ಭಾನುವಾರ, ಫೆಬ್ರವರಿ 23, 2020
19 °C

ಹೆಣ್ಮಗುವೆಂದರೆ ಸಾಮಾಜಿಕ ಜಾಲತಾಣಕ್ಕೂ ಮಮತೆ!

ಅಮೃತ Updated:

ಅಕ್ಷರ ಗಾತ್ರ : | |

Prajavani

‘ಹೆಣ್ಣುಮಕ್ಕಳೇ ಬೆಸ್ಟ್‌’

‘ದೇವರ ಅಮೂಲ್ಯ ಕೊಡುಗೆಯೆಂದರೆ ಹೆಣ್ಣುಮಗು’

‘ಅಪ್ಪ– ಅಮ್ಮ ಎಂದು ಪ್ರೀತಿ ಸುರಿಸಿ, ಕೊನೆಗಾಲದಲ್ಲಿ ಕಷ್ಟ–ಸುಖ ಎಂದು ನೋಡಿಕೊಳ್ಳುವವರೂ ಹೆಣ್ಣುಮಕ್ಕಳೇ’

– ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್‌ಗಳು, ಸ್ಟೇಟಸ್‌ ಅಪ್‌ಡೇಟ್‌ಗಳು ಆಗಾಗ ಕಾಣಿಸಿಕೊಳ್ಳುವುದನ್ನು ಹಲವರು ನೋಡಿರಬಹುದು. ಅದರಲ್ಲೂ ಹೊಸದಾಗಿ ಹೆಣ್ಣುಮಗುವಿನ ತಾಯಿಯಾದವಳು ಇಂತಹ ಪೋಸ್ಟ್‌ ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಂತಹ ಪೋಸ್ಟ್‌ಗಳು ಯಾವ ಸಂದೇಶ ಸಾರುತ್ತವೆ, ಇಂತಹ ನಿಲುವಿನ ಹಿಂದೆ ಏನಾದರೂ ಅಡಗಿದೆಯೇ ಎಂದು ಕೊಂಚ ತಡಕಾಡುವಾಗ ಕೆಲವೊಮ್ಮೆ ಸತ್ಯ, ಹಲವು ಬಾರಿ ಮಿಥ್ಯಗಳು ಗೋಚರಿಸುತ್ತವೆ.

ಎಷ್ಟೆಂದರೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬದುಕು ಅತ್ಯಂತ ಸುಖಕರವಾಗಿ ಸಾಗುತ್ತಿದೆ; ತಮ್ಮ ಕುಟುಂಬ ಅತ್ಯಂತ ಸುಖಿ ಕುಟುಂಬ ಎಂದು ತೋರಿಸಿಕೊಳ್ಳುವವರೇ ಜಾಸ್ತಿ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ‘ಮಿಥ್ಯವನ್ನು ತೋರಿಸಿ ಒಂದು ಇಮೇಜ್‌ ಅನ್ನು ಸೃಷ್ಟಿ ಮಾಡಲು ಸಾಮಾಜಿಕ ಜಾಲತಾಣ ಬಳಕೆಯಾಗುತ್ತಿರುವುದು ದುರದೃಷ್ಟಕರ. ಮನಸ್ಸಿನಲ್ಲಿರುವ ಕಪ್ಪು ಬಣ್ಣವನ್ನು ಅಡಗಿಸಿ, ಬಿಳಿ ಬಣ್ಣವನ್ನು ತೋರಿಸುವುದೇ ಅಧಿಕ’ ಎನ್ನುತ್ತಾರೆ ಮನಃಶಾಸ್ತ್ರಜ್ಞ ಡಾ. ಗಿರಿಧರ್‌ ಗೋಡ್ಬೋಲೆ. ‘ಇದು ಹೆಣ್ಣುಮಕ್ಕಳ ವಿಷಯದಲ್ಲೂ ಅನ್ವಯವಾಗುತ್ತದೆ. ಬಹುತೇಕ ಭಾರತೀಯರಲ್ಲಿ ಇನ್ನೂ ಕೂಡ ಗಂಡುಮಗುವಿನ ಬಗ್ಗೆ ಒಲವಿದೆ. ಇದಕ್ಕೆ ಸಾಕ್ಷಿ ಲಿಂಗಾನುಪಾತದಲ್ಲಾಗಿರುವ ಕುಸಿತ’ ಎನ್ನುವ ಅವರು, ನಿಜವಾಗಿಯೂ ಹೆಣ್ಣುಮಗುವನ್ನು ಬಯಸುವ ಕೆಲವರಾದರೂ ಇಂತಹ ಸಂದೇಶಗಳನ್ನು ಸ್ವಚ್ಛ ಮನಸ್ಸಿನಿಂದ ಪ್ರಚಾರ ಮಾಡಿದರೆ ಸ್ವಲ್ಪಮಟ್ಟಿಗೆ ಇತರರ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕವಾಗಿ ಅಥವಾ ಗ್ರೂಪ್‌ ಮೂಲಕ ಹೆಣ್ಣುಮಗುವಿನ ರಕ್ಷಣೆ, ಲಿಂಗ ಸಮಾನತೆ, ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ತಿಳಿವಳಿಕೆ ಮತ್ತು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ಸಹ, ಕಠಿಣ ಕಾನೂನುಗಳಿದ್ದರೂ ಕೂಡ ಹೆಣ್ಣು ಭ್ರೂಣ ಹತ್ಯೆಯಂತಹ ಹೀನ ಕಾರ್ಯಗಳು ನಡೆಯುತ್ತಲೇ ಇವೆ ಎನ್ನುತ್ತದೆ ಯುನಿಸೆಫ್‌ ವರದಿ.

‘ಗಂಡುಮಗುವನ್ನು ಹೆರಬೇಕು ಎಂಬ ಒತ್ತಡ ನನ್ನ ಸ್ನೇಹಿತೆಗೆ ಆಕೆಯ ಗಂಡ, ಅತ್ತೆ– ಮಾವಂದಿರಿಂದಲೇ ಇತ್ತು. ಆದರೆ ಆಗಿದ್ದು ಹೆಣ್ಣುಮಗು. ನಾನು ಮಗುವನ್ನು ನೋಡಿ ‘‘ಹೆಣ್ಣುಮಗುವಾಗಿದ್ದು ಒಳ್ಳೆಯದೇ ಆಯಿತು. ಮುಂದೆ ನಿನ್ನನ್ನು ಸ್ನೇಹಿತೆಯಂತೆ ಕಾಣುತ್ತಾಳೆ ಬಿಡು’’ ಎಂದೆ. ಆದರೆ ಆಕೆ ಮಾತ್ರ ‘‘ಮುಂದಿನ ಸಲ ಗಂಡುಮಗುವಾಗಬಹುದು’’ ಎಂದು ಮೆಲ್ಲನುಸುರಿದ್ದಳು’ ಎಂದ ವಕೀಲೆಯಾದ ಗೆಳತಿ ವಿನುತಾ ವೆಂಕಟಾಚಲಂ ಮಾತಿನಲ್ಲಿ ಕಟುಸತ್ಯ ಅಡಗಿತ್ತು.

ಇದನ್ನೆಲ್ಲ ಕೇಳುವಾಗ, ನೋಡುವಾಗ ಅನಿಸುತ್ತದೆ, ಹೆಣ್ಣಿರಲಿ, ಗಂಡಿರಲಿ.. ಒಂದು ಮಗುವಿರಲಿ ಅಷ್ಟೆ!

* ಹೆಣ್ಣುಮಗುವನ್ನು ಸಬಲೆಯನ್ನಾಗಿ ಬೆಳೆಸಿ

* ಅವರ ಬದುಕಿನಲ್ಲಿ ಏನೇ ಬರಲಿ, ಆತ್ಮವಿಶ್ವಾಸದಿಂದ ಎದುರಿಸುವುದನ್ನು ಕಲಿಸಿ.

* ಸಂಬಂಧಗಳಲ್ಲಿ ಖುಷಿಯನ್ನು, ಸಕಾರಾತ್ಮಕತೆಯನ್ನು ಕಾಣುವುದನ್ನು ಕಲಿಸಿ.

* ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಅಪ್ಪಿಕೊಂಡು ಮುಂದುವರಿಸಲು ಸಹಾಯ ಮಾಡಿ

* ಕನಸನ್ನು ನನಸಾಗಿಸಲು, ಬದುಕಿನ ಏರಿಳಿತ ಎದುರಿಸಲು ಮಾನಸಿಕ ದೃಢತೆ, ಧೈರ್ಯ ಕಲಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು