ಗುರುವಾರ , ಜೂನ್ 4, 2020
27 °C

ಜೊತೆ ಜೊತೆಯಲಿ ಮನೆಗೆಲಸದಲಿ!

ಡಿ. ಯಶೋದಾ Updated:

ಅಕ್ಷರ ಗಾತ್ರ : | |

Prajavani

‘ಏ ನ್ ಗೊತ್ತಾ, ಇವತ್ತು ಬೆಳಿಗ್ಗೆ ನನ್ನ ಗಂಡ ನನಗೆ ಪಾತ್ರೆ ತೊಳೆದುಕೊಟ್ಟರು..’

ಫೋನ್‌ನಲ್ಲಿ ಕೇಳಿದ ಗೆಳತಿಯ ಸಂತೋಷ ಮತ್ತು ಆಶ್ಚರ್ಯಮಿಶ್ರಿತ ಆ ಧ್ವನಿ ಹೇಗಿತ್ತು ಎಂದರೆ ಮಹಾಮಾರಿ ಕೊರೊನಾವನ್ನೇ ಜಯಸಿಬಿಟ್ಟೆವೇನೋ ಎಂಬಂತಿತ್ತು.

20ನೇ ವರ್ಷದ ದಾಂಪತ್ಯ ಜೀವನವನ್ನು ನಡೆಸುತ್ತಿರುವ ಆಕೆಯದು ಯಾವಾಗಲೂ ಗಂಡನ ಮೇಲೆ ದೂರು. ‘ಮನೆಯ ಕೆಲಸದಲ್ಲಿ ಒಂದು ಚೂರೂ ನೆರವಾಗುವುದಿಲ್ಲ. ಆಫೀಸ್‌ಗೆ ಹೋಗಿಬರುವುದು ಅಷ್ಟೇ. ನನಗೆಷ್ಟೇ ಜ್ವರ ಬಂದರೂ ‘‘ಕೆಲಸ ಏನೂ ಮಾಡಬೇಡ, ಸುಮ್ಮನೆ ವಿಶ್ರಾಂತಿ ತಗೊ’’ ಎನ್ನುತ್ತಾರೆಯೇ ಹೊರತು ತಾವಂತೂ ಏನೂ ಮಾಡುವುದಿಲ್ಲ’ ಎಂಬುದು ಆಕೆಯ ನಿತ್ಯದ ದೂರು. ಒಮ್ಮೆಯೂ ಆಕೆ ಗಂಡನನ್ನು ಮೆಚ್ಚಿಕೊಂಡು ಮಾತನಾಡಿದ್ದೇ ಇಲ್ಲ. ಇಂತಿಪ್ಪ ಈಗಿನ ಆಕೆಯ ಸಂತೋಷಕ್ಕೆ ನಾನೂ ಖುಷಿಪಟ್ಟೆ.

‌ಕೊರೊನಾ ತಂದ ಅರಿವು

ಕೊರೊನಾ ಪ್ರಭಾವದಿಂದಾಗಿ ಗಂಡ- ಹೆಂಡತಿ, ಮನೆಗೆಲಸ ಕುರಿತಂತೆ ಹಲವಾರು ಹಾಸ್ಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಹಾಸ್ಯವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಕೊರೊನಾ ಕೆಲವು ಗಂಡಂದಿರ ಕಣ್ಣು ತೆರೆಸಿರುವ ಉದಾಹರಣೆಗಳು ಕೇಳಿಬರುತ್ತಿವೆ.

‘ಏನ್ ಮಹಾ ಮನೆಗೆಲಸ! ಮನೆಯಲ್ಲೇ ಇರ‍್ತೀಯಾ, ನಿನಗೆ ಇಷ್ಟಬಂದ ಹಾಗೆ ಕೆಲಸ ಮಾಡಬಹುದು. ಯಾರ ಒತ್ತಡವೂ ಇರುವುದಿಲ್ಲ, ಸಮಯದ ನಿಗದಿಯೂ ಇರುವುದಿಲ್ಲ. ನಿನಗೆ ಬೇಕಾದ್ದನ್ನು ಕೊಳ್ಳಲು ದುಡ್ಡೂ ಇರುತ್ತದೆ..’ ಇಂತಹ ಮಾತುಗಳನ್ನು ಆಡಿರುವ ಗಂಡಂದಿರು ಈಗ ಅದೇ ‘ಏನ್ ಮಹಾ ಮನೆಗೆಲಸ’ ಎಂಬುದನ್ನು ನೋಡಿ ಸುಸ್ತಾಗಿದ್ದಾರಂತೆ.

ಕೊರೊನಾ ಕಾರಣದಿಂದಾಗಿ ಹೊರಗಿನ ಕೆಲಸಗಳಿಗೆ ರಜೆ ಸಿಕ್ಕಿದೆ. ಆದರೆ ಅಡುಗೆ-ಮನೆಗೆಲಸಗಳು ಹೆಚ್ಚಾಗಿವೆ. ಕೆಲವೊಮ್ಮೆ ಹೊರಗೆ ಹೋಟೆಲ್, ಬೇಕರಿ, ಚಾಟ್ಸ್ ಸೆಂಟರ್‌ಗಳಲ್ಲಿ ತಿನ್ನುತ್ತಿದ್ದವರು ಈಗ ಹೊರಗೆ ಹೋಗಲಾಗದೇ ಮನೆಯಲ್ಲಿ ಇರುವುದರಿಂದ ತುಸು ತಿನ್ನುವುದೂ ಹೆಚ್ಚಾಗಿದೆ. ಅಪರೂಪಕ್ಕೆ ರಜೆಯಲ್ಲಿ ಮನೆಯಲ್ಲಿ ಇರುವ ಗಂಡನಿಗೆ ಇಲ್ಲ ಎನ್ನಲಿಕ್ಕಾಗದೇ ಗೃಹಿಣಿಯರು ಹೆಚ್ಚಿನ ಕೆಲಸವನ್ನು ಸಂತೋಷವಾಗೇ ಮಾಡುತ್ತಿದ್ದಾರೆ.

ಮನೆಗೆಲಸ ಸುಲಭವಲ್ಲ!

ಹೆಂಡತಿ ಎಷ್ಟು ಹೊತ್ತಿಗೆ ತಿಂಡಿ ತಿನ್ನುತ್ತಾಳೆ, ಊಟ ಮಾಡುತ್ತಾಳೆ, ಏನೇನು ಕೆಲಸ ಮಾಡುತ್ತಾಳೆ, ಮಕ್ಕಳನ್ನು ಹೇಗೆ ಸಂಭಾಳಿಸುತ್ತಾಳೆ, ಮನೆಯ ಹಿರಿಯರ ಆರೈಕೆ ಹೇಗೆ ಮಾಡುತ್ತಾಳೆ, ಕೆಲಸದ ನಡುವೆ ವಿಶ್ರಾಂತಿ ತೆಗೆದುಕೊಳ್ಳುತ್ತಾಳೋ ಇಲ್ಲವೋ ಎಂಬುದು ಬಹುತೇಕ ಗಂಡಸರಿಗೆ ಗೊತ್ತಿರಲಿಲ್ಲ. ಈಗ ಏನು ಕೇಳಿದರೂ ಇಲ್ಲ ಎನ್ನದೆ ‘ಜೀ ಹುಜೂರ್’ ಎಂದು ಹಾಜರಾಗುವ, ಕೇಳಿದ್ದನ್ನು ಒದಗಿಸುವ ಹೆಂಡತಿಯ ಬಿಡುವಿಲ್ಲದ ಕೆಲಸವನ್ನು ಗಮನಿಸಿರುವ ಪತಿಗೆ ನಿಜಕ್ಕೂ ಮನೆ ನಿರ್ವಹಣೆ ತಾವು ಅಂದುಕೊಂಡಷ್ಟು ಸುಲಭದ್ದಲ್ಲ ಎಂಬುದು ಅರಿವಾಗಿರಬಹುದು.

ತನ್ನ ಕೆಲಸದ ಜೊತೆಗೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪತಿ, ಹೆಂಡತಿಯು ತನ್ನ ವೃತ್ತಿ- ಪ್ರವೃತ್ತಿಗಳಿಗೆ ತೊಂದರೆ ಮಾಡದೆ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ಕಂಡು ಚಕಿತನಾಗಿರಬಹುದು. ಪುರುಷರು ಹೆಂಡತಿಯ ಬೆಂಬಲವೇ ತಮ್ಮ ಬಲವಾಗಿರುವುದನ್ನು ಈಗ ಬಲ್ಲವರಾಗಿದ್ದು, ತಮ್ಮ ಸಾಧನೆಯ ಹಿಂದೆ ಹೆಂಡತಿಯ ಬವಣೆ ಇರುವುದನ್ನು ಕಣ್ಣಾರೆ ಕಾಣುವಂತಾಗಿದೆ.

ಶಿಸ್ತಿನ ವೇಳಾಪಟ್ಟಿ ಮಾಡಿಕೊಂಡು ಎಲ್ಲಾ ಕೆಲಸವನ್ನೂ ಸರಿದೂಗಿಸುತ್ತಾ ತನ್ನ ಕೆಲಸವನ್ನೂ ಮಾಡಿಕೊಳ್ಳುವ ಜಾಣ ಹೆಂಡತಿಯ ಕಾರ್ಯವೈಖರಿಗೆ ಅಚ್ಚರಿಪಡುತ್ತಿರುವವರೂ ಇದ್ದಾರೆ. ತಾವು ಯಾವುದೋ ಸಮಯದಲ್ಲಿ ಮಲಗಿ, ಯಾವುದೋ ಸಮಯದಲ್ಲಿ ತಿಂಡಿ, ಊಟ ಮಾಡುತ್ತಿದ್ದರೂ ಆಕೆ ಮಾತ್ರ ವ್ರತದಂತೆ ತನ್ನ ಕೆಲಸವನ್ನು ನಿಗದಿತ ಸಮಯದಲ್ಲಿ ಮುಗಿಸಿ ತನ್ನಿಂದ ಯಾರಿಗೂ ತೊಂದರೆಯಾಗದತೆ ನೋ಼ಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿರಬಹುದು.

ಮನೆಯವರ ಆರೋಗ್ಯ ಆಕೆಯ ಕೈಯಲ್ಲಿ..

ಮಹಿಳೆಯು ಮನೆಯವರ ಆರೋಗ್ಯ ತನ್ನ ಕೈಯಲ್ಲಿ ಇದೆ ಎಂದು ಮೊದಲಿಗಿಂತಲೂ ಹೆಚ್ಚು ಜಾಗರೂಕತೆ ವಹಿಸಿರುವುದು ಕಂಡುಬರುತ್ತಿದೆ. ಮಕ್ಕಳನ್ನು ಖುಷಿಪಡಿಸಲು ಹೊಸ ಹೊಸ ಪಾಕರುಚಿಗಳನ್ನು ಪ್ರಯತ್ನಿಸಿ ಅವರಿಗೆ ಉಣಬಡಿಸುವುದರ ಜೊತೆಗೆ ಅವರ ಬೇಸರ ನೀಗಿಸಲು  ವಿವಿಧ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸುತ್ತಾ, ಕೊರೊನಾದ ಕರಿನೆರಳು ತಮ್ಮ ಮೇಲೆ ಬೀಳದಂತೆ ಜಾಗ್ರತೆ ವಹಿಸಿದ್ದಾಳೆ.

ಮನೆ, ಸಮಾಜದಲ್ಲಿ ಏನೇ ಬದಲಾವಣೆ ಆದರೂ ಅದರ ಪ್ರಭಾವ ಹೆಚ್ಚಾಗಿ ಬೀರುವುದು ಮಹಿಳೆಯ ಮೇಲೆಯೇ. ತನ್ನ ಸ್ವಂತ ಹಿತಾಸಕ್ತಿಯನ್ನು ಪಕ್ಕಕ್ಕಿರಿಸಿ, ಮನೆಯನ್ನು ಕಾಪಾಡುವುದರ ಮೂಲಕ ಸಮಾಜಕ್ಕೂ ನೆರವಾಗುವ ಮಹಿಳೆಯದು ಎಂದಿಗೂ ಹೋರಾಟದ ಬದುಕೇ. 

ಲಾಕ್‌ಡೌನ್‌ ತಂದ ಬದಲಾವಣೆ

‘ನನ್ನ ಪತ್ನಿ ಕಾಲೇಜ್‌ನಲ್ಲಿ ಪ್ರೊಫೆಸರ್‌. ಸದ್ಯ ಝೂಮ್‌ ಆ್ಯಪ್‌ ಬಳಸಿ ಮನೆಯಿಂದಲೇ ಕೆಲವು ಗಂಟೆಗಳ ಕಾಲ ಪಾಠ ಮಾಡುತ್ತಾಳೆ. ತೊಂದರೆಯಾಗಬಾರದೆಂದು ಆ ಸಮಯದಲ್ಲಿ ಕೊಠಡಿಯ ಬಾಗಿಲು ಹಾಕಿಕೊಂಡು ಕೂರುತ್ತಾಳೆ’ ಎನ್ನುವ ಬೆಂಗಳೂರಿನ ಎಚ್‌ಆರ್‌ ಕಂಪನಿಯೊಂದರ ಉದ್ಯೋಗಿ ಸುದೇಶ್‌ ನಂಬಿಯಾರ್‌ ಅದುವರೆಗೆ ಪುಟ್ಟ ಮಗುವನ್ನು ಸುಧಾರಿಸುತ್ತ, ತರಕಾರಿ ಹೆಚ್ಚುವ ಕೆಲಸವನ್ನೂ ಮುಗಿಸುತ್ತಾನೆ. ನಂತರ ಇಬ್ಬರೂ ಸೇರಿ ಅಡುಗೆ ಮುಗಿಸುತ್ತಾರೆ.

ಗಂಡ– ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವ ಕುಟುಂಬದಲ್ಲಿ ಮನೆಗೆಲಸವನ್ನು ಹಂಚಿಕೊಂಡು ಮಾಡುವುದು ಹೊಸತೇನಲ್ಲ. ಆದರೆ ಹೆಚ್ಚಿನ ಸಂದರ್ಭದಲ್ಲಿ ಮಹಿಳೆಗೇ ಜಾಸ್ತಿ ಜವಾಬ್ದಾರಿ ಬೀಳುತ್ತಿತ್ತು ಎಂಬುದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಈ ಕೊರೊನಾ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಇಂತಹ ಹೊಣೆಗಾರಿಕೆಯನ್ನು ಸಮವಾಗಿ ಹಂಚಿಕೊಂಡು ಮಾಡುವುದು ಹೆಚ್ಚಾಗುತ್ತಿದೆ, ಜೊತೆಗೆ ಅನಿವಾರ್ಯ ಕೂಡ. ಏಕೆಂದರೆ ಮನೆಯಿಂದಲೇ ಕಚೇರಿ ಕೆಲಸವನ್ನೂ ನಿಭಾಯಿಸಬೇಕಾಗುತ್ತದೆ.

ಮನೆಗೆಲಸದಲ್ಲಿ ಪತಿ ಮಾತ್ರವಲ್ಲ, ದೊಡ್ಡ ಮಕ್ಕಳನ್ನೂ ತೊಡಗಿಸಿಕೊಳ್ಳಿ. ಕಸ ಗುಡಿಸುವುದು, ನೆಲ ಒರೆಸುವುದು, ಅಡುಗೆ ಕೆಲಸಕ್ಕೆ ಸಹಾಯ ಮಾಡುವುದು.. ಇಂಥದ್ದಕ್ಕೆಲ್ಲ ನೆರವಿನ ಹಸ್ತ ಚಾಚಬಹುದು.

*ಪಾತ್ರೆಗಳನ್ನು ತೊಳೆಯುವುದನ್ನು ಸರದಿ ಪ್ರಕಾರ ಮಾಡುವುದು

*ಅಡುಗೆ ಮಾಡುವಾಗ ತರಕಾರಿ ತೊಳೆಯುವುದು, ಹೆಚ್ಚಿಕೊಡುವುದು

*ವಾಷಿಂಗ್‌ ಮಷಿನ್‌ ಸಿದ್ಧಪಡಿಸುವುದು, ತೊಳೆದ ಬಟ್ಟೆ ಒಣ ಹಾಕುವುದು

*ನೆಲ ಒರೆಸುವುದು

*ಕಾಫಿ/ ಚಹಾ ತಯಾರಿಸುವುದು

*ತರಕಾರಿ/ ದಿನಸಿ ತರುವುದು

*ಪುಟ್ಟ ಮಗುವಿದ್ದರೆ ಸರದಿ ಪ್ರಕಾರ ನೋಡಿಕೊಳ್ಳುವುದು

–ಎಸ್ಸೆಚ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು