ಮಂಗಳವಾರ, ಜೂನ್ 2, 2020
27 °C

ಕಾರ್ಮಿಕರಿಗೆ ಬೂಟುಗಾಲಿನಿಂದ ಒದ್ದಿದ್ದ ಎಎಸ್‌ಐ ಅಮಾನತು

ಬೆಂಗಳೂರು: ತಮ್ಮೂರಿಗೆ ಹೋಗುವುದಕ್ಕಾಗಿ ನೋಂದಣಿ ಮಾಡಿಸಲು ಪೊಲೀಸ್ ಠಾಣೆಗೆ ಬಂದಿದ್ದ ಉತ್ತರ ಪ್ರದೇಶದ ವಲಸೆ ಕಾರ್ಮಿಕರನ್ನು ಬೆದರಿಸಿ ಬೂಟುಗಾಲಿನಿಂದ ಒದ್ದಿದ್ದ ಆರೋಪದಡಿ ಎಎಸ್‌ಐ ರಾಜಸಾಬ್ ಎಂಬುವರನ್ನು ಅಮಾನತು ಮಾಡಲಾಗಿದೆ.

ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಉತ್ತರ ಭಾರತದ ಹಲವು ರಾಜ್ಯಗಳ ಕಾರ್ಮಿಕರು ಉಳಿದುಕೊಂಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರೆಲ್ಲ ಕಷ್ಟಪಡುತ್ತಿದ್ದಾರೆ. ತಮ್ಮನ್ನು ಊರಿಗೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದಾರೆ.

ಕೇಂದ್ರದ ಸರ್ಕಾರದ ಆದೇಶದಂತೆ ತಮ್ಮೂರಿಗೆ ಹೋಗಲು ನೋಂದಣಿ ಮಾಡಿಸಲೆಂದು ಉತ್ತರ ಪ್ರದೇಶದ ಕಾರ್ಮಿಕರು ಕೆ.ಜಿ.ಹಳ್ಳಿ ಠಾಣೆಗೆ ಹೋಗಿದ್ದರು. ಅದೇ ವೇಳೆಯೇ ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಸಾಬ್, ಕಾರ್ಮಿಕರನ್ನು ತಡೆದು ಬೆದರಿಸಿದ್ದರು. ಠಾಣೆಯಿಂದ ವಾಪಸು ಹೋಗುವಂತೆಯೂ ಎಚ್ಚರಿಸಿದ್ದರು.

ನೊಂದ ಕಾರ್ಮಿಕರು ಠಾಣೆ ಪ್ರವೇಶ ದ್ವಾರದಲ್ಲೇ ನಿಂತುಕೊಂಡಿದ್ದರು. ಕಾರ್ಮಿಕರನ್ನು ಕಂಡು ಎಎಸ್‌ಐ ಮತ್ತಷ್ಟು ಸಿಟ್ಟಾಗಿದ್ದರು.

ಅವಾಗಲೇ ಕಾರ್ಮಿಕನೊಬ್ಬನ ಕಪಾಳಕ್ಕೆ ಹೊಡೆದು, ಮತ್ತೊಬ್ಬ ಕಾರ್ಮಿಕನಿಗೆ ಬೂಟುಗಾಲಿನಿಂದ ಒದ್ದಿದ್ದರು. ಸ್ಥಳದಲ್ಲಿದ್ದ ಕಾರ್ಮಿಕರೇ ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.