ಮಂಗಳವಾರ, ಜನವರಿ 31, 2023
19 °C

ಮಾತುಗಳನ್ನು ಅಕ್ಷರಗಳಾಗಿ ಪರಿವರ್ತಿಸಿ ಪರದೆಯ ಮೇಲೆ ಮೂಡಿಸುವ ವಿಶಿಷ್ಟ ಕನ್ನಡಕ

ನೇಸರ ಕಾಡನಕು‍ಪ್ಪೆ Updated:

ಅಕ್ಷರ ಗಾತ್ರ : | |

Prajavani

ಶ್ರವಣದೋಷ ಸಮಸ್ಯೆ ಇರುವವರಿಗೆ ಪರಿಹಾರವಾಗಿ ಅನೇಕ ರೀತಿಯ ಉಪಕರಣಗಳನ್ನು ಶೋಧಿಸಲಾಗಿದೆ. ಸಂಪೂರ್ಣವಾಗಿ ಶಬ್ದ ಕೇಳದೇ ಇದ್ದರೂ ಅಲ್ಪಸ್ಪಲ್ಪವಾದರೂ ಕೇಳುವಂತೆ ಸಾಧನಗಳು ಈಗ ಸಹಾಯ ಮಾಡುತ್ತಿವೆ. ಜೊತೆಗೆ, ದೈಹಿಕವಾಗಿ ಕೆಲವು ಸಮಸ್ಯೆಗಳಿದ್ದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ದೋಷ ಪರಿಹಾರ ಮಾಡುವ ವಿಧಾನಗಳೂ ಈಗ ಬಳಕೆಯಲ್ಲಿವೆ. ಆದರೆ, ಈಗೊಂದು ಸರಳ ತಂತ್ರಜ್ಞಾನವೊಂದರ ಶೋಧವಾಗಿದೆ. ಮಾತುಗಳನ್ನು ಆಲಿಸಿ, ಅವನ್ನು ಅಕ್ಷರಗಳಾಗಿ ಪರಿವರ್ತಿಸಿ ಪರದೆಯ ಮೇಲೆ ಮೂಡಿಸುವ ಕನ್ನಡಕವೊಂದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಈ ಕನ್ನಡಕಕ್ಕೆ ‘ಎಕ್ಸ್‌ರಾಯ್’ (XRAI) ಎಂದು ಹೆಸರಿಡಲಾಗಿದೆ. ಮಿಶೆಲ್ ಫೆಲ್ಡ್‌ಮ್ಯಾನ್ ಎಂಬ ವಿಜ್ಞಾನಿಯೊಬ್ಬರು ಈ ಕನ್ನಡಕವನ್ನು ಸಂಶೋಧಿಸಿ ಅದನ್ನು ಈಗಾಗಲೇ ಮಾರುಕಟ್ಟೆಗೂ ಬಿಡುಗಡೆ ಮಾಡಿದ್ದಾರೆ. ಈ ಕನ್ನಡಕದ ಕೆಲಸ ಬಹು ಸರಳ – ಮಾತುಗಳನ್ನು ಕೇಳಿಸಿಕೊಳ್ಳುವುದು; ಕೇಳಿಸಿದ ಮಾತುಗಳನ್ನು ಕನ್ನಡಕದ ಪರದೆಯ ಮೇಲೆ ಮೂಡಿಸುವುದು. ಈ ಕನ್ನಡಕವನ್ನು ಧರಿಸಿರುವವರು ಪರದೆಯ ಮೇಲೆ ಮೂಡುವ ಅಕ್ಷರಗಳನ್ನು ಓದಿಕೊಳ್ಳುವ ಮೂಲಕ ವಿಷಯಗಳನ್ನು ಸುಲಭವಾಗಿ ಅರ್ಥೈಸುವಂತೆ ಮಾಡುವುದು ಇದರ ಒಟ್ಟಾರೆ ಉದ್ದೇಶವಾಗಿದೆ.

ಕೃತಕ ಬುದ್ಧಿಮತ್ತೆಯ ಮೂಲಕ ಈ ಕನ್ನಡಕವು ಕೆಲಸ ಮಾಡುತ್ತದೆ. ಕನ್ನಡಕದ ಒಳಗೆ ಇರಿಸಿರುವ ಸಾಫ್ಟ್‌ವೇರ್‌, ಮೈಕ್ರೋಫೋನ್‌ ಮೂಲಕ ಮಾತುಗಳನ್ನು ಆಲಿಸುತ್ತದೆ. ಸಾಫ್ಟ್‌ವೇರ್‌ಗೆ ಮುಂಚಿತವಾಗಿ ವಿವಿಧ ಭಾಷೆಗಳನ್ನು ಅಡಕಗೊಳಿಸಿರಬೇಕು. ಅಡಕಗೊಳಿಸಿದ ಭಾಷೆಗಳನ್ನು ಕನ್ನಡಕವು ಅರ್ಥ ಮಾಡಿಕೊಂಡು ಅಕ್ಷರಗಳನ್ನಾಗಿ ಪರಿವರ್ತಿಸಿ ಅದನ್ನು ಪರದೆಯ ಮೇಲೆ ಮೂಡಿಸುತ್ತದೆ. ಅಷ್ಟೇ ಅಲ್ಲ; ಕೇವಲ ಮಾತುಗಳಲ್ಲದೇ ಕೆಲವು ವಿಶೇಷ ಶಬ್ದಗಳು, ಉದಾಹರಣೆಗೆ, ಸಂಗೀತ, ಸ್ಫೋಟ, ಕೆಲವು ದೈಹಿಕ ಸಂಜ್ಞೆಗಳನ್ನೂ ತನ್ನಲ್ಲಿರುವ ಕ್ಯಾಮೆರಾ ಹಾಗೂ ಮೈಕ್ರೋಫೋನ್‌ ಮೂಲಕ ಗುರುತಿಸಿ ಅದನ್ನು ಅಕ್ಷರಗಳಲ್ಲಿ ಹೇಳುವ ಸಾಮರ್ಥ್ಯವನ್ನು ಈ ಕನ್ನಡಕವು ಹೊಂದಿರುವುದು ವಿಶೇಷವಾಗಿದೆ.

ಶ್ರವಣದೋಷದ ಸಮಸ್ಯೆ ಇರುವವರಿಗೆ ತುಟಿಗಳ ಚಲನೆಯನ್ನು ಗುರುತಿಸಿ ಅರ್ಥೈಸಿಕೊಂಡು ಮಾತುಗಳನ್ನು ಗ್ರಹಿಸುವ ತರಬೇತಿಯನ್ನು ನೀಡಲಾಗಿರುತ್ತದೆ. ಆದರೂ, ಕೆಲವೊಮ್ಮೆ ತುಟಿಗಳ ಚಲನೆಯ ವೇಗ ಹೆಚ್ಚಿರುವಾಗ ಅದನ್ನು ಗ್ರಹಿಸಲಾಗದ ಮಿತಿ ಬಂದೊದಗುತ್ತದೆ. ಆದರೆ, ಈ ಕನ್ನಡಕವನ್ನು ಧರಿಸಿದರೆ ಈ ಸಮಸ್ಯೆ ಬರಲಾರದು. ಏಕೆಂದರೆ, ಇಲ್ಲಿ ತುಟಿಗಳ ಚಲನೆಯನ್ನು ಗ್ರಹಿಸುವುದು ಕೃತಕ ಬುದ್ಧಿಮತ್ತೆ. ಅದಕ್ಕೆ ದಣಿವಾಗದು. ಜೊತೆಗೆ, ಅದರ ಲೆಕ್ಕಾಚಾರ ಸಾಮರ್ಥ್ಯ ಹೆಚ್ಚಿರುವ ಕಾರಣ ಸೆಕೆಂಡಿಗೆ ಕನಿಷ್ಠವೆಂದರೂ 100 ಶಬ್ದಗಳನ್ನು ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಇಷ್ಟು ಅಗಾಧ ಸಾಮರ್ಥ್ಯ ಇಲ್ಲದೇ ಇದ್ದರೂ, ಕೆಲವೊಮ್ಮೆ ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಕೆಲಸಕ್ಕೆ ಬರಬಹುದು ಎಂಬ ಅಂದಾಜಿನಿಂದ ಈ ಸಾಮರ್ಥ್ಯವನ್ನು ಈ ಕನ್ನಡಕಕ್ಕೆ ನೀಡಲಾಗಿದೆ.

‘ಸಿನಿಮಾಗಳನ್ನು ನೋಡುವಾಗ ಸಾಮಾನ್ಯ ಪ್ರೇಕ್ಷಕರೂ ಈಗ ‘ಸಬ್‌ಟೈಟಲ್‌’ ಜೊತೆಗೆ ವೀಕ್ಷಿಸುವುದು ಅಭ್ಯಾಸವಾಗಿದೆ. ಅದು ಶ್ರವಣದೋಷವುಳ್ಳ ಜನರಿಗೆ ದೊಡ್ಡ ವರವೇ ಸರಿ. ಆದರೂ ಕೆಲವೊಮ್ಮೆ ಎಲ್ಲ ಸಿನಿಮಾಗಳಿಗೂ ‘ಸಬ್‌ಟೈಟಲ್‌’ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಕನ್ನಡಕವು ಬಳಕೆಗೆ ಬರುತ್ತದೆ. ಜೊತೆಗೆ, ಇದು ಕೇವಲ ಸಿನಿಮಾ ವೀಕ್ಷಣೆಗೆ ಮಾತ್ರ ಬಳಕೆಯಾಗದೇ, ದಿನನಿತ್ಯದ ಜೀವನದಲ್ಲೂ ಬಳಕೆಯಾಗುವುದರಿಂದ ಸ್ನೇಹಿತರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳು – ಇತ್ಯಾದಿ ವ್ಯಕ್ತಿಗಳ ಜೊತೆಗೆ ಮಾತುಕತೆ ನಡೆಸುವಾಗ ಮಾತುಗಳನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳುವುದು ಸಾಧ್ಯವಾಗುತ್ತದೆ’ ಎಂದು ‘ಎಕ್ಸ್‌ರಾಯ್’ ಸಹ ಸಂಸ್ಥಾಪಕ ಹಾಗೂ ಮುಖ್ಯ ಮಾರುಕಟ್ಟೆ ಅಧಿಕಾರಿ ಮಿಶೆಲ್ ಫೆಲ್ಡ್‌ಮ್ಯಾನ್ ವ್ಯಾಖ್ಯಾನಿಸಿದ್ದಾರೆ.

ಜಾಗತಿಕವಾಗಿ ಈಗಾಗಲೇ ಅಮೇಜಾನ್ ಮಾದರಿಯ ಇ–ಕಾಮರ್ಸ್‌ ಜಾಲತಾಣಗಳಲ್ಲಿ ಈ ಕನ್ನಡಕವು ಮಾರಾಟಕ್ಕೆ ಲಭ್ಯವಿದೆ. ಸದ್ಯಕ್ಕೆ ಈ ಕನ್ನಡಕದ ಬೆಲೆ 350 ಅಮೆರಿಕನ್ ಡಾಲರ್‌ಗಳು. ಭಾರತಕ್ಕೂ ಸದ್ಯದಲ್ಲೇ ಈ ಕನ್ನಡಕವು ಕೊಳ್ಳಲು ಸಿಗಲಿದೆ. ಅಂದಹಾಗೆ, ಈ ಕನ್ನಡಕವನ್ನು ಶ್ರವಣದೋಷವುಳ್ಳವರೇ ಧರಿಸಬೇಕು ಎಂದೇನೂ ಇಲ್ಲ; ಯಾರು ಬೇಕಾದರೂ ಧರಿಸಬಹುದು. ಗ್ರಹಿಕಾ ಸಾಮರ್ಥ್ಯ ಕಡಿಮೆ ಇರುವವರು, ಗದ್ದಲ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವವರು ಇದನ್ನು ಧರಿಸಿ ಮಾತುಗಳನ್ನು ಸಮರ್ಥವಾಗಿ ಅರ್ಥ ಮಾಡಿಕೊಳ್ಳುವುದೂ ಇದರಿಂದ ಸಾಧ್ಯವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು