಡುತ್ತದೆ.

ಒಟಿಟಿ ಪ್ಲಾಟ್‌ಫಾರಂಗಳಿಗೆ ಈ ಅಲ್ಗಾರಿದಂ ಎಂಜಿನ್‌ಗಳನ್ನು ಒದಗಿಸುವುದೇ ಒಂದು ಉದ್ಯಮವಾಗಿಯೂ ಬೆಳೆದಿದೆ. ಒಟಿಟಿ ಪ್ಲಾಟ್‌ಫಾರಂ ಎಂದ ತಕ್ಷಣ ನಮ್ಮ ಕಣ್ಣಮುಂದೆ 2-3 ಹೆಸರುಗಳು ಬರಬಹುದು. ಆದರೆ, ನಮ್ಮ ದೇಶವೊಂದರಲ್ಲೇ 90ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರಂ ಇವೆ ಎಂದರೆ ಆಶ್ಚರ್ಯವಾದೀತು! ಆದರೆ, ಅದು ನಿಜ. ಇವೆಲ್ಲಕ್ಕೂ ತಮ್ಮ ಚಂದಾದಾರರನ್ನು ಮೆಚ್ಚಿಸಲು ಅಲ್ಗಾರಿದಂ ಬೇಕು. ಸಣ್ಣ ಸಣ್ಣ ಪ್ಲಾಟ್‌ಫಾರಂಗಳು ತಾವೇ ಅಲ್ಗಾರಿದಂ ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. ಅದು ವೆಚ್ಚದಾಯಕವೂ ಹೌದು. ಹೀಗಾಗಿ, ಇಂಥ ಸೇವೆಯನ್ನೇ ಒದಗಿಸುವವರಿಗೆ ಗುತ್ತಿಗೆ ಕೊಟ್ಟು ಸುಮ್ಮನಾಗುತ್ತವೆ.

ಕಂಟೆಂಟ್‌ಗಳು ಹೃದಯವಿದ್ದ ಹಾಗೆ, ಅಲ್ಗಾರಿದಂಗಳು ಒಟಿಟಿ ಪ್ಲಾಟ್‌ಫಾರಂಗಳಿಗೆ ಮನಸ್ಸು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT