ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್ದಿವ್ಸ್‌ ಬೀಚ್‌ನಲ್ಲಿ ಚಹ ಮಾಡಿ ಪ್ರವಾಸಿಗರಿಗೆ ಕುಡಿಸಿದ ಡಾಲಿ ಚಾಯ್‌ವಾಲಾ!

ಡಾಲಿ ಚಾಯ್‌ವಾಲಾ’ ಅವರು ‘ಮೈಕ್ರೊಸಾಫ್ಟ್’ ಸಂಸ್ಥಾಪಕ ಹಾಗೂ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರಿಗೆ ಚಹ ಮಾಡಿ ಕೊಟ್ಟ ನಂತರ ಸೆಲಿಬ್ರಿಟಿ ರೀತಿ ಮಿಂಚುತ್ತಿದ್ದಾರೆ..
Published 17 ಜೂನ್ 2024, 11:18 IST
Last Updated 17 ಜೂನ್ 2024, 11:18 IST
ಅಕ್ಷರ ಗಾತ್ರ

ಬೆಂಗಳೂರು: ನಾಗ್ಪುರದ ಪ್ರಸಿದ್ಧ ಚಾಯ್‌ವಾಲಾ ‘ಡಾಲಿ ಚಾಯ್‌ವಾಲಾ’ ಅವರು ‘ಮೈಕ್ರೊಸಾಫ್ಟ್’ ಸಂಸ್ಥಾಪಕ ಹಾಗೂ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರಿಗೆ ಚಹ ಮಾಡಿ ಕೊಟ್ಟ ನಂತರ ಸೆಲಿಬ್ರಿಟಿ ರೀತಿ ಮಿಂಚುತ್ತಿದ್ದಾರೆ.

ಅವರಿಗೆ ಭಾರತವೂ ಸೇರಿದಂತೆ ಹೊರ ದೇಶದಲ್ಲೂ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.

ಇತ್ತೀಚೆಗೆ ಪ್ರಸಿದ್ಧ ಪ್ರವಾಸಿ ತಾಣ ಮಾಲ್ದಿವ್ಸ್‌ಗೆ ಭೇಟಿ ನೀಡಿದ್ದ ಡಾಲಿ, ಅಲ್ಲಿನ ಬೀಚ್‌ನಲ್ಲಿ ಚಹ ತಯಾರಿಸಿ ಪ್ರವಾಸಿಗರಿಗೆ ಕುಡಿಸಿದ್ದಾರೆ. ಡಾಲಿ ಚಹ ಮಾಡುವುದು ಹಾಗೂ ಆ ಚಹದ ರುಚಿ ನೋಡಿ ಬೆರಗಾಗಿರುವ ಅನೇಕ ಪ್ರವಾಸಿಗರು ಡಾಲಿಯನ್ನು ಮುಕ್ತಕಂಠದಿಂದ ಪ್ರಶಂಸಿದ್ದಾರೆ.

ಮಾಲ್ದಿವ್ಸ್ ಭೇಟಿಯ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಡಾಲಿ ಇದು ಮಾಲ್ದಿವ್ಸ್ ವೈಬ್ಸ್ ಎಂದು ಹೇಳಿದ್ದಾರೆ. ಈ ವಿಡಿಯೊ ಒಂದೇ ದಿನದಲ್ಲಿ ಮೂರೂವರೆ ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

ಫೆಬ್ರುವರಿಯಲ್ಲಿ ಟೆಕ್ ದೈತ್ಯ ‘ಮೈಕ್ರೊಸಾಫ್ಟ್’ ಸಂಸ್ಥಾಪಕ ಹಾಗೂ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಅವರು ಹೈದರಾಬಾದ್‌ಗೆ ಭೇಟಿ ನೀಡಿದ್ದಾಗ ಸರ್ಧಾರ್ ಏರಿಯಾದ ವಿಸಿಎ ಸ್ಟೇಡಿಯಂ ಬಳಿ ನಾಗ್ಪುರ್‌ದ ಖ್ಯಾತ ಚಹಾ ಮಾರಾಟಗಾರ ‘ಡಾಲಿ ಚಾಯ್‌ವಾಲಾ’ ಬಳಿ ಚಹ ಮಾಡಿಸಿ, ಅದನ್ನು ಕುಡಿದು ಸುದ್ದಿಯಾಗಿದ್ದರು.

ವಿಶೇಷವೆಂದರೆ ಈ ಡಾಲಿ ಚಾಯ್‌ವಾಲಾ ಅವರಿಗೆ, ತಾನು ಚಹಾ ಮಾಡಿ ಕೊಟ್ಟಿದ್ದು ಜಗತ್ತಿನ ಶ್ರೀಮಂತ ವ್ಯಕ್ತಿಗೆ ಎಂಬುದು ಗೊತ್ತೇ ಇರಲಿಲ್ಲವಂತೆ.

ಗೇಟ್ಸ್ ಅವರಿಗೆ ಚಹಾ ಮಾಡಿಕೊಟ್ಟ ನಂತರ ನಾಗ್ಪುರ್‌ದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಡಾಲಿ, ‘ಅವರು (ಬಿಲ್‌ಗೇಟ್ಸ್ ಟೀಂ) ನನಗೆ ಹೈದರಾಬಾದ್‌ಗೆ ಬರಲು ಹೇಳಿದ್ದರು. ವ್ಯಕ್ತಿಯೊಬ್ಬರಿಗೆ ನಾನು ಮಾಡುವ ವಿಶೇಷ ಚಹಾ ಮಾಡಿ ಕೊಡುವಂತೆ ಹೇಳಿದ್ದರು. ಆ ಪ್ರಕಾರ ನಾನು ಅಲ್ಲಿಗೆ ಹೋಗಿ, ಅವರು ಬಂದಾಗ ಚಹಾ ಮಾಡಿ ಕೊಟ್ಟಿದ್ದೆ. ಆಗ ಅವರು ಯಾರು ಎಂಬುದೇ ಗೊತ್ತಿರಲಿಲ್ಲ. ವಿದೇಶಿ ವ್ಯಕ್ತಿಯೊಬ್ಬರು ಚಹಾ ಕುಡಿಯಲು ಬಂದಿದ್ದರು ಎಂದುಕೊಂಡಿದ್ದೆ’ ಎಂದಿದ್ದಾರೆ.

‘ನನಗೆ ಪ್ರಧಾನಿ ಮೋದಿ ಅವರಿಗೆ ಚಹಾ ಮಾಡಿ ಕೊಡಬೇಕು ಎಂಬ ಕನಸಿದೆ’ ಎಂದು ಡಾಲಿ ತಮ್ಮ ಮನದ ಇಂಗಿತವನ್ನು ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ ನಿವಾಸಿಯಾಗಿರುವ ಸುನೀಲ್ ಪಾಟೀಲ್, ಡಾಲಿ ಚಾಯ್‌ವಾಲಾ ಎಂದೇ ಪ್ರಸಿದ್ಧಿ. ಅವರು ತಾವು ಮಾಡುವ ವಿಶೇಷ ಚಹಾ ಮತ್ತು ಅದನ್ನು ಕೊಡುವ ಶೈಲಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಅನೇಕ ನೆಟ್ಟಿಗರು, ಇದೊಂದು ‘ಸಿಗ್ನೇಚರ್ ಸ್ಟೈಲ್’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT