ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ವ್ಯಕ್ತಿಯೊಬ್ಬ ಕಾರು ನುಗ್ಗಿಸಿದ್ದು, ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟು ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿ ಪೊಲೀಸ್ ಅಧಿಕಾರಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಸ್ಥಳಿಯ ಮಾಧ್ಯಮವೊಂದು ವರದಿ ಮಾಡಿದೆ. ಬಳಿಕ, ದುಷ್ಕರ್ಮಿ ಕಾರು ಚಾಲಕನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಕಾನ್‌ಸ್ಟಿಟ್ಯೂಶನ್ ಅವೆನ್ಯೂ ಬಳಿಯ ಉತ್ತರ ಬ್ಯಾರಿಕೇಡ್ ವಾಹನ ಪ್ರವೇಶ ದ್ವಾರದ ಬಳಿ ಈ ಘಟನೆ ನಡೆದಿದೆ ಎಂದು ಅಮೆರಿಕದ ಕ್ಯಾಪಿಟಲ್ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಕ್ಯಾಪಿಟಲ್ ಸಂಕೀರ್ಣಕ್ಕೆ ಮತ್ತಷ್ಟು ಭದ್ರತೆ ಜೊತೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಯಾರೊಬ್ಬರಿಗೂ ಕ್ಯಾಪಿಟಲ್ ಕಟ್ಟಡ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಜನವರಿ 6 ರಂದು ಜೋ ಬೈಡನ್ ಆಯ್ಕೆ ವಿರೋಧಿಸಿ ಮಾಜಿ ಅಧ್ಯಕ್ಷ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು. ಅದಾದ ಬಳಿಕ ಮತ್ತೆ ಕ್ಯಾಪಿಟಲ್ ಕಟ್ಟಡ ದಾಳಿಗೆ ಒಳಗಾಗಿರುವುದು ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.