ಮಂಗಳವಾರ, ಅಕ್ಟೋಬರ್ 27, 2020
19 °C

ಇನ್ನು ಒಂದೇ ಒಂದು ತುತ್ತು..

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಮಕ್ಕಳು ಊಟ–ತಿಂಡಿ ತಿನ್ನಲು ಕಾಡುವುದು ಸಹಜ. ಇಂತಹ ಮಕ್ಕಳಿಗೆ ಆಹಾರದ ಬಗ್ಗೆ ಆಸಕ್ತಿ ಮತ್ತು ಪ್ರೀತಿ ಹುಟ್ಟುವಂತೆ ಮಾಡುವುದು ಪೋಷಕರ ಕೈಯಲ್ಲಿರುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ ಮಾತ್ರ ಮಕ್ಕಳ ತಜ್ಞರ ಸಹಾಯ ಪಡೆಯುವುದು ಅನಿವಾರ್ಯ.

ಏನು ಕೊಟ್ಟರೂ ತಿನ್ನಲು ನಿರಾಕರಿಸುತ್ತಾರೆ, ಎಷ್ಟೇ ರುಚಿಯಾದ ಆಹಾರ ನೀಡಿದರೂ ಇಷ್ಟಪಡುವುದಿಲ್ಲ. ದಿನಕ್ಕೆ ಮೂರು ಹೊತ್ತು ತಿನ್ನಿಸುವುದು ಮೂರು ಮಹಾಯುದ್ಧಗಳನ್ನು ಗೆದ್ದಂತೆಯೇ ಸರಿ. ಇದಕ್ಕೇನಾದರೂ ಉಪಾಯವಿದೆಯೇ?

ಇದು ಒಂದಿಬ್ಬರು ಪೋಷಕರ ಗೋಳಲ್ಲ. ಬಹುತೇಕ ಮನೆಗಳಲ್ಲಿ ಕಂಡುಬರುವ ನಿತ್ಯಬವಣೆ. ಏನೂ ತಿನ್ನುವುದಿಲ್ಲ ಎನ್ನುವುದು ಹಲವರ ಸಮಸ್ಯೆಯಾದರೆ, ಕೆಲವು ಪ್ರಕಾರದ ಪೌಷ್ಟಿಕ, ಆರೋಗ್ಯಕರ ಆಹಾರಗಳನ್ನು ಇಷ್ಟಪಡುವುದಿಲ್ಲ ಎನ್ನುವುದು ಇನ್ನೂ ಕೆಲವರ ಕಳವಳ. ಸಾಮಾನ್ಯವಾಗಿ ಊಟ–ತಿಂಡಿಗೆ ನಿರಾಕರಿಸುವುದನ್ನು ಅವರ ಸ್ವಭಾವ ಅಥವಾ ವರ್ತನೆಯ ಸಮಸ್ಯೆ ಎಂದು ಗುರುತಿಸುತ್ತಾರೆ ಮಕ್ಕಳ ತಜ್ಞರು.

ಈ ಸಮಸ್ಯೆಗಳು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಪಡಿಸುವಷ್ಟು ದೀರ್ಘ ಕಾಲ ಉಳಿಯುವುದಿಲ್ಲ. ಕೆಲವು ಮಕ್ಕಳಲ್ಲಿ ಮಾತ್ರ ಇದು ಮುಂದುವರಿದು ಅವರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸಮಸ್ಯೆ ಈ ಹಂತ ತಲುಪಿದೆಯೇ ಎನ್ನುವುದನ್ನು ಪೋಷಕರು ಬೆಳವಣಿಗೆ ಪಟ್ಟಿಯ (Growth chart) ಸಹಾಯದಿಂದ ನಿರ್ಧರಿಸಬಹುದು. ಈ ಹಂತದಲ್ಲಿ ಮಾತ್ರ ಮಕ್ಕಳ ವೈದ್ಯರನ್ನು ಸಂಪರ್ಕಿಸಬೇಕು.

1ರಿಂದ 5 ವರ್ಷದ ಒಳಗಿನ ಮಕ್ಕಳಲ್ಲಿ ಈ ವರ್ತನೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವರು ಎಲ್ಲಾ ಪ್ರಕಾರದ ಆಹಾರವನ್ನು ನಿರಾಕರಿಸಬಹುದು, ಇನ್ನೂ ಕೆಲವರು ನಿರ್ದಿಷ್ಟ ಪ್ರಕಾರದ ಖಾದ್ಯಗಳನ್ನು ಮಾತ್ರ ನಿರಾಕರಿಸಬಹುದು. ಇದಕ್ಕೆ ಹಸಿವು ಇಲ್ಲದಿರುವುದು ಅಥವಾ ನೀವು ಮಾಡುವ ಆಹಾರ ಇಷ್ಟವಾಗದೇ ಇರುವುದು ಕಾರಣವಾಗಿರಬಹುದು. ಇದನ್ನು  ಪೋಷಕರು, ಮಕ್ಕಳ ಪಾಲನೆ ಮಾಡುವವರು ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ಸರಿಪಡಿಸಬಹುದು. ವಿವಿಧ ಪ್ರಕಾರಗಳ, ರುಚಿಕಟ್ಟಾದ ಖಾದ್ಯಗಳನ್ನು ಪರಿಚಯಿಸುವುದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ. ಹಸಿವು ಹೆಚ್ಚಿಸಲು ವೈದ್ಯರ ಸಲಹೆ ಪಡೆಯಬಹುದು.

ಹಣ್ಣು, ತರಕಾರಿಗಳನ್ನು ತಿನ್ನುವುದೇ ಇಲ್ಲ ಎನ್ನುವುದು ಅನೇಕರ ದೂರು. ಸುಮ್ಮನೆ ಬೇಯಿಸಿ ಮುಂದಿಟ್ಟರೆ ಮಕ್ಕಳಿಗೆ ಅದರ ಬಗ್ಗೆ ಹೇವರಿಕೆ ಹುಟ್ಟಬಹುದು. ಅದರ ಬದಲು ಹಣ್ಣನ್ನು ಆಲಂಕಾರಿಕವಾಗಿ ಕತ್ತರಿಸಿ, ಅದರ ಲಾಭಗಳ ಬಗ್ಗೆ ತಿಳಿಸುತ್ತ (ಇದನ್ನು ತಿಂದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ, ನೀನು ಹೆಚ್ಚು ಶಕ್ತಿಶಾಲಿ ಆಗುವೆ ಎಂದೆಲ್ಲಾ ವರ್ಣಿಸಿ) ನೀವೂ ಒಂದು ತುತ್ತು ತಿಂದು ಅದರ ಸ್ವಾದವನ್ನು ಆನಂದಿಸುತ್ತ, ಅಭಿನಯಿಸುತ್ತ ಮಗುವಿನ ಬಾಯಿಗಿಟ್ಟಾಗ ಮಗುವಿನ ಆಸಕ್ತಿ ಹೆಚ್ಚಿ ನಿರಾಕರಣೆ ತಪ್ಪಬಹುದು. 

ತಿನ್ನಲು ನಿರಾಕರಿಸುವ ಮಕ್ಕಳ ಸಮಸ್ಯೆ ದೂರ ಮಾಡಲು ಪೋಷಕರು ಕೆಲವು ಪರಿಹಾರೋಪಾಯಗಳನ್ನು ಅನುಸರಿಸಬೇಕು:

* ಹೊಸಬಗೆಯ ಖಾದ್ಯಗಳನ್ನು ಪರಿಚಯಿಸಿ

* ಆಹಾರ ತಯಾರಿಕೆಯಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಿ

* ಆಟವಾಡುತ್ತ, ಮಾತುಕತೆ ಹೇಳುತ್ತ ಊಟ ಮಾಡಿಸಿ

* ಒಮ್ಮೆ ನಿರಾಕರಿಸಿದ ಖಾದ್ಯವನ್ನು ಒಂದೆರಡು ದಿನ ಬಿಟ್ಟು ಮತ್ತೆ ಪ್ರಯತ್ನಿಸಿ

* ಕ್ರಮೇಣ ಹೊಸ ಆಹಾರಗಳನ್ನು ಪರಿಚಯಿಸಿ ಮತ್ತು ಅದರ ನಡುವೆ ಅವರು ಇಷ್ಟಪಡದ ಆಹಾರವನ್ನೂ ಸೇರಿಸಿ

* ಇಷ್ಟಪಡದ ಖಾದ್ಯ ಪ್ರಕಾರವನ್ನು ಬೇರೆಬೇರೆ ಬಣ್ಣ, ಆಕಾರ, ರೂಪಗಳಲ್ಲಿ ಸಿದ್ಧಪಡಿಸಿ

* ಆಹಾರದಲ್ಲಿ ವೈವಿಧ್ಯತೆ ಇರಲಿ. ಮೂರು ಹೊತ್ತು ಒಂದೇ ಬಗೆಯ ಆಹಾರ ನೀಡಬೇಡಿ

* ಒಂದು ಬಗೆಯ ಆಹಾರವನ್ನು ನಿರಾಕರಿಸಿದರೆ ಕೂಡಲೆ ಪರ್ಯಾಯ ತಿಂಡಿ ಕೊಡಬೇಡಿ

* ಊಟ–ತಿಂಡಿಯ ಬಗ್ಗೆ ಇರುವ ಉದ್ವೇಗ ಮತ್ತು ನಕಾರಾತ್ಮಕ ಭಾವನೆ ಕಡಿಮೆ ಮಾಡಿ

* ಮಗುವಿನ ಆಯ್ಕೆಯ ಖಾದ್ಯ–ತಿಂಡಿಗಳಿಗೆ ಆದ್ಯತೆ ನೀಡಿ

* ಬಣ್ಣಬಣ್ಣದ ಆಹಾರದ ಚಾರ್ಟ್‌, ಚಿತ್ರಗಳನ್ನು ತೋರಿಸಿ ಮಕ್ಕಳ ಆಹಾರದ ಆಸಕ್ತಿ ಉತ್ತೇಜಿಸಿ

* ನಿಗದಿತ ಸಮಯವನ್ನು ಅನುಸರಿಸಿ. ದಿನದಲ್ಲಿ ಎರಡು ಊಟ ಮತ್ತು 2 ರಿಂದ 3 ತಿಂಡಿಗಳನ್ನು ನಿಗದಿಪಡಿಸಿ. ಈ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಕುರುಕಲುಗಳನ್ನು ನಿರ್ಬಂಧಿಸಿ

ಈ ತಂತ್ರಗಳನ್ನು ಬಳಸುವುದರಿಂದ ಮಗುವಿನ ಹಸಿವಿನ ಪ್ರಮಾಣ, ಸೇವಿಸಿದ ಆಹಾರದ ಪ್ರಮಾಣ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ನಿಮ್ಮ ಮಗು ತೂಕವನ್ನು ಕಳೆದುಕೊಳ್ಳುತ್ತಿದೆ ಅಥವಾ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುತ್ತಿಲ್ಲ ಎಂದು ಅನಿಸಿದರೆ ವೈದ್ಯರನ್ನು ಸಂಪರ್ಕಿಸಿ. 

ಮಕ್ಕಳ ಪೋಷಣೆಯಲ್ಲಿ ಪರಿಗಣಿಸಬೇಕಿರುವ ಆಹಾರ ಪ್ರಕಾರಗಳು:

1. ಪ್ರೊಟೀನ್: ಹೆಚ್ಚು ಕೊಬ್ಬಿಲ್ಲದ ಮಾಂಸ, ಮೀನು, ಮೊಟ್ಟೆ, ಬೀನ್ಸ್, ದ್ವಿದಳ ಧಾನ್ಯಗಳು

2.ಕಾರ್ಬೊಹೈಡ್ರೇಟ್‌ಗಳು: ಬ್ರೆಡ್, ಪಾಸ್ತಾ, ನೂಡಲ್ಸ್, ಅನ್ನ, ರೊಟ್ಟಿ, ಓಟ್ಸ್, ಬಾರ್ಲಿ

3.ಜೀವಸತ್ವಗಳು, ಖನಿಜಗಳು, ನಾರು: ಹಣ್ಣು ಮತ್ತು ತರಕಾರಿಗಳು

4.ಕ್ಯಾಲ್ಸಿಯಂ: ಹಾಲು, ಚೀಸ್, ಮೊಸರು ಮತ್ತು ಡೈರಿ ಉತ್ಪನ್ನಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು