ಕೊಚ್ಚಿ ಹೋದ ಚಂದ!

7

ಕೊಚ್ಚಿ ಹೋದ ಚಂದ!

Published:
Updated:

ಅಧಿಕಾರದಲ್ಲಿ ಇರುವಾಗ ಎಲ್ಲವೂ ಚಂದ! ಅದೇ ಅಧಿಕಾರ ಕೈತಪ್ಪಿದರೆ? ಜನ ಆಳಿಗೊಂದು ಕಲ್ಲೆಸೆಯುತ್ತಾರೆ. ಕೀರ್ತಿಶಿಖರದ ಮೇಲಿರುವಾಗ ಜನ ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಆದರೆ ಕೆಳಕ್ಕೆ ಬಿದ್ದಾಗ ಅದೇ ಜನ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈಯುತ್ತಾರೆ. ದೇಶದ ಮುಂಚೂಣಿಯ ಖಾಸಗಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ನ ಸಿಇಓ ಚಂದಾ ಕೊಚ್ಚಾರ್‌ ಅವರದ್ದೂ ಈಗ ಇದೇ ಸ್ಥಿತಿ. 

ಐಸಿಐಸಿಐ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಣಾಧಿಕಾರಿ (ಸಿಇಓ) ಹುದ್ದೆಯನ್ನು ಚಂದಾ ಕೊಚ್ಚಾರ್‌, ವೃತ್ತಿ ಬದುಕಿನ ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಅಲಂಕರಿಸಿದ್ದು ದೊಡ್ಡ ಸಾಧನೆಯೇ. ಕೇವಲ 48ರ ಹರೆಯದಲ್ಲೇ ಭಾರತೀಯ ಮಹಿಳೆಯೊಬ್ಬರು ಈ ದಾಖಲೆ ಮಾಡಿದರಲ್ಲ.. ಎಂದು ಭಾರತೀಯರೂ ಹೆಮ್ಮೆ ಪಟ್ಟುಕೊಂಡರು. ಚಂದಾ ಅವರ ಕೀರ್ತಿ ಎಷ್ಟು ಹಬ್ಬಿತೆಂದರೆ, ‘ವಿಶ್ವದ ಅತ್ಯಂತ ಪ್ರಭಾವಶಾಲಿ 20 ಮಹಿಳೆಯರ’ ಫೋರ್ಬ್ಸ್‌ ಪಟ್ಟಿಯಲ್ಲಿ ಅವರು ಸ್ಥಾನ ಪಡೆದುಕೊಂಡರು. ಅತ್ಯುನ್ನತ ಜಾಗತಿಕ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಎಲ್ಲ ಪ್ರಶಸ್ತಿಗಳಿಗೆ ಕಳಶವಿಟ್ಟಂತೆ 2017ರಲ್ಲಿ ಅಮೆರಿಕದ ಪ್ರತಿಷ್ಠಿತ ವೂಡ್‌ರೊ ವಿಲ್ಸನ್‌ ನಾಗರಿಕ ಪೌರತ್ವ ಸಿಕ್ಕಿತು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಮಹಿಳೆ ಈಕೆ. ಅಮೆರಿಕದ ಉಪಾಧ್ಯಕ್ಷೆಯಾಗಿದ್ದ ಹಿಲರಿ ಕ್ಲಿಂಟನ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿನಾ ರೈಸ್‌ ರಂತಹ ಅಪ್ರತಿಮ ಮುತ್ಸದ್ದಿಗಳು ಪಡೆದ ಪ್ರಶಸ್ತಿಯದು. 

ಆದರೆ ಈಗ ಅವರ ಮೇಲೆ ಅಕ್ರಮ ಮತ್ತು ಸ್ವಜನ ಪಕ್ಷಪಾತದ ಆರೋಪಗಳು ಬಂದಿವೆ. ಐಸಿಐಸಿಐ ಬ್ಯಾಂಕ್‌ 2012ರಲ್ಲಿ ವೀಡಿಯೊಕಾನ್‌ ಉದ್ಯಮ ಗುಂಪಿಗೆ 3250 ಕೋಟಿ ರೂಪಾಯಿ ಸಾಲ ನೀಡಿದೆ. ಆ ಬಳಿಕ ವೀಡಿಯೊಕಾನ್‌ ಕಂಪೆನಿಯು ನುಪವರ್‌ ರಿನೆವೆಬಲ್ಸ್‌ ಜತೆ ಸೇರಿ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ನುಪವರ್‌ ಕಂಪೆನಿ ಚಂದಾ ಕೊಚ್ಚಾರ್‌ ಅವರ ಪತಿ ಪವನ ವಿದ್ಯುತ್‌ ಉದ್ಯಮಿ ದೀಪಕ್‌ ಕೊಚ್ಚಾರ್‌ ಅವರದ್ದು. ‘ವೀಡಿಯೊಕಾನ್‌ಗೆ ಐಸಿಐಸಿಐ ಭಾರೀ ಸಾಲ ನೀಡಲು ಚಂದಾ ಅವರ ಪತಿಯ ಹಿತಾಸಕ್ತಿಯೇ ಕಾರಣ’ ಎನ್ನಲಾಗುತ್ತಿದೆ.

ಆರೋಪ ಮಾಧ್ಯಮಗಳಲ್ಲಿ ಪ್ರಕಟವಾದದ್ದು ನಾಲ್ಕು ತಿಂಗಳ ಹಿಂದೆ. ಆದರೆ ಐಸಿಐಸಿಐ ಬ್ಯಾಂಕ್‌ ಆಡಳಿತ ಮಂಡಳಿ ಈ ಅವಧಿಯಲ್ಲಿ ಚಂದಾ ಕೊಚ್ಚಾರ್‌ ಅವರನ್ನು ಸಮರ್ಥಿಸಿಕೊಂಡೇ ಬಂತು. ಯಾವುದೇ ಹಿತಾಸಕ್ತಿಗಳ ಸಂಘರ್ಷ ಇಲ್ಲ ಎಂದಿತು. ಆಂತರಿಕ ತನಿಖೆಯನ್ನೂ ಪ್ರಕಟಿಸಿತು. ಆದರೆ ‘ಸೆಬಿ’ ಸುಮ್ಮನಿರಲಿಲ್ಲ. ಸಾಲ ವಹಿವಾಟಿನ ಕುರಿತು ಹಲವು ಪ್ರಶ್ನೆಗಳನ್ನು ಕೇಳಿ ಬ್ಯಾಂಕಿಗೆ ನೋಟಿಸ್‌ ನೀಡಿತು. ‘ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸುತ್ತೇವೆ’ ಎಂದು ಬ್ಯಾಂಕ್‌ ಘೋಷಿಸಿತು. ಆದರೆ ‘ಚಂದಾ ಕೊಚ್ಚಾರ್‌ ಸಿಇಓ ಸ್ಥಾನದಲ್ಲಿ ಇದ್ದರೆ ಸ್ವತಂತ್ರ ತನಿಖೆ ಸಾಧ್ಯವಿಲ್ಲ’ ಎಂದು ಜಸ್ಟಿಸ್‌ ಶ್ರೀಕೃಷ್ಣ ಅವರು ಹೇಳಿದರಂತೆ. ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಪ್ರಮುಖ ಷೇರುದಾರ ಆಗಿರುವ, ಎಲ್‌ಐಸಿ ಪರವಾಗಿ ಅದರ ಚೇರ್‌ಮನ್‌ ಕೂಡಾ ಒತ್ತಡ ಹೇರಿದರು. ಎಲ್ಲದರ ಪರಿಣಾಮವಾಗಿ ಚಂದಾ ಕೊಚ್ಚಾರ್‌ ಅವರನ್ನು ಈಗ ಬಲವಂತವಾಗಿ ರಜೆಯ ಮೇಲೆ ಕಳಿಸಲಾಗಿದೆ. ಆದರೆ ಆಡಳಿತ ಮಂಡಳಿಯ ಸಭೆಯಲ್ಲಿ ‘ಸ್ವತಃ ಚಂದಾ ಅವರೇ ರಜೆಯ ಮೇಲೆ ತೆರಳಿದ್ದಾರೆ’ ಎಂದು ನಿರ್ಣಯ ಕೈಗೊಳ್ಳಲಾಗಿದೆ.

ಮೊದಲ ಬಾರಿಗೆ ಆರೋಪಗಳು ಬಂದಾಗಲೇ ಚಂದಾ ಕೊಚ್ಚಾರ್‌ ರಜೆಯ ಮೇಲೆ ಹೋಗಿದ್ದರೆ ಒಂದು ಸದ್ಭಾವನೆಯಾದರೂ ಉಳಿದಿರುತ್ತಿತ್ತು. ಆದರೆ ಈಗ ಅವರ ಮೇಲೆ ಇನ್ನಷ್ಟು ಅನುಮಾನಗಳು ಸುದ್ದಿಯಾಗುತ್ತಿವೆ. ಇನ್ನೊಂದೆಡೆ ನುಪವರ್‌ ರಿನೆವೆಬಲ್ಸ್‌ನಲ್ಲಿ ವೀಡಿಯೊಕಾನ್ ಮಾಡಿರುವ ಹೂಡಿಕೆಯ ಬಗ್ಗೆ ಸಿಬಿಐ ತನಿಖೆ ಆರಂಭಗೊಂಡಿದೆ.

ಚಂದಾ ಕೊಚ್ಚಾರ್‌ ಅವರು ಬ್ಯಾಂಕರ್‌ ಆಗಿ ಪರಿಶ್ರಮದ ಮೂಲಕ ಕೀರ್ತಿ ಶಿಖರ ಏರಿದ್ದು ಗಮನಾರ್ಹ ಸಾಧನೆಯೇ. 1984ರಲ್ಲಿ ಟ್ರೈನೀ ಆಗಿ ಐಸಿಐಸಿಐ ಸೇರ್ಪಡೆಯಾದವರು ಅವರು. ಅಲ್ಲಿಂದ ಒಂದೊಂದೇ ಮೆಟ್ಟಿಲನ್ನು ಹತ್ತಿದರು. 1990ರಲ್ಲಿ ಬ್ಯಾಂಕಿನ ಕೋರ್‌ ಟೀಮ್‌ ಸೇರಿದ ಚಂದಾ, 94ರಲ್ಲಿ ಎಜಿಎಂ ಆದರು. 96ರಲ್ಲಿ ಡಿಜಿಎಂ, 98ರಲ್ಲಿ ಜನರಲ್‌ ಮ್ಯಾನೇಜರ್‌! 2001ರಲ್ಲಿ ಬ್ಯಾಂಕಿನ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌, 2007ರಲ್ಲಿ ಸಿಎಫ್‌ಓ; ಕೊನೆಯದಾಗಿ ಸಿಇಓ. ಅವರ ಅವಧಿಯಲ್ಲಿ ಬ್ಯಾಂಕಿನ ಸಾಧನೆಗಳೂ ಸುದ್ದಿಯಾದವು. ಚಿಲ್ಲರೆ ಸಾಲ ನೀಡಿಕೆಯಲ್ಲಿ ಮತ್ತು ರಫ್ತು ಕ್ಷೇತ್ರದಲ್ಲಿ ಬ್ಯಾಂಕ್‌ ಅತ್ಯಧಿಕ ಸಾಧನೆ ಮಾಡಿ ಹಲವು ಜಾಗತಿಕ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

2003ರಲ್ಲಿ ಬ್ಯಾಂಕಿನ ನಗದು ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ ತಂಡದಲ್ಲಿ ಸಕ್ರಿಯವಾಗಿದ್ದ; ಜೆಎಂಡಿ ಆಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ತಲ್ಲಣಗಳನ್ನು ಎದುರಿಸಿದ; ಸಿಇಓ ಆಗಿ ಕೆಟ್ಟ ಸಾಲಗಳ ಬಗ್ಗೆ ಕ್ಷಿಪ್ರ ನಿರ್ಧಾರಗಳನ್ನು ಕೈಗೊಂಡು ಬ್ಯಾಂಕಿನ ಅನುತ್ಪಾದಕ ಸಾಲಗಳನ್ನು ನಿಯಂತ್ರಣದಲ್ಲಿಟ್ಟ ಅದೇ ಹೆಣ್ಣುಮಗಳು, ಇಂತಹ ಆರೋಪದಲ್ಲಿ ಏಕೆ, ಹೇಗೆ ಸಿಕ್ಕಿಬಿದ್ದಳು... ಎನ್ನುವುದೀಗ ಆಕೆಯ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಆದರೆ ಉತ್ತರ ಕಷ್ಟವಿದೆ. ಸಾಧನೆಯ ಚಂದ ಆರೋಪಗಳ ಮಳೆಯಲ್ಲಿ ಕೊಚ್ಚಿ ಹೋದಂತಿದೆ. ಇಬ್ಬರು ಮಕ್ಕಳ ತಾಯಿಯಾಗಿ, ಬ್ಯಾಂಕ್‌ ಮತ್ತು ಸಂಸಾರದ ಜವಾಬ್ದಾರಿಗಳನ್ನು ಸಮರ್ಥವಾಗಿ ತೂಗಿಸಿಕೊಂಡು ಹೆಸರು ಮಾಡಿದ್ದ ಹೆಣ್ಣುಮಗಳೀಗ ಪ್ರಶ್ನೆಗಳಿಗೆ ಒಬ್ಬಂಟಿಯಾಗಿ ಉತ್ತರ ಹುಡುಕುವ ಕಷ್ಟದಲ್ಲಿದ್ದಾರೆ. ತನಿಖೆಯಲ್ಲಿ ಆರೋಪಮುಕ್ತಿ ಯಾದರೆ ಸರಿ. ಇಲ್ಲವಾದಲ್ಲಿ ಕಡ್ಡಾಯ ರಜೆಯೇ, ಕೊನೆಯ ರಜೆಯೂ ಆಗಬಹುದು! 

ಸುಧಾ: ಸಂಚಿಕೆ –27

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !