ಶುಕ್ರವಾರ, ಮೇ 20, 2022
19 °C
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್‌, ಈರುಳ್ಳಿ ಖರೀದಿಸುವ ಭರವಸೆ

ವೈರಲ್ ವಿಡಿಯೊ | ರೈತ ಮಹಿಳೆ ಅಳಲಿಗೆ ಸ್ಪಂದಿಸಿದ ಸಿ.ಎಂ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಈರುಳ್ಳಿಗೆ ಮಾರುಕಟ್ಟೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿ ರೈತ ಮಹಿಳೆ ವಸಂತಕುಮಾರಿ ಅಳಲಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಂದಿಸಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ ಈರುಳ್ಳಿ ಮಾರಾಟಕ್ಕೆ ನೆರವು ಒದಗಿಸುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಅವರ ಭರವಸೆಯಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸಲು ತೋಟಗಾರಿಕೆ ಇಲಾಖೆ ಹಸಿರು ಪಾಸ್‌ ವಿತರಣೆ ಮಾಡಿದೆ. ಒಬ್ಬವ್ಯಾಪಾರಿಯನ್ನೂ ಕರೆದೊಯ್ದು, ಖರೀದಿಗೆ ಪರಿಶೀಲನೆ ಮಾಡುವಂತೆ ಸೂಚಿಸಿದೆ.

ಈರುಳ್ಳಿ ಮಾರಾಟವಾಗದೇ ಉಳಿದಿರುವ ಕುರಿತು ವಸಂತಕುಮಾರಿ ವಿಡಿಯೊ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿ ಅಳಲು ತೋಡಿಕೊಂಡಿದ್ದರು. ಸೋಮವಾರ ಸಂಜೆ ಹಾಕಿದ್ದ ವಿಡಿಯೊ ವೈರಲ್‌ ಆಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿ, ಖುದ್ದು ಕರೆ ಮಾಡಿ ಸಮಾಧಾನ ಹೇಳಿದ್ದರು.

‘ಈರುಳ್ಳಿ ಕಿತ್ತು 20 ದಿನಗಳಾದರೂ ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗದ ಸಂಕಟವನ್ನು ಸಿಎಂ ಜೊತೆ ಹಂಚಿಕೊಂಡಿದ್ದೆ’ ಎಂದು ವಸಂತಕುಮಾರಿ ಹೇಳಿದರು. ಇವರು ಐದು ಎಕರೆಯಲ್ಲಿ 120 ಚೀಲ ಈರುಳ್ಳಿ ಬೆಳೆದಿದ್ದಾರೆ. ಸುಮಾರು ₹ 70 ಸಾವಿರ ವೆಚ್ಚವಾಗಿತ್ತು. ಈವರೆಗೆ ನಾಲ್ಕು ಕ್ವಿಂಟಲ್ ಈರುಳ್ಳಿ ಹಾಳಾಗಿದೆ.

‘ಬೆಂಗಳೂರಿನ ನೆಲಮಂಗಲದ ಮಾರುಕಟ್ಟೆಗೆ ಈರುಳ್ಳಿ ಕೊಂಡೊಯ್ಯಬೇಕು. ಸಾಗಣೆಗೆ ಲಾರಿ ಬಾಡಿಗೆ ₹ 10 ಸಾವಿರ ಕೇಳುತ್ತಿದ್ದಾರೆ, ಹಣವಿಲ್ಲ. ಇಂತಹ ಸ್ಥಿತಿ ಯಾವೊಬ್ಬ ರೈತರಿಗೂ ಬರಬಾರದು’ ಎಂದು ವಸಂತಕುಮಾರಿ ಸಂಕಟ ತೋಡಿಕೊಂಡರು.

ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವಸಂತಕುಮಾರಿ ಸ್ವಾಗತಕಾರಿಣಿಯಾಗಿ ಐದು ವರ್ಷ ಕೆಲಸ ಮಾಡಿದ್ದರು. ದ್ವಿಚಕ್ರ ವಾಹನದ ಶೋರೂಮ್‌ನಲ್ಲಿ ಪ್ರತಾಪ್‌ ಉದ್ಯೋಗಿಯಾಗಿದ್ದರು.

ಎರಡು ವರ್ಷಗಳ ಹಿಂದೆ ಸ್ವಗ್ರಾಮಕ್ಕೆ ಮರಳಿ ಕೃಷಿಯಲ್ಲಿ ತೊಡಗಿಕೊಂಡಿದ್ದರು.

ಖರ್ಚಿನ ವಿವರ ಮುಂದಿಟ್ಟ ಮಹಿಳೆ
ವಸಂತಕುಮಾರಿ ವಿಡಿಯೊದಲ್ಲಿ ವಿವರಿಸಿದ ಲೆಕ್ಕಕ್ಕೆ ಜನರು ತಲೆಬಾಗಿದ್ದಾರೆ. ‘ಈರುಳ್ಳಿ ಖಾಲಿಚೀಲದ ಬೆಲೆ ₹ 42, ಒಂದು ಚೀಲ ಈರುಳ್ಳಿ ಕಟಾವಿಗೆ ₹ 30 ರೂಪಾಯಿ ಕೂಲಿ, ಕಳೆ, ಗೊಬ್ಬರ ಸೇರಿ 60 ಕೆ.ಜಿ ತೂಕದ ಒಂದು ಚೀಲ ಈರುಳ್ಳಿ ಬೆಳೆಯಲು ₹ 500 ಖರ್ಚಾಗುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ ₹ 300 ಕೇಳುತ್ತಿದ್ದಾರೆ. ಸೂಕ್ತ ಬೆಲೆ ಏಕೆ ಸಿಗುತ್ತಿಲ್ಲ’ ಎಂದು ಮುಖ್ಯಮಂತ್ರಿಯವರನ್ನೇ ಪ್ರಶ್ನಿಸಿದ್ದರು.

ಮನೆ ಬಾಗಿಲಿಗೆ ಹಸಿರು ಪಾಸ್‌
ಮುಖ್ಯಮಂತ್ರಿ ಸೂಚನೆಯ ಮೇರೆಗೆ ಮಹಿಳೆಯ ಮನೆಗೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈರುಳ್ಳಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಹಸಿರು ಪಾಸ್‌ ನೀಡಿದರು. ಈರುಳ್ಳಿ ಖರೀದಿಗೆ ಅಧಿಕಾರಿಗಳು ವ್ಯಾಪಾರಿಯೊಬ್ಬರನ್ನು ಗ್ರಾಮಕ್ಕೆ ಕರೆದೊಯ್ದಿದ್ದರು. ಗುಣಮಟ್ಟ ಪರಿಶೀಲಿಸಿದ ವ್ಯಾಪಾರಿ ಬುಧವಾರ ನಿರ್ಧಾರ ತಿಳಿಸುವುದಾಗಿ ಹೇಳಿದರು. ಕಾಟನಾಯಕನಹಳ್ಳಿಯ 50ಕ್ಕೂ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದು, ತಮ್ಮ ಉತ್ಪನ್ನವನ್ನು ಖರೀದಿಸಲು ಅಹವಾಲು ಸಲ್ಲಿಸಿದ್ದಾರೆ.

ಮನೆ ಬಾಗಿಲಿಗೆ ಹಸಿರು ಪಾಸ್‌

ಮುಖ್ಯಮಂತ್ರಿ ಸೂಚನೆಯ ಮೇರೆಗೆ ಮಹಿಳೆಯ ಮನೆಗೆ ಭೇಟಿ ನೀಡಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈರುಳ್ಳಿಯನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಹಸಿರು ಪಾಸ್‌ ನೀಡಿದರು. ಈರುಳ್ಳಿ ಖರೀದಿಗೆ ಅಧಿಕಾರಿಗಳು ವ್ಯಾಪಾರಿಯೊಬ್ಬರನ್ನು ಗ್ರಾಮಕ್ಕೆ ಕರೆದೊಯ್ದಿದ್ದರು. ಗುಣಮಟ್ಟ ಪರಿಶೀಲಿಸಿದ ವ್ಯಾಪಾರಿ ಬುಧವಾರ ನಿರ್ಧಾರ ತಿಳಿಸುವುದಾಗಿ ಹೇಳಿದರು. ಕಾಟನಾಯಕನಹಳ್ಳಿಯ 50ಕ್ಕೂ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದು, ತಮ್ಮ ಉತ್ಪನ್ನವನ್ನು ಖರೀದಿಸಲು ಅಹವಾಲು ಸಲ್ಲಿಸಿದ್ದಾರೆ.

*
ಫೇಸ್‌ಬುಕ್‌ನಲ್ಲಿ ಹಾಕಿದ್ದ ವಿಡಿಯೊಗೆ ಸಿ.ಎಂ ಸ್ಪಂದಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಕರೆ ಮಾಡಿ ಮಾತನಾಡಿದ್ದು ಖುಷಿ ತಂದಿದೆ.
-ವಸಂತಕುಮಾರಿ, ರೈತ ಮಹಿಳೆ, ಕಾಟನಾಯಕನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು