ಮಂಗಳವಾರ, ಜನವರಿ 28, 2020
27 °C

ಸೌಂದರ್ಯವರ್ಧಕ ಬಳಸುವ ಮುನ್ನ..

ಸಂಜು Updated:

ಅಕ್ಷರ ಗಾತ್ರ : | |

Prajavani

ಸೌಂದರ್ಯ ಕ್ಷೇತ್ರ ಎನ್ನುವುದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಸೌಂದರ್ಯವರ್ಧಕಗಳನ್ನು ಬಳಸಿದ ನಂತರ ನಮ್ಮ ಅಂದ ಹೆಚ್ಚುತ್ತದೆ. ಆದರೆ ಈ ವರ್ಧಕಗಳಲ್ಲಿ ಎಷ್ಟು ರಾಸಾಯನಿಕಗಳನ್ನು ಬೆರೆಸುತ್ತಾರೆ ಎಂಬುದನ್ನು ತಿಳಿದು ಹಚ್ಚಬೇಕು. ಅವುಗಳು ಚರ್ಮಕ್ಕೆ ಹಾನಿಯುಂಟು ಮಾಡುವುದರ ಜತೆಗೆ ಸಹಜ ಸೌಂದರ್ಯಕ್ಕೂ ಕೆಡುಕು ಮಾಡುತ್ತವೆ.

ರಾಸಾಯನಿಕ ರಹಿತ ಕ್ರೀಮ್‌ ಯಾಕೆ ಮುಖ್ಯ?
ರಾಸಾಯನಿಕ ಅಂಶವನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್‌ಗಳಲ್ಲಿ ಹುಡುಕುವುದು ಸುಲಭವಲ್ಲ. ಅದರಲ್ಲೂ ಪರಿಮಳಯುಕ್ತ ಸೌಂದರ್ಯ ವರ್ಧಕಗಳಲ್ಲಿ ಯಾವುದು ವಿಷಮುಕ್ತ ಎಂದು ತಿಳಿಯುವುದು ತುಂಬಾ ಕಷ್ಟ. ಹೆಚ್ಚು ಪರಿಮಳ ಬೀರುವ ಹಾಗೂ ಹಲವಾರು ಪದಾರ್ಥಗಳನ್ನು ಒಳಗೊಂಡಿರುವ ಕ್ರೀಮ್‌ಗಳು ಚರ್ಮಕ್ಕೆ ಹಾನಿ ಉಂಟುಮಾಡುತ್ತವೆ, ಅದಲ್ಲದೆ ಮುಖದ ತ್ವಚೆ ದೊರಗಾಗಬಹುದು, ಕಪ್ಪು ಕಲೆ, ಮೊಡವೆ, ಬಿಳಿ ತದ್ದು ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಶುದ್ಧ ಕ್ರೀಮ್‌ ಬಳಸುವುದು ಬಹಳ ಮುಖ್ಯ.

ರಾಸಾಯನಿಕ ಮುಕ್ತವೆಂದು ಖಚಿತಪಡಿಸಿಕೊಳ್ಳುವುದು ಹೇಗೆ?
ಯಾವ ಕ್ರೀಮ್‌ಗಳಲ್ಲಿ ಯಾವ ರಾಸಾಯನಿಕ ಅಂಶವಿದೆ ಎಂದು ಮೊದಲು ತಿಳಿಯಬೇಕು. ಅವುಗಳನ್ನು ತಯಾರಿಸುವ ಕಂಪನಿಗಳು ಉತ್ಪನ್ನಗಳ ಪ್ಯಾಕ್‌ ಮೇಲೆ ಯಾವ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದೆ ಎಂದು ನಮೂದಿಸಿರುತ್ತಾರೆ. ಅವುಗಳಲ್ಲಿ ಯಾವುದು ವಿಷಕಾರಿ, ಯಾವುದು ಅಲ್ಲ ಎಂಬುದು ನಿಮಗೆ ಅರಿವಿದ್ದರೆ ವಿಷಕಾರಿ ಕ್ರೀಮ್ ಎಂದು ಗುರುತಿಸಬಹುದು. ಕ್ರೀಮ್‌ಗಳು ಯಾವ ಸುವಾಸನೆ ಬೀರುತ್ತವೆ, ಅದಕ್ಕೆ ಏನನ್ನು ಬೆರೆಸಲಾಗುತ್ತದೆ., ಪರಿಮಳ ಬೀರಲು ಯಾವ ಪದಾರ್ಥಗಳನ್ನು ಬಳಸಲಾಗುತ್ತದೆ ಹೀಗೆ ಅವುಗಳ ಬಗ್ಗೆ ಮಾಹಿತಿ ತಿಳಿಯುವ ಮೂಲಕ ಯಾವುದು ವಿಷ ಕ್ರೀಮ್‌, ಯಾವುದು ರಾಸಾಯನಿಕ ರಹಿತ ಕ್ರೀಮ್‌ ಎಂದು ಗುರುತಿಸಬಹುದು.

ಥಾಲೇಟ್‌
ಡೈಬುಟೈಲ್ ಥಾಲೇಟ್, ಡೈಇಥೈಲ್ ಥಾಲೇಟ್ ಹಾಗೂ ಬಿಸ್ಫೆನಾಲ್‌ನಂತಹ ಥಾಲೇಟ್‌ ಅಂಶಗಳು ವಾತಾವರಣ ಹಾಗೂ ಮನುಷ್ಯನ ದೇಹಕ್ಕೆ ವಿಷಕಾರಿ. ಇದನ್ನು ಹಲವು ಸೌಂದರ್ಯವರ್ಧಕಗಳಲ್ಲಿ ಬಳಸುತ್ತಾರೆ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಯೂರೋಪ್‌ನಲ್ಲಿ ಸೌಂದರ್ಯವರ್ಧಕಗಳಲ್ಲಿ ಥಾಲೇಟ್ ಬಳಕೆಯನ್ನು ನಿಷೇಧಿಸಲಾಗಿದೆ. 

ಸುಗಂಧ
ಚರ್ಮಕ್ಕೆ ಅಲರ್ಜಿಯನ್ನು ಉಂಟುಮಾಡುವಲ್ಲಿ ಸೌಂದರ್ಯವರ್ಧಕದಲ್ಲಿರುವ ಸುಗಂಧವೂ ಕೂಡ ಕಾರಣ. ಥಾಲೇಟ್‌ ಅಂಶವುಳ್ಳ ಸುಗಂಧಯುಕ್ತ ದ್ರವ್ಯಗಳು ಹಾಗೂ ಕ್ರೀಮ್‌ಗಳು ಚರ್ಮಕ್ಕೆ ಹಾನಿ ಉಂಟು ಮಾಡುತ್ತವೆ.

ಟ್ರೈಕ್ಲೋಸನ್‌
ಟೂತ್‌ಪೇಸ್ಟ್, ಸೋಪ್‌ ಹಾಗೂ ಡಿಯೊಡರೆಂಟ್‌ಗಳಲ್ಲಿ ಬಳಸುವ ಸೂಕ್ಷ್ಮಾಣು ನಿರೋಧಕ ಹಾಗೂ ಪ್ರಿಸರ್ವೇಟಿವ್‌ ಆಗಿ ಬಳಸುವ ಟ್ರೈಕ್ಲೋಸನ್ ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವರಿಗೆ ಅಲರ್ಜಿ ಲಕ್ಷಣ ತಲೆದೋರಬಹುದು. 

ಫಾರ್ಮಾಲ್ಡಿಹೈಡ್ 
ನೈಲ್‌ ಪಾಲಿಶ್‌ ಹಾಗೂ ಕೂದಲಿಗೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಫಾರ್ಮಾಲ್ಡಿಹೈಡ್‌ ಇರುವುದರಿಂದ ಇದು ಚರ್ಮ ಹಾಗೂ ಕಣ್ಣುಗಳಿಗೆ ಕಿರಿಕಿರಿ ಉಂಟು ಮಾಡುವುದಲ್ಲದೆ  ಕ್ಯಾನ್ಸರ್‌ಗೆ ಕೂಡ ಕಾರಣವಾಗಬಹುದು. 

ಪ್ಯಾರಾಬೆನ್ಸ್
ಉತ್ಪನ್ನಗಳು ಸುರಕ್ಷಿತವಾಗಿ ಹೆಚ್ಚು ದಿನಗಳ ಕಾಲ ಬಾಳಿಕೆ ಬರಬೇಕು ಎಂಬ ಕಾರಣಕ್ಕೆ ಪ್ಯಾರಾಬೆನ್ಸ್‌ಗಳನ್ನು ಬಳಸಲಾಗುತ್ತದೆ. ಆದರೆ ಈ ಪ್ಯಾರಾಬೆನ್ಸ್‌ ಚರ್ಮದ ಒಳಗೆ ಸೇರಿ ಕೆರೆತ ಉಂಟು ಮಾಡುವುದಲ್ಲದೇ ಸ್ತನ ಕ್ಯಾನ್ಸರ್‌‌ಗೂ ಕಾರಣವಾಗಬಹುದು.

ಬಿಎಚ್‌ಎ
ಲಿಪ್‌ಸ್ಟಿಕ್‌ ಹಾಗೂ ಮಾಯಿಶ್ಚರೈಸರ್‌ಗಳಂತಹ ಸೌಂದರ್ಯವರ್ಧಕಗಳಲ್ಲಿ ಬಿಎಚ್‌ಎ (ಬ್ಯುಟಿಲೇಟೆಡ್ ಹೈಡ್ರಾಕ್ಸಿಅನಿಸೋಲ್‌) ಅನ್ನು ಬಳಸುವುದರಿಂದ ಇದು ಚರ್ಮದ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಪಿತ್ತಜನಕಾಂಗದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಸೋಡಿಯಂ ಲಾರೆತ್ ಸಲ್ಫೇಟ್
ಇದು ಚರ್ಮದ ಸೋಂಕುಗಳಿಗೆ ಕಾರಣವಾಗುತ್ತದೆ ಹಾಗೂ ತ್ವಚೆಗೆ ಹಾನಿ ಉಂಟು ಮಾಡುತ್ತದೆ. ಆ ಕಾರಣಕ್ಕೆ ಈ ಅಂಶವಿರುವ ಸೌಂದರ್ಯವರ್ಧಕಗಳನ್ನು ಬಳಸುವುದು ಒಳಿತಲ್ಲ.  

ಪಿಇಜಿ ( ಪಾಲಿಥೀನ್‌ ಗ್ಲೈಕೋಲ್ಸ್‌) 
ಪಿಇಜಿಯನ್ನು ತ್ವಚೆಯಲ್ಲಿ ತೇವಾಂಶ ಉಳಿಸುವ ಕೆನೆ ಆಧಾರಿತ ಉತ್ಪನ್ನಗಳಲ್ಲಿ ಬಳಸಲಾಗುವುದು. ಇದು ದೇಹಕ್ಕೆ ವಿಷಕಾರಿ ಅಂಶವಾಗಿದ್ದು ಕ್ಯಾ‌ನ್ಸರ್‌ ಮತ್ತು ನರಗಳಿಗೆ ಹಾನಿ ಉಂಟು ಮಾಡುತ್ತದೆ.

ಫಿನಾಕ್ಸಿಥೆನಾಲ್
ಇದು ಚರ್ಮದ ಒಳಗೆ ಸೇರಿ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದಲ್ಲದೇ ನರ ಹಾಗೂ ಮೂತ್ರಪಿಂಡಕ್ಕೆ ಹಾನಿ ಉಂಟುಮಾಡುತ್ತದೆ.

ಆಕ್ಸಿಬೆಂಝೋನ್ ‌
ಇದನ್ನು ಸೂರ್ಯನ ಕಿರಣಗಳಿಂದ ಚರ್ಮವನ್ನು ರಕ್ಷಿಸುವ ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ. ಇದು ಚರ್ಮಕ್ಕೆ ಹಾಗೂ ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಪೂರಕ ಮಾಹಿತಿ: ಡಾ. ಎಚ್‌. ಎನ್‌. ಸರಸ್ವತಿ, ಚರ್ಮ ಹಾಗೂ ಕೇಶ ವೈದ್ಯೆ

ಪ್ರತಿಕ್ರಿಯಿಸಿ (+)