ಬುಧವಾರ, ಡಿಸೆಂಬರ್ 11, 2019
27 °C

ಗೂಗಲ್‌ ಸಿಇಒ ಸುಂದರ್‌ ಪಿಚೈಗೆ 'ಆಲ್ಫಾಬೆಟ್‌' ಹೊಣೆ ನೀಡಿದ ಲ್ಯಾರಿ, ಬ್ರಿನ್‌

Published:
Updated:
ಗೂಗಲ್‌ ಮತ್ತು ಆಲ್ಫಾಬೆಟ್‌ ಸಿಇಒ ಸುಂದರ್‌ ಪಿಚೈ

ವಾಷಿಂಗ್ಟನ್‌: ಗೂಗಲ್‌ನ ಸಿಇಒ ಭಾರತೀಯ–ಅಮೆರಿಕನ್‌ ಸುಂದರ್ ಪಿಚೈ(47) ಇನ್ನು ಮುಂದೆ ಆಲ್ಫಾಬೆಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಹೊಣೆ ವಹಿಸಲಿದ್ದಾರೆ.  

ಗೂಗಲ್‌ ಮಾತೃ ಸಂಸ್ಥೆ 'ಆಲ್ಫಾಬೆಟ್‌' ಮುಖ್ಯಸ್ಥರ ಜವಾಬ್ದಾರಿಯಿಂದ ಹೊರಗುಳಿಯುವುದಾಗಿ ಗೂಗಲ್‌ ಸಹ–ಸಂಸ್ಥಾಪಕರಾದ ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌ ಪ್ರಕಟಿಸಿದ್ದಾರೆ. ಸಿಲಿಕಾನ್‌ ವ್ಯಾಲಿಯ ಪ್ರಮುಖ ಕಂಪನಿಯ ಮುಖ್ಯಸ್ಥರಿಂದ ಉದ್ಯೋಗಿಗಳಿಗೆ ಪತ್ರ ಮುಖೇನ ನಿರ್ಧಾರ ರವಾನೆಯಾಗಿದೆ. 

ಆಲ್ಫಾಬೆಟ್‌ ಸಿಇಒ ಆಗುವ ಮೂಲಕ ಸುಂದರ್‌ ಪಿಚೈ ಕಾರ್ಪೊರೇಟ್‌ ಜಗತ್ತಿನ ಅತ್ಯಂತ ಪ್ರಭಾವಿ ಮುಖಂಡರೆನಿಸಿದ್ದಾರೆ. 'ಆಡಳಿತ ಸ್ವರೂಪವನ್ನು ಮತ್ತಷ್ಟು ಸರಳಗೊಳಿಸಲು ಇದು ಸಕಾಲ' ಎಂದು ಗೂಗಲ್‌ನ ಸಹ–ಸಂಸ್ಥಾಪಕರು ಪತ್ರದಲ್ಲಿ ಬರೆದಿದ್ದಾರೆ. 


ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌

ಇದನ್ನೂ ಓದಿ: ನವಯುಗದ ಮಹಾಗುರು ಗೂಗಲ್‌ಗೆ ಈಗ 21 ವರ್ಷ |

'ಆಲ್ಫಾಬೆಟ್‌ ಮತ್ತು ಗೂಗಲ್‌ಗೆ ಇಬ್ಬರು ಪ್ರತ್ಯೇಕ ಸಿಇಒಗಳು ಹಾಗೂ ಒಬ್ಬ ಅಧ್ಯಕ್ಷನ ಅವಶ್ಯಕತೆಯಿಲ್ಲ. ಗೂಗಲ್ ಮತ್ತು ಆಲ್ಫಾಬೆಟ್‌ ಎರಡಕ್ಕೂ ಸುಂದರ್‌ ಸಿಇಒ ಆಗಿರಲಿದ್ದಾರೆ. ಗೂಗಲ್‌ನ್ನು ಮುನ್ನಡೆಸುವ ಜತೆಗೆ ಆಲ್ಫಾಬೆಟ್‌ ಹೂಡಿಕೆಯನ್ನು ನಿರ್ವಹಿಸಲಿದ್ದಾರೆ. ಮುಂದೆ ನಾವು ಮಂಡಳಿಯ ಸದಸ್ಯರಾಗಿ, ಷೇರುದಾರರಾಗಿ ಹಾಗೂ ಸಹ–ಸಂಸ್ಥಾಪಕರಾಗಿ ಕಂಪನಿ ಕಾರ್ಯಗಳಲ್ಲಿ ಮುಂದುವರಿಯುತ್ತೇವೆ. ನಮಗೆ ಅತೀವ ಆಸಕ್ತಿ ಇರುವ ವಿಚಾರಗಳ ಕುರಿತು ಸುಂದರ್‌ ಜತೆಗೆ ನಿಯಮಿತ ಮಾತುಕತೆಯೂ ಮುಂದುವರಿಯುತ್ತದೆ' ಎಂದು ಪೇಜ್‌ ಮತ್ತು ಬ್ರಿನ್‌ ಪತ್ರ ಮುಖೇನ ತಿಳಿಸಿದ್ದಾರೆ.  

'ಈ ಬದಲಾವಣೆಯು ಆಲ್ಫಾಬೆಟ್‌ನ ಕಾರ್ಯನಿರ್ವಹಣೆಯಲ್ಲಿ ಅಥವ ಸ್ವರೂಪದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಾನು ಗೂಗಲ್‌ನ ಕೆಲಸಗಳಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವುದು ಮುಂದುವರಿಯಲಿದೆ. ಕಂಪ್ಯೂಟಿಂಗ್‌ನ ವ್ಯಾಪ್ತಿಯನ್ನು ವಿಸ್ತರಿಸುವುದು ಹಾಗೂ ಎಲ್ಲರಿಗೂ ಅತ್ಯಂತ ಸಹಕಾರಿಯಾಗಬಲ್ಲ ಗೂಗಲ್‌ ಅಭಿವೃದ್ಧಿ ಸಾಗಲಿದೆ' ಎಂದು ಸುಂದರ್‌ ಪಿಚೈ ತಿಳಿಸಿದ್ದಾರೆ. 

ಇದನ್ನೂ ಓದಿ: ಸುಂದರ್‌ ಪಿಚಾಯಿ ಗೂಗಲ್‌ ಸಿಇಒ ಆದ ಕಥೆ..!

15 ವರ್ಷಗಳಿಂದ ಅತ್ಯಂತ ನಿಕಟ ಸಂಪರ್ಕದಲ್ಲಿರುವ, ಗೂಗಲ್‌ ಬೆಳವಣಿಗೆಯಲ್ಲಿ ಜತೆಯಾಗಿರುವ, ಆಲ್ಫಾಬೆಟ್‌ ರಚನೆಯಲ್ಲಿ ಸಹಕಾರ ನೀಡಿರುವುದು, ಗೂಗಲ್‌ ಸಿಇಒ ಆಗಿ ಆತ್ಮ ವಿಶ್ವಾಸ ಹೆಚ್ಚಿಸಿರುವ ಹಾಗೂ ಹಲವು ಪ್ರಮುಖ ಸವಾಲುಗಳನ್ನು ಎದುರಿಸಲು ಕೈಜೋಡಿಸಿರುವ ಸುಂದರ್‌ ಪಿಚೈಗಿಂತಲೂ ಗೂಗಲ್‌ ಮತ್ತು ಆಲ್ಫಾಬೆಟ್‌ ಮುನ್ನಡೆಸಬಲ್ಲ ಮತ್ತೊಬ್ಬ ವ್ಯಕ್ತಿ ಇಲ್ಲ ಎಂದು ಲ್ಯಾರಿ ಪೇಜ್‌ ಮತ್ತು ಸೆರ್ಗಿ ಬ್ರಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು