ಶುಕ್ರವಾರ, ಏಪ್ರಿಲ್ 10, 2020
19 °C
ಸತತ ಬರ, ಕಡು ಬೇಸಿಗೆಗೆ ತತ್ತರಿಸಿದ್ದ ದ್ರಾಕ್ಷಿ ಬೆಳೆಗಾರರಲ್ಲಿ ಮಂದಹಾಸ

ಕೆರೆಗಳಿಗೆ ನೀರು; ರೈತರು ನಿರಾಳ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಕಾಲುವೆಗಳ ಮೂಲಕ ಜಿಲ್ಲೆಯ ಕೆಲ ಕೆರೆಗಳಿಗೆ ನೀರು ತುಂಬುತ್ತಿದ್ದು; ಕಳೆದ ಏಪ್ರಿಲ್‌ನಲ್ಲಿ ದ್ರಾಕ್ಷಿ ಚಾಟ್ನಿ ನಡೆಸಿದ್ದ, ಕೆರೆ ದಂಡೆಯ ರೈತರು ಇದರಿಂದ ನಿರಾಳರಾಗಿದ್ದಾರೆ.

ದ್ರಾಕ್ಷಿ ಪಡದಲ್ಲಿ ಹಣ್ಣಿನ ಕೊಯ್ಲು ಬಳಿಕ, ಹಳೆಯ ಕಡ್ಡಿಗಳನ್ನು ತೆಗೆಯಲು ಏಪ್ರಿಲ್‌ನಲ್ಲಿ ಚಾಟ್ನಿ ನಡೆಸುವುದು ಕಡ್ಡಾಯ. ಭೀಕರ ಬರ, ಕಡು ಬೇಸಿಗೆಗೆ ತೆರೆದ ಬಾವಿ ಸೇರಿದಂತೆ ಕೊಳವೆಬಾವಿಗಳ ಅಂತರ್ಜಲ ಬಹುತೇಕ ಕಡೆ ಬತ್ತಿತ್ತು. ಇದು ಚಾಟ್ನಿ ನಡೆಸಿದ್ದ ರೈತರನ್ನು ಆತಂಕಕ್ಕೆ ದೂಡಿತ್ತು. ಬೆಳೆ ಉಳಿಸಿಕೊಂಡು, ಮುಂದಿನ ಅಕ್ಟೋಬರ್‌ ಚಾಟ್ನಿಯ ಫಸಲಿನ ಸಿದ್ಧತೆಗಾಗಿ ಬಹುತೇಕರು ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದರು. ಮಳೆ ಸುರಿಯುವ ತನಕವೂ ಬೆಳೆಗೆ ಟ್ಯಾಂಕರ್‌ನಿಂದ ನೀರು ಹಾಕಲು ಸಾಧ್ಯವಿಲ್ಲದ ಹಲವರು ಚಾಟ್ನಿಯಿಂದಲೇ ದೂರ ಸರಿದಿದ್ದರು.

ಇಂತಹ ಹೊತ್ತಲ್ಲಿ ಕೆರೆಗಳನ್ನು ತುಂಬಿದ್ದು, ಸಂಕಷ್ಟದ ಮಡುವಿನಲ್ಲಿ ಸಿಲುಕಿದ್ದ ದ್ರಾಕ್ಷಿ ಬೆಳೆಗಾರರ ನೀರಿನ ಸಮಸ್ಯೆ ಪರಿಹರಿಸಿದಂತಾಗಿದೆ. 

ಹೋದ ಜೀವ ಬಂದಂತಾಯ್ತು...:

‘ಏಪ್ರಿಲ್‌ನಲ್ಲೇ ಚಾಟ್ನಿ ನಡೆಸಿದ್ದೆವು. ಬಾವಿಯೊಳಗಿನ ನೀರು ಬತ್ತಿತ್ತು. ವಿಧಿಯಿಲ್ಲದೇ ಟ್ಯಾಂಕರ್ ಮೊರೆ ಹೋಗಿದ್ದೆವು. ಇಂತಹ ಹೊತ್ತಲ್ಲಿ ವಾರದ ಹಿಂದಷ್ಟೇ ನಮ್ಮೂರ ಕೆರೆಯನ್ನು ತುಂಬಿದ್ದಾರೆ. ಇದರಿಂದ ನಮಗೆ ಹೋದ ಜೀವ ಮರಳಿ ಬಂದಂತಾಗಿದೆ’ ಎಂದು ಬಬಲೇಶ್ವರ ತಾಲ್ಲೂಕಿನ ಉಪ್ಪಲದಿನ್ನಿ ಗ್ರಾಮದ ಸಂಗಪ್ಪ ಮಲ್ಲಪ್ಪ ತುರದನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರ್ಧ ಕೆರೆ ತುಂಬಿದ್ದಕ್ಕೆ ನಮ್ಮೂರಿಗೆ ಒಳ್ಳೆದಾಗೈತಿ. ಬಾವಿ– ಬೋರ್‌ಗಳ ಅಂತರ್ಜಲ ತನ್ನಿಂದತಾನೇ ಹೆಚ್ಚಾಗೈತಿ. ಒಂದ್ ಹದ ಮಳೆ ಬಿದ್ದರೆ ನಮ್ಮ ಬದುಕು ಬಂಗಾರವಾಗ್ತೈತಿ’ ಎಂದ ಉಪ್ಪಲದಿನ್ನಿಯ ನಿಂಗಪ್ಪ ಸಿದ್ದಪ್ಪ ಹಿರೇಕುರುಬರ ಮೊಗದಲ್ಲಿ ಖುಷಿಯಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು