ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇಟಿಂಗ್‌ ಆ್ಯಪ್‌; ಆಗದಿರಿ ಟ್ರ್ಯಾಪ್‌

Last Updated 16 ನವೆಂಬರ್ 2019, 4:15 IST
ಅಕ್ಷರ ಗಾತ್ರ

ಇಂದಿನ ತಲೆಮಾರಿನ ಯುವಕ– ಯುವತಿಯರು ಪರಸ್ಪರ ಭೇಟಿಯಾಗುವುದು ಒಂದು ಕಾಫಿ ಗುಟುಕರಿಸುವ ಜಾಗದಲ್ಲಿ ಅಲ್ಲ, ಬದಲಾಗಿ ಅಂತರ್ಜಾಲದಲ್ಲಿ. ಈ ರೀತಿಯ ಭೇಟಿಗೆ ಹುಡುಗ– ಹುಡುಗಿಯೂ ಹೊರತಾಗಿಲ್ಲ. ಆನ್‌ಲೈನ್‌ ಡೇಟಿಂಗ್‌, ಡೇಟಿಂಗ್‌ ಆ್ಯಪ್‌ಗಳು ಆಧುನಿಕ ಬದುಕಿನ ಅವಿಭಾಜ್ಯ ಅಂಗ ಎಂಬಂತಾಗಿಬಿಟ್ಟಿವೆ. ಇವು ಹೊರನೋಟಕ್ಕೆ ಸರಳ ಎನಿಸಿದರೂ ಒಳಗೆ ಅಡಗಿರುವ ಆಪತ್ತುಗಳಿಗೂ ಎಣೆಯಿಲ್ಲ.

ಹೆಣ್ಣು– ಗಂಡಿನ ಮಧ್ಯೆ ಪ್ರೀತಿ ಕುದುರಲು ಒಂದು ಮಾಧ್ಯಮ ಬೇಡವೇ? ಬಹಳ ಹಿಂದೆ ಹೋಗುವುದು ಬೇಡ, ಈ ಆಧುನಿಕ ಕಾಲಘಟ್ಟದಲ್ಲಿ ಮೊದಲಿಗೆ ಪತ್ರ ಸಂಸ್ಕೃತಿಯು ಗಂಡು-ಹೆಣ್ಣುಗಳ ಸಂವಹನ ಮಾಧ್ಯಮವಾಯಿತು. ಅದಾದ ನಂತರ ಫೋನ್ ಬಂದು ಇನ್ನಷ್ಟು ಸರಾಗವಾಯಿತು. ಇದರ ಜೊತೆಗೆ ಕಂಪ್ಯೂಟರ್, ಇ-ಮೇಲ್, ಚಾಟಿಂಗ್, ಸ್ಕೈಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್ ಇತ್ಯಾದಿ ಇವೆ. ಇದರ ಜೊತೆಗೆ ಗಂಡು-ಹೆಣ್ಣುಗಳ ಕೂಡಿಕೆಗೆ ಅನುವು ಮಾಡಿಕೊಡುವ ಹಲವಾರು ಮೊಬೈಲ್ ಆ್ಯಪ್‌ಗಳು ಈಗ ಕೆಲಸ ಮಾಡುತ್ತಿವೆ.

ಹೇಳಿಕೇಳಿ, ಇದು ತಂತ್ರಜ್ಞಾನದ ಕಾಲ. ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಆ್ಯಪ್‌ಗಳನ್ನೇ ನೆಚ್ಚಿಕೊಂಡಿರುತ್ತೇವೆ. ಈಗಿನ ತಲೆಮಾರಿನವರಂತೂ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿಯೇ ಅತೀ ಹೆಚ್ಚು ಸಮಯ ಕಳೆಯುವವರು. ಇದರ ಜತೆಗೆ ಹದಿಹರೆಯದಲ್ಲಿ ಉಕ್ಕೇರುವ ಭಾವನೆಗಳಿಗೆ ಸ್ಪಂದಿಸುವ ಸಂಗಾತಿಗಾಗಿಯೂ ಈಗ ಕಷ್ಟಪಡಬೇಕಾಗಿಲ್ಲ. ಪ್ರಣಯ ಪಕ್ಷಿಗಳಿಗೆ ಒಂದಷ್ಟು ಆ್ಯಪ್‌ಗಳು ಪ್ರೀತಿಯ ರಾಯಭಾರಿಯಾಗಿವೆ. ಸಂಗಾತಿಯನ್ನು ಹುಡುಕಿಕೊಡಲೆಂದೇ ಆನ್‌ಲೈನ್‌ನಲ್ಲಿ ಸಾಕಷ್ಟು ಡೇಟಿಂಗ್ ಆ್ಯಪ್‌ಗಳಿವೆ. ನಿಮ್ಮ ಚೆಂದದ ಫೋಟೊವೊಂದನ್ನು ಪ್ರೊಫೈಲ್‌ಗೆ ಅಪ್‌ಲೋಡ್ ಮಾಡಿ ನಿಮ್ಮ ಇಷ್ಟಕಷ್ಟಗಳನ್ನೆಲ್ಲಾ ಅಲ್ಲಿ ಸೇರಿಸಿದರೆ ನಿಮಗೆ ತಕ್ಕದಾದ ಸರಿ ಜೋಡಿಯ ಸಂಪರ್ಕಕ್ಕೆ ಕೊಂಡಿಯಾಗಿರುತ್ತವೆ ಈ ಡೇಟಿಂಗ್ ಆ್ಯಪ್‌ಗಳು. ಈ ಆ್ಯಪ್ ಮೂಲಕ ಪರಿಚಯವಾದವರ ಬಳಿ ತಮ್ಮ ವೈಯಕ್ತಿಕ ಮಾಹಿತಿ, ಭಾವನೆಗಳನ್ನು ಹಂಚಿಕೊಳ್ಳುವ ಕೆಲಸವೂ ನಡೆಯುತ್ತದೆ. ಹದಿಹರೆಯದವರಿಂದ ಹಿಡಿದು ವಯಸ್ಸಾದವರೂ ಕೂಡ ಈ ಡೇಟಿಂಗ್ ಆ್ಯಪ್‌ನ ಮೋಹಿಗಳಾಗಿದ್ದಾರೆ. ವಿದೇಶದ 83 ವರ್ಷದ ವೃದ್ಧೆಯೊಬ್ಬಳು ಈ ಡೇಟಿಂಗ್ ಆ್ಯಪ್ ಮೂಲಕವೇ ‘ಯಂಗ್ ಆದ ಸಂಗಾತಿ ಬೇಕಿದ್ದಾನೆ’ ಎಂಬ ಕೋರಿಕೆಯನ್ನು ಸಲ್ಲಿಸಿದ್ದಾರಂತೆ!

ಪ್ರೀತಿ ಅರಸುವವರಿಗೆ ಆ್ಯಪ್‌ ಎಂಬ ಬ್ರೋಕರ್‌!

ಭಾರತದಲ್ಲಿ ಈಗ ಡೇಟಿಂಗ್ ಆ್ಯಪ್‌ ಮೂಲಕ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇದು ಸ್ಮಾರ್ಟ್ ಫೋನ್‌ಗಳ ಕಾಲವಾದ್ದರಿಂದಜನಸಾಮಾನ್ಯರು ಕೂಡ ಇದರಿಂದ ಹೊರತಾಗಿಲ್ಲ.ಸ್ಮಾರ್ಟ್‌ಫೋನ್ ಪರದೆಯ ಮೇಲಿರುವ ಡೇಟಿಂಗ್ ಆ್ಯಪ್ ಮೇಲೆಕೈ ಬೆರಳನ್ನು ಎಡ, ಬಲಕ್ಕೆ ತಿರುಗಿಸಿದರೆ ಬೇಕಾದಷ್ಟು ಪ್ರೊಫೈಲ್‌ಗಳು ಕಣ್ಮುಂದೆ ಸರಿದುಹೋಗುವುದರಿಂದ ಪ್ರೀತಿಗಾಗಿ ಹಳೆಯ ಪದ್ಧತಿಗಳನ್ನು ಅನುಸರಿಸುವ ಪಾಡು ಈಗಿನವರಿಗಿಲ್ಲ. ಈಡೇಟಿಂಗ್ ಆ್ಯಪ್‌ಗಳ ಮೂಲಕ ಪ್ರೀತಿಯನ್ನು ಅರಸುವವರಿಗೆಂದೇ ಟಿಂಡರ್, ಬಂಬಲ್, ಓಕೆಕ್ಯುಪಿಡ್, ಮ್ಯಾಚ್.ಕಾಂನಂತಹ ಸಾಕಷ್ಟು ಆ್ಯಪ್‌ಗಳು ಇವೆ. ಇದರಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಡೇಟಿಂಗ್ ಆಪ್ಲಿಕೇಷನ್ ಟಿಂಡರ್. ಈ ಟಿಂಡರ್ ಆ್ಯಪ್ ಮೂಲಕ ಸಾಕಷ್ಟು ಮಂದಿ ತಮ್ಮಿಷ್ಟದ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ. ಒಂದಷ್ಟು ಚೆಂದದ ಫೋಟೊ ಅಪ್‌ಲೋಡ್ ಮಾಡಿದರೆ ಮಾತ್ರ ನಿಮ್ಮ ಪ್ರೊಪೈಲ್‌ಗೆ ಲೈಕ್‌ಗಳು ಬರುತ್ತವೆ. ಇಷ್ಟವಾದ ಸಂಗಾತಿಯ ಜತೆ ಚ್ಯಾಟ್ ಮಾಡಿ ಒಂದಿಷ್ಟು ಪ್ರೀತಿ– ಪ್ರೇಮದ ಮಾತುಗಳನ್ನಾಡಿ, ಮದುವೆಗಾಗಿ ಕೂಡ ಈ ಡೇಟಿಂಗ್ ಆ್ಯಪ್‌ಗಳ ಮೊರೆ ಹೋಗುವವರ ಸಂಖ್ಯೆ ಕಡಿಮೆಯೇನಿಲ್ಲ.

ಇಷ್ಟೇ ಅಲ್ಲ, ಒಮ್ಮೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ, ಸಂಬಂಧ ಕುದುರಿ, ಒಂದಿಷ್ಟು ಸುತ್ತಾಡಿ, ಜಗಳವಾಡಿಯೋ ಅಥವಾ ಹೊಸ ಸಂಗಾತಿ ಸಿಕ್ಕಿಯೋ ಅದು ಬ್ರೇಕ್ ಔಟ್ ಆದರೂ ಹಳೆ ಸಂಗಾತಿ ಏನು ಮಾಡುತ್ತಿದ್ದಾನೆ/ಳೆ ಎಂದು ಅವರ ಪೋಸ್ಟ್‌ಗಳನ್ನು ನೋಡಲು ಕೂಡಆರ್ಬಿಟಿಂಗ್ ಎಂಬುದೊಂದು ಡೇಟಿಂಗ್‌ನಲ್ಲಿಟ್ರೆಂಡ್ ಆಗಿದೆ. ತಮ್ಮ ಲೈಂಗಿಕ ಅನುಭವಗಳನ್ನು ಚ್ಯಾಟ್ ಮೂಲಕ ಹಂಚಿಕೊಳ್ಳುವ ಒಂದು ಸಂಸ್ಕೃತಿ ಕೂಡ ಈಗ ಬೆಳೆದು ನಿಂತಿದೆ.

ನಿಧಾನವೇ ಪ್ರಧಾನ

ಗಡಿಬಿಡಿಯಿಲ್ಲದೇ ಸಂಗಾತಿಯನ್ನು ಆಯ್ಕೆ ಮಾಡುವವರಿಗೆಂದೇ ಸ್ಲೋ ಡೇಟಿಂಗ್ ಕೂಡ ಇದೆ. ಅವಸರ ಮಾಡದೇ ಮನಮೆಚ್ಚಿದ ಸಂಗಾತಿಯ ಕುರಿತು ಸರಿಯಾಗಿ ತಿಳಿದುಕೊಂಡು ನಂತರ ಅವರೊಂದಿಗೆ ಬೆರೆಯಲು ಇದು ಸಹಾಯ ಮಾಡುತ್ತದೆ.

ಮೊದಲೇ ಹೇಳಿದಂತೆ, ಕೇವಲ ಯುವಜನತೆ ಮಾತ್ರ ಇದರ ಬಳಕೆದಾರರು ಎಂದೇನೂ ಅಲ್ಲ. ಈಗಾಗಲೇ ದಾಂಪತ್ಯದಲ್ಲಿ ಇರುವವರು, ವಿಚ್ಛೇದಿತರು ಮತ್ತಿತರರು ಕೂಡ ಇಲ್ಲಿ ಬಂದು ಸಾಂಗತ್ಯಕ್ಕಾಗಿ ಅರಸುತ್ತಾರೆ. ಆದರೆ ಹೀಗೆ ಬರುವವರಲ್ಲಿ ಶೇ 90ರಷ್ಟು ಪ್ರಕರಣಗಳು ನಕಲಿ ಇರುತ್ತವೆ ಎನ್ನುತ್ತಾರೆ ಆ್ಯಪ್‌ಗಳನ್ನು ರೂಪಿಸುವ ಎಂಜಿನಿಯರ್ ಕುಮಾರ್.

ಪ್ರೀತಿಯನ್ನೂ ವಂಚಿಸುವ ಆ್ಯಪ್‌

ಈ ಡೇಟಿಂಗ್ ಆ್ಯಪ್ ಎಷ್ಟು ಬಳಕೆಸ್ನೇಹಿಯೋ ಅಷ್ಟೇ ಅಪಾಯಕಾರಿಯೂ ಹೌದು. ಡೇಟಿಂಗ್ ಆ್ಯಪ್ ಮೂಲಕ ಪ್ರೀತಿ ಹುಡುಕಲು ಹೋಗಿ ಹಣ ಕಳೆದುಕೊಂಡವರು, ಒಂಟಿತನದಿಂದ ಬಳಲುತ್ತಿದ್ದ ಟೆಕಿಯೊಬ್ಬರು ಸಂಗಾತಿಯನ್ನು ಹುಡುಕಲು ಈ ಡೇಟಿಂಗ್ ಆ್ಯಪ್ ಗೀಳಿಗೆ ಸಿಕ್ಕಿ ನಿಮ್ಹಾನ್ಸ್‌ಗೆದಾಖಲಾದದ್ದು, ಸುಳ್ಳು ಮಾಹಿತಿ ಕೊಟ್ಟು ಮೋಸ ಮಾಡಿದ್ದು... ಹೀಗೆ ನೂರಾರು ದೂರುಗಳ ಪಟ್ಟಿಯೇ ಈ ಡೇಟಿಂಗ್ ಆ್ಯಪ್‌ಗಳ ಮೇಲೆ ಇದೆ.

ಇಂತಹ ಆ್ಯಪ್ ಮೂಲಕ ಸಂಬಂಧ ಕುದುರಿಸಿಕೊಂಡು ವಾಟ್ಸ್‌ಆ್ಯಪ್‌ ಚಾಟ್, ವಿಡಿಯೊ ಕರೆ ಮಾಡಿ ಅದರಲ್ಲಿ ಬೇರೆಯದೇ ಬೇಡಿಕೆ ಇಟ್ಟು ದುಡ್ಡು ಪೀಕುವವರೂ ಇದ್ದಾರೆ. ಇದಕ್ಕೆ ಸೆಕ್ಸ್‌ಟೋರ್ಶನ್ ಎನ್ನುತ್ತಾರೆ. ಸಮೀಕ್ಷೆಯೊಂದರ ಪ್ರಕಾರ ಹದಿಹರೆಯದವರಿಂದ ಹಿಡಿದು ವಯಸ್ಸಾದವರು ಈ ‘ಸೆಕ್ಸ್ಟಿಂಗ್’ ನ ಜಾಲಕ್ಕೆ ಸಿಲುಕಿ ಮಾರ್ಯಾದೆ, ಹಣ ಎರಡನ್ನೂ ಕಳೆದುಕೊಂಡವರಿದ್ದಾರೆ.

ಬೆಂಗಳೂರು ಪ್ರೇಮಿಗಳು ಮೊದಲ ಸಾಲಿನಲ್ಲಿ..

ಟಿಂಡರ್ ಆ್ಯಪ್ ಪ್ರಕಾರ ಈ ಡೇಟಿಂಗ್ ಆ್ಯಪ್ ಬಳಕೆಯಲ್ಲಿ ದೆಹಲಿಯ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆಯಂತೆ. ಇದರಲ್ಲಿ ಬಹಳಷ್ಟು ಮಂದಿ ವಿವಾಹಿತ ಪುರುಷರು ಚಂದಾದಾರರಾಗಿದ್ದಾರಂತೆ. ತುಂಬಾ ನಯವಾಗಿ ಮಾತನಾಡಿ, ತಮ್ಮ ನಿಜವಾದ ಸಂಗತಿಯನ್ನು ಮರೆಮಾಚಿ, ಹುಡುಗಿಯರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿ ಜತೆ ಸಂಭಾಷಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು.

ಎಚ್ಚರಿಕೆ ಇರಲಿ

ನಕಲಿ ಪ್ರೊಫೈಲ್‌

ಅಲ್ಪಾವಧಿ ಸಂಬಂಧ

ನಿಜವಾದ ವ್ಯಕ್ತಿತ್ವ ಅರಿಯಲು ಅವಕಾಶವಿಲ್ಲ

ಡೇಟಿಂಗ್ ಆ್ಯಪ್ ಬಳಸುವಾಗ ಹೆಚ್ಚು ಜಾಗೃತಿ ವಹಿಸಬೇಕು.

ಪರಿಚಯವಾದ ನಂತರ ಮೆಸೇಜ್, ವಿಡಿಯೊ, ಅವರೊಂದಿಗೆ ನಡೆಸಿದ ಮಾತುಕತೆ ಯಾವುದನ್ನೂ ಫೋನ್‌ನಿಂದ ಡಿಲೀಟ್ ಮಾಡಬಾರದು. ಕೆಲವರು ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ದುಡ್ಡು ಪೀಕುವ ಹುನ್ನಾರದಲ್ಲಿರುತ್ತಾರೆ.

ಅಕೌಂಟ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್‌ ಬಗ್ಗೆ ಜಾಗೂರಕತೆ ಇರಲಿ.

ಸಂಗಾತಿಯ ಆಯ್ಕೆ ಮಾಡಿಕೊಳ್ಳುವುದಕ್ಕೆ ಒಂದಷ್ಟು ಸಮಯ ತೆಗೆದುಕೊಳ್ಳಿ

ಸರಿಯಾಗಿ ತಿಳಿಯದೇ ಪ್ರೀತಿಸುವ ಸಾಹಸಕ್ಕೆ ಇಳಿಯಬೇಡಿ.

ಪ್ರಯೋಜನಗಳು

ಹೊಸಬರೊಂದಿಗೆ ಒಡನಾಡುವ ಅವಕಾಶ

ಸಂಬಂಧ ಕುದುರದಿದ್ದರೂ ಒಳ್ಳೆಯ ಸ್ನೇಹಿತರು ಸಿಗಬಹುದು

ಹೊಸ ಜಾಗದಲ್ಲಿ ನಿಮ್ಮ ಒಂಟಿತನ ನೀಗಬಹುದು

ವೃತ್ತಿಯಲ್ಲಿ ನೆರವಾಗಲು ನೆಟ್‌ವರ್ಕ್‌ ವಿಸ್ತರಣೆ

ಸಾಮಾಜಿಕವಾಗಿ ಬೆರೆತು ವೃತ್ತಿಯ ಏಕತಾನತೆ ಮರೆಯಬಹುದು

ಈ ಡೇಟಿಂಗ್ ಸೈಟ್‌ಗಳನ್ನು ಕೆಲವರು ಮೋಜು, ಮಸ್ತಿ ಅಥವಾ ಒಂದು ಡೇಟಿಂಗ್ ಅನುಭವವನ್ನು ಅನುಭವಿಸುವುದಕ್ಕೆ ಉಪಯೋಗಿಸಿಕೊಂಡರೆ ಇನ್ನು ಕೆಲವರು ತಮ್ಮ ಜೀವನಕ್ಕೊಬ್ಬರು ಸಂಗಾತಿ ಬೇಕು ಎಂದು ಹುಡುಕುವುದಕ್ಕೆ ಉಪಯೋಗಿಸುತ್ತಾರೆ. ಕೆಲವರಿಗೆ ಇದರಿಂದ ಸಾಕಷ್ಟು ಕೆಟ್ಟ ಅನುಭವವೂ ಆಗಿದೆ. ತಮ್ಮ ನಿಜವಾದ ಮಾಹಿತಿ ಕೊಡುವುದರ ಬದಲು ಸುಳ್ಳು ಮಾಹಿತಿ ಕೊಟ್ಟು ನೋಂದಾಯಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಿದೆ. ಮಹಿಳೆಯರನ್ನು ಕೆಟ್ಟದಾಗಿ ಬಳಸಿಕೊಳ್ಳುವವರೂ ಇದ್ದಾರೆ. ಹಾಗೆಯೇ ಕೆಲವು ಮಹಿಳೆಯರು ಅವರ ಅವಶ್ಯಕತೆ ಮತ್ತು ಉದ್ದೇಶಗಳಿಗಾಗಿ ಒಂದು ರಾತ್ರಿಯನ್ನು ಕಳೆಯಲು ಒಪ್ಪಿಕೊಳ್ಳುವವರೂ ಇದ್ದಾರೆ ಎನ್ನುತ್ತಾರೆ ಆ್ಯಪ್ ತಜ್ಞಸತೀಶ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT