ಕೋವಿಡ್ ಎಂಬುದು ಪುಟ್ಟ ಮಗುವಿನ ಅಪ್ಪ– ಅಮ್ಮನನ್ನೂ, ಆ ಮಗುವಿನ ಭವಿಷ್ಯವನ್ನೂ ಕಸಿದುಕೊಂಡಂತಹ ಬಹಳಷ್ಟು ಪ್ರಕರಣಗಳು ಸಂಭವಿಸಿವೆ. ಅಂತಹ ಮಕ್ಕಳನ್ನು ದತ್ತು ಸ್ವೀಕರಿಸಲು ಸಾಕಷ್ಟು ಜನ ಮುಂದೆ ಬರುತ್ತಿದ್ದಾರೆ. ಆದರೆ ಈ ದತ್ತು ಸ್ವೀಕಾರ ಕಾನೂನಾತ್ಮಕವಾಗಿರಬೇಕಾಗುತ್ತದೆ.

ಕಳೆದ ವಾರ ದೃಶ್ಯ ಮಾಧ್ಯಮದಲ್ಲೊಂದು ವರದಿ ಬಿತ್ತರವಾಯಿತು. ಅಪ್ಪ– ಅಮ್ಮ ಇಬ್ಬರನ್ನೂ ಕೋವಿಡ್‌ನಿಂದಾಗಿ ಕಳೆದುಕೊಂಡ ಪುಟ್ಟ ಮಗು ಇದ್ಯಾವುದರ ಅರಿವಿಲ್ಲದೇ ಸಂಬಂಧಿಕರ ತೋಳಿನಲ್ಲಿ ಮುಗ್ಧ ನಗೆ ಚೆಲ್ಲುತ್ತಿತ್ತು. ನೆರೆದವರ ಕಂಗಳಲ್ಲಿ ಅಶ್ರುಧಾರೆ; ಆ ಮಗುವಿನ ಭವಿಷ್ಯವೇನು ಎಂಬ ದುಃಖಭರಿತ ಮಾತುಗಳು.

ಇನ್ನೊಂದು ಮಗುವಂತೂ ಹುಟ್ಟುವ ಕೆಲವೇ ದಿನಗಳ ಮೊದಲು ಅಪ್ಪನನ್ನು, ಹುಟ್ಟಿದ 6–8 ದಿನಗಳಿಗೆ ಅಮ್ಮನನ್ನೂ ಕಳೆದುಕೊಂಡಿತು. ಕಾರಣ ಇದೇ ಕೋವಿಡ್. ಹೌದು, ಕೋವಿಡ್– 19ರ ಎರಡನೇ ಅಲೆಯಲ್ಲಿ ಮನಕಲಕುವ ಅಂಶವೇನೆಂದರೆ ವಯಸ್ಸಿನ ಭೇದವಿಲ್ಲದೆ ಏರುತ್ತಿರುವ ಸಾವಿನ ಸಂಖ್ಯೆ. ಚಿಕ್ಕ ವಯಸ್ಸಿನ ಜನರ ಜೀವಕ್ಕೂ ಎರವಾಗುತ್ತಿದೆ. ಸಾಯಬೇಕಾದ ವಯಸ್ಸೇ ಅಲ್ಲ ಎಂದುಕೊಂಡವರು ಜೀವ ಕಳೆದುಕೊಳ್ಳುತ್ತಿರುವುದು ಮನುಕುಲದ ಬಲವನ್ನು ಉಡುಗಿಸುತ್ತಿದೆ.

ಮುಂದೇನು ಎಂದು ನಾವು ಯೋಚಿಸುತ್ತಿರುವ ಈ ಗಳಿಗೆಯಲ್ಲಿ ಇನ್ನಷ್ಟು ಚಿಂತೆಗೀಡು ಮಾಡುತ್ತಿರುವುದು ಪುಟ್ಟ ಮಕ್ಕಳ ಹೆತ್ತವರು ಸಾವನ್ನಪ್ಪುತ್ತಿರುವ ದೃಶ್ಯಗಳನ್ನು ನೋಡಿದಾಗ. ಇನ್ನೂ ಸುತ್ತಲಿನ ಪ್ರಪಂಚದ ಅರಿವಿರದ ಚಿಕ್ಕ ಮಕ್ಕಳ ಹೆತ್ತವರು ಕೊರೊನಾಗೆ ಬಲಿಯಾದಾಗ ಆ ಮಗುವಿನ ಭವಿಷ್ಯದ ಬಗ್ಗೆ ಆತಂಕ ಮಾತ್ರವಲ್ಲ, ಭಯವೂ ಆಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿ ಅನಾಥರಾಗಿರುವ ಮಕ್ಕಳ ಸ್ಥಿತಿ ಏನು? ಅವರ ಲಾಲನೆ–ಪಾಲನೆ ಮಾಡುವವರಾರು? ಇದರಲ್ಲಿ ಸರ್ಕಾರದ ಪಾತ್ರವೇನು? ಸಂಘ– ಸಂಸ್ಥೆಗಳ ಪಾತ್ರವೇನು? ಸಮಾಜದ ಪಾತ್ರವೇನು ಎನ್ನುವುದು ಬಹಳ ಮುಖ್ಯವಾಗಿ ಚರ್ಚೆಯಾಗಬೇಕಾದ ವಿಷಯ, ಕಾರಣ ಜಗತ್ತಿನಲ್ಲಿ ಯಾವ ಮಗುವೂ ಅನಾಥವಾಗಬಾರದು, ಯಾರೂ ಬದುಕನ್ನು ಕಳೆದುಕೊಳ್ಳಬಾರದು.

ಬೇಕಿದೆ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿ
ಈ ರೀತಿಯ ಒಂದು ಘಟನೆ ಜರುಗಿದಾಗ ‘ನಾನು ಮಗುವನ್ನು ನೋಡಿಕೊಳ್ಳುತ್ತೇನೆ’ ಎಂದು ಮುಂದೆ ಬರುವವರು ಹಲವರಿರಬಹುದು. ಆದರೆ ಬೇಕಿರುವುದು ಆ ಕ್ಷಣದ ಕರುಣೆ ಮಾತ್ರವಲ್ಲ, ಮಗುವಿನ ಬದುಕಿನ ಭವಿಷ್ಯಕ್ಕೆ ಭದ್ರ ಬುನಾದಿ. ಏಕೆಂದರೆ ಕೆಲವರು ಕಾನೂನುಬಾಹಿರವಾಗಿ ಮಕ್ಕಳನ್ನು ಸಾಕಲು ತೆಗೆದುಕೊಂಡ ಘಟನೆಗಳು ವರದಿಯಾಗಿವೆ. ಈ ರೀತಿಯ ಕಾನೂನುಬಾಹಿರ ವಿಧಾನದಿಂದ ಪುಟ್ಟ ಮಕ್ಕಳಿಗೆ ತಕ್ಷಣದ ಆಸರೆ ಸಿಗಬಹುದಾದರೂ ಮುಂದೆ ಇನ್ನಷ್ಟು ಘೋರ ಪರಿಸ್ಥಿತಿಗೆ ಅವರನ್ನು ದೂಡಬಹುದಾದ ಸಾಧ್ಯತೆಗಳು ಸಾಕಷ್ಟಿರಬಹುದು.

ಈ ನಿಟ್ಟಿನಲ್ಲಿ ತಂದೆ– ತಾಯಿಯನ್ನು ಕಳೆದುಕೊಂಡ ಆ ಮಕ್ಕಳ ಭವಿಷ್ಯದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವೇ ಈಗ ತುರ್ತಾಗಿ ಆಗಬೇಕಿರುವುದು. ಈ ಸಂದರ್ಭದಲ್ಲಿ 30 ಜಿಲ್ಲೆಗಳಲ್ಲಿ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಶಾಲೆಗಳಲ್ಲಿ ಇಂತಹ ಮಕ್ಕಳಿಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಸರ್ಕಾರದ ತೀರ್ಮಾನ ಸ್ತುತ್ಯರ್ಹ.

ಯಾವ ಮಗುವೂ ಅನಾಥವಲ್ಲ…!
ಅಪ್ಪ– ಅಮ್ಮನನ್ನು ಕಳೆದುಕೊಂಡ ಮಗುವನ್ನು ಅನಾಥ ಎನ್ನುವ ಪರಿಪಾಠವೂ ಕೂಡ ಸರಿಯಲ್ಲ, ಕಾರಣ ಇದು ಮಕ್ಕಳನ್ನು ನಾವು ಮಾನಸಿಕವಾಗಿ ಹಿಂಸಿಸಿದಂತೆ ಆಗುತ್ತದೆ. ಪ್ರತಿಯೊಂದು ಸೃಷ್ಟಿಗೂ ಈ ಜಗತ್ತಿನಲ್ಲಿ ಕಾರಣವಿದೆ. ಹಾಗಾಗಿ ಅನಾಥ ಎನ್ನುವ ಪದವನ್ನು ಉಪಯೋಗಿಸದಿದ್ದರೆ ಅದು ಆ ಮಕ್ಕಳಿಗೆ ನಾವು ಮಾಡುವ ಉಪಕಾರ ಎನ್ನಬಹುದು. ಹುಟ್ಟಿದ ಪ್ರತಿ ಮಗುವಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎನ್ನುವುದನ್ನು ನಾವು ನೆನಪಿಡಬೇಕು.

ದತ್ತು ಪಡೆಯುವುದು ಕಾನೂನು ರೀತಿಯಲ್ಲಿರಲಿ
ಒಂದು ಮಗು ತನ್ನ ತಂದೆ– ತಾಯಿಯನ್ನು ಕಳೆದುಕೊಂಡಿದೆ ಎಂದರೆ ಅವರ ಸಂಬಂಧಿಕರೋ, ಆ ಊರಿನವರೋ ಮುಂದೆ ಬಂದು ‘ಮಗುವನ್ನು ನಾವು ಸಾಕುತ್ತೇವೆ, ಜೋಪಾನ ಮಾಡುತ್ತೇವೆ’ ಎಂದು ಹೇಳಿದರೂ ಸಹ ಅದು ಆ ಕ್ಷಣದ ಅವರ ಮಾನವೀಯ ಗುಣವೆಂದು ನಾವು ಯೋಚಿಸಬೇಕೇ ಹೊರತು ಮಗುವಿನ ಭವಿಷ್ಯದ ದೃಷ್ಟಿಯಿಂದಲ್ಲ! ಎಷ್ಟೋ ಸಾರಿ ಈ ರೀತಿಯ ಪ್ರಕರಣಗಳಲ್ಲಿ ಆ ಮಗು ಭವಿಷ್ಯ ಕಳೆದುಕೊಂಡು ಮತ್ತೆ ಅನಾಥ ಪ್ರಜ್ಞೆಯಿಂದ ನರಳುವ ಸ್ಥಿತಿ ಎದುರಾಗಬಹುದು. ಕಾನೂನು ಪರಿಧಿಯಲ್ಲಿ ಅಂತಹ ಮಕ್ಕಳನ್ನು ದತ್ತು ಪಡೆದರೆ ಅವರಿಗೆ ಸಿಗಬೇಕಾದ ಬದುಕಿನ ಭದ್ರತೆ, ಶಿಕ್ಷಣ, ಮೂಲಭೂತ ಹಕ್ಕುಗಳು ಸಿಗುತ್ತವೆ. ಇಲ್ಲವಾದರೆ ಇಂದಲ್ಲ ನಾಳೆ ದತ್ತು ಪಡೆದ ದಂಪತಿ ಆ ಮಗುವನ್ನು ಕಡೆಗಣಿಸಿ ಬೀದಿಪಾಲು ಮಾಡಬಹುದು. ಈ ನಿಟ್ಟಿನಲ್ಲಿ ನೇರವಾಗಿ ಯಾರಾದರೂ ಮಕ್ಕಳನ್ನು ದತ್ತು ಪಡೆಯಲು ಪ್ರಯತ್ನಿಸಿದರೆ ಅದು ಕಾನೂನು ಬಾಹಿರ ಮತ್ತು ಅಂತಹವರ ವಿರುದ್ಧ ಬಾಲ ನ್ಯಾಯ ಕಾಯ್ದೆ 2015 ಮತ್ತು ಅಡಾಪ್ಷನ್ ರೆಗ್ಯುಲೇಷನ್ 2017 ರಂತೆ ಕ್ರಮ ಜರುಗಿಸಬಹುದು.

ಮಕ್ಕಳ ದುರುಪಯೋಗ
ಮಗುವಿನ ತಂದೆ– ತಾಯಿಗಿರುವ ಆಸ್ತಿ ಆಕರ್ಷಣೆ ಹಿನ್ನೆಲೆಯಲ್ಲಿ ಮಗುವನ್ನು ಸಾಕುವುದು, ಮಕ್ಕಳ ದುರುಪಯೋಗ, ಭಿಕ್ಷಾಟನೆಗೆ ನೂಕುವುದು, ವೇಶ್ಯಾವಾಟಿಕೆಗೆ ತಳ್ಳುವುದು, ವಿದೇಶಗಳಿಗೆ ಮಾರಾಟ ಮಾಡುವ ಜಾಲ.. ಹೀಗೆ ಮಕ್ಕಳ ಹಕ್ಕುಗಳನ್ನು ಕಸಿದು ಅವರ ಭವಿಷ್ಯಕ್ಕೆ ಕೊಳ್ಳಿ ಇಡುವ ಪ್ರಕರಣಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ನಾವು ವರ್ತಿಸುವುದು ಈ ಕ್ಷಣದ ತುರ್ತು. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಣ್ಗಾವಲು ಸದಾ ಜಾಗೃತವಾಗಿರುವುದು ಅಷ್ಟೇ ಮುಖ್ಯ!

ದತ್ತು ಸ್ವೀಕಾರದ ನಿಯಮಗಳು

*ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ - ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬೇಕು. cara.NIC.in

*ನಂತರ ಸಂಬಂಧಿಸಿದ ದತ್ತು ಆಕಾಂಕ್ಷಿ ಪೋಷಕರಿಗೆ ನೋಂದಣಿ ಸಂಖ್ಯೆ ದೊರೆಯುತ್ತದೆ. ಸಂಬಂಧಿಸಿದ ನೋಡಲ್ ಏಜೆನ್ಸಿ ಅಧಿಕಾರಿಗಳು ಸಾಮಾಜಿಕ, ಆರ್ಥಿಕ, ಕೌಟುಂಬಿಕ ಸಾಮರ್ಥ್ಯವನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವರು.

*ಅರ್ಜಿದಾರ ಪೋಷಕರು ಫ್ಯಾಮಿಲಿ ಫೋಟೊ, ಆಧಾರ್ ಮುಂತಾದ ದಾಖಲೆಗಳನ್ನು ನೀಡಬೇಕು.

*ದಾಖಲೆಯ ಪರಿಶೀಲನೆಯ ನಂತರ ವಕೀಲರ ಸಹಾಯದಿಂದ ಕೋರ್ಟ್ ಮೂಲಕ ಮಗುವನ್ನು ದತ್ತು ಪಡೆಯಬಹುದು

* ದತ್ತು ಮಗುವಿಗೆ ಪೋಷಕರ ಆಸ್ತಿಯ ಹಕ್ಕಿನ ಜೊತೆಗೆ ಕಾನೂನು ಸಂರಕ್ಷಣೆ ಕೂಡ ಇರುತ್ತದೆ.

(ಲೇಖಕಿ: ವಕೀಲರು, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.