ಸೋಮವಾರ, ಸೆಪ್ಟೆಂಬರ್ 20, 2021
26 °C

ಕವಿತೆ | ಪೂರ್ಣದೃಷ್ಟಿ

ಕವಿತೆ | ಪೂರ್ಣದೃಷ್ಟಿ

'ನಾ ಹೇಗೆ ಕಾಣಬಹುದು ಸತ್ತ ಮೇಲೆ?'
ಕೇಳಿದೆ ಹೆಂಡತಿಯನ್ನು.
'ಥೂ ಬಿಡ್ತು ಅನ್ನಿ ಮೊದಲು' ಅಂದಳು
ಬಿಟ್ಟು ಕೆಂಗಣ್ಣು.

'ಸರಿಯಾಗಿ ಕೇಳಿಸಿಕೊಳ್ಳೇ ನನ್ನ ಮಾತ'
ಅಂದೆ ನಗುತ್ತ,
'ನಾ ಸತ್ತ ಮೇಲೆ ಕಾಣಲು ನನಗೆ
ಕಣ್ಣಿರುತ್ತಾ?'

'ರಾಮ ರಾಮಾ! ನಾ ಕೇಳಲಾರೆ' ಅಂದಳು
'ಏನಾಗಿದೆ ನಿಮಗೆ?'
'ನಿಜ, ನಾನೂ ಕೇಳಲಾರೆ ಆಗ ಬಹುಶಃ
ಅನ್ನಿಸುತ್ತೆ ನನಗೆ.

‘ಆತ್ಮಕ್ಕೆ ಕಿವಿಯಿರುತ್ತಾ ಕೇಳಲು?
ಪರಮಾತ್ಮನೇ ಬಲ್ಲ.
ಇದೆಲ್ಲ ಗಹನ ಗಂಭೀರ ಜಿಜ್ಞಾಸೆ,
ನಿನಗೆ ಅರ್ಥವಾಗೋಲ್ಲ.’

‘ಓ ಹಾಗೋ? ಸರಿ, ನನ್ನದೂ ಒಂದು ಪ್ರಶ್ನೆ,
ಉತ್ತರ ಹೇಳ್ತೀರಾ?
ಇದು ಸತ್ತ ಮೇಲಿನ ಸಂಗತಿಯಲ್ಲ,
ಇರುವಾಗಿನ ವಿಚಾರ.

‘ಅರ್ಧನಾರೀಶ್ವರನಿಗೆ ಪೂರ್ಣದೃಷ್ಟಿ
ದಕ್ಕೋದು ಯಾವಾಗ?
ಎರಡೂ ಕಣ್ಣಿಂದ ಕಂಡಾಗ ತಾನೆ?’
ಅವಾಕ್ಕು ನಾನೀಗ!