ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ಪರಿವರ್ತನೆ ಸರ್ಜರಿ ವೈಜ್ಞಾನಿಕವಾಗಿ ಮಾಡುವುದು ಹೇಗೆ?

Last Updated 3 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಈಗ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಆದರೆ ಅರಿವಿನ ಕೊರತೆಯಿಂದ ಅವೈಜ್ಞಾನಿಕವಾಗಿ ಮಾಡಿಸಿಕೊಂಡು ಯಾತನೆ ಅನುಭವಿಸಿದ ಪ್ರಕರಣಗಳು ಬಹಳಷ್ಟಿವೆ. ಈ ಬಗ್ಗೆ ವೈಜ್ಞಾನಿಕವಾದ, ನಿಖರ ವಿವರಗಳು ಇಲ್ಲಿವೆ.

ಲಲಿತಕುಮಾರ್‌ ಎಂಬ ಕಾನ್‌ಸ್ಟೆಬಲ್‌ ಲಿಂಗ ಪರಿವರ್ತನೆ ಸರ್ಜರಿ ಮಾಡಿಸಿಕೊಂಡು, ಈಗ ಲಲಿತಕುಮಾರಿ ಆಗಿದ್ದು, ಇದು ಭಾರತದ ಪೊಲೀಸ್‌ ಇಲಾಖೆಯಲ್ಲಿ ಇತಿಹಾಸ.

***

ಲಿಂಗ ಪರಿವರ್ತಿತ ಪುರುಷ ಹಾಗೂ ಮಹಿಳೆಯ ನಡುವೆ ಕೇರಳದಲ್ಲಿ ಕಾನೂನುಬದ್ಧ ವಿವಾಹ...

– ಲಿಂಗ ಪರಿವರ್ತನೆ ಬಗ್ಗೆ ಇಂತಹ ಸುದ್ದಿಗಳು ಈಗ ಸಾಮಾನ್ಯ ಎಂಬಂತಾಗಿವೆ. ಹಾಗಾದರೆ ಏನಿದು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ? ಇದು ಏಕೆ ಅವಶ್ಯಕ? ಎಲ್ಲಿ ಲಭ್ಯ?– ಇವೇ ಮೊದಲಾದ ಪ್ರಶ್ನೆಗಳು ಏಳುವುದು ಸಹಜ. ಇವುಗಳಿಗೆ ವೈದ್ಯಕೀಯವಾಗಿ ಉತ್ತರ ಕಂಡುಕೊಳ್ಳುವ ಸಣ್ಣ ಯತ್ನವಿದು.

ಮಂಗಳಮುಖಿ ಎಂದು ಕರೆಯುವ ತೃತೀಯ ಲಿಂಗಿಗಳು ಈ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸಾಮಾನ್ಯ. ಇದು ವೈದ್ಯಕೀಯವಾಗಿ ಸೆಕ್ಸ್ ರಿಅಸೈನ್‌ಮೆಂಟ್ ಸರ್ಜರಿ (ಎಸ್‌ಆರ್‌ಎಸ್). ಇದು ಕಾನೂನು ಬದ್ಧವಾಗಿದ್ದು, ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ಮಾನ್ಯ.

ತೃತೀಯ ಲಿಂಗಿಗಳೆಂದರೆ- ಗಂಡಾಗಿ ಜನಿಸಿ, ಹೆಣ್ಣಿನಂತೆ ವರ್ತಿಸುವವರು ಅಥವಾ ಹೆಣ್ಣಾಗಿ ಜನಿಸಿ ಪುರುಷನಂತೆ ವರ್ತಿಸುವವರು. ಹುಟ್ಟಿನಿಂದ ಹೊಂದಿರುವ ಜನನಾಂಗವನ್ನು ಅಂದರೆ ಶಿಶ್ನ, ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿ ಇವುಗಳ ಬದಲಾಗಿ ಯೋನಿ, ಸ್ತನವನ್ನು ವೈದ್ಯಕೀಯ ಚಿಕಿತ್ಸೆ ಮೂಲಕ ಪುನರ್‌ರಚಿಸಲಾಗುತ್ತದೆ. ಇದರಂತೆಯೇ ಮಹಿಳೆ ಪುರುಷನಾಗಲು ಬಯಸುವುದೂ ಇದೆ. ಆದರೆ ಇದು ಅಪರೂಪ.

ನಿಯಮಗಳು

ಕನಿಷ್ಠ ಎರಡು ವರ್ಷಗಳಿಂದ ಲಿಂಗ ಪರಿವರ್ತನೆಯ ಬಯಕೆಯನ್ನು ಹೊಂದಿರಬೇಕು. ವಯಸ್ಸು 18 ಮೀರಿರಬೇಕು ಮತ್ತು ಯಾವುದೇ ಅನುವಂಶೀಯ ಕಾಯಿಲೆ ಅಥವಾ ಮನೋವ್ಯಾಧಿಗಳಿರಬಾರದು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರಿಂದ ಅನುಮತಿ ಪತ್ರ (ಇದನ್ನು ನೋಟರಿ ಅಥವಾ ನ್ಯಾಯಾಧೀಶರು ದೃಢೀಕರಿಸಿರಬೇಕು). ಸಂಗಾತಿ ಅಥವಾ ಪತಿ/ಪತ್ನಿಯಿಂದ ಸಮ್ಮತಿ ಅವಶ್ಯ.

ಶಸ್ತ್ರಚಿಕಿತ್ಸೆಗೆ ಮೊದಲು ಕನಿಷ್ಠ ಮೂರು ತಿಂಗಳು ಆಪ್ತ ಸಮಾಲೋಚನೆ ಹಾಗೂ ಮನೋಚಿಕಿತ್ಸೆ ಪಡೆಯಬೇಕು.

ಇದಾದ ನಂತರ ಪುರುಷನಿಂದ ಮಹಿಳೆಯಾಗ ಬಯಸುವವರು ಕನಿಷ್ಠ ಆರು ತಿಂಗಳು ಈಸ್ಟ್ರೊಜೆನ್ ಹಾಗೂ ಪ್ರೊಜೆಸ್ಟರಾನ್‌ ಹಾರ್ಮೋನ್ ಔಷಧಿ ಸೇವಿಸಬೇಕು. ಈ ಔಷಧಿಯಿಂದ ಸ್ತನ ವೃದ್ಧಿಯಂತಹ ಕೆಲವು ಬದಲಾವಣೆಗಳು ಸಾಧ್ಯ. ಹಾಗೆಯೇಮಹಿಳೆಯಿಂದ ಪುರುಷನಾಗ ಬಯಸುವವರು ಟೆಸ್ಟೊಸ್ಟಿರಾನ್ ಸೇವಿಸಬೇಕು.

ಪ್ಲಾಸ್ಟಿಕ್ ಸರ್ಜನ್ ಇಂತಹ ಶಸ್ತ್ರಚಿಕಿತ್ಸೆ ಮಾಡುತ್ತಾರೆ ಮತ್ತು ವಿಶ್ವ ತೃತೀಯಲಿಂಗಿ ಆರೋಗ್ಯ ವೃತ್ತಿಪರರ ಸಂಸ್ಥೆಯ (ಡಬ್ಲೂ.ಪಿ.ಎ.ಟಿ.ಎಚ್) ಮಾರ್ಗಸೂಚಿ ಪಾಲಿಸಲಾಗುತ್ತಿದೆ.

ಪುರುಷನಿಂದ ಸ್ತ್ರೀ ಆಗಿ ಬದಲಾಗ ಬಯಸುವವರಿಗೆ ಶಿಶ್ನ ಮತ್ತು ವೃಷಣ ತೆಗೆದು ಈ ಭಾಗದಲ್ಲಿ ಕೃತಕ ಯೋನಿ ರಚಿಸಿ, ಸ್ತನವರ್ಧನೆ, ಸ್ತ್ರೀ ಮುಖ ಹೋಲುವ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರ ಜೊತೆ ಹಾರ್ಮೋನ್ ನೀಡುವುದರಿಂದ ಹೆಣ್ಣಿನ ಬಾಹ್ಯ ಲಕ್ಷಣಗಳು (ಸ್ತನ ವಿಕಾಸ, ಕೋಮಲ ತ್ವಚೆ, ಗಡುಸಾದ ಕೂದಲು ನಿವಾರಣೆ) ಆರಂಭವಾಗಿ, ಶಸ್ತ್ರಚಿಕಿತ್ಸೆ ಆದ 2–3 ವರ್ಷಕ್ಕೆ ಹೆಣ್ಣಿನಂತಾಗಲು ಸಾದ್ಯ.

ಹೆಣ್ಣಿನಿಂದ ಗಂಡಾಗುವ ಶಸ್ತ್ರಚಿಕಿತ್ಸೆ ಹೆಚ್ಚು ಸಂಕಿರ್ಣ ಹಾಗೂ ದುಬಾರಿ. ಸ್ತನ, ಗರ್ಭಾಶಯ, ಅಂಡಾಶಯ ತೆಗೆದು ಯೋನಿ ಸ್ಥಾನದಲ್ಲಿ ಕೃತಕ ಶಿಶ್ನ, ವೃಷಣ ರಚಿಸಿ, ಗಂಡಿನ ಹಾರ್ಮೋನ್ ನೀಡಬೇಕು. ಧ್ವನಿ ಪರಿವರ್ತನೆಗೆ ವಿಶೇಷ ಚಿಕಿತ್ಸೆ ಅಗತ್ಯ.

ಪ್ರಮಾಣ ಪತ್ರ

ಶಸ್ತ್ರಚಿಕಿತ್ಸೆ ನಂತರ ಪ್ರಮಾಣ ಪತ್ರ ನೀಡಲಾಗುತ್ತದೆ. ಇದನ್ನು ಗುರುತಿನ ಚೀಟಿ, ದಾಖಲಾತಿ (ಶಾಲೆ– ಕಾಲೇಜು), ಆಧಾರ್‌ ಕಾರ್ಡ್‌ ಮೊದಲಾದವುಗಳಿಗೆ ಬಳಸಬಹುದು.

ಶಸ್ತ್ರಚಿಕಿತ್ಸೆ ಏಕೆ ಅಗತ್ಯ?

ತೃತೀಯಲಿಂಗಿಗಳನ್ನು ಕುಟುಂಬ, ಸಮಾಜದ ಇತರರು ತಾರತಮ್ಯದಿಂದ ಕಾಣುತ್ತಾರೆ. ಶಾಲೆ/ ಕೆಲಸದ ಸ್ಥಳದಲ್ಲಿ ಕೀಳರಿಮೆ ಅನುಭವಿಸಬಹುದು. ಸಾರ್ವಜನಿಕ ಸೌಲಭ್ಯ ಪಡೆಯಲು ಅಡ್ಡಿಯಾಗಬಹುದು- ಇದು ಶೌಚಾಲಯ ಬಳಸುವುದು, ವಾಹನಗಳಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟ ಆಸನವಾಗಿರಬಹುದು. ಆಧಾರ್‌, ಪಾಸ್‌ಪೋರ್ಟ್‌ ಮೊದಲಾದ ದಾಖಲಾತಿಗಳನ್ನು ಪಡೆಯುವಾಗ ತೊಂದರೆ ಉಂಟಾಗಬಹುದು. ಕಿರುಕುಳ ಸಹಿಸದ ಕೆಲವರು ಮನೆಯಿಂದ ಓಡಿ ಹೋಗಿ ಭಿಕ್ಷಾಟನೆ, ವೇಶ್ಯಾವಾಟಿಕೆ ನಡೆಸಬಹುದು. ಇಂತಹ ವ್ಯಕ್ತಿಗಳಲ್ಲಿ ಖಿನ್ನತೆ, ಆತಂಕ ಉದ್ಭವಿಸಬಹುದು. ಹೀಗಾಗಿ ಇಂತಹವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದು.

ಮಕ್ಕಳಿಗೆ..

ಐದು ಸಾವಿರ ಮಕ್ಕಳಲ್ಲಿ ಒಂದು ಮಗುವಿಗೆ ಗಂಡು-ಹೆಣ್ಣಿನ ಜನನಾಂಗಗಳ ಮಿಶ್ರ ಲಕ್ಷಣಗಳಿರುತ್ತವೆ. ಇಂತಹ ಸ್ಥಿತಿಯನ್ನು ದ್ವಿಲಿಂಗ ಅಥವಾ ಅಂತರ್‌ ಲಿಂಗೀಯ ಶಿಶು ಎನ್ನುತ್ತೇವೆ. ಇವರ ಜನನಾಂಗಗಳನ್ನು ಪುನಃ ರಚಿಸಿ, ಗಂಡು ಅಥವಾ ಹೆಣ್ಣಾಗಿ ಪರಿವರ್ತಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT