ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಡೆದವಳಿಗೂ–ಪಡೆದವಳಿಗೂ ರಜೆಯ ಭಾಗ್ಯ

Published 28 ಜೂನ್ 2024, 22:52 IST
Last Updated 28 ಜೂನ್ 2024, 22:52 IST
ಅಕ್ಷರ ಗಾತ್ರ

ಬಾಡಿಗೆ ತಾಯಿ ಮಾತ್ರವಲ್ಲ, ಆ ಕಂದನಿಗೆ ಮಡಿಲಾಗಬೇಕಿರುವ ಅಧಿಕೃತ ಅಮ್ಮನಿಗೂ ಹೆರಿಗೆ ರಜೆ ಬೇಕು ಎನ್ನುವ ವಾದಕ್ಕೆ ಪುಷ್ಟಿ ದೊರೆತಂತಾಗಿದೆ. ನವಜಾತ ಮಗುವಿನೊಂದಿಗೆ ಅಮ್ಮನಾಗಿ ಬೆರೆಯಬೇಕಿರುವ, ಬೆಸೆಯಬೇಕಿರುವ ಜರೂರು ಜೈವಿಕ ಅಮ್ಮನಿಗಿರುವುದರಿಂದ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಅಸ್ತು ಅಂದಿದೆ.

‘ಬಾಡಿಗೆ ತಾಯ್ತನ’ ಎನ್ನುವುದೊಂದು ಬಹುಜಟಿಲ ವ್ಯವಸ್ಥೆ. ಹಡೆದವಳೇ ಅಮ್ಮನೊ, ಪಡೆದವಳೂ ಅಮ್ಮನೊ ಎನ್ನುವ ತಗಾದೆ ಹೊಸದೇನೂ ಅಲ್ಲ. ಇದರ ಸುತ್ತ ಹಬ್ಬಿಕೊಂಡಿರುವ ಭಾವನಾತ್ಮಕ–ನೈತಿಕ–ಸಾಮಾಜಿಕ ಅಂಶಗಳೂ ಕಡಿಮೆ ಏನಿಲ್ಲ. ಇಲ್ಲಿಯತನಕ ಹೆರಿಗೆ ರಜೆಯ ವಿಚಾರ ಬಂದಾಗ ಜೈವಿಕ ಅಮ್ಮನಿಗೆ ರಜೆ ಯಾಕೆ ಬೇಕು? ಎನ್ನುವ ಸವಾಲು ಎದುರಾತ್ತಿತ್ತು. ಗರ್ಭದಲ್ಲಿ ಹೊತ್ತು, ಹೆತ್ತು ಕೊಡುವವಳು (ಬಾಡಿಗೆ ತಾಯಿ) ಬೇರೆಯೇ ಇರುವಾಗ ಈ ಜೈವಿಕ ಅಮ್ಮಂದೇನು ಕೆಲಸ? ಎನ್ನುವ ಉಡಾಫೆಯೂ ಅಲ್ಲಲ್ಲಿ ಇಣುಕುವುದಿತ್ತು. ಆದರೆ, ಬಾಡಿಗೆ ತಾಯ್ತನದಲ್ಲಿ ಜೈವಿಕ ಅಮ್ಮನ ಪಾತ್ರ, ಜವಾಬ್ದಾರಿ, ಹೊಣೆಗಾರಿಕೆಯ ಮಹತ್ವವನ್ನು ಎತ್ತಿ ಹಿಡಿದು ಇದೀಗ ಕಾನೂನಿನ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ. ಮಗುವಿನೊಂದಿಗೆ ಭಾವನಾತ್ಮಕ ಬೆಸೆತಕ್ಕೆ ಸಿದ್ಧಗೊಳ್ಳಬೇಕಿರುವ ಜೈವಿಕ ಅಮ್ಮನಿಗೂ ಆರು ತಿಂಗಳ ರಜೆಯನ್ನು ವಿಸ್ತರಿಸಲಾಗಿದೆ.

1972ರ ಕೇಂದ್ರ ನಾಗರಿಕ ಸೇವೆಗಳ(ರಜೆ) ನಿಯಮಗಳಿಗೆ ಈ ಹೊಸ ಮಾರ್ಪಾಟುಗಳನ್ನು ಸೂಚಿಸಲಾಗಿದ್ದು, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುವ ‘ಕಮಿಷನಿಂಗ್ ತಾಯಿ’ ಅಥವಾ ‘ಜೈವಿಕ ತಾಯಿ’ (ಸರೊಗಸಿ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲಿಚ್ಛಿಸುವ ತಾಯಿ)ಗೂ 180 ದಿನಗಳ ಹೆರಿಗೆ ರಜೆಯನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಮಹಿಳಾ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ನೀಡಲು ಇದುವರೆಗೂ ಯಾವುದೇ ನಿಯಮವಿರಲಿಲ್ಲ, ಸ್ಪಷ್ಟ ಮಾರ್ಗಸೂಚಿಗಳಿರಲಿಲ್ಲ. ಇದೇ ಜೂನ್ 18 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಅಧಿಸೂಚನೆಯನ್ನು ಹೊರಡಿಸಿದ್ದು, ನವಜಾತ ಮಗುವಿನೊಂದಿಗೆ ಅನುಬಂಧ ಬೆಳೆಸಿಕೊಳ್ಳಲು ಸಮಯದ ಅಗತ್ಯವಿರುವ ಜೈವಿಕ ತಾಯಿಗೂ ಹೆರಿಗೆ ರಜೆಯ ಅಗತ್ಯವಿದೆ ಎನ್ನುವ ವಾದಕ್ಕೆ ಪುಷ್ಟಿ ದೊರೆತಂತಾಗಿದೆ.

ಯಾರು ಜೈವಿಕ ತಾಯಿ

ಕೃತಕ ಸಂತಾನಾಭಿವೃದ್ಧಿ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ಫಲಿಸಿದ ಭ್ರೂಣಗಳನ್ನು ಬಾಡಿಗೆ ತಾಯಿಯ ಗರ್ಭದಲ್ಲಿ ಬೆಳೆಸಿ, ಮಗುವನ್ನು ಪಡೆಯಲು ಸಂತಾನಾಭಿವೃದ್ಧಿ ಸಾಮರ್ಥ್ಯವಿಲ್ಲದ ದಂಪತಿಗೆ ಅವಕಾಶ ಕಲ್ಪಿಸುವುದೇ ಬಾಡಿಗೆ ತಾಯ್ತನ. ಈ ತಂತ್ರಜ್ಞಾನ ಜಗತ್ತಿನೆಲ್ಲೆಡೆ, ಪ್ರವರ್ಧಮಾನಕ್ಕೆ ಬಂದು ದಶಕಗಳೇ ಕಳೆದಿವೆ. ಅದರ ಮುಂದುವರಿದ ರೂಪವಾಗಿ, ಸಿಂಗಲ್‌ ಆಗಿರುವ ಅವಿವಾಹಿತರು, ಇಷ್ಟಪಟ್ಟು ಜೊತೆಯಲ್ಲಿರುವ ಸಲಿಂಗಿಗಳು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವವರು, ಸಿವಿಲ್ ಯೂನಿಯನ್ ರಿಲೇಷನ್ಸ್‌ ನಲ್ಲಿ ಇರುವವರು ತಮ್ಮದೇ ಜೈವಿಕ ಅನುಬಂಧದ ಮಗುವನ್ನು ಪಡೆಯುವತನಕ ಇದರ ಕವಲುಗಳು ಚಾಚಿಕೊಂಡಿವೆ. ಈ ವ್ಯವಸ್ಥೆ ಇಷ್ಟೊಂದು ವಿಸ್ತೃತವೂ–ವಿಶಾಲವೂ ಆಗಿ ಬೆಳೆಯುತ್ತಿರುವುದರ ಗಂಭೀರತೆಯನ್ನು ಅರಿತು ಹೆರಿಗೆಯ ರಜೆಯನ್ನು ವಿಸ್ತರಿಸಿರುವುದು ಸ್ವಾಗತಾರ್ಹ.

ಭಾವನಾತ್ಮಕ ಕೊಂಡಿ


ಬಾಡಿಗೆ ತಾಯ್ತನದಲ್ಲಿ ಎರಡು ರೀತಿಯ ಸವಾಲುಗಳಿವೆ. ತನ್ನದೇ ಗರ್ಭದಲ್ಲಿ ಬೆಳೆದು, ತನ್ನ ರಕ್ತ ಹಂಚಿಕೊಂಡು ಹುಟ್ಟುವ ಮಗುವನ್ನು ತನ್ನದಲ್ಲ ಎನ್ನುವಂತೆ ಕಳಚಿಟ್ಟು ಹೋಗಬೇಕಾದ ಬಹುದೊಡ್ಡ ಸ್ಥಿತ್ಯಂತರಕ್ಕೆ ಬಾಡಿಗೆ ತಾಯಿ ಸಿದ್ಧಗೊಳ್ಳಬೇಕು. ಹಾಗೆಯೇ ತನ್ನ ಗರ್ಭದಿಂದ ಹುಟ್ಟದ,  ಕೆಲವೊಮ್ಮೆ ತನ್ನ ಅಂಡಾಣುವಿನಿಂದ ಜನಿಸಿದ, ಕೆಲವೊಮ್ಮೆ ತನ್ನ ಅಂಡಾಣುವನ್ನೂ ಒಳಗೊಳ್ಳದ ಮಗುವನ್ನು ತನ್ನದೆಂದು ಪರಿಭಾವಿಸುವ, ಸಾರುವ ಹಾಗೂ ಸ್ಥಾಪಿಸುವ ಅಷ್ಟೇ ದೊಡ್ಡ ಹೊಣೆ ಜೈವಿಕ ಅಮ್ಮನ ಮೇಲಿರುತ್ತದೆ. ಹುಟ್ಟಿದ ಮಗುವಿನೊಂದಿಗೆ ನಿಜವಾದ ಬಾಂದವ್ಯ ಬೆಸೆಯುವುದೇ ಎದೆಹಾಲುಣಿಸುವಾಗ. ಆದರೆ ಈ ಅವಕಾಶ ಜೈವಿಕ ಅಮ್ಮನಿಗೆ ಇಲ್ಲಿ ಸಿಗುವುದಿಲ್ಲ. ಹೀಗಾಗಿ, ಅವಳು ಮಗುವಿನೊಂದಿಗೆ ಬಾಂದವ್ಯ ಬೆಳೆಸಿಕೊಳ್ಳಲು ಆರಂಭದ ದಿನಗಳಿಂದಲೇ ಪ್ರಯತ್ನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜೈವಿಕ ಅಮ್ಮನಿಗೂ ಹೆರಿಗೆ ರಜೆ ಅತ್ಯವಶ್ಯಕವಾಗುತ್ತದೆ.

ಯಾರಿಗೆಲ್ಲಾ ಅನ್ವಯ
• ಭಾರತದಲ್ಲಿ, ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರ ಎರಡು ಹೆರಿಗೆಗಳಿಗೆ ಮಾತ್ರ ಈ ಕಾನೂನು ಅನ್ವಯ
• ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ಇದು ಅನ್ವಯಿಸುವುದಿಲ್ಲ, ಪರಹಿತಚಿಂತನೆಯ ಬಾಡಿಗೆ ತಾಯ್ತನವನ್ನು (altruistic surrogacy) ಮಾತ್ರ ಇದು ಅನುಮತಿಸುತ್ತದೆ
• ಕಾನೂನುಬದ್ಧವಾಗಿ ವಿವಾಹವಾಗಿರುವ ಭಾರತೀಯ ದಂಪತಿಗಳಾಗಿರಬೇಕು
• ವಿವಾಹವಾಗಿ ಕನಿಷ್ಠ ಐದು ವರ್ಷಗಳ ಕಾಲ ಸ್ವಾಭಾವಿಕ ತಾಯ್ತನಕ್ಕೆ ಪ್ರಯತ್ನಿಸಿರಬೇಕು
• ತಾಯಿಯಾಗಲು ವೈದ್ಯಕೀಯ ತೊಡಕುಗಳಿರುವ ಬಗ್ಗೆ ದಾಖಲೆಗಳಿರಬೇಕು
• ಅದಕ್ಕೂ ಮೊದಲು ಯಾವುದೇ ಜೀವಂತ ಜೈವಿಕ, ದತ್ತು ಪಡೆದ ಅಥವಾ ಬಾಡಿಗೆ ತಾಯ್ತನದ ಮೂಲಕ ಪಡೆದ ಮಕ್ಕಳು ಇರಬಾರದು
• ಬಾಡಿಗೆ ತಾಯಿಯಾಗುವಾಕೆ ವಿವಾಹಿತ ಮಹಿಳೆಯಾಗಿರಬೇಕು, ಮೊದಲೇ ಮಕ್ಕಳನ್ನು ಹೊಂದಿರಬೇಕು, ಕನಿಷ್ಠ 25 ರಿಂದ 35 ವರ್ಷ ವಯಸ್ಸಿನವರಾಗಿರಬೇಕು

ರಜೆ ಏನೊ ಸಿಕ್ಕಿದೆ. ಅದರ ಸದ್ಬಳಕೆ ಹೇಗೆ?

* ಮಗು ಬಾಡಿಗೆ ತಾಯಿಯ ಗರ್ಭದಲ್ಲಿರುವಾಗಲೇ ಅದರೊಂದಿಗೆ ಸಂವಹನ ಆರಂಭಿಸಿ.

* ಬಾಡಿಗೆ ತಾಯಿಯ ಆರೈಕೆಯ ಮೂಲಕ ಗರ್ಭದಲ್ಲಿರುವ ಮಗುವಿನ ಚಲನ–ವಲನಗಳನ್ನು ಗಮಿನಿಸುವ, ಆನಂದಿಸುವ ಪ್ರಯತ್ನ ಚಾಲ್ತಿಯಲ್ಲಿರಲಿ

* ಮಗುವಿನ ಜನನದ ನಂತರ ಅದರ ಜವಾಬ್ದಾರಿಗಳೆಲ್ಲಾ ನಿಮ್ಮದಾಗಲಿ, ಅಂದರೆ ಮೈತಿಕ್ಕುವುದು, ಎಣ್ಣೆ ಹಾಕುವುದು, ಸ್ನಾನ ಮಾಡಿಸುವುದು, ಆಟವಾಡಿಸುವುದು, ಮಲಗಗಿಸುವುದು…

* ರಾತ್ರಿ ಎದ್ದು ಅಳುವುದು, ರಂಪ ಮಾಡುವುದು ಎಲ್ಲಾ ಮಕ್ಕಳಲ್ಲಿಯೂ ಸಾಮಾನ್ಯ ಈ ಜವಾಬ್ದಾರಿಗೂ ನೀವು ಸಜ್ಜಾಗಿದ್ದರೆ ಒಳ್ಳೆಯದು.

* ನೆನಪಿಡಿ: ಹೆತ್ತವಳು ತಾಯಿಯಾಗುತ್ತಾಳೆ. ಹೆರದೆಯೂ ಅಮ್ಮನಾಗಬೇಕಾದರೆ, ತಾಯ್ತನದ ಸವಿಯುಣ್ಣಬೇಕಾದರೆ ಕಂದನ ಆರೈಕೆ–ಆತಿಥ್ಯದ ಜವಾಬ್ದಾರಿಯನ್ನು, ಆದಷ್ಟು ತಾವೇ ಹೊತ್ತು, ಅಗತ್ಯ ಬಿದ್ದಾಗ ಬೇರೆಯವರ ಸಹಾಯವನ್ನೂ ಪಡೆದುಕೊಂಡು, ಪ್ರೀತ್ಯಾಧಾರದಿಂದ ನಿರ್ವಹಿಸುವುದು ಮುಖ್ಯ.

-ಡಾ. ಅರುಣಾ ಯಡಿಯಾಳ್, ಮನೋವೈದ್ಯೆ

ಹೌದು, ಭಾವನಾತ್ಮಕ ಬಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಜೈವಿಕ ಅಮ್ಮನಿಗೆ ಆರು ತಿಂಗಳ ರಜೆ ಖಂಡಿತ ನೆರವಾಗುತ್ತದೆ. ಆದರೆ, ಔದ್ಯೋಗಿಕ ಉನ್ನತಿಯ ದೃಷ್ಟಿಯಿಂದ ನೋಡಿದಾಗ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಮುಖ್ಯ ಹುದ್ದೆಯಲ್ಲಿರುವ ಅಮ್ಮಂದಿರ ಮೇಲೆ ಈ ಅನುಕೂಲವೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಅವರು ಔದ್ಯೋಗಿಕ ಅವಕಾಶಗಳಿಂದ ಹಾಗೂ ಮುಂಬಡ್ತಿಯಿಂದ ವಂಚಿತರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಂತಹ ನಿಯಮಗಳಿಂದ ಖಾಸಗಿ ವಲಯಗಳು ಈಗಾಗಲೇ ಮಹಿಳೆಯರನ್ನು ದೂರ ಇಡುವ ಪ್ರವೃತ್ತಿಯನ್ನು ಆರಂಭಿಸಿವೆ. ಇದರ ಬದಲು ಮಹಿಳೆಯರ ಔದ್ಯೋಗಿಕ ಉನ್ನತಿಗೆ ಕಾರಣವಾಗಬಲ್ಲ ಬೇರೆ ಆಯ್ಕೆಗಳತ್ತ ವ್ಯವಸ್ಥೆ ಗಮನ ಹರಿಸಿದರೆ ಉತ್ತಮ. ಎಲ್ಲಾ ಕಚೇರಿಗಳಲ್ಲಿ, ಮಕ್ಕಳ ಪಾಲನೆ, ಪೋಷಣೆ ಹಾಗೂ ಬಿಡುವಿನ ಅವಧಿಯಲ್ಲಿ ಮಗುವಿನೊಂದಿಗೆ ಸಮಯ ಕಳೆಯಲು ತಾಯಿಗೆ ನೆರವಾಗುವಂತಹ ಪೆಟಲ್ಸ್ ಪ್ರಿಸ್ಕೂಲ್, ಡೇಕೇರ್, ಕ್ರೆಚೆಯಂತಹ ಆಯ್ಕೆಗಳನ್ನು ನೀಡಬೇಕು. ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯೂ ಉಪಯುಕ್ತ.
– ಡಾ. ಕಾಮಿನಿ ರಾವ್‌, ಪ್ರಸೂತಿ ತಜ್ಞೆ, ಎಆರ್‌ಟಿ ಮಾರ್ಗಸೂಚಿಗಳ ಸಮಿತಿಯ ಚೇರ್ಮನ್‌
ಸರ್ಕಾರ ಹೆರಿಗೆ ರಜೆಯ ನಿಯಮಾವಳಿಯಲ್ಲಿ ಈ ಅಂಶವನ್ನು ಸೇರಿಸಿರುವುದು ಸ್ವಾಗತಾರ್ಹ. ಬಾಡಿಗೆ ತಾಯ್ತನವನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಈ ಬದಲಾವಣೆಯ ಅಗತ್ಯವಿತ್ತು. ಆದರೆ, ಬಾಡಿಗೆ ತಾಯ್ತನದಲ್ಲಿ ಅತಿ ಹೆಚ್ಚು ತೊಡಗಿಸಿಕೊಂಡಿರುವ ವರ್ಗವೆಂದರೆ ಸಾಫ್ಟ್‌ವೇರ್‌ ಮತ್ತು ಇನ್ನಿತರ ಕಾರ್ಪೋರೇಟ್‌ ಕಂಪನಿಗಳಲ್ಲಿ ದುಡಿಯುವ ಮಹಿಳೆಯರು. ಹೀಗಿರುವಾಗ ಈ ನಿಯಮವನ್ನು ಎಲ್ಲಾ ಖಾಸಗಿ ಸಂಸ್ಥೆಗಳ ವ್ಯಾಪ್ತಿಗೆ ತರಬೇಕಾದುದು ಅತ್ಯಗತ್ಯ. ಈಗಾಗಲೇ ಅನೇಕ ಖಾಸಗಿ ಸಂಸ್ಥೆಗಳು ಬಾಡಿಗೆ ಅಮ್ಮಂದಿರಿಗೂ, ಜೈವಿಕ ಅಮ್ಮಂದಿರಿಗೂ ಹೆರಿಗೆ ರಜೆ ಸೇರಿದಂತೆ ಇನ್ನಿತರ ಅನುಕೂಲತೆಗಳನ್ನು ನೀಡುತ್ತಿವೆ. ಆದರೂ, ಸರ್ಕಾರವೇ ಈ ಬಗ್ಗೆ ಸ್ಪಷ್ಟ ನಿಯಮಗಳನ್ನು, ಮಾರ್ಗಸೂಚಿಗಳನ್ನು ಹೊರಡಿಸಿದರೆ ಖಾಸಗಿ ವಲಯದಲ್ಲಿ ದುಡಿಯುವ ಮಹಿಳಾ ವರ್ಗಕ್ಕೆ ಹೆಚ್ಚು ನಿರಾಳತೆಯನ್ನು ನೀಡಬಲ್ಲದು.
–ಅಂಜಲಿ ರಾಮಣ್ಣ, ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT