ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Massive Open Online Course: ಸ್ವಾಧ್ಯಾಯದ ಗುರು ‘ಮೂಕ್‌’

Last Updated 26 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಮ್ಯಾಸೀವ್‌ ಏಪೆನ್‌ ಆನ್‌ಲೈನ್‌ ಕೋರ್ಸ್‌ – Massive Open Online Course (MOOC) – ಇಂದು ಆನ್‌ಲೈನ್‌ ಮಾಧ್ಯಮದ ಮುಖಾಂತರ ಹೊಸ ವಿಷಯಗಳನ್ನು, ಕೌಶಲಗಳನ್ನು, ಕಲಿಯುವ ನೂತನ ವಿಧಾನವಾಗಿದೆ. ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ವೃತ್ತಿಪರರಿಗೆ ತಮ್ಮ ಜ್ಞಾನವನ್ನು ಪರಿಷ್ಕಾರ ಮಾಡಿಕೊಳ್ಳಲು, ವೃತ್ತಿಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು, ಬದಲಾಗುತ್ತಲೇ ಇರುವ ತಂತ್ರಜ್ಞಾನದ ಆಯಾಮಗಳನ್ನು ಕಲಿಯಲು ಮತ್ತು ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆರಲು ಬೇಕಾದ ಮಾರ್ಗದರ್ಶನ ಪಡೆಯಲು ಉತ್ತಮ ಮಾಧ್ಯಮವಾಗಿದೆ.

ಈಗಾಗಲೇ ತಂತ್ರಜ್ಞಾನ ಆವಿಷ್ಕಾರದ ನೆರವಿನಿಂದ ಶಾಲಾ ಕಾಲೇಜುಗಳ ಪಠ್ಯಬೋಧನೆಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಹೀಗಿರುವಾಗ MOOC ವಿಧಾನವು ಹೇಗೆ ವಿಶಿಷ್ಟವಾಗಿದೆ? MOOC ನಮಗೆ ಡಿಗ್ರಿ/ ಮಾಸ್ಟರ್ ಡಿಗ್ರಿ ನೀಡುವ ಸಂಸ್ಥೆಯೇ? ಇಂಥ ಪ್ರಶ್ನೆಗಳು ಇಲ್ಲಿ ಉದ್ಭವಿಸುವುದಿಲ್ಲ. MOOC ಇದೆಲ್ಲವನ್ನು ಒಳಗೊಂಡಂತೆ ಇನ್ನು ಹೆಚ್ಚಿನ ವೈಶಿಷ್ಟ್ಯವಿರುವ ಕಾರ್ಯಕ್ರಮ. ಇದು ಕೇವಲ ಸಾಂಪ್ರದಾಯಿಕ ಡಿಗ್ರಿ ಹಾಗು ಪಠ್ಯಸಾಮಗ್ರಿಗಳ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಇದರಲ್ಲಿ ಪ್ರಾಧ್ಯಾಪಕರು, ವೃತ್ತಿಪರರು, ವಿಷಯ ಅನ್ವೇಷಕರು, ಆವಿಷ್ಕಾರಿ ಸಂಸ್ಥೆಗಳು - ಹೀಗೆ ತತ್ಸಂಬಂಧಿತ ಸಂಸ್ಥೆಗಳು ವಿಷಯಾಧಾರಿತವಾಗಿ ಜ್ಞಾನವನ್ನು ಎಲ್ಲರೊಡನೆ ಮುಕ್ತವಾಗಿ ಹಂಚಿಕೊಳ್ಳಲು ಕೈ ಜೋಡಿಸಿದ್ದು, ಸೋಶಿಯಲ್ ಮೀಡಿಯಾ, ವಿಡಿಯೊ ಕಾನ್ಫರೆನ್ಸ್‌ ಹಾಗೂ ಇನ್ನಿತರ ಮಾಧ್ಯಮದ ಮೂಲಕವೂ ಕಲಿಯಲು ಅನುವು ಮಾಡಿಕೊಡುತ್ತದೆ. ಈ ಕಲಿಕೆ ಆನ್‌ಲೈನ್‌ ಮುಖಾಂತರವಾದ್ದರಿಂದ ಯಾವುದೇ ಸಮಯದಲ್ಲೂ ನಾವು ಇದರಲ್ಲಿ ಭಾಗವಹಿಸಿ, ನಮ್ಮ ಅಧ್ಯಯನದಲ್ಲಿ ತೊಡಗಿಕೊಳ್ಳಬಹುದು.

ಮತ್ತೊಂದು ವೈಶಿಷ್ಟ್ಯವೆಂದರೆ ಇದರಲ್ಲಿನ ಬಹುತೇಕ ಕೋರ್ಸ್‌ಗಳು ಉಚಿತವಾಗಿದ್ದು, ಕೆಲವು ವಿಶೇಷ ಕೋರ್ಸಿಗಳಿಗಷ್ಟೇ ನಾವು ಹಣವನ್ನು ಪಾವತಿ ಮಾಡಬೇಕಿರುತ್ತದೆ. ಬಹುತೇಕ ಕೋರ್ಸ್‌ಗಳನ್ನು ಮುಗಿಸಿದ ಮೇಲೆ ಸರ್ಟಿಫಿಕೇಟ್ ಪಡೆಯುವ ಅವಕಾಶವೂ ಇರುತ್ತದೆ. ಆಯಾ ತಂತ್ರಜ್ಞಾನದಲ್ಲಿ ದುಡಿಯುತ್ತಿರುವ ವಿಷಯ ತಜ್ಞರ ಅಥವಾ ಮುಖ್ಯ ಸಂಪನ್ಮೂಲ ವ್ಯಕ್ತಿಗಳೊಡನೆ ನೇರವಾಗಿ ಸಂವಹನ ನಡೆಸಬಹುದಾದ್ದರಿಂದ ಪ್ರಶ್ನೆಗಳನ್ನು, ಅನುಮಾನಗಳನ್ನು ತಕ್ಷಣ ಬಗೆಹರಿಸಿಕೊಳ್ಳಬಹುದಾಗಿದೆ. ಇದರ ಮತ್ತೊಂದು ಹೆಚ್ಚುಗಾರಿಕೆಯೆಂದರೆ ಆಯಾ ವಿಷಯದಲ್ಲಿ ಈಗಾಗಲೇ ‘ಪ್ರತಿಷ್ಠಿತ’ ಎನಿಸಿರುವ ಅಂತರರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಿಂದಾಗಲಿ, ವೃತ್ತಿಪರ ತರಬೇತಿ ಸಂಸ್ಥೆಗಳಿಂದಾಗಲಿ, ಕಾರ್ಪೊರೇಟ್ ಕಂಪೆನಿಗಳಿಂದಾಗಲಿ ಅಥವಾ ತಜ್ಞರಿಂದಾಗಲಿ ನೇರವಾಗಿ ನಾವು ವಿಷಯಗಳನ್ನು ಕಲಿಯಬಹುದಾಗಿದೆ.

ಹೀಗೆ ಇದು ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ತಮ್ಮ ನೆಚ್ಚಿನ ವಿಷಯಗಳ ಕಲಿಕೆಗೂ ಹವ್ಯಾಸಗಳ ಮುಂದುಬರಿಕೆಗೂ ಜ್ಞಾನಪರಿಷ್ಕಾರಕ್ಕೂ ವೇದಿಕೆಯನ್ನು ಒದಗಿಸುತ್ತದೆ. ಕಂಪ್ಯೂಟರ್ ಡಿಗ್ರಿ ಹೊಂದಿರುವವರು ಮನಃಶಾಸ್ತ್ರಜ್ಞ ವಿಷಯವನ್ನು ಅಧ್ಯಯನ ನಡೆಸಬಹುದಾಗಿದೆ. ಭೂಗರ್ಭ ಶಾಸ್ತ್ರಜ್ಞರು ಹಣಕಾಸಿನ ಪಠ್ಯವನ್ನು ಕಲಿಯಬಹುದಾಗಿದೆ. ಹೀಗೆ ಯಾವುದೇ ವಿಷಯವನ್ನು ಅಭ್ಯಾಸ ಮಾಡಲು ಯಾವುದೇ ಪೂರ್ವ ಮಾಹಿತಿ ಇಲ್ಲದಿದ್ದರೂ ಕೆಲವು ಮೂಲಭೂತವಾದ ಕೋರ್ಸ್‌ಗಳನ್ನು ಅಭ್ಯಾಸ ಮಾಡಬಹುದಾಗಿದೆ.

ಈ ಕಲಿಕಾ ಮಾಧ್ಯಮವು ಇಂದು ಭಾರತದಲ್ಲೂ ಹೆಚ್ಚು ಪ್ರಾಚುರ್ಯ ಪಡೆಯುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದ https://www.mooc.org/ ಸಂಸ್ಥೆಯಲ್ಲಷ್ಟೇ ಅಲ್ಲದೆ ಸರ್ಕಾರವೇ ಸ್ಥಾಪಿಸಿರುವ https://swayam.gov.in/ ಕಾರ್ಯಕ್ರಮದಡಿ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯುವ ವ್ಯವಸ್ಥೆಯೊಂದು ಒದಗಿದಂತಾಗಿದೆ. ಸರ್ಕಾರದ ಈ ಕಾರ್ಯಕ್ರಮಕ್ಕೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಷ್ಟೇ ಅಲ್ಲದೆ ಹಲವು ಸಂಘ ಸಂಸ್ಥೆಗಳು, ಸರ್ಕಾರದ ತಾಂತ್ರಿಕ ಇಲಾಖೆಗಳು ಉಚಿತವಾಗಿ ಶಿಕ್ಷಣ ಒದಗಿಸಲು ಮುಂದೆ ಬಂದಿವೆ. ಹೀಗೆ MOOC ಸ್ವಾಧ್ಯಾಯ ಮೂಲಕ ನಮ್ಮ ಜ್ಞಾನತೃಷೆಯನ್ನಷ್ಟೇ ತಣಿಸದೆ ಲಕ್ಷಾಂತರ ಜನರಿಗೆ ಮರಿಚೀಕೆಯಾಗಿದ್ದ ಉನ್ನತ ಶಿಕ್ಷಣವನ್ನು ಅವರವರ ಮನೆಗೇ ಪ್ರವೇಶಿಸಿ, ಶಿಕ್ಷಣವನ್ನು ತಲುಪಿಸುತ್ತಿದೆ. MOOCನಿಂದ ಪ್ರಯೋಜನವನ್ನು ಪಡೆದಿರುವ ಹಲವರು ವ್ಯಕ್ತಿಗಳು ಮತ್ತು ಹಲವು ಸಂಸ್ಥೆಗಳು ಸಮಾಜದ ಬೆಳವಣಿಗೆಗೆ ತಮ್ಮದೇ ರೀತಿಯ ಕೊಡುಗೆಗಳನ್ನು ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT