ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Women Reservation: ರಾಜಕೀಯದಲ್ಲಿ ಹೆಣ್ನೋಟ

Published 23 ಸೆಪ್ಟೆಂಬರ್ 2023, 1:56 IST
Last Updated 23 ಸೆಪ್ಟೆಂಬರ್ 2023, 1:56 IST
ಅಕ್ಷರ ಗಾತ್ರ
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನೀಡುವತ್ತ ಮುಂದಡಿ ಇಡಲಾಗಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮೀಸಲಾತಿ ನೀಡಿದ ಗರಿಮೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇದೆ. ಸ್ಥಳೀಯ ಆಡಳಿತದಲ್ಲಿ ಸಾಕಷ್ಟು ಅಡೆತಡೆಗಳಿದ್ದರೂ ಈಗ ನಾಯಕಿಯರ ಒಂದು ದಂಡು ಸಿದ್ಧವಾಗಿದೆ. ತಳಮಟ್ಟದಲ್ಲಿ ನಾಯಕತ್ವ ಗುಣಬೆಳೆಸುವ ಈ ವ್ಯವಸ್ಥೆಯ ಫಸಲು ಕೈಗೆ ಬರುವಾಗಲೇ ಮಹಿಳಾ ಮೀಸಲು ಮಸೂದೆಗೆ ಒಪ್ಪಿಗೆ ಸಿಕ್ಕಿದೆ. 

ನಮ್ಮ ರಾಜ್ಯ ವಿಧಾನ ಸಭೆಯಲ್ಲಿ ನಾಯಕಿಯರ ಸಂಖ್ಯೆ ಈಗಲೂ ಬೆರಳೆಣಿಕೆಗೆ ಸೀಮಿತವಾಗಿದೆ. 70 ಜನರಾದರೂ ಇರಬೇಕಾದ ವ್ಯವಸ್ಥೆಯಲ್ಲಿ ಹತ್ತು ಜನರಿದ್ದಾರೆ. ಕಾನೂನುಗಳು ಧಾರಾಳಿಯಾಗುವಷ್ಟೇ, ವ್ಯವಸ್ಥೆಯೂ ಉದಾತ್ತ ಮನೋಭಾವ ತೋರಬೇಕಿದೆ. ಧಾರಾಳಿಯಾಗಬೇಕಿದೆ. ಆಡಳಿತದಲ್ಲಿ ಹೆಣ್ನೋಟವಿದ್ದಲ್ಲಿ, ಹೆಂಗರುಳಿದ್ದಲ್ಲಿ ಕಲ್ಯಾಣವೆಂಬುದು, ಸ್ವರಾಜ್ಯದ ಇನ್ನೊಂದು ಹೆಸರಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ ಮೂರು ರಾಜಕೀಯ ಪಕ್ಷಗಳ ನಾಯಕಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಪ್ರಭಾವ ಮತ್ತು ಪರಿಣಾಮ ಕುರಿತು ಸಾಮಾಜಿಕ ಚಳವಳಿಯಲ್ಲಿ ತೊಡಗಿರುವ ರೂಪಾ ಹಾಸನ ವಿಶ್ಲೇಷಿಸಿದ್ದಾರೆ.

ಇದು ಪ್ರಾರಂಭಿಕ ಗೆಲುವು. 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಅನುಭವ ಮಂಟಪ ಇತ್ತು ಇವತ್ತಿನ ಸಂಸತ್ತಿನ ಹಾಗೆ. ಅಲ್ಲಿ ದಾರ್ಶನಿಕ ವಿಚಾರಗಳ ಜತೆ ಸಾಮಾಜಿಕ ವಿಚಾರಗಳನ್ನೂ ಚರ್ಚೆ ಮಾಡಲಾಗುತ್ತಿತ್ತು. ಶರಣರಷ್ಟೆ ಸಶಕ್ತವಾಗಿ ಶರಣೆಯರು ಮಾತನಾಡುತ್ತಿದ್ದರು. 12ನೇ ಶತಮಾನದಲ್ಲಿದ್ದ ಜಾಗೃತಿ ಕ್ರಮೇಣ ಎಲ್ಲಿಗೆ ಹೋಯಿತು.  50 ವರ್ಷಗಳ ಹಿಂದೆ ಮಹಿಳೆಯನ್ನು ಪ್ರಧಾನಿಯಾಗಿ ಸ್ವೀಕರಿಸಿದೆ. ಇಬ್ಬರು ರಾಷ್ಟ್ರಪತಿಗಳನ್ನೂ ದೇಶ ನೋಡಿದೆ. ಸದ್ಯ ಪಕ್ಷಾತೀತವಾಗಿ ಈ ಮಸೂದೆಗೆ ಬೆಂಬಲ ಸಿಕ್ಕಿದೆ.  

1992ರಲ್ಲಿ ಪಂಚಾಯತ್‌ರಾಜ್‌ ಮಟ್ಟದಲ್ಲಿ ಶೇ 33ರಷ್ಟು ಮೀಸಲಾತಿ ಬಂತು. ಇದನ್ನು ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲಾಯಿತು. ಪರಿಣಾಮ ಪಂಚಾಯತ್‌ ಮಟ್ಟದಲ್ಲಿ ಸಶಕ್ತವಾಗಿ ಆಡಳಿತ ನಡೆಸುವ ಹಲವು ಮಹಿಳೆಯರು ನಮ್ಮ ನಡುವೆ ಇದ್ದಾರೆ. ಏನೇ ತೊಡಕುಗಳಿದ್ದರೂ ಕ್ರಮೇಣ ಅವೆಲ್ಲವೂ ಬಗೆಹರಿಯುತ್ತವೆ.  

ಮೀಸಲಾತಿ ಅನುಷ್ಠಾನದ ನಂತರ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಷ್ಟು ನಮ್ಮ ಸಮಾಜ ಸಶಕ್ತವಾಗಿದೆ.  ಚಂದ್ರಯಾನ ಯೋಜನೆಯಲ್ಲಿ ಪಾಲ್ಗೊಳ್ಳುವಷ್ಟು ಧೀಃಶಕ್ತಿ ಪಡೆದುಕೊಂಡ ಮಹಿಳೆಯರಿಗೆ ದೆಹಲಿ, ವಿಧಾನಸಭೆಯನ್ನು ತಲುಪವುದೇನೂ ಕಷ್ಟವಲ್ಲ. ಮಾನಸಿಕವಾಗಿ ಸಿದ್ಧರಾಗಬೇಕಿದೆ. 

 – ಮಾಳವಿಕಾ ಅವಿನಾಶ್, ನಟಿ 

ಮಹಿಳಾ ಮೀಸಲಾತಿ  ಎಲ್ಲರ ಕನಸು.  ಸಾಕಾರಕ್ಕೆ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ. ಇಷ್ಟು ವರ್ಷ ನನೆಗುದಿಗೆ ಬಿದ್ದಿದ್ದು ಈಗಲಾದರೂ ಒಂದು ಹಂತದಲ್ಲಿ ಒಪ್ಪಿಗೆ ಸಿಕ್ಕಿರುವುದಕ್ಕೆ ಸಂತೋಷವಿದೆ. ಜತೆಗೆ ಆತಂಕವೂ ಇದೆ. ತರಾತುರಿಯಲ್ಲಿ ಏನೋ ಒಂದು ಮಾಡಿದಂತಾಗಬಾರದು. ಇದರ ಅನುಷ್ಠಾನ ವಿಳಂಬವಾಗಲಿದೆ ಎನ್ನುವುದನ್ನೂ ಗಮನಿಸಬೇಕು. 

ಮಸೂದೆಗೆ ಒಪ್ಪಿಗೆ ಸಿಕ್ಕಷ್ಟೆ ಕ್ಷಿಪ್ರವಾಗಿ ಜಾರಿಗೆ ಬೇಕಾದ ತಯಾರಿ ಮಾಡಿಕೊಳ್ಳುವುದು ಕಷ್ಟವಲ್ಲ. ಮೊದಲಿಗೆ ಜನಗಣತಿ ಕಾರ್ಯ ಆರಂಭವಾಗಬೇಕು. ಜನಗಣತಿ 2021ರಲ್ಲಿ ಆಗಬೇಕಿತ್ತು. ಮುಂಬರುವ ಚುನಾವಣೆಗೆ ಮುಂಚಿತವಾಗಿಯಾದರೂ ಜನಗಣತಿ ಆಗಬೇಕು. ಜನಗಣತಿಯ ಜತೆಗೆ ದೇಶದಾದ್ಯಂತ ಜಾತಿ ಜನಗಣತಿಯೂ ಆಗಬೇಕು. ಆಗ ಒಂದು ಸ್ಪಷ್ಟವಾದ ರೂಪ ಸಿಗುತ್ತದೆ. ಒಳಮೀಸಲಾತಿಯೂ ಇದೇ ಸಂದರ್ಭದಲ್ಲಿ ನಿರ್ಧಾರವಾಗಬೇಕು.

ಹಿಂದುಳಿದ ಜಾತಿ, ವರ್ಗಗಳು, ಅಲ್ಪಸಂಖ್ಯಾತರು, ತಳಸಮುದಾಯದ ಹೆಣ್ಣುಮಕ್ಕಳಿಗೂ ಅವಕಾಶ ಸಿಗಬೇಕು. ಇಲ್ಲವಾದರೆ ಮತ್ತೆ ಅವಕಾಶಗಳೆಲ್ಲವೂ ಮೇಲ್ವರ್ಗದವರ ಪಾಲಾಗುತ್ತದೆ.  ಹಣ, ಅಧಿಕಾರ, ಜಾತಿ ಮೇಲಾಟಗಳ ನಡುವೆ ತಳ ಸಮುದಾಯದ ಹೆಣ್ಣುಮಕ್ಕಳು ನುಗ್ಗಿ ಮೀಸಲಾತಿ ಪಡೆಯಲು ಸಾಧ್ಯವೆ? ಒಳಮೀಸಲಾತಿ ಬೇಕು. ಒಪ್ಪಿಗೆ ಸಿಕ್ಕ ಮಸೂದೆಯಲ್ಲಿ ಈ ವಿಚಾರ ಸ್ಪಷ್ಟವಾಗಿಲ್ಲ. ಜಾತಿ ಜನಗಣತಿಯ ಆಧಾರದ ಮೇಲೆ ಯಾವ ವರ್ಗಕ್ಕೆ ಎಷ್ಟು ಮೀಸಲಾತಿ ನೀಡಬೇಕು ಎನ್ನುವುದರ ಕಲ್ಪನೆ ಸಿಗುತ್ತದೆ. 

ಈಗ ಮಹಿಳಾ ಸಂಘಟನೆ ಹಾಗೂ ರಾಜಕೀಯ ಪಕ್ಷಗಳ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮೀಸಲಾತಿ ಅನುಷ್ಠಾನಗೊಳ್ಳುವ ಪ್ರಕ್ರಿಯೆಯ ಜತೆಯಲ್ಲಿಯೇ ರಾಜಕೀಯವಾಗಿ ಹೆಣ್ಣಮಕ್ಕಳನ್ನು ಇನ್ನಷ್ಟು ಜಾಗೃತಗೊಳಿಸುವ ಕೆಲಸ ಮಾಡಬೇಕಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಾಮರ್ಥ್ಯ ಬೆಳೆಸುವ ಹಾಗೂ ಹೆಣ್ಣುಮಕ್ಕಳನ್ನು ಒಳಗೊಳ್ಳುವ ಕೆಲಸ ಆಗಬೇಕು. 

ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ರಾಜಕೀಯಕ್ಕೆ ಬಂದರೆ ಇಡೀ ವ್ಯವಸ್ಥೆ ಬದಲಾಗುವುದರಲ್ಲಿ ಎರಡು ಮಾತಿಲ್ಲ. ಸೂಕ್ಷ್ಮ ಹಾಗೂ ಸಂವೇದನಾಶೀಲ ಆಲೋಚನೆಗಳಿಂದ ಹೆಣ್ಣುಮಕ್ಕಳು ಹೊಸ ಆಡಳಿತ ತರುತ್ತಾರೆ ಎಂಬ ಭರವಸೆಯಂತೂ ಇದೆ. 

– ರೂಪಾ ಹಾಸನ, ಸಾಮಾಜಿಕ ಹೋರಾಟಗಾರ್ತಿ

ಇದೊಂದು ಕಾಂತ್ರಿಕಾರಿ ಮಸೂದೆ. ಇಡೀ ದೇಶದ ಮಹಿಳೆಯರ ಜೀವನದಲ್ಲಿ ಹೊಸ ಬದಲಾವಣೆ ತರುತ್ತದೆ. ಶಾಸನ ಸಭೆಗಳಲ್ಲಿ ಹೆಚ್ಚು ಮಹಿಳೆಯರು ಇದ್ದಾಗ, ಸಂವೇದನಾಶೀಲ ಕಾನೂನುಗಳು ಅನುಷ್ಠಾನಗೊಳ್ಳುತ್ತವೆ. ಮಹಿಳೆಯರ ಬದುಕು ಮತ್ತಷ್ಟು ಸುಗಮವಾಗುತ್ತದೆ. ಆದರೆ, ಇದು  ಅನುಷ್ಠಾನವಾಗಬೇಕಾದರೆ ಇನ್ನಷ್ಟು ವರ್ಷ ಬೇಕಾಗುತ್ತದೆ.   

ಜನಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಶೇ 48ರಿಂದ 50ರಷ್ಟು ಇದ್ದೇವೆ. ಕೊಡುತ್ತಿರುವುದು ಶೇ 33ರಷ್ಟು ಮೀಸಲಾತಿ. ಜನಗಣತಿಯ ಕಾರ್ಯ ಆಗಬೇಕಿಲ್ಲ. ಈಗಿನಿಂದಲೇ ಇದರ ಜಾರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಮಸೂದೆ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂಥ ಧೋರಣೆಯಿಂದ ಜಾರಿಯಾಗಬೇಕಿಲ್ಲ. ಇದೊಂದು ಚುನಾವಣೆ ಗೆಲ್ಲುವ ಗಿಮಿಕ್‌ ಆಗಬಾರದು. 

ನೆಪಮಾತ್ರಕ್ಕೆ ಮಹಿಳೆಯರಿಗೆ ಅಧಿಕಾರ ಎನ್ನುವ ಧೋರಣೆ ಖಂಡಿತಾ ಬದಲಾಗಲಿದೆ. ಹೆಣ್ಣುಮಕ್ಕಳ ವಿರುದ್ಧ ಹೆಣ್ಣುಮಕ್ಕಳೇ ಸ್ಪರ್ಧೆಗೆ ಇಳಿಯುವುದರಿಂದ ಚುನಾವಣಾ ಕಣದಲ್ಲಿ ಸಕ್ರಿಯವಾಗಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದನ್ನು ಮಹಿಳೆಯರು ಕಲಿಯುತ್ತಾರೆ. ರಾಜಕೀಯ ಸಬಲತೆ ಇನ್ನಷ್ಟು ಹೆಚ್ಚುತ್ತದೆ. ಬೂತ್‌ ಮಟ್ಟದಲ್ಲಿ ಮಹಿಳಾ ನಾಯಕತ್ವಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಕೆಲಸವನ್ನು ಎಲ್ಲ ಪಕ್ಷಗಳು ಮಾಡಬೇಕು. 

  – ಭವ್ಯ ನರಸಿಂಹಮೂರ್ತಿ, ಕಾಂಗ್ರೆಸ್‌ ವಕ್ತಾರೆ

ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಕ್ರಿಯವಾಗಿರುವಾಗ ಈಗಲಾದರೂ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಸಿಗಲು ಒಪ್ಪಿಗೆ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಹೆಚ್ಚು ಹೆಚ್ಚು ಹೆಣ್ಣುಮಕ್ಕಳು ಶಾಸನಸಭೆಗಳಲ್ಲಿದ್ದಷ್ಟು ದೇಶ ಉನ್ನತಿಗೆ ಹೋಗುತ್ತದೆ. ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರೋತ್ಸಾಹ ಸಿಗಲು ಈ ಮೀಸಲಾತಿ ನೆರವಾಗುತ್ತದೆ.

1994ರಲ್ಲಿ ದೇವೇಗೌಡರು ಮೊದಲು ಮೀಸಲಾತಿಯನ್ನು ಘೋಷಿಸಿದ್ದರು. ಅವರ ದೂರದೃಷ್ಟಿತ್ವದಿಂದಲೇ ಈಗ ಪಂಚಾಯ್ತಿಗಳಲ್ಲಿ ಮಹಿಳೆಯರು ಧೈರ್ಯದಿಂದ ಮಾತಾಡುವಂತೆ, ಆಡಳಿತ ನಡೆಸುವಂತೆ, ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಂತಾಗಿದೆ. ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರು ತಮಗಾಗಿ ಸ್ಥಾನ ಮಾಡಿಕೊಳ್ಳಲು ಸಾಧ್ಯವಾಗಿದ್ದು ಈ ಮೀಸಲಾತಿಯಿಂದ ಎಂಬುದನ್ನು ಮರೆಯಲು ಸಾಧ್ಯವಿಲ್ಲ. 

ಮಹಿಳಾ ಮೀಸಲಾತಿ ಜಾರಿಯಾದರೆ, ಭಾರತೀಯ ಆಡಳಿತದಲ್ಲಿ ಹೊಸದೊಂದು ಅಲೆ ಸೃಷ್ಟಿಯಾಗುತ್ತದೆ. ಈಗಲೂ ಪುರುಷ ಪಾರಮ್ಯ ಇರುವ ರಾಜಕಾರಣದಲ್ಲಿ ಈ ಮೀಸಲಾತಿ ನವೀನ ಅಧ್ಯಾಯವನ್ನೇ ತೆರೆಯಲಿದೆ. ಮತ್ತದು, ಪ್ರಗತಿಯದ್ದೇ ಆಗಿರುತ್ತದೆ.   

– ಪ್ರಶಾಂತಿ, ಜೆಡಿಎಸ್‌ ವಕ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT