ಬುಧವಾರ, ಆಗಸ್ಟ್ 10, 2022
25 °C

ಹಾಯಿದೋಣಿ | ಮಾತು–ಮೌನ ಬೆರೆತ ಕ್ಷಣ

ಸುಬೋಧ್‌, ಲಕ್ಷ್ಮಿ ಶಂಕರ್‌ Updated:

ಅಕ್ಷರ ಗಾತ್ರ : | |

prajavani

ನಾನು ಮತ್ತು ಲಕ್ಷ್ಮಿ ಸಂಪೂರ್ಣ ಭಿನ್ನ ವ್ಯಕ್ತಿತ್ವದವರು. ಆಕೆ ಮೌನಿ, ನಾನು ಮಾತಿನಮಲ್ಲ. ನಾನು ಮಾಂಸಾಹಾರಿ, ಆಕೆ ಮಾಂಸವನ್ನು ಮುಟ್ಟುವುದೂ ಇಲ್ಲ. ಹೊರಗಡೆಯ ಆಹಾರ ನನಗೆ ಇಷ್ಟ, ಆಕೆ ಮನೆಯಲ್ಲೇ ತಯಾರಿಸಿದ ಆಹಾರಕ್ಕೆ ಕಟ್ಟುಬೀಳುವವಳು.

ನನಗಾಗ 27ರ ಹರೆಯ, ಆಗಷ್ಟೇ ಅಮೆರಿಕದಿಂದ ವಾಪಸಾಗಿದ್ದೆ. ಮದುವೆಯಾಗಿ ಸಾಂಸಾರಿಕ ಜೀವನ ಆರಂಭಿಸುವಂತೆ ಅಪ್ಪ– ಅಮ್ಮ ಒತ್ತಾಯಿಸುತ್ತಿದ್ದರು. ‘ನೀವು ತೋರಿಸುವ ಮೊದಲ ಹುಡುಗಿಯನ್ನೇ ಮದುವೆಯಾಗುತ್ತೇನೆ’ ಎಂದು ಅವರಿಗೆ ಹೇಳಿದ್ದೆ. ‘ಮೊದಲು ನೋಡಿದ ಹುಡುಗಿಯನ್ನು ವರಿಸಲಾಗಲಿಲ್ಲ. ತನ್ನನ್ನು ನಿರಾಕರಿಸುವಂತೆ ಆಕೆ ನನ್ನಲ್ಲಿ ಮನವಿ ಮಾಡಿದ್ದಳು. ನಾನು ನೋಡಿದ ಎರಡನೇ ಹುಡುಗಿಯೇ ಲಕ್ಷ್ಮಿ’.

ನಾನು ವಾಚಾಳಿ, ಆದರೂ ಮೊದಲ ಭೇಟಿಯಲ್ಲಿ ಮಾತನಾಡುವ ಅವಕಾಶವನ್ನು ಲಕ್ಷ್ಮಿಗೆ ನೀಡಿದೆ. 30 ನಿಮಿಷದ ಮಾತುಕತೆ ಬಳಿಕ ನನ್ನ ಪತ್ನಿಯಾಗುವವಳು ಈಕೆಯೇ ಎಂದು ನಿರ್ಧರಿಸಿದೆ. ಇದು 21 ವರ್ಷಗಳ ಹಿಂದಿನ ಕತೆ.

ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಲಕ್ಷ್ಮಿ, ತಾಯಿಯ ಆರೈಕೆಯಲ್ಲಿ ಬೆಳೆದವಳು. ನಮ್ಮದೋ, ಕೂಡು ಕುಟುಂಬ, ನಾನು ಹಿರಿಯ ಮಗ. ಮದುವೆಯಾಗಿ ಮನೆಗೆ ಬಂದಾಗ ಎಲ್ಲರ ಗಮನವೂ ಆಕೆಯ ಮೇಲೆ ಇದ್ದುದರಿಂದ ಸ್ವಲ್ಪ ಒತ್ತಡಕ್ಕೆ ಒಳಗಾದಳು. ಒಂದೆರಡು ಪದಗಳಲ್ಲಿ ಮಾತು ಮುಗಿಸುವ ಆಕೆಯ ಜತೆ ಹೊಂದಾಣಿಕೆ ಮೊದಲಿಗೆ ನನಗೂ ಕಷ್ಟವಾಗಿತ್ತು. ಬರಬರುತ್ತಾ ನಾವು ಹಾಲು–ಜೇನಿನಂತೆ ಹೊಂದಿಕೊಂಡೆವು.

ಮದುವೆಯಾದಾಗ ನಾನು ನವೋದ್ಯಮವೊಂದರಲ್ಲಿ ದುಡಿಯುತ್ತಿದ್ದೆ. ಮುಂದೆ, ಅಂಥದ್ದೇ ಒಂದೆರಡು ಕಂಪನಿಗಳಲ್ಲಿ ದುಡಿದೆ. ನಮ್ಮದು ಒಂದುರೀತಿ ವಲಸಿಗರಂಥ ಸ್ಥಿತಿಯಾಗಿತ್ತು. ಸಿಂಗಪುರ ಬಿಟ್ಟ ಬಳಿಕ ಬೆಂಗಳೂರಿಗೆ ಬಂದೆವು. ಬಿಡುವಿನ ವೇಳೆಯಲ್ಲಿ ನಾನು ಗಾಲ್ಫ್‌ ಆಡುತ್ತಿದ್ದೆ. ‘ಸಮಯ ವ್ಯರ್ಥ ಮಾಡಬೇಡಿ. ಮನೆಯಲ್ಲೇ ಸಾಕಷ್ಟು ಜಾಗವಿದೆ, ಇಲ್ಲೇ ಒಂದು ಪುಸ್ತಕದ ಅಂಗಡಿ ಆರಂಭಿಸೋಣ’ ಎಂದು ಲಕ್ಷ್ಮಿ ಸಲಹೆ ನೀಡಿದಳು. 

2011ರಲ್ಲಿ ಈ ವಿಚಾರ ಕುರಿತು ಗಂಭೀರವಾಗಿ ಚಿಂತಿಸಿದೆವು. ಏಪ್ರಿಲ್‌ 1ರಂದು ನಮ್ಮ ಅಂಗಡಿ ‘ಅಟ್ಟ ಗಲಾಟ್ಟ’ ಆರಂಭವಾಯಿತು. ಡಿಜಿಟಲ್‌ ಜಮಾನಾದಲ್ಲಿ ನಾವು ಪುಸ್ತಕದಂಗಡಿ ತೆರೆದದ್ದು ಜನರಿಗೆ ತಮಾಷೆಯಾಗಿ ಕಂಡಿತ್ತು. ನಮ್ಮದು ಬರಿಯ ಪುಸ್ತಕದ ಅಂಗಡಿಯಾಗಬಾರದು, ಬದಲಿಗೆ ಅದು ಸಾಂಸ್ಕೃತಿಕ ಕೇಂದ್ರವಾಗಬೇಕು ಎಂಬುದು ನಮ್ಮ ಕನಸಾಗಿತ್ತು.

ಏಳು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದೆ. 2000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಕೆಲವು ಕಾರ್ಯಕ್ರಮಗಳಿಗೆ ಲೇಖಕರು ಬರಲಿಲ್ಲ, ಕೆಲವಕ್ಕೆ ಪ್ರೇಕ್ಷಕರೇ ಇರಲಿಲ್ಲ. ಒಂದು ಕಾರ್ಯಕ್ರಮಕ್ಕೆ ವಿದ್ಯುತ್‌ ಕೈಕೊಟ್ಟಿತ್ತು. ಮೇಣದ ಬತ್ತಿಯ ಬೆಳಕಿನಲ್ಲಿ ನಾವು ಕಾವ್ಯವಾಚನ ಗೋಷ್ಠಿಯೊಂದನ್ನು ಆಯೋಜಿಸಿದ್ದೆವು. ಪ್ರತಿ ಕಾರ್ಯಕ್ರಮವೂ ನೆನಪಿನಲ್ಲಿ ಉಳಿಯುವಂಥದ್ದು. ನವೋದ್ಯಮಗಳ ನನ್ನ ಯಾತ್ರೆಯಲ್ಲಿ ಬೆಂಬಲಕ್ಕೆ ಲಕ್ಷ್ಮಿ ಇದ್ದಳು. ಪುಸ್ತಕದ ಅಂಗಡಿ ಆರಂಭಿಸಬೇಕೆಂಬ ಬಯಕೆಯನ್ನು ಆಕೆ ವ್ಯಕ್ತಪಡಿಸಿದಾಗ ನಾನು ಬೆಂಬಲಕ್ಕೆ ನಿಂತೆ. ಸಂಬಂಧವೆಂದರೆ ಪರಸ್ಪರರ ಯಶಸ್ಸಿನಲ್ಲಿ ಭಾಗಿಯಾಗುವುದಷ್ಟೇ ಅಲ್ಲ, ಪರಸ್ಪರರ ಜೀವನದ ಭಾಗವಾಗುವುದೂ ಆಗಿದೆ.

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌: beingyou17@gmail.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.