ಗುರುವಾರ , ಜನವರಿ 21, 2021
29 °C

ಆನ್‌ಲೈನ್‌ ಗೇಮಿಂಗ್

ಇ.ಎಸ್. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ಆನ್‌ಲೈನ್‌ ಆಟದ ‘ಮೈದಾನ’ ಅಳತೆಗೆ ನಿಲುಕದಂತಹದ್ದು. ಅಲ್ಲಿ ಸುಲಭವಾಗಿ ಕಾಣಿಸದ ‘ಒಳಾಂಗಣ ಕ್ರೀಡಾಂಗಣ’ಗಳೂ ಇವೆ. ಖುಲ್ಲಂಖುಲ್ಲಾ ವ್ಯವಹಾರ ನಡೆಸುವ ಗಲ್ಲಿ ಮೈದಾನಗಳೂ ಇವೆ. ನಿಷೇಧದ ವ್ಯಾಪ್ತಿಗೆ ಯಾವ ಕ್ರೀಡೆಗಳ ಜುಟ್ಟು, ಎಷ್ಟರ ಮಟ್ಟಿಗೆ ಸಿಕ್ಕೀತು?

ಬೆಂಗಳೂರಿನ ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಹೊಸದಾಗಿ ಮದುವೆಯಾಗಿದ್ದ. ಕೈತುಂಬ ಸಂಬಳ, ತಿರುಗಾಡಲು ಬೈಕು ಎಲ್ಲವೂ ಇತ್ತು. ಮಾಲ್‌ ಸುತ್ತಾಟ, ದೊಡ್ಡ ಹೋಟೆಲ್‌ಗಳಲ್ಲಿ ಊಟ... ಹೀಗೆ ಈತ ಜೀವನದ ಅತ್ಯಂತ ಖುಷಿ ಕ್ಷಣಗಳನ್ನು ಅನುಭವಿಸುತ್ತಿದ್ದ. ಆದರೆ, ಆ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಲಾಕ್‌ಡೌನ್‌ ನಂತರ ಈತ ಕೆಲಸ ಕಳೆದುಕೊಂಡ. ವರ್ಕ್‌ ಫ್ರಂ ಹೋಮ್‌ ಎಂದು ಸುಳ್ಳು ಹೇಳಿ, ಊರು ಸೇರಿದ. 

ಇಂತಹ ಸಂಕಷ್ಟದ ಸಂದರ್ಭದಲ್ಲಿ ಆತನ ಕೈಹಿಡಿದಿದ್ದು ಸಾವಯವ ಕೃಷಿಯೂ ಅಲ್ಲ, ಕುಟುಂಬಕ್ಕೆ ಪಾರಂಪರಿಕವಾಗಿ ಒಲಿದುಬಂದ ಕೌಶಲವೂ ಅಲ್ಲ. ಕಲಿತ ವಿದ್ಯೆಯೂ ಆತನ ನೆರವಿಗೆ ಬರಲಿಲ್ಲ. ಬದಲಿಗೆ ಆತ ಆತುಕೊಂಡಿದ್ದು ಆನ್‌ಲೈನ್‌ ಗೇಮಿಂಗ್‌ಗೆ. ಆನ್‌ಲೈನ್‌ ಕ್ಯಾಸಿನೊದಲ್ಲಿ ಹಣ ಹಾಕಿ, ಹಣ ಗಳಿಸುವುದನ್ನು ಆತ ಕಲಿತ. ಅದರಿಂದಲೇ, ಬೆಂಗಳೂರಿನಲ್ಲಿರುವ ಮನೆ ಮಾಲೀಕರಿಗೆ ಎರಡು ತಿಂಗಳ ಬಾಡಿಗೆ ಹಣವನ್ನೂ ಕಳುಹಿಸಿದ. ಕುಟುಂಬಕ್ಕೂ ಒಂದಷ್ಟು ಹಣ ಕೊಟ್ಟ. ನಂತರ ಆಟದಲ್ಲಿ ಸಾಲು, ಸಾಲು ಸೋಲುಗಳು ಆತನನ್ನು ಕಂಗೆಡಿಸಿದವು. ಆಟವಾಡಲು ಆತ ಹಲವರಿಂದ ಸಾಲವನ್ನೂ ಪಡೆಯುತ್ತಿದ್ದ. ಆ ಸಾಲ ಈಗ ಬೆಟ್ಟದಷ್ಟಾಗಿದೆ. ಆನ್‌ಲೈನ್ ಆಟ ನಂಬಿದ ಆತ ಅತ್ತ ದುಡಿಮೆಯ ಹಾದಿಯನ್ನೂ ಮರೆತ, ಇತ್ತ ಸಾಲದ ಹೊರೆಯನ್ನೂ ಹೊರದಾದ. ವಾಸ್ತವವನ್ನು ಮನೆಯಲ್ಲೂ ತಿಳಿಸಲಾಗದೆ ಗೊಂದಲಕ್ಕೆ ಸಿಲುಕಿರುವ ಆತನ ಮುಂದೆ ಭವಿಷ್ಯದ ಪ್ರಶ್ನೆ ದೊಡ್ಡದಾಗಿ ನಿಂತಿದೆ.

ಇದು ಆನ್‌ಲೈನ್ ಆಟದ ಬಹುರೂಪಿ ಪರಿಣಾಮಗಳ ಒಂದು ಉದಾಹರಣೆಯಷ್ಟೆ. ಇಂಥ ಅಪಾಯಕ್ಕೆ ಸಿಲುಕಿದ ಎಷ್ಟೋ ಮಂದಿ ಇಂದು ಸಾಲದ ಸುಳಿಯಲ್ಲಿದ್ದಾರೆ. ಹೀಗಾಗಿ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಕಾನೂನು ರೂಪಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ‘ಗೇಮ್ಸ್‌ ಆಫ್‌ ಸ್ಕಿಲ್ಸ್‌’ ಎಂಬ ಶೀರ್ಷಿಕೆಯಡಿ ಅಸ್ತಿತ್ವಕ್ಕೆ ಬಂದಿರುವ ಆನ್‌ಲೈನ್ ಕ್ರೀಡೆಗಳನ್ನು ‘ಜೂಜಾಟಗಳು’ ಎಂದು ಕರೆದು ನಿರ್ಬಂಧಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂಬ ಚರ್ಚೆಗಳು ಸಹ ಈಗ ಜೋರಾಗಿ ನಡೆಯುತ್ತಿವೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರಲ್ಲಿ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ಎಂಬ ಪದಗಳಿಲ್ಲದ ಕಾರಣ ದೊಡ್ಡಮಟ್ಟದ ಆಟದ ‘ಮೈದಾನ’ವೇ ಅಂತರ್ಜಾಲದಲ್ಲಿ ತೆರೆದಿದೆ. ಯುವಜನರನ್ನೇ ಹೆಚ್ಚಾಗಿ ಕೇಂದ್ರೀಕರಿಸಿರುವ ಈ ಆಟಗಳಿಗೆ ಅರಿಷಡ್ವರ್ಗಗಳೇ ಮೂಲಸತ್ವಗಳು. ಆ ಗೀಳು ಅಂಟಿಸಿಕೊಂಡವರು ಒಮ್ಮೆ ಕೋಪದಿಂದ ಯುದ್ಧ ಮಾಡಿಸುವ ಪಬ್‌ಜಿ, ಫ್ರೀ ಫೈರ್‌ಗಳನ್ನು ಆಡಿದರೆ, ಇನ್ನು ಕೆಲವೊಮ್ಮೆ ಹಣದ ಮದದಿಂದ ಜೀತ್‌ವಿನ್, ಜಂಗ್ಲಿ ರಮ್ಮಿ, ಎಂಪಿಎಲ್ ಇತ್ಯಾದಿಗಳನ್ನು ಆಡುತ್ತಾರೆ. ಮತ್ತೊಮ್ಮೆ ಕಾಮೋದ್ವೇಗದಿಂದ ಹಲವು ಆನ್‌ಲೈನ್‌ ಸೆಕ್ಸ್ ಗೇಮ್‌ಗಳನ್ನೂ ಆಡಿ, ತೃಷೆ ತೀರಿಸಿಕೊಳ್ಳುವುದೂ ಉಂಟು.

ಮನುಷ್ಯನ ಸಹಜ ದೌರ್ಬಲ್ಯಗಳನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲ ಉದ್ಯಮಗಳು ಇಂಥ ಗೇಮಿಂಗ್‌ಗಳ ಮೂಲಕ ಯುವಜನತೆಯನ್ನು ಸೆಳೆಯುವುದರ ಜತೆಗೆ ಅವರ ಬಳಿ ಇರಬಹುದಾದ ಅಲ್ಪಸ್ವಲ್ಪ ಹಣವನ್ನೂ ಕಬಳಿಸುತ್ತಿವೆ. ಇಲ್ಲಿಯೂ ಆಟದ ಸ್ವರೂಪ ಪ್ರಾಚೀನ ಜೂಜಾಟದಂತೆಯೇ ಇದೆ. ಮೊದಲು ‘ಬೋನಸ್‌’ ಎಂದು ಕೊಟ್ಟು ಆಡಿಸುತ್ತಾರೆ. ಆರಂಭದಲ್ಲಿ ಗೆಲುವೂ ಆಡುವ ವ್ಯಕ್ತಿಯದ್ದೇ ಆಗಿರುತ್ತದೆ. ಆಟದ ಉನ್ಮಾದ ಬೆಳೆಯುತ್ತಿದ್ದಂತೆ ಮನುಷ್ಯನ ಸಹಜ ಗುಣದಂತೆ ಹೆಚ್ಚು ಹಣ ಹೂಡಲು ವ್ಯಕ್ತಿ ಮನಸ್ಸು ಮಾಡುತ್ತಾನೆ. ಹಣದ ಮೊತ್ತ ಹೆಚ್ಚಾಗುತ್ತಿದ್ದಂತೆ ಹಂತ ಹಂತವಾಗಿ ಸೋಲುತ್ತಾನೆ. ತಾನು ಸೋಲುತ್ತಿದ್ದೇನೆ ಎಂಬುದು ಅರಿವಿಗೆ ಬರುವ ಮೊದಲೇ ಗಳಿಸಿದ್ದರ ದುಪ್ಪಟ್ಟು ಕಳೆದುಕೊಂಡಿರುತ್ತಾನೆ.

ಇದಕ್ಕೆ ಇತ್ತೀಚಿನ ಮತ್ತೊಂದು ಉದಾಹರಣೆ ಎಂದರೆ ಪೇಟಿಎಂ ಮತ್ತು ಗೂಗಲ್ ನಡುವಿನ ಸಮರ. ತನ್ನ ಗ್ಯಾಂಬ್ಲಿಂಗ್ ನೀತಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೇಟಿಎಂ ಆ್ಯಪ್‌ ಅನ್ನು ಗೂಗಲ್ ತಡೆಹಿಡಿದಿತ್ತು. ಇದು ಸಾಕಷ್ಟು ಚರ್ಚೆಯೂ ಆಯಿತು. ಡ್ರೀಮ್ 11 ಅಥವಾ ಪೇಟಿಎಂ ಫಸ್ಟ್ ಆನ್‌ಲೈನ್ ಕ್ರೀಡೆಗಳು ಕೇವಲ ವೇದಿಕೆಗಳೇ ಅಥವಾ ಪ್ರಾಕ್ಸಿಯಾಗಿ ಹಣ ವಹಿವಾಟು ನಡೆಸುವ ಕೇಂದ್ರಗಳೇ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

ಅಸಲಿಗೆ ಗ್ಯಾಂಬ್ಲಿಂಗ್ ಎನ್ನುವುದು ಭಾರತದಲ್ಲಿ ಆಯಾ ರಾಜ್ಯಗಳ ವಿಷಯ. ಕರ್ನಾಟಕದಲ್ಲೂ ಒಂದು ಕಾಲದಲ್ಲಿ ಸರ್ಕಾರವೇ ಒಂದು ಇಲಾಖೆಯನ್ನಿಟ್ಟು ಲಾಟರಿ ನಡೆಸುತ್ತಿತ್ತು. ಇದರಲ್ಲಿ ಕನಿಷ್ಠ ಶೇ 2ರಷ್ಟು ಜನರಿಗೆ ಲಾಟರಿ ಮೊತ್ತ ಸಿಗುತ್ತಿತ್ತು. ಸರ್ಕಾರದ ಬೊಕ್ಕಸಕ್ಕೂ ಲಾಭವನ್ನು ತರುತ್ತಿತ್ತು. ಆದರೆ, ಆನ್‌ಲೈನ್ ಗೇಮ್‌ಗಳನ್ನು ಆಡುತ್ತಿರುವವರಲ್ಲಿ ಲಾಭ ಪಡೆಯುತ್ತಿರುವವರ ಸಂಖ್ಯೆ ಶೇ 0.001ರಷ್ಟು. ತನ್ನ ಅಂಕೆಯಲ್ಲೇ ಇಲ್ಲದ ಇಂಥ ಗೇಮಿಂಗ್ ತಾಣಗಳಿಂದ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ.

ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಸರ್ಕಾರ ಗೇಮಿಂಗ್ ಕಾಯ್ದೆ 1974ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಇದರ ಭಾಗವಾಗಿ 132 ವೆಬ್‌ಸೈಟ್‌ ಹಾಗೂ ಆ್ಯಪ್‌ಗಳನ್ನು ಬ್ಲಾಕ್‌ ಮಾಡುವಂತೆ ಕೇಂದ್ರಕ್ಕೆ ಅಲ್ಲಿನ ಸರ್ಕಾರ ಪತ್ರ ಬರೆದಿದೆ. ತಮಿಳುನಾಡಿನಲ್ಲೂ ಆನ್‌ಲೈನ್‌ ರಮ್ಮಿ ಸೇರಿದಂತೆ ಎಲ್ಲಾ ಬಗೆಯ ಬೆಟ್ಟಿಂಗ್, ಜೂಜು ಗೇಮ್‌ಗಳನ್ನು ನಿಷೇಧಿಸಲಾಗಿದೆ. ಹೊಸ ಕಾನೂನಿನಡಿ ಇವುಗಳನ್ನು ಆಡುವವರಿಗೆ ಆರು ತಿಂಗಳು ಜೈಲು, ₹5 ಸಾವಿರ ದಂಡ ವಿಧಿಸಲು ಅವಕಾಶವಿದೆ. 

ಅಗ್ಗದ ಇಂಟರ್ನೆಟ್‌ ಕಾರಣ
ಜಗತ್ತಿನಲ್ಲಿ ಅತಿ ಕಡಿಮೆ ದರದಲ್ಲಿ ಅಂತರ್ಜಾಲ ಸೌಕರ್ಯ ನೀಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ. ಇಲ್ಲಿ ಪ್ರತಿ ಜಿ.ಬಿ. ಡೇಟಾ ಬೆಲೆ ಕೇವಲ ₹12ರಿಂದ ₹14ರಷ್ಟಿದೆ. ಆನ್‌ಲೈನ್ ಗೇಮರ್‌ಗಳು ಈ ಸೌಕರ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ.

‘ದೇಶದ ಆಸ್ತಿ ಎಂದೇ ಭಾವಿಸಿರುವ ಯುವಜನ ಸುಲಭದ ಹಣ ಗಳಿಕೆಗಾಗಿ ಆನ್‌ಲೈನ್ ಗೇಮ್‌ಗಳ ಮೊರೆ ಹೋಗುತ್ತಿದ್ದಾರೆ. ‘ಮೋಜಿಗೆ ಮೋಜು, ಹಣಕ್ಕೆ ಹಣ’ ಎಂಬ ತಮ್ಮದೇ ಸಿದ್ಧಾಂತದ ಅನ್ವಯ ಆಟವಾಡುತ್ತಿದ್ದಾರೆ. ಆಡಲು ಹಣ ಬೇಕು ಜತೆಗೆ ಒಂದಷ್ಟು ಡೇಟಾ ಬೇಕು. ಇದಕ್ಕೆ ಅಗತ್ಯವಿರುವಷ್ಟು ಹಣವನ್ನು ‘ಗಿಗ್ ದುಡಿಮೆ’ ಅಂದರೆ ಡೆಲಿವರಿ ಬಾಯ್‌ಗಳಾಗಿ ಆಹಾರ, ವಸ್ತುಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ. ದಿನದಲ್ಲಿ ಕೆಲವೇ ಗಂಟೆಗಳ ಈ ದುಡಿಮೆಯಿಂದ ಬಂದ ಹಣವನ್ನು ಮರಳಿ ಆನ್‌ಲೈನ್‌ ಆಟಕ್ಕೆ ಹಾಕುತ್ತಿರುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಗೇಮ್‌ಗಳ ಆರಂಭಿಕ ‘ರೊಮಾನ್ಸಿಸಂ’ನಿಂದ ಪುಳಕಿತರಾಗಿ ಹಣ ಹೂಡಿಕೆಯನ್ನು ಹೆಚ್ಚಿಸಿ ನಂತರ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ’ ಎಂದು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ಪ್ರಾಧ್ಯಾಪಕ ಡಾ. ಪ್ರದೀಪ ರಾಮಾವತ್ ಹೇಳುತ್ತಾರೆ.

ನಮ್ಮ ಶಿಕ್ಷಣ ವ್ಯವಸ್ಥೆಯೂ ಇದಕ್ಕೆ ಕಾರಣವಾಗಿರಬಹುದು. ನಮ್ಮಲ್ಲಿ ವಿಷಯ ಮನನ ಮಾಡಿಸುವುದಕ್ಕಿಂತ ಪರೀಕ್ಷೆಯಲ್ಲಿ ಮಂಡಿಸಿ ಹೆಚ್ಚು ಅಂಕ ಗಳಿಸುವುದಕ್ಕೆ ಕಲಿಕೆ ಸೀಮಿತವಾಗಿದೆ. ಜ್ಞಾನಕ್ಕಿಂತ ಹೆಚ್ಚಾಗಿ ಅಂಕ ಗಳಿಸಿದರೆ ಮಾತ್ರ ಒಳ್ಳೆಯ ಶಾಲೆ, ಕಾಲೇಜು, ಒಳ್ಳೆಯ ಉದ್ಯೋಗ ಎಂಬ ಅಲಿಖಿತ ತತ್ವ ಇರುವುದರಿಂದ, ಅದು ಇಲ್ಲಿಯೂ ಬಳಕೆಯಾಗುತ್ತಿದೆ. ಗೆಲ್ಲುವ ಭರದಲ್ಲಿ ಯುವಕರು ಜೂಜಿನ ದಾಸರಾಗುತ್ತಿದ್ದಾರೆ. ಆದರೆ, ಇವರಲ್ಲಿ ತಮ್ಮ ಹಿಂದಿನ ಎರಡು ತಲೆಮಾರಿನವರು ಕಷ್ಟಪಟ್ಟು ದುಡಿದು ಒಂದು ಹಂತ ತಲುಪಿದ ಮಧ್ಯಮ ವರ್ಗದ ಯುವಕರೇ ಹೆಚ್ಚು ಎನ್ನುವುದು ಅವರ ವಿಶ್ಲೇಷಣೆ.

ಇಂಥ ಆನ್‌ಲೈನ್ ಗೇಮಿಂಗ್‌ಗೆ ಒಂದೆಡೆ ಆಕರ್ಷಕ ಜಾಹೀರಾತು ಪ್ರಸಾರವಾಗುತ್ತಿದ್ದರೆ, ಮತ್ತೊಂದೆಡೆ ಸೆಲೆಬ್ರಿಟಿಗಳು ಇವುಗಳ ಮುಖವಾಣಿಯಾಗಿದ್ದಾರೆ. ಸಚಿನ್‌, ಗಂಗೂಲಿ, ದೋನಿ, ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟ್‌ಪಟುಗಳು ಆನ್‌ಲೈನ್ ಗೇಮ್‌ಗಳನ್ನು ಬೆಂಬಲಿಸುತ್ತಿದ್ದಾರೆ. ಜಾನ್ ಅಬ್ರಹಾಂ, ಸನ್ನಿ ಲಿಯೋನ್ ಕೂಡಾ ಒಂದೊಂದು ಗೇಮಿಂಗ್‌ ತಾಣಗಳ ರಾಯಭಾರಿಗಳು. ಅಷ್ಟೇ ಏಕೆ, ಕನ್ನಡದ ರಮ್ಮಿ ಬೆಂಬಲಿಸಿ ಜಾಹೀರಾತು ನೀಡಿದ ನಟ ಸುದೀಪ್‌ ಅವರದ್ದು ಸಾಮಾಜಿಕ ಬೇಜವಾಬ್ದಾರಿತನ ಎಂದು ಆಕ್ರೋಶ ವ್ಯಕ್ತಪಡಿಸಿ, ಚಿತ್ರರಂಗದಿಂದ ಬ್ಯಾನ್ ಮಾಡಿ ಎಂಬ ಒತ್ತಾಯವೂ ಕೇಳಿಬಂದಿತ್ತು.

ಆನ್‌ಲೈನ್‌ ಆಟದ ‘ಮೈದಾನ’ ಅಳತೆಗೆ ನಿಲುಕದಂತಹದ್ದು. ಅಲ್ಲಿ ಸುಲಭವಾಗಿ ಕಾಣಿಸದ ‘ಒಳಾಂಗಣ ಕ್ರೀಡಾಂಗಣ’ಗಳೂ ಇವೆ. ಖುಲ್ಲಂಖುಲ್ಲಾ ವ್ಯವಹಾರ ನಡೆಸುವ ಗಲ್ಲಿ ಮೈದಾನಗಳೂ ಇವೆ. ನಿಷೇಧದ ವ್ಯಾಪ್ತಿಗೆ ಯಾವ ಕ್ರೀಡೆಗಳ ಜುಟ್ಟು, ಎಷ್ಟರ ಮಟ್ಟಿಗೆ ಸಿಗುವುದೋ ಗೊತ್ತಿಲ್ಲ. ಆಟ ಆಡಿಸುವ ‘ಶಕುನಿ ಮಾಮಾ’ಗಳಿಗೆ ಮಾತ್ರ ಕೊರತೆ ಎನ್ನುವುದೇ ಇಲ್ಲ. ಆನ್‌ಲೈನ್‌ ಆಟದ ಪ್ರಿಯರಿಗೆ ಅವರೆಲ್ಲ ‘ಅರೆ, ಓ ಭಾಂಜೆ’ ಎಂದು ಕಿವಿಯಲ್ಲಿ ಉಸುರಿದಂತಾಗಿ ಹಗಲು, ರಾತ್ರಿಯ ಪರಿವೆಯೇ ಇಲ್ಲದೆ ಆಟದಲ್ಲಿ ತೊಡಗುವಂತೆ ಉದ್ದೀಪನಗೊಳಿಸುತ್ತಲೇ ಇರುತ್ತಾರೆ. ವರ್ಚುವಲ್‌ ನೋಟುಗಳೂ ‘ಮಾಮಾ’ಗಳ ಸಾಮ್ರಾಜ್ಯಗಳನ್ನು ಸೇರುತ್ತಲೇ ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು