ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿನ್ನು ಆನ್‌ಲೈನ್ ಗೇಮಿಂಗ್ ಕ್ರಾಂತಿ: ಮುಕೇಶ್ ಅಂಬಾನಿ

Last Updated 25 ಫೆಬ್ರುವರಿ 2020, 6:27 IST
ಅಕ್ಷರ ಗಾತ್ರ

ಮುಂಬೈ: ಭಾರತದಲ್ಲಿ ಬೃಹತ್‌ ಮಾರುಕಟ್ಟೆ ವಿಸ್ತರಣೆ ಕಾಣಲಿರುವ ಮುಂದಿನ ಕ್ಷೇತ್ರ 'ಆನ್‌ಲೈನ್‌ ಗೇಮಿಂಗ್‌' ಎಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ವಿಶ್ಲೇಷಿಸಿದ್ದಾರೆ.

ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ ಸಿಇಒ ಸತ್ಯ ನಾದೆಲ್ಲಾ ಅವರೊಂದಿಗೆ ಸೋಮವಾರ ನಡೆಸಿದ ಮಾತುಕತೆಯಲ್ಲಿ ಮುಕೇಶ್‌ ಅಂಬಾನಿ ಗೇಮಿಂಗ್‌ ಮಾರುಕಟ್ಟೆಯ ಪ್ರಸ್ತಾಪ ಮಾಡಿದ್ದಾರೆ. 'ಸಂಗೀತ, ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನೆಲ್ಲ ಒಟ್ಟಿಗೆ ಸೇರಿಸಿದರೂ ಎಲ್ಲಕ್ಕಿಂತಲೂ ದೊಡ್ಡ ವ್ಯಾಪ್ತಿಯನ್ನು ಗೇಮಿಂಗ್‌ ಹೊಂದಿದೆ' ಎಂದಿದ್ದಾರೆ.

ಭಾರತದಲ್ಲಿ ಅಂತರ್ಜಾಲ ಸಂಪರ್ಕ (ಬ್ರಾಡ್‌ಬ್ಯಾಂಡ್‌) ಉತ್ತಮಗೊಳ್ಳುತ್ತಿದ್ದಂತೆ ಗೇಮಿಂಗ್‌ ವಲಯದಲ್ಲಿನ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ. ಆದರೆ, ಅವರ 'ರಿಲಯನ್ಸ್‌ ಇನ್ಫೋಕಾಮ್‌ ಲಿಮಿಟೆಡ್‌' ಗೇಮಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಪಡಿಸಲಿಲ್ಲ.

ಜಿಯೊ ಬಿಡುಗಡೆಯಾದ ನಂತರದಲ್ಲಿ ಸುಮಾರು 38 ಕೋಟಿ ಜನರು 4ಜಿ ತಂತ್ರಜ್ಞಾನದ ಬಳಕೆದಾರರಾಗಿದ್ದಾರೆ. ಗೇಮಿಂಗ್‌ ಕೇವಲ ಮನರಂಜನೆಗಷ್ಟೇ ಸೀಮಿತಗೊಳ್ಳದೆ ಅಂತರರಾಷ್ಟ್ರೀಯ ಸ್ಪರ್ಧೆಯ ರೂಪ ಪಡೆದಿದ್ದು, ಇಸ್ಪೋರ್ಟ್‌ನ ಹಲವು ಲೀಗ್‌ಗಳು ನಡೆಸಲಾಗುತ್ತಿದೆ. ಕ್ವಿಜ್‌ ಹಾಗೂ ಕಾರ್ಡ್‌ ಗೇಮ್‌ಗಳ ಮೂಲಕ ಎಲ್ಲ ವಯೋಮಾನದವರನ್ನೂ ಆನ್‌ಲೈನ್‌ ಗೇಮಿಂಗ್‌ ಕಡೆಗೆ ಸೆಳೆಯುವ ಪ್ರಯತ್ನ ಈಗಾಗಲೇ ನಡೆದಿರುವ ಸಮಯದಲ್ಲಿ ಮುಕೇಶ್ ಅಂಬಾನಿ ಗೇಮಿಂಗ್‌ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಅಗ್ಗದ ದರದಲ್ಲಿ ಸ್ಮಾರ್ಟ್‌ಫೋನ್‌ ದೊರೆಯುತ್ತಿರುವುದು ಹಾಗೂ ಹೈ–ಸ್ಪೀಡ್‌ ಇಂಟರ್‌ನೆಟ್‌, ಡೇಟಾ ದರ ಕಡಿತಗೊಂಡಿರುವುದು ಅಂತರ್ಜಾಲ ಬಳಕೆ ಹೆಚ್ಚಿಸುವುದರೊಂದಿಗೆ ಗೇಮಿಂಗ್‌ ಕಡೆಗೂ ಸೆಳೆದಿದೆ. ಮುಂದಿನ ಎರಡು ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಪ್ರಮಾಣ 85 ಕೋಟಿ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.

2023 ಹಣಕಾಸು ವರ್ಷಕ್ಕೆ ಆನ್‌ಲೈನ್‌ ಗೇಮಿಂಗ್‌ ಆದಾಯ ₹11,880 ಕೋಟಿ ತಲುಪಲಿದೆ ಎಂದು ಕೆಪಿಎಂಜಿ 2019ರ ಮಾರ್ಚ್‌ ವರದಿಯಲ್ಲಿ ತಿಳಿಸಿದೆ. 2018ರ ಮಾರ್ಚ್‌ ಅಂತ್ಯಕ್ಕೆ ಆನ್‌ಲೈನ್‌ ಗೇಮಿಂಗ್‌ ಕ್ಷೇತ್ರದ ಆದಾಯ ₹4,380 ಕೋಟಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT