ಮಂಗಳವಾರ, ಡಿಸೆಂಬರ್ 6, 2022
22 °C

ಕಣ್ಣಿಗೆ ಚೆಂದ ಕನ್ನಡಕದ ಅಂದ: ತಿಳಿದಿದೆಯೇ ಇದರ ಇತಿಹಾಸ?

ಕ್ಷಮಾ ವಿ. ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಬಹಳ ಹಿಂದೇನಲ್ಲ; ಎರಡು-ಮೂರು ತಲೆಮಾರುಗಳ ಹಿಂದಿನವರೆಗೂ ಕನ್ನಡಕ ಧರಿಸುತ್ತಿದ್ದವರು ಕಡಿಮೆಯೇ. ಅವರು ಈಗಿನವರಂತೆ ಮೂರು ಹೊತ್ತೂ ಕಂಪ್ಯೂಟರ್‌ ಪರದೆಯೆದುರು ಕೂರುವಂತಿರಲಿಲ್ಲ; ಅಂಗೈಗೆ ಸ್ಮಾರ್ಟ್‌ಫೋನು ಅಂಟಿಕೊಂಡಿರುತ್ತಿರಲಿಲ್ಲ, ಪರೀಕ್ಷೆಯಲ್ಲಿ ಮಾರ್ಕ್ಸ್‌ ಬರದಿದ್ದರೆ ಜಗತ್ತೇ ಮುಳುಗಿತು ಎಂಬಂತಾಡುವ ಪೋಷಕರಿರಲಿಲ್ಲ; ಆಗ ಕನ್ನಡಕ ಧರಿಸುವವರು ಹೇಗೆ ಅಲ್ಪಸಂಖ್ಯಾತರೋ, ಈಗ ಕನ್ನಡಕ ಧರಿಸದವರೇ ಅಲ್ಪಸಂಖ್ಯಾತರು! ಈಗ ಕಣ್ಣಿನ ಸಮಸ್ಯೆಯಿರುವವರ ಸಂಖ್ಯೆ ಹೆಚ್ಚಿದ್ದರೂ, ‘ಕನ್ನಡಕವನ್ನು ಧರಿಸಲು ಕಣ್ಣಿನ ಸಮಸ್ಯೆಯೇನೂ ಇರಬೇಕಿಲ್ಲ’ ಎಂಬಂತಹ ಕಾಲವಿದು; ನಿಗದಿತವಾಗಿ ಯಾವುದೇ ‘ಪವರ್‌’ ಇಲ್ಲದ, ‘ಪ್ಲೇನ್‌ಗ್ಲಾಸ್‌’ ಎಂದು ಆಡುನುಡಿಯಲ್ಲಿ ಹೇಳುವ ಕನ್ನಡಕವಾದರೂ ಸೈ, ಬಣ್ಣಬಣ್ಣದ ತಂಪುಕನ್ನಡಕವಾದರೂ ಜೈ!

ಮುಂಚಿನ ಕಾಲದ ಅಜ್ಜ-ಅಜ್ಜಿಯರಂತಲ್ಲ ಈಗಿನವರು. ಟಿಕ್‌ಟಾಕ್‌ ವಿಡಿಯೊ ಮಾಡಿಕೊಂಡು, ಪ್ರವಾಸ ಮಾಡಿಕೊಂಡು, ಬೇಕಾದ ಪುಸ್ತಕವನ್ನು, ಸಿನೆಮಾವನ್ನು ಆನಂದದಿಂದ ಎಂಜಾಯ್‌ ಮಾಡುತ್ತಿರುವುದಕ್ಕೆ, ಮೊಬೈಲ್‌ ಹಿಡಿದು ಮೊಮ್ಮಕ್ಕಳೊಂದಿಗೆ ಚಾಟ್‌ ಮಾಡುತ್ತಿರುವುದಕ್ಕೆ ಕಾರಣವೇ ಈ ಕನ್ನಡಕ; ಆರ್ಥಿಕ ಪರಿಸ್ಥಿತಿ, ಕೌಟುಂಬಿಕ ಪರಿಸ್ಥಿತಿ ಸರಿಯಿಲ್ಲದಿದ್ದರೆ, ಕಡೇ ಪಕ್ಷ ತಮ್ಮ ಅನ್ನವನ್ನು ತಾವು ದುಡಿದು ಮರ್ಯಾದೆಯಾಗಿ ಬದುಕಬೇಕಾದರೂ ಕಣ್ಣು ಸರಿಯಾಗಿ ಕಾಣಬೇಕಲ್ಲವೇ? ಅದನ್ನು ಸಾಧ್ಯವಾಗಿಸಿ ವಯಸ್ಸಾದವರ ಬಾಳು ಮತ್ತಷ್ಟು ದುರ್ಭರವಾಗದಂತೆ ಮಾಡಿರುವುದೇ, ಈ ಆವಿಷ್ಕಾರ.

ಈಗಂತೂ ಮುಂದುವರಿದ ಆರೋಗ್ಯವಿಜ್ಞಾನವು ಕಣ್ಣಿನ ಸಮಸ್ಯೆಯನ್ನು ಸಮಸ್ಯೆಯೇ ಅಲ್ಲವೆಂಬ ಮಟ್ಟಕ್ಕೆ ಸರಿಪಡಿಸುವಷ್ಟು ಬೆಳೆದಿದೆ; ನಮ್ಮ ಕಣ್ಣಿನ ಮಸೂರ ಮತ್ತು ರೆಟಿನಾದ ಭಾಗಗಳು, ಬೆಳಕನ್ನು ಪರಿಭಾವಿಸುವಲ್ಲಿ ಜೈವಿಕವಾಗಿ, ಭೌತಿಕವಾಗಿ ಆಗುತ್ತಿರುವ ವ್ಯತ್ಯಾಸವನ್ನು, ನಿರ್ದಿಷ್ಟ ಬಗೆಯಲ್ಲಿ ವಿನ್ಯಾಸಗೊಂಡ ಕನ್ನಡಕದ ಗಾಜುಗಳು ಸರಿಪಡಿಸಿ, ದೃಗ್ಗೋಚರತೆಯನ್ನು ಸಲೀಸಾಗಿಸುತ್ತದೆ. ಈಗ ಕನ್ನಡಕಗಳು, ಕಾಂಟಾಕ್ಟ್‌ ಲೆನ್ಸ್‌ಗಳು, ಲೇಸರ್‌ ಶಸ್ತ್ರಚಿಕಿತ್ಸೆಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ನೇತ್ರದಾನದ ಬಗ್ಗೆ ಅರಿವು ಹೆಚ್ಚುತ್ತಾ, ಕುರುಡುತನವೂ ಸರಿಪಡಿಸಬಹುದಾಗಿದೆ ಎಂಬುದು ದಿನೇದಿನೇ ಸಾಬೀತಾಗುತ್ತಿದೆ. ಆದರೆ, ಇವೆಲ್ಲವೂ ಪ್ರಾರಂಭವಾದದ್ದು ಕನ್ನಡಕಗಳ ಆವಿಷ್ಕಾರ ಮತ್ತು ಬಳಕೆಯಿಂದ ಹಾಗೂ ಅದು ನಡೆದದ್ದು ಇಂದು, ನಿನ್ನೆಯಲ್ಲ; ಇತಿಹಾಸವು ದಾಖಲಾಗುವ ಮುನ್ನವೂ ಇಂತಹದ್ದೊಂದು ಆವಿಷ್ಕಾರವಾಗಿತ್ತೇ ಎಂಬುವಂತೆ ಹುಬ್ಬೇರಿಸುವಂತೆ ಮಾಡುತ್ತವೆ ಭಾರತ ಮತ್ತು ಪರ್ಷಿಯಾದ ಕೆಲವು ಜಾನಪದ ಕಥೆಗಳು.

ಸಂಶೋಧಕ ರಿಷಿ ಕುಮಾರ್‌ ಅಗರ್‌ವಾಲ್‌ರವರ ಸಂಶೋಧನೆಯ ಪ್ರಕಾರ, ನಮ್ಮ ವಿಜಯನಗರ ಸಾಮ್ರಾಜ್ಯದಲ್ಲಿ ಕನ್ನಡಕವು ಹದಿನಾಲ್ಕನೆಯ ಶತಮಾನದಲ್ಲಿಯೇ ಬಳಕೆಯಲ್ಲಿತ್ತು; ಮಾರ್ಕೊ ಪೋಲೊ ತನ್ನ ಪ್ರಯಾಣದ ನಡುವೆ ಚೀನಾದಲ್ಲಿ ಮೊದಲ ಬಾರಿಗೆ ಕನ್ನಡಕದ ಬಳಕೆ ಕಂಡುಕೊಂಡ ಎಂದೂ ದಾಖಲೆಗಳು ಹೇಳುತ್ತವೆ; ಇದಕ್ಕೂ ಮುನ್ನವೇ, ಅಂದರೆ ಹದಿಮೂರನೆಯ ಶತಮಾನದಲ್ಲಿ ರೋಜರ್‌ ಬೇಕನ್‌ ಎಂಬ ತತ್ವಜ್ಞಾನಿ ಕನ್ನಡಕವನ್ನು ಬಳಸಿದ್ದ ಎನ್ನುತ್ತಾರೆ ಇತಿಹಾಸತಜ್ಞರು. ಗಾಜಿನ ಆವಿಷ್ಕಾರಕ್ಕೂ ಮುನ್ನವೇ ಪಾರದರ್ಶಕ ಸ್ಫಟಿಕ ಕಲ್ಲುಗಳ ಮೂಲಕ ಸೂರ್ಯನನ್ನು ನೋಡುವ, ಬಣ್ಣಬಣ್ಣದ ಬೆಳಕನ್ನು ಕಾಣುವ ಅಭ್ಯಾಸವಿದ್ದೇ ಇತ್ತು. ದೂರದ್ದು ಹತ್ತಿರವಾಗಿ, ಹತ್ತಿರದ್ದು ದೂರವಾಗಿ ಕಾಣುವುದಷ್ಟೇ ಅಲ್ಲದೇ ಉದ್ದದ್ದು ಗಿಡ್ಡವಾಗಿ ಅಥವಾ ಪುಟ್ಟದ್ದು ಉದ್ದವಾಗಿ ಕಾಣುವುದೂ ಸಾಧ್ಯವೆಂದು ತಿಳಿಯಿತು; ಇವು ಉಂಟುಮಾಡಿದ ಕುತೂಹಲವೇ ಮತ್ತಷ್ಟು ಪ್ರಯೋಗಗಳಿಗೆ ಕಾರಣವಾಯ್ತು; ಇದರ ಮುಂದುವರಿದ ಭಾಗವೇ ಕನ್ನಡಕಗಳ ಜನನ.

ಮೊದಮೊದಲಿನ ಕನ್ನಡಕಗಳು ಒಂದು ಕಣ್ಣಿಗೆ ಮಾತ್ರ ಬಳಸುವಂತೆ, ಕೈಯಲ್ಲಿ ಹಿಡಿದು, ಕಣ್ಣಿಗೆ ಅಡ್ಡವಿಟ್ಟುಕೊಂಡು ಬಳಸುವಂತೆ ಇದ್ದರೂ, ಕಾಲಾನುಕ್ರಮದಲ್ಲಿ ಬಗೆಬಗೆಯ ರೂಪ ಪಡೆದುಕೊಳ್ಳುತ್ತಾ ಸಾಗಿತು. ಲೋಹದ ಕಟ್ಟಿನ ಒಳಗೆ ಅದಕ್ಕೆ ಹೊಂದುವ ಗಾತ್ರದ ಗಾಜನ್ನು ಅಡಕ ಮಾಡಿ, ಎರಡು ಕಣ್ಣುಗಳಿಂದಲೂ ನೋಡಲು ಸಾಧ್ಯವಾಗುವಂತೆ ತಯಾರಿಸಲಾಯಿತು; ಬಗೆಬಗೆಯ ವಿನ್ಯಾಸದ ಲೋಹದ ಕಟ್ಟುಗಳು, ಅದರೊಳಗೆ ಬಗೆಬಗೆಯ ಗಾತ್ರದ, ಆಕಾರದ, ಬಣ್ಣದ ಗಾಜುಗಳು; ದೂರದ್ದು, ಹತ್ತಿರದ್ದು ಎರಡೂ ಕಾಣುವಂತೆ ಬೈಫೋಕಲ್‌ ಕನ್ನಡಕಗಳು; ಬಿಸಿಲಿಗೆ ಹೋದಾಕ್ಷಣ ತಂಪುಕನ್ನಡಕವಾಗಿ ಮಾರ್ಪಾಡಾಗುವ ‘ಊಸರವಳ್ಳಿ’ ಗಾಜುಗಳು - ಹೀಗೆ ಸಾಗಿಬಂದ ಕನ್ನಡಕಗಳು ಈಗ ಸ್ಮಾರ್ಟ್‌ಕನ್ನಡಕವಾಗಿ ತನ್ನ ಪರದೆಯ ಮೇಲೆ ಸಂದೇಶಗಳನ್ನು ಮೂಡಿಸಿಕೊಳ್ಳುವಷ್ಟು ರೂಪಾಂತರಗೊಂಡಿವೆ.

ಮಕ್ಕಳ ಹುಡುಗಾಟದ ನಡುವೆ ಕೇಳಿಬರುವ ಚೇಷ್ಟೆಯ ಪ್ರಶ್ನೆಗಳಲ್ಲಿ ‘ಕನ್ನಡಕ ಹಾಕಿಕೊಳ್ಳಲು ಏನು ಬೇಕು?’ ಎಂಬ ಪ್ರಶ್ನೆಯೂ ಒಂದು. ‘ಕಣ್ಣು/ಕನ್ನಡಕ ಬೇಕು’ ಎಂದು ನೀವು ಉತ್ತರಿಸಿದಿರಾದರೆ, ನಿಮ್ಮನ್ನು ದಡ್ಡರ ಗುಂಪಿಗೆ ಸೇರಿಸಿಬಿಡುತ್ತಾರೆ. ಅವರ ಪ್ರಕಾರ ಕನ್ನಡಕ ಸಿಗಿಸಿಕೊಳ್ಳೋಕೆ ಕಿವಿಗಳು, ಆಧಾರವಾಗಿ ನಿಲ್ಲಲು ಮೂಗು – ಇವೆರಡೂ ಬೇಕು! ಆದರೆ, ಈಗ ಅವರನ್ನೂ ನೀವು ಮಂಗ ಮಾಡಬಹುದು. ಕನ್ನಡಕದ ಮಾರುಕಟ್ಟೆಗೆ ಹೊಸದಾಗಿ ಬಂದಿರುವ ‘ಅಯಸ್ಕಾಂತದ ತುದಿಗಳನ್ನು ಹೊಂದಿರುವ ಕನ್ನಡಕ’ಗಳು, ಮುಖಕ್ಕೆ ಯಾವುದೇ ಕಡ್ಡಿಗಳ ಸಹಾಯವಿಲ್ಲದೇ ಅಂಟಿಕೊಳ್ಳಬಹುದಾಗಿದೆ. ಇನ್ನು, ಕನ್ನಡಕ್ಕೆ ಆಧಾರವಾಗಿ ನಿಂತ ಮೂಗಿಗೆ, ಆಚೀಚೆ ಕನ್ನಡಕದ ತುದಿ ಒತ್ತಿ, ಹಳ್ಳ ಮೂಡಿದೆಯೇ? ಅದಕ್ಕೂ ಚಿಂತೆ ಬೇಡ; ಮೂಗಿನ ಮೇಲೆ ಕಮಾನಿನ ರೂಪದಲ್ಲಿ ನಿಲ್ಲುವ ರಬ್ಬರಿನ ಪದರವನ್ನು ಒಳಗೊಂಡ ಕನ್ನಡಕಗಳೂ ಈಗ ಸಿಗುತ್ತವೆ. ದಿರಿಸಿಗೆ ತಕ್ಕಂತಹ ಬಗೆಬಗೆಯ ಕನ್ನಡಕಗಳನ್ನು ಬದಲಾಯಿಸುವ ಖಯಾಲಿ ನಿಮಗಿದೆಯೇ? ಆದರೆ, ಅನೇಕ ಪ್ಲಾಸ್ಟಿಕ್‌/ಲೋಹದ ಫ್ರೇಮ್‌ಗಳ ಬಳಕೆಯಿಂದ ಪರಿಸರಕ್ಕೆ ಹಾನಿ ಎಂಬ ಚಿಂತೆಯೇ? ಅದಕ್ಕೂ ಉತ್ತರವಿದೆ ಹೊಸ ತಂತ್ರಜ್ಞಾನದಲ್ಲಿ! ‘ಬಯೋ-ಸೆಲ್ಯುಲೋಸ್‌ ಅಸಿಟೇಟ್‌’ ಎಂಬ ಜೈವಿಕವಾಗಿ ವಿಘಟನೆಯಾಗಬಲ್ಲ ಸಂಯುಕ್ತ ಪದಾರ್ಥವು, ಈಗ ಆಕರ್ಷಕ ಕನ್ನಡಕಗಳ ಫ್ರೇಮ್‌ನ ತಯಾರಿಯಲ್ಲಿ ಬಳಕೆಯಾಗುತ್ತಿದೆ. ಜೊತೆಗೆ, ಸಂಪೂರ್ಣ ಪರಿಸರಸ್ನೇಹಿ ಫೈಬರ್‌ನಿಂದ ಮಸೂರಗಳನ್ನೂ ತಯಾರಿಸಲಾಗುತ್ತಿದೆ. ಇನ್ನು ದಿನವಿಡೀ ಮಾಸ್ಕ್‌ ಧರಿಸುವವರ ಪಾಡು ಕೇಳಬೇಡಿ! ಮಾಸ್ಕ್‌ ಮತ್ತು ಕನ್ನಡಕವನ್ನು ಒಟ್ಟಿಗೇ ಧರಿಸಬೇಕಾದಾಗ, ಗಾಜು ಮಂಜುಗಟ್ಟುವುದನ್ನು ತಡೆಯುವುದೇ ಕಷ್ಟ! ಇದಕ್ಕಾಗಿ ಮಂಜು ನಿರೋಧಕ ಗಾಜುಗಳಿವೆ; ಅವುಗಳಲ್ಲಿ ಎರಡೂ ಕಡೆ ನೀರಿನಂಶ-ವಿರೋಧಿ ಪದರವನ್ನು ಲೇಪಿಸಲಾಗಿರುತ್ತದೆ ಮತ್ತು ಅದು ಹಬೆಯ ಎದುರಿಗೂ ಮಂಜು ಕವಿಯದಂತೆ ನೋಡಿಕೊಳ್ಳುತ್ತದೆ. ಇನ್ನು ವಿದ್ಯುನ್ಮಾನ ಸ್ಕ್ರೀನ್‌ಗಳ ಎದುರಿಗೆ ಸದಾ ಕಾಲ ಕೂರುವವರ ಕಣ್ಣುಗಳನ್ನು ಕಾಪಾಡಲು, 400–420 ನ್ಯಾನೋಮೀಟರ್‌ ಶ್ರೇಣಿಯ ಎಲ್ಲಾ ಅಪಾಯಕಾರಿ ಬೆಳಕಿನ ಕಿರಣಗಳನ್ನು ದೂರವಿಡಲು ‘ಯುವಿ420’ ತಂತ್ರಜ್ಞಾನ ಸಹಾಯಕ; ಇದನ್ನು ಬಳಸಿಯೇ ವಿದ್ಯುನ್ಮಾನ ಪರದೆಗಳಿಂದ ನೀಲಿಬೆಳಕನ್ನು ಸೋಸಲಾಗುತ್ತದೆ.

ಹೀಗೆ ಕನ್ನಡಕವು ನಡೆದುಬಂದ ಹಾದಿಯಲ್ಲಿ ತಂತ್ರಜ್ಞಾನವು ಹೊಸಬೆಳಕನ್ನು ಮೂಡಿಸುತ್ತಾ, ಹೊಸ ಸಾಧ್ಯತೆಗಳನ್ನು ಗೋಚರಿಸುವಂತೆ
ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು