ಗುರುವಾರ , ಅಕ್ಟೋಬರ್ 6, 2022
26 °C

ವಿಎಲ್‌ಸಿ ಮೀಡಿಯಾ ಪ್ಲೇಯರ್‌ಗೆ ಸದ್ದಿಲ್ಲದೇ ನಿರ್ಬಂಧ: ಕಾರಣವೇನು?

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಕ್ತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಸಿಗುತ್ತಿದ್ದ ವಿಎಲ್‌ಸಿ ಮೀಡಿಯಾ ಪ್ಲೇಯರ್ ಅನ್ನು ದೇಶದ ಹಲವು ಅಂತರ್ಜಾಲ ಪೂರೈಕೆದಾರ ಕಂಪನಿಗಳು ನಿರ್ಬಂಧಿಸಿವೆ. ಚೀನಾ ಹ್ಯಾಕರ್‌ಗಳ ಭೀತಿಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಡಿವೈಸ್‌ಗಳನ್ನು ಹ್ಯಾಕ್ ಮಾಡುವುದಕ್ಕಾಗಿ ಚೀನಾದ ಹ್ಯಾಕರ್‌ಗಳು ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೂಲಕ ಮಾಲ್‌ವೇರ್‌ ಕಳುಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಸಿಕಾಡ ಗ್ರೂಪ್‌ ಹಲವು ದೇಶಗಳನ್ನು ಗುರಿಯಾಗಿಸಿ ಸೈಬರ್ ದಾಳಿ ನಡೆಸಿತ್ತು. ಅಮೆರಿಕದ ಸಾಫ್ಟ್‌ವೇರ್ ಕಂಪನಿ ಸಿಮಾಂಟೆಕ್‌ನ ಸೈಬರ್ ಭದ್ರತಾ ಸಂಶೋಧಕರ ಪ್ರಕಾರ ಭಾರತ, ಅಮೆರಿಕ, ಕೆನಡಾ, ಇಸ್ರೇಲ್, ಹಾಂಗ್‌ಕಾಂಗ್ ಹಾಗೂ ಇತರ ಕೆಲವು ದೇಶಗಳ ಜನ‌ರು ಸೈಬರ್ ದಾಳಿಗೆ ಗುರಿಯಾಗಿದ್ದರು.

ಚೀನಾ ಮೂಲದ ಸೈಬರ್ ದಾಳಿಕೋರರು ವಿಎಲ್‌ಸಿ ಮೀಡಿಯಾ ಪ್ಲೇಯರ್ ಬಳಸಿಕೊಂಡು ಮಾಲ್‌ವೇರ್‌ ಕಳುಹಿಸುತ್ತಿದ್ದಾರೆ ಎಂದು ಸಿಮಾಂಟೆಕ್‌ನ ಸೈಬರ್ ಭದ್ರತಾ ಸಂಶೋಧಕರು ಹೇಳಿದ್ದಾರೆ.

ದೇಶದ ಹೆಚ್ಚಿನ ಪ್ರಮುಖ ಅಂತರ್ಜಾಲ ಪೂರೈಕೆದಾರರು ವಿಎಲ್‌ಸಿ ಮೀಡಿಯಾ ಪ್ಲೇಯರ್ ಡೌನ್‌ಲೋಡ್ ಅನ್ನು ನಿರ್ಬಂಧಿಸಿವೆ. ಆದಾಗ್ಯೂ, ವಿಪಿಎನ್ ಮೂಲಕ ಮೊಬೈಲ್‌ ಫೋನ್‌ಗಳಲ್ಲಿ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ‘ಐಎಎನ್ಎಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ಡೌನ್‌ಲೋಡ್‌ಗೆ ಲಭ್ಯವಿದೆ.

ವಿಎಲ್‌ಸಿ ಮೀಡಿಯಾ ಪ್ಲೇಯರ್ ಅನ್ನು ನಿರ್ಬಂಧಿಸಿರುವ ಬಗ್ಗೆ ಸರ್ಕಾರ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು