ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂದನೆಗೆ ನೋಯದಿರಿ!

Last Updated 22 ನವೆಂಬರ್ 2019, 19:30 IST
ಅಕ್ಷರ ಗಾತ್ರ

ನವೆಂಬರ್‌ 25, ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಯ ಅಂತರರಾಷ್ಟ್ರೀಯ ದಿನ. ದೈಹಿಕ ಹಿಂಸೆಯಷ್ಟೇ ಅಲ್ಲ, ಮೌಖಿಕ ನಿಂದನೆಯೂ ಅಷ್ಟೇ ಗಂಭೀರ ಎನ್ನುವುದನ್ನು ನೆನಪಿಸಬೇಕಾದ ದಿನವಿದು. ತಮ್ಮ ವ್ಯಕ್ತಿತ್ವ, ದೇಹ, ನಡೆ–ನುಡಿಗಳ ಕುರಿತು ಆಡುವ ಕುಹಕದ ಮಾತುಗಳನ್ನು ಸಹಿಸಿ ಸುಮ್ಮನಿರುವುದಕ್ಕಿಂತ ಪ್ರಶ್ನಿಸುವ, ಪ್ರತಿಭಟಿಸುವ ಅಸ್ತ್ರ ಪರಿಣಾಮಕಾರಿ ಆಗಬಲ್ಲದು.

‘ಓಹ್... ನೀವಾ? ನಾನು ಯಾರೊ ಗಂಡಸು ಅಂದುಕೊಂಡೆ. ಸ್ವಲ್ಪ ನಿಧಾನವಾಗಿ ಹೆಜ್ಜೆ ಹಾಕಿ, ಭೂಮಿ ನಡುಗುತ್ತಿದೆ...’ ಎಂದಾಗ ಥೈರಾಯ್ಡ್‌ನಿಂದಾಗಿ ನಾಲ್ಕು ತಿಂಗಳಲ್ಲಿ ಡಬಲ್‌ ತೂಕ ಹೆಚ್ಚಿಸಿಕೊಂಡ ಮಾಯಾ ಮಂಕಾದಳು.

‘ನೀವು ದುಡಿದ ದುಡ್ಡನ್ನೆಲ್ಲಾ ನಿಮ್ಮ ಲಿಪ್‌ಸ್ಟಿಕ್‌ಗೇ ಹಾಕ್ತೀರಾ?’ ಎನ್ನುವ ಮಾತಿಗೆ ಉತ್ಸಾಹದಿಂದ ಅಲಂಕರಿಸಿಕೊಂಡು ಬಂದ ಮಾಧವಿಗೆ ಪಿಚ್ಚೆನಿಸಿತು.

ಇತರರು ಮೂರು ವಾರ ತೆಗೆದುಕೊಳ್ಳುವ ಕೆಲಸವನ್ನು ಅಚ್ಚುಕಟ್ಟಾಗಿ, ಕುಂದಿಲ್ಲದೇ ಒಂದೇ ವಾರದಲ್ಲಿ ಮಾಡಿ ಮುಗಿಸಿದ ಹರ್ಷಿಣಿಯನ್ನು ನಾಲ್ಕು ಜನರ ಮುಂದೆ ನಿಲ್ಲಿಸಿ, ‘ಇದೇನು ಅರೆಬರೆ ಕೆಲಸ ಮಾಡಿದ್ದೀರಿ? ನಿಮ್ಮ ಯೋಗ್ಯತೆಯೇ ಇಷ್ಟು’ ಎಂದು ಅವಮಾನಿಸಿದ ಮ್ಯಾನೇಜರ್‌.

ದಪ್ಪ ಇದ್ದವರಿಗೊಂದು, ಸಣಕಲಿದ್ದವರಿಗೊಂದು, ಅಲಂಕಾರ ಪ್ರಿಯರಿಗೊಂದು, ಬೇಗ ಕೆಲಸ ಮುಗಿಸಿದರೆ ಒಂದು, ತಡವಾದರೆ ಮತ್ತೊಂದು... ಮಾತಿನಿಂದಲೇ ಮನಕ್ಕೆ ಘಾಸಿ ಮಾಡಿ, ಆತ್ಮವಿಶ್ವಾಸ ಕುಗ್ಗಿಸುವ ಇಂತಹ ನಿಂದನಾಮತಿಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯೇ ಸರಿಯಾದ ಉತ್ತರ.

ಹೌದು, ದೈಹಿಕ ಕಿರುಕುಳ ಮಾತ್ರವಲ್ಲ, ಇಂತಹ ಮಾತುಗಳು, ನಿಂದನೆಗಳು, ಕುಹಕಗಳು ಸಹ ಕಿರುಕುಳದ ವಿಧಗಳೇ ಎನ್ನುತ್ತದೆ ಕಾನೂನು. ಕೆಲಸದ ಸ್ಥಳದಲ್ಲಿ ವ್ಯಕ್ತಿತ್ವ, ಉಡುಗೆ–ತೊಡುಗೆಗಳ ಬಗ್ಗೆ ಮಾತಾಡುವುದು, ಕೀಳಾಗಿ ಕಾಣುವುದು, ಬೆದರಿಸುವುದು, ತಾರತಮ್ಯ ಸಹ ಲೈಂಗಿಕ ಕಿರುಕುಳದಷ್ಟೆ ಗಂಭೀರವಾದುದು. ಅಷ್ಟೆ ಅಲ್ಲ, ಇಂತಹ ಕೃತ್ಯಗಳು ಭಾರತದಲ್ಲಿ ಲೈಂಗಿಕ ಕಿರುಕುಳಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ ಎನ್ನುತ್ತದೆ ಅಧ್ಯಯನವೊಂದು.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಭಾರತದಲ್ಲಿ ಹೆಚ್ಚು. ಹೆಣ್ಣುಮಕ್ಕಳ ಮೇಲೆ ಭಾರತದಲ್ಲಿ ನಡೆಯುವಷ್ಟು ತರತರದ ಅಪರಾಧಗಳು ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ನಡೆಯುವುದಿಲ್ಲ ಎಂದು ಥಾಮಸ್ ರಾಯ್ಟರ್ ಫೌಂಡೇಶನ್ ಸಮೀಕ್ಷೆ ಸಾರುತ್ತದೆ. ಅಂತೆಯೇ ತಮ್ಮದೇ ಮನೆಯಲ್ಲಿ, ಎರಡನೇ ಮನೆ ಎನ್ನುವ ಕಚೇರಿಗಳಲ್ಲಿ ಹೆಣ್ಣುಮಕ್ಕಳನ್ನು ನಿಂದಿಸುವ ಮನಸ್ಥಿತಿ ಇಲ್ಲಿ ಹೆಚ್ಚು ಎನ್ನಲಾಗುತ್ತದೆ.

ಇದನ್ನೂ ಓದಿ:ಛಲವಂತೆ ಕಿರಣ್

ಕೆಲವರು ಹೊಗಳಿಕೆಯ ರೂಪದಲ್ಲಿ, ಕೆಲವರು ಕೀಳರಿಮೆ ಹುಟ್ಟುವ ರೀತಿಯಲ್ಲಿ ಮಹಿಳಾ ಸಹೋದ್ಯೋಗಿಗಳ ಬಗ್ಗೆ ಟೀಕೆಗಳನ್ನು ಮಾಡಬಹುದು. ಯಾವುದೋ ಅಸಮಾಧಾನ, ಆಕ್ರೋಶದಿಂದ ಮಹಿಳಾ ಉದ್ಯೋಗಿಗಳನ್ನು ಅವಮಾನಿಸುವ, ಎದೆಗುಂದುವಂತೆ ಮಾಡುವ, ಇತರರೆದುರು ಕೀಳಾಗಿ, ತುಚ್ಛವಾಗಿ ಕಾಣುವ ಮನಸ್ಥಿತಿಗೆ ಮದ್ದಿಲ್ಲ. ತೀಕ್ಷ್ಣ ಪ್ರತಿಕ್ರಿಯೆಯೇ ಇದಕ್ಕೆ ರಾಮಬಾಣ.

ಪ್ರತಿರೋಧವೇ ಪರಿಹಾರ

ತಮ್ಮ ಘನತೆ–ಗೌರವ, ವ್ಯಕ್ತಿತ್ವ, ಸ್ಥಾನ–ಮಾನಕ್ಕೆ ಕುಂದೆನಿಸುವ, ಮನಸ್ಸಿಗೆ ಘಾಸಿ ಮಾಡುವ ಮಾತುಗಳು... ಅವು ಯಾರಿಂದಲೇ ಬರಲಿ, ಯಾವ ಹಿಂಜರಿಕೆಯೂ ಇಲ್ಲದೆ ಪ್ರಶ್ನಿಸುವ, ಪ್ರತಿರೋಧಿಸುವ ಛಾತಿ ಬೇಕು. ಮೊದಲ ಹೆಜ್ಜೆಯಾಗಿ ಅವರ ಮಾತುಗಳು ತಮಗಿಷ್ಟವಾಗಲಿಲ್ಲ ಎನ್ನುವುದನ್ನು ಕಣ್ಣ ಭಾಷೆಯಲ್ಲಿಯೇ ಸೂಚಿಸಬಹುದು. ಮುಂದಿನ ಹಂತವಾಗಿ ಅವರ ನಡವಳಿಕೆಯನ್ನು ನಿರ್ದಿಷ್ಟವಾದ, ಸ್ಪಷ್ಟವಾದ ಮತ್ತು ದೃಢವಾದ ಮಾತುಗಳಿಂದ ಖಂಡಿಸಬೇಕು. ಅವರಾಡುವ ಮಾತುಗಳು, ನಿಂದನೆಗಳು ಅಪರಾಧ ಎನ್ನುವುದನ್ನು ಕಿರುಕುಳ ನೀಡಿದವನಿಗೆ ಹೇಳಬೇಕು. ಘಟನೆಯ ವಿವರಗಳೊಂದಿಗೆ ಅದನ್ನು ನಿಲ್ಲಿಸುವಂತೆ ರುಕುಳ ನೀಡಿದವನಿಗೆ ಇಮೇಲ್‌ ಕಳುಹಿಸುವುದು ಉತ್ತಮ. ಇದರಿಂದ ಮುಂದಿನ ಹೆಜ್ಜೆಗೆ ಒಂದು ದಾಖಲೆಯೂ ಉಳಿಯುತ್ತದೆ.

ಇಂತಹ ಪ್ರತಿಕ್ರಿಯೆ–ಪ್ರತಿರೋಧದ ಹಂತದಲ್ಲಿ ಹೆಚ್ಚಿನ ಕಿರಿಕಿರಿಗಳು ನಿಂತು ಹೋಗುತ್ತವೆ.ಒಂದು ವೇಳೆ ಅನಂತರವೂ ಮುಂದುವರೆದರೆ ಮುಂದಿನ ಹೆಜ್ಜೆಗೆ ಸಿದ್ಧರಾಗಬೇಕು. ಯಾವುದೇ ಪ್ರಕರಣ ಅಥವಾ ಘಟನೆಯನ್ನು ವರದಿ ಮಾಡುವ ಮೊದಲು ಸಾಧ್ಯವಾದಷ್ಟು ಸಾಕ್ಷ್ಯಗಳನ್ನು ಸಿದ್ಧಪಡಿಸುವುದು ಮುಖ್ಯ. ನಿಮ್ಮ ದೂರನ್ನು ಪರಿಶೀಲಿಸಲು, ದೃಢೀಕರಿಸಲು ಮತ್ತು ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಇವುಗಳ ಅಗತ್ಯವಿರುತ್ತದೆ. ಘಟನೆಯ ಸಮಯದಲ್ಲಿ ಹಾಜರಿದ್ದ ಸಹೋದ್ಯೋಗಿಗಳ ನೆರವು ಪಡೆಯಬಹುದು. ಆನ್‌ಲೈನ್ ಮಾಧ್ಯಮದ ಮೂಲಕ ನಡೆದ ಕಿರುಕುಳವಾದರೆ, ಸ್ನ್ಯಾಪ್‌ಶಾಟ್‌ಗಳನ್ನು ತೆಗೆದಿಟ್ಟುಕೊಳ್ಳ ಬಹುದು. ಇದೆಲ್ಲ ಪೂರ್ಣಗೊಂಡ ಮೇಲೆ ಅದನ್ನು ಮಾನವ ಸಂಪನ್ಮೂಲ ವಿಭಾಗ (ಎಚ್‌ಆರ್‌) ಅಥವಾ ಸಮಿತಿಯ (POSH) ಗಮನಕ್ಕೆ ತರಬಹುದು. ಬಹುತೇಕ ಪ್ರಕರಣಗಳು ಇಲ್ಲಿ ಇತ್ಯರ್ಥವಾಗುತ್ತವೆ. ಹಾಗೊಂದು ವೇಳೆ ಅಲ್ಲಿಯೂ ಪರಿಹಾರ ದೊರಕದೇ ಹೋದಾಗ ಕಾನೂನು ನೆರವು ಪಡೆಯಬಹುದು.

‘ಉದ್ಯೋಗಸ್ಥ ಮಹಿಳೆಯರ ಆತ್ಮಸ್ಥೈರ್ಯವನ್ನು ಕುಗ್ಗಿಸುವುದು ಗಂಭೀರ ಅಪರಾಧ. ಇದು ಮಾನಸಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ. ಆದರೆ ಯಾವುದು ಮಾನಸಿಕ ದೌರ್ಜನ್ಯ ಎನ್ನುವುದಕ್ಕೆ ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಹಲವಾರು ಪ್ರಕರಣಗಳಲ್ಲಿ ಸುಪ್ರಿಂಕೋರ್ಟ್‌ ಮಾನಸಿಕ ದೌರ್ಜನ್ಯವನ್ನು ಉಲ್ಲೇಖಿಸಿದೆ. ಉದ್ಯೋಗಸ್ಥ ಮಹಿಳೆಯ ಮನೋಸ್ಥೈರ್ಯವನ್ನು ಕುಗ್ಗಿಸಲು ಯತ್ನಿಸಿದ ವ್ಯಕ್ತಿ ಹಾಗೂ ಆತನ ಉದ್ದೇಶವನ್ನು ಆಧರಿಸಿ ಅಪರಾಧದ ತೀವ್ರತೆಯನ್ನು ನಿರ್ಧರಿಸಲಾಗುತ್ತದೆ. ಮಹಿಳೆಯೇ ಇರಲಿ, ಪುರುಷನೇ ಆಗಲಿ ಅವಮಾನವನ್ನು ಪ್ರತಿಯೊಬ್ಬರೂ ಖಂಡಿಸಬೇಕು’ ಎನ್ನುತ್ತಾರೆ ವಕೀಲೆ ಅಂಜಲಿ ರಾಮಣ್ಣ.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಮಾತ್ರವಲ್ಲ, ಇಂತಹ ಎಲ್ಲಾ ರೀತಿಯ ಕಿರಿಕಿರಿಗಳನ್ನೂ ಪ್ರಶ್ನಿಸಲು ಭಾರತೀಯ ಕಾರ್ಮಿಕ ಕಾನೂನಿನಲ್ಲಿ ಅವಕಾಶವಿದೆ. ಭಾರತೀಯ ಸಂವಿಧಾನದ 14ನೇ ವಿಧಿಯು ಕೆಲಸದ ಸ್ಥಳದಲ್ಲಿ ಸಮಾನತೆಯ ಪರಿಕಲ್ಪನೆಗೆ ಒತ್ತು ಕೊಡುತ್ತದೆ. ಅದರಲ್ಲೂ ಉದ್ಯೋಗಸ್ಥ ಹೆಣ್ಣುಮಕ್ಕಳ ಹಿತಾಸಕ್ತಿಯನ್ನು, ಹಕ್ಕುಗಳನ್ನು ಗೌರವಿಸುವ ಸಾಕಷ್ಟು ಕಲಂಗಳಿವೆ. ಸಮಾನ ಅವಕಾಶ, ಸಮಾನ ವೇತನ, ಸಮಾನ ಘನತೆ ಎಲ್ಲರ ಹಕ್ಕು. ಯಾರೇ ಆಗಲಿ, ಆತ್ಮಗೌರವಕ್ಕೆ ಧಕ್ಕೆ ಬರುವಂತಹ ಪ್ರಸಂಗ ಬಂದಾಗ ಸುಮ್ಮನಿರುವುದು ತರವಲ್ಲ.

ಕಚೇರಿಯಲ್ಲಿ ಅಥವಾ ಸ್ವಂತ ಉದ್ಯಮ ನಿರ್ವಹಿಸುವ ಮಹಿಳೆಯರು ದೈಹಿಕ ದೌರ್ಜನ್ಯ, ಮಾನಸಿಕ ಹಿಂಸೆಯನ್ನು ಮೌನದಿಂದ ಸಹಿಸುವ ಬದಲು ಸಂಘಟಿತರಾಗಿ ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಿದರೆ, ಕಾನೂನು ಮೊರೆ ಹೋದರೆ ಇಂಥದ್ದಕ್ಕೆ ಕಡಿವಾಣ ಬೀಳುವುದು ಖಚಿತ.

ಮಾನಸಿಕ ದೌರ್ಜನ್ಯ ಕಚೇರಿಯಲ್ಲಷ್ಟೇ ಅಲ್ಲ, ಮನೆಯಲ್ಲಿಯೂ ದುಡಿಯುವ ಮಹಿಳೆಯ ಅಂತರಾತ್ಮವನ್ನು ಕೆಣುಕುತ್ತಿದೆ ಎನ್ನುವುದು ಕಹಿ ಸತ್ಯ. ಚೆನ್ನಾಗಿ ಅಲಂಕರಿಸಿಕೊಂಡು ಕಚೇರಿಗೆ ಹೋದರೆ, ಸಭೆ–ಕಚೇರಿ ಪ್ರವಾಸಗಳ ಅನಿವಾರ್ಯತೆ ಎದುರಾದರೆ ಮನೆಯವರಿಂದ ಅವಹೇಳನ, ಅವಮಾನಕರ ಮಾತುಗಳು ಕೇಳಿಬರಬಹುದು. ಚೆನ್ನಾಗಿ, ಒಪ್ಪವಾಗಿ ಡ್ರೆಸ್‌ ಮಾಡಿಕೊಂಡು ಆಫೀಸ್‌ಗೆ ಹೊರಟರೆ ‘ಕೆಲಸ ಮಾಡೋಕೆ ಹೋಗ್ತೀಯೊ, ಫ್ಯಾಷನ್‌ ಮಾಡೋಕೆ ಹೋಗ್ತೀಯೊ?‘ ಎಂದು ನಾದಿನಿ ಹಂಗಿಸಿದ್ದನ್ನು ಹೇಳಿಕೊಂಡು ಟಿವಿ ಪತ್ರಕರ್ತೆಯಾಗಿರುವ ಗೆಳತಿಯೊಬ್ಬಳು ನನ್ನೆದುರು ಗೋಳಾಡಿದಳು.

ತಾವು ಮಾಡುವ ಉದ್ಯೋಗದ ಕಾರಣದಿಂದಲೂ ಮೂದಲಿಕೆಗೆ ಗುರಿಯಾಗುವವರು ಸಾಕಷ್ಟು ಜನ. ‘ನಿನ್ನ ಲಾಯರ್‌ಗಿರಿ ಮನೆಯಲ್ಲಿ ಇಟ್ಕೋಬೇಡ’, ‘ಇಲ್ಲಿ ನಿನ್ನ ಪೊಲೀಸ್‌ ದರ್ಬಾರ್‌ ನಡೆಸಬೇಡ’, ‘ನಿನ್ನ ರಾಜಕೀಯ ಬುದ್ಧಿಯನ್ನು ಮನೆಯಿಂದ ಹೊರಗಿಟ್ಟುಕೊ’ ಎನ್ನುವಂತಹ ಮಾತುಗಳು ನಮ್ಮವರಿಂದಲೇ, ನಮ್ಮ ಮನೆಯಿಂದಲೇ ಎದ್ದು ಬಂದಾಗ ಪಿಚ್ಚೆನಿಸುತ್ತದೆ. ಒಡಹುಟ್ಟಿದ ಅಣ್ಣ–ತಮ್ಮ, ಕಟ್ಟಿಕೊಂಡ ಗಂಡ, ಅತ್ತೆ–ನಾದಿನಿ, ಓರಗಿತ್ತಿ... ನಮ್ಮವರೇ ಎನಿಸಿಕೊಂಡ ಇಂಥವರ ವಿರುದ್ಧ ಕಾನೂನು ಸಮರ... ಅದೂ ಇಷ್ಟು ಸಣ್ಣ ವಿಷಯಕ್ಕೆ... ಅದಕ್ಕೂ ಮನಸ್ಸು ಒಪ್ಪುವುದಿಲ್ಲ.

ಹಾಗಾದರೆ ಮನಸ್ಸಿಗೆ ಹಿಂಸೆಯಾಗುವ, ಕುಗ್ಗುವಂತೆ ಮಾಡುವ, ಅವಮಾನ ಎನಿಸುವ ಇಂತಹ ಪ್ರಸಂಗಗಳನ್ನು ಎದುರಿಸುವುದು ಹೇಗೆ? ನಮ್ಮ ವೃತ್ತಿ–ಪ್ರವೃತ್ತಿಗಳ ಬಗ್ಗೆ ಗೌರವ–ಪ್ರೀತಿ ಬೆಳೆಸಿಕೊಳ್ಳುವಂತೆ ಮನೆಯವರಿಗೆ ತಿಳಿ ಹೇಳಬೇಕು. ನಮ್ಮ ನಡವಳಿಕೆಯೂ ಹಾಗೇ ಇರಬೇಕು. ಮಾತು–ಚರ್ಚೆಗಳ ಮೂಲಕ ಅವರ ಅಸಮಾಧಾನವನ್ನು ತಿಳಿಗೊಳಿಸಲು ಪ್ರಯತ್ನಿಸಬೇಕು. ಕೆಲವೊಮ್ಮೆ ತಮ್ಮ ಸೋಲು, ವೈಫಲ್ಯದ ಕಾರಣದಿಂದಲೂ ಅಣ್ಣ–ತಮ್ಮ ಅಥವಾ ಗಂಡ–ಗಂಡನ ಮನೆಯವರು ನಿಮ್ಮನ್ನು, ನಿಮ್ಮ ಉದ್ಯೋಗವನ್ನು ಕೀಳಾಗಿ ಕಾಣುವ, ಅವಮಾನಿಸುವ ಅಸ್ತ್ರ ಉಪಯೋಗಿಸುತ್ತಾರೆ. ಅಂಥ ಸಂದರ್ಭಗಳಲ್ಲಿಯೂ ಅದನ್ನು ತಾಳ್ಮೆಯಿಂದ ಬಗೆಹರಿಸಬೇಕು. ಈ ಪ್ರಯತ್ನಗಳೆಲ್ಲ ವಿಫಲವಾಗಿ, ಸ್ಥಿತಿ ವಿಕೋಪಕ್ಕೆ ಹೋದಾಗ, ಹಿಂಸೆ ಅಸಹನೀಯವಾದಾಗ ಕೋರ್ಟ್‌ ಮೆಟ್ಟಿಲು ಹತ್ತಬಹುದು ಎನ್ನುತ್ತಾರೆ ವಕೀಲೆ ಅಂಜಲಿ ರಾಮಣ್ಣ.

ಅವಳ ಎತ್ತರ, ತೂಕ,ನೋಟ–ನಿಲುವುಗಳೆಡೆ ಎಸೆಯುವ ಕುಹಕದ ಮಾತುಗಳೂ ನಿಮ್ಮನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಬಹುದು. ಉದ್ದೇಶಿತ ಕಿರಿಕಿರಿ, ಅವಕಾಶ ನೀಡದೇ ಇರುವುದು, ಅವಳು ಮಾಡುವ ಎಲ್ಲಾ ಕೆಲಸಗಳನ್ನು ಅಲ್ಲಗಳೆಯುವುದು ಸಹ ಕಿರುಕುಳವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT