ನೀರಜ್ ಚೋಪ್ರಾ ವರ್ಕೌಟ್ ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರ: ಹೇಳಿದ್ದೇನು?

ನವದೆಹಲಿ: ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಅವರ ದೈನಂದಿನ ವರ್ಕೌಟ್ ವಿಡಿಯೊ ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರ, ತಾವು ಪ್ರಭಾವಿತರಾಗಿರುವುದಾಗಿ ತಿಳಿಸಿದ್ದಾರೆ.
ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ವರ್ಕೌಟ್ ವಿಡಿಯೊವನ್ನು ಆನಂದ್ ಮಹೀಂದ್ರ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಗೆಲುವು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
‘ನೀರಜ್ ಚೋಪ್ರಾ ಅವರ ದೈನಂದಿನ ವ್ಯಾಯಾಮವನ್ನು ನೋಡುವುದರಿಂದ ಯಾವುದೇ ವಿಜಯದ ತೆರೆಮರೆಯಲ್ಲಿ ಇರುವ ಅಸಾಧಾರಣ, ಬೆನ್ನು ಮುರಿಯುವ ಪ್ರಯತ್ನವನ್ನು ನನಗೆ ನೆನಪಿಸುತ್ತದೆ. ಗೆಲುವು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ’ ಎಂದು ಆನಂದ್ ವಿವರಿಸಿದ್ದಾರೆ.
Just watching the workout routine of @Neeraj_chopra1 reminds me of the extraordinary, back-breaking effort that lies ‘behind-the-scenes’ of any victory. Nothing comes easy… pic.twitter.com/cgMRcZaDkq
— anand mahindra (@anandmahindra) January 17, 2023
32 ಸೆಕೆಂಡುಗಳ ಈ ವಿಡಿಯೊದಲ್ಲಿ ನೀರಜ್ ಕ್ಯಾರಿಯೋಕಾ ಡ್ರಿಲ್ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಈವರೆಗೆ ವಿಡಿಯೊವನ್ನು 9.67 ಲಕ್ಷ ಜನರು ವೀಕ್ಷಿಸಿದ್ದು, ನೀರಜ್ ಚೋಪ್ರಾ ಅವರ ಸಿದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವರ್ಷ ನೀರಜ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
90 ಮೀ. ಸಾಧನೆ ಗುರಿ: ಚೋಪ್ರಾ
ಜಾವೆಲಿನ್ ಅನ್ನು 90 ಮೀಟರ್ ಗೆರೆ ದಾಟಿಸುವುದು ಈ ವರ್ಷದ ನನ್ನ ಗುರಿ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ 24 ವರ್ಷದ ಚೋಪ್ರಾ 2022 ರಲ್ಲೂ ನಿರೀಕ್ಷೆಗೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಹಾಗೂ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು. ಆದರೆ 90 ಮೀ. ಸಾಧನೆ ಮಾಡಲು ಆಗಿರಲಿಲ್ಲ.
ಡೈಮಂಡ್ ಲೀಗ್‌ನಲ್ಲಿ ಸ್ಟಾಕ್‌ಹೋಂ ಲೆಗ್ ಸ್ಪರ್ಧೆಯಲ್ಲಿ ಅವರು ಜಾವೆಲಿನ್ ಅನ್ನು 89.94 ಮೀ. ದೂರ ಎಸೆದಿದ್ದರು. 90 ಮೀ. ಸಾಧನೆಯನ್ನು ಕೇವಲ 6 ಸೆಂ.ಮೀ. ಅಂತರದಿಂದ ಕಳೆದುಕೊಂಡಿದ್ದರು.
‘ನೀರಜ್ 90 ಮೀ. ಸಾಧನೆ ಮಾಡುವರೇ ಎಂಬ ಪ್ರಶ್ನೆಗೆ ಈ ವರ್ಷ ಅಂತ್ಯ ಹಾಡುವೆನು ಎಂಬ ವಿಶ್ವಾಸವಿದೆ’ ಎಂದು ಮಾಧ್ಯಮವರೊಂದಿಗಿನ ವಿಡಿಯೊ ಸಂವಾದದಲ್ಲಿ ತಿಳಿಸಿದರು.
‘ಹೌದು. 90 ಮೀ. ಸಾಧನೆಯನ್ನು ಕೇವಲ ಆರು ಸೆಂ.ಮೀ.ಗಳ ಅಂತರ ದಿಂದ ತಪ್ಪಿಸಿಕೊಂಡಿದ್ದೆ. ಜಾವೆಲಿನ್ ಎಸೆಯುವ ವೇಳೆ ನನ್ನ ಕಾಲನ್ನು ಅಲ್ಪ ಮುಂದಿಟ್ಟಿದ್ದರೂ, ಆ ಸಾಧನೆ ಮಾಡಬಹುದಿತ್ತು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.