ಭಾನುವಾರ, ಆಗಸ್ಟ್ 1, 2021
27 °C

ಪಬ್‌ಜಿಯಿಂದ ಅಪರಾಧ ಮತ್ತು ಋಣಾತ್ಮಕ ಮನೋಭಾವ ಹೆಚ್ಚಳ: ವಿಜ್ಞಾನಿಗಳ ಎಚ್ಚರಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಕ್ಕಳನ್ನು ಅಪರಾಧ ಮತ್ತು ಋಣಾತ್ಮಕ ಚಿಂತನೆಯ ಸುಳಿಗೆ ಪಬ್‌ಜಿ ಗೇಮ್‌ ತಳ್ಳುತ್ತಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಮಕ್ಕಳಿಗಾಗಿ ಇರುವ ಆನ್‌ಲೈನ್ ಗೇಮ್‌ಗಳು ಅಂತರರಾಷ್ಟ್ರೀಯ ಮಾನದಂಡ ಮತ್ತು ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಆನ್‌ಲೈನ್‌ ಗೇಮ್‌ಗೆ (multi- player combat) ವ್ಯಸನಿಯಾಗಿದ್ದ 22 ವರ್ಷದ ಯುವಕ ಕಳೆದ ತಿಂಗಳು ಮಹಾರಾಷ್ಟ್ರದ ಯವತ್ಮಾಲ್‌‌ ಜಿಲ್ಲೆಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿತ್ತು 

ರಾಜಸ್ಥಾನದ ಕೋಟಾದಲ್ಲಿ ಪಬ್‌ಜಿ (PlayerUnknownns Battlegrounds) ಆಡಿದ ನಂತರ 14 ವರ್ಷದ ಬಾಲಕ  ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ತಿಳಿದುಬಂದಿತ್ತು.

ಮೊಬೈಲ್ ಫೋನ್‌ನಲ್ಲಿ ಪಬ್‌ಜಿ ಆಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಹಿರಿಯ ಸಹೋದರ ಗದರಿಸಿದ್ದಾನೆಂಬ ಕಾರಣಕ್ಕೆ ಕಳೆದ ವರ್ಷ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಮೂಲದ 15 ವರ್ಷದ ಬಾಲಕ ಸಹೋದರನನ್ನೇ  ಕೊಂದಿದ್ದಾನೆ ಎಂಬುದು ಬಹಿರಂಗಗೊಂಡಿತ್ತು.

ಈ ಪ್ರಕರಣಗಳ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಪಬ್‌ಜಿ ಆಟವು ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟದ್ದನ್ನೇ ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

'ಪಬ್‌ಜಿ ಮಕ್ಕಳನ್ನು ಅಪರಾಧ ಮತ್ತು ದ್ವೇಷದ ಜಗತ್ತಿಗೆ ಒಡ್ಡುತ್ತದೆ. ಇದರಿಂದ ಆಟಗಾರರ, ವಿಶೇಷವಾಗಿ ಮಕ್ಕಳ ಕೌಶಲ್ಯ ಅಥವಾ ಬೌದ್ಧಿಕ ಸಾಮರ್ಥ್ಯ ಹೆಚ್ಚುವುದಿಲ್ಲ. ಇದು ಮಕ್ಕಳನ್ನು ಎಲ್ಲಾ ರೀತಿಯ ಋಣಾತ್ಮಕ ಚಿಂತನೆಗಳಿಗೆ ತೆರೆಸುತ್ತದೆ' ಎಂದು ನಾಯರ್‌ ಹೇಳಿದ್ದಾರೆ. 

'ಪಬ್‌ಜಿ ಅದೃಷ್ಟದ ಆಟವಾಗಿದ್ದು, ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಪ್ರವೃತ್ತಿ ಮಕ್ಕಳಲ್ಲಿ ಬೆಳೆಯುತ್ತದೆ. ಇದು ವ್ಯಸನಕಾರಿ ಪ್ರಕ್ರಿಯೆಯಾಗಿದ್ದು, ಸಮಯವನ್ನು ವ್ಯರ್ಥ ಮಾಡುತ್ತದೆ. ಅಪರಾಧ ಮನಸ್ಥಿತಿಯನ್ನು ಪೋಷಿಸಲು ಪಬ್‌ಜಿ ಸಹಕರಿಸುತ್ತದೆ' ಎಂದು ಅವರು ತಿಳಿಸಿದ್ದಾರೆ. 

ವಿಶೇಷವಾಗಿ ಮಕ್ಕಳಿಗಾಗಿ ಇರುವ ಆನ್‌ಲೈನ್ ಗೇಮ್‌ ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಬೇಕು ಎಂದು ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ಎ.ಎಸ್‌.ಎಸ್‌.ಒ.ಸಿ.ಎಚ್‌.ಎ.ಎಂ) ಇದೇ ವೇಳೆ ತಿಳಿಸಿದೆ. 

ಭಾರತದಲ್ಲಿರುವ ಗೇಮಿಂಗ್ ಕಂಪೆನಿಗಳು ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು ಎಂದು ಎ.ಎಸ್‌.ಎಸ್‌.ಒ.ಸಿ.ಎಚ್‌.ಎ.ಎಂ ವಕ್ತಾರರು ಸೂಚಿಸಿದ್ದಾರೆ.

ಪಬ್‌ಜಿ ಆಟವು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಅದು ವ್ಯಸನವಾಗಿ ಮಾರ್ಪಡುತ್ತಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು