ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳ ಹಾವಳಿ

Last Updated 30 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಒಂದೆಡೆ ಭಾರತವು ಕೊರೊನಾವೈರಸ್‌–ಕೋವಿಡ್–19 ಸೋಂಕುಮಾರಿಯ ವಿರುದ್ಧ ಹೋರಾಡುತ್ತಿದೆ. ಮತ್ತೊಂದೆಡೆ ಕೋವಿಡ್–19 ಕುರಿತ ಸುಳ್ಳುಸುದ್ದಿಗಳೂ ಹಾವಳಿ ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುಳ್ಳುಸುದ್ದಿಗಳ ವಿರುದ್ಧ ದೇಶದ ಸರ್ಕಾರಿ ಏಜೆನ್ಸಿಗಳು ಮತ್ತು ಹಲವು ಸ್ವಯಂಸೇವಾ ಸಂಸ್ಥೆಗಳು ಹೋರಾಟ ಆರಂಭಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುಳ್ಳುಸುದ್ದಿಗಳ ಬಗ್ಗೆ ಎಚ್ಚರದಿಂದ ಇರಬೇಕಾದ ಅಗತ್ಯವಿದೆ. ಕೊರೊನಾದಂತೆ ಸುಳ್ಳುಸುದ್ದಿಗಳೂ ಸೋಂಕಿನಂತೆ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಕೊರೊನಾಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ಹಲವು ರಾಷ್ಟ್ರಗಳು ಕ್ರಮ ತೆಗೆದುಕೊಂಡಿವೆ. ಭಾರತದ ಹಲವು ರಾಜ್ಯಗಳ ಪೊಲೀಸರು ಸುಳ್ಳುಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ

ವೈರಲ್ ಆಗಿರುವ ಸುಳ್ಳುಸುದ್ದಿಗಳು

* 21 ದಿನಗಳ ಲಾಕ್‌ಡೌನ್ ಮುಗಿದ ನಂತರ ಏಪ್ರಿಲ್ 14ರಿಂದ ಜೂನ್ 14ರವೆರೆಗ ಲಾಕ್‌ಡೌನ್‌ ಮುಂದುವರಿಸಲಾಗುತ್ತದೆ ಎಂದು'Ministry of Internal Regulation' ಹೇಳಿದೆ ಎಂಬ ಸುಳ್ಳುಸುದ್ದಿ ಹರಿದಾಡುತ್ತಿದೆ. ಇದನ್ನು ಸಂಸದೀಯ ಕಾರ್ಯದರ್ಶಿ ರಾಜೀವ್‌ ಗೌಬಾ ನಿರಾಕರಿಸಿದ್ದಾರೆ. ‘ಇದು ಆಧಾರರಹಿತ ಸುದ್ದಿ. ಇದು ವದಂತಿ. 21 ದಿನಗಳ ನಂತರ ಲಾಕ್‌ಡೌನ್ ಮುಂದುವರಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ'Ministry of Internal Regulation' ಎಂಬ ಸಚಿವಾಲಯವೇ ಅಸ್ತಿತ್ವದಲ್ಲಿ ಇಲ್ಲ

* ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ನಿವೃತ್ತ ಸೈನಿಕರು, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ಕಾರ್ಯಕರ್ತರ ಅವಶ್ಯಕತೆ ಇದೆ. ಅವರನ್ನು ಭಾರತೀಯ ಸೇನೆ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂಬ ಇನ್ನೊಂದು ಸುದ್ದಿ ವೈರಲ್ ಆಗಿದೆ. ‘ಇದು ಸಂಪೂರ್ಣ ಸುಳ್ಳು. ಭಾರತೀಯ ಸೇನೆ ನೇಮಕಾತಿ ನಡೆಸುತ್ತಿಲ್ಲ’ ಎಂದು ಭಾರತೀಯ ಸೇನೆ ಹೇಳಿದೆ

* ಕೊರೊನಾವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರವು ‘ಪಿಎಂ ಕೇರ‍್ಸ್‌ ಫಂಡ್’ ಸ್ಥಾಪಿಸಿದೆ. ಇದಕ್ಕೆ ಹಣ ಜಮೆ ಮಾಡುವಂತೆ ಸಾರ್ವಜನಿಕರನ್ನು ಕೋರಿದೆ. ಆದರೆ, ಈ ನಿಧಿಗೆ ಸಂಬಂಧಿಸಿದಂತೆpmcare@sbi ಎಂಬ ಯುಪಿಐ ಐಡಿ ವೈರಲ್ ಆಗಿದೆ. ಇದು ನಕಲಿ ಐಡಿ ಎಂಬುದನ್ನು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.pmcares@sbi ಎಂಬುದು ನಿಜವಾದ ಯುಪಿಐ ಐಡಿ

* ಬಿಸಿ ನೀರಿನ ಹಬೆಯನ್ನು ಉಸಿರಾಡಿದರೆ ಕೊರೊನಾ ವೈರಾಣುಗಳು ಸಾಯುತ್ತವೆ ಎಂಬ ಮಾಹಿತಿ ಇರುವ ಸಂದೇಶ ಮತ್ತು ಧ್ವನಿಮುದ್ರಣ ವೈರಲ್ ಆಗಿದೆ. ಇದನ್ನೂ ಕೇಂದ್ರ ಆರೋಗ್ಯ ಸಚಿವಾಲಯ ನಿರಾಕರಿಸಿದೆ. ‘ಹಬೆಯನ್ನು ಉಸಿರಾಡಿದರೆ ವೈರಾಣುಗಳು ಸಾಯುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ’ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ

* ಮುಂಬೈನ ಮೊಹಮ್ಮದ್ ಅಲಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ, ಸೇನೆಯ ತುಕಡಿಯನ್ನು ನಿಯೋಜಿಸಲಾಗಿದೆ ಎಂಬ ಇನ್ನೊಂದು ಸುದ್ದಿ ವೈರಲ್ ಆಗಿದೆ. ಇದೂ ಸಹ ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರ ಹೇಳಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT