ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ಉಡುಪು: ನೂರಾರು ನೆನಪು

‘ಅಪ್ಪನ ಅಕ್ಕರೆಯ ಮಡಿಲಲ್ಲಿ’
Last Updated 6 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಅಮೆರಿಕದ ಲೇಖಕಿ ಎಲೆನೋರ್‌ ಎಸ್ಟೀಸ್‌ ಅವರು 1944ರಲ್ಲಿ ಬರೆದ ‘ದಿ ಹಂಡ್ರಡ್‌ ಡ್ರೆಸಸ್‌’ ಎಂಬ ಪುಸ್ತಕಕ್ಕೆ ಚಿಣ್ಣರ ಲೋಕದಲ್ಲಿ ಇಂದಿಗೂ ವಿಶೇಷ ಪ‍್ರಾಶಸ್ತ್ಯ. ಬಡತನದಿಂದಾಗಿ ಮಾಸಲು ಬಣ್ಣದ ಬಟ್ಟೆ ಧರಿಸಿ ಶಾಲೆಗೆ ಬರುವ ವಾಂಡಾ ಪೆಟ್ರಾನ್ಸ್‌ಕಿ ಎಂಬ ಬಾಲಕಿ, ಸಹಪಾಠಿಗಳ ಅವಹೇಳನದಿಂದ ಪಾರಾಗಲು ತನ್ನ ಬಳಿ 100 ಬಗೆಯ ಉಡುಪುಗಳಿರುವುದಾಗಿ ಕಥೆ ಕಟ್ಟುತ್ತಾಳೆ. ಇದನ್ನು ನಂಬದ ಸ್ನೇಹಿತೆಯರ ಅಪಹಾಸ್ಯ ಮಿತಿಮೀರಿದಾಗ, ಅವಳ ಕುಟುಂಬ ಊರನ್ನೇ ತ್ಯಜಿಸಬೇಕಾಗುತ್ತದೆ. ಆದರೆ, ಅದಕ್ಕೆ ಮುಂಚೆ ಶಾಲೆಯಲ್ಲಿ ಏರ್ಪಡಿಸಿದ್ದ ‘100 ವಸ್ತ್ರ ವಿನ್ಯಾಸ’ ಸ್ಪರ್ಧೆಯಲ್ಲಿ, ತನ್ನ ಕನಸಿನರಮನೆಯಲ್ಲಿ ರಾಜಕುವರಿಯಾಗಿ ತಾನು ತೊಟ್ಟು ನಲಿದಿದ್ದ ಉಡುಪುಗಳ ವಿಧವಿಧ ವಿನ್ಯಾಸಗಳನ್ನು ಅವಳು ಕಾಗದದ ಮೇಲೆ ಅರಳಿಸಿರುತ್ತಾಳೆ. ಅಂದಚಂದದ ಆ ವಿನ್ಯಾಸಗಳು ಮೊದಲ ಬಹುಮಾನ ಗಿಟ್ಟಿಸುವುದಲ್ಲದೆ ಅವಳ ಸ್ನೇಹಿತೆಯರ ಕಣ್ಣನ್ನೂ ತೆರೆಸುತ್ತವೆ. ತಾರತಮ್ಯದ ನಡೆಗಾಗಿ ತಮ್ಮ ಬಗ್ಗೆ ನಾಚಿಕೆಪಟ್ಟುಕೊಳ್ಳುವಂತೆ ಮಾಡುತ್ತವೆ.

ಇದೀಗ ಚೀನಾದಲ್ಲೊಬ್ಬ ಅಪ್ಪ ತನ್ನ ಕನಸಿನರಮನೆಯ ರಾಜಕುಮಾರಿಯಾದ ಮಗಳಿಗೆ 100ಕ್ಕೂ ಹೆಚ್ಚು ಉಡುಪುಗಳನ್ನು ಕೈಯಾರೆ ಹೊಲಿದು, ತೊಡಿಸಿ ಕಣ್ತುಂಬಿಕೊಂಡಿದ್ದಾನೆ. ಜಿಯಾಂಗ್‌ಷಿ ಪ್ರಾಂತ್ಯದ ಷು ರಿಕಿನ್‌ ಈಗ ‘ಹಂಡ್ರಡ್‌ ಡ್ರೆಸಸ್‌ ಫಾದರ್‌’ ಅಥವಾ ‘ಟೈಲರ್‌ ಅಪ್ಪ’ ಎಂದೇ ಖ್ಯಾತ. ಏಳೆಂಟು ವರ್ಷಗಳ ಹಿಂದೆ ಪುಟ್ಟ ಮಗಳು ಷಿಷಿಯನ್ನು ನೋಡಿಕೊಳ್ಳಲು ಗಂಡ, ಹೆಂಡತಿ ಇಬ್ಬರಲ್ಲಿ ಒಬ್ಬರು ಕೆಲಸ ಬಿಡಬೇಕಾಗಿ ಬಂದಾಗ, ತನಗಿಂತ ಒಳ್ಳೆಯ ನೌಕರಿಯಲ್ಲಿದ್ದ ಹೆಂಡತಿಯನ್ನು ಕೆಲಸಕ್ಕೆ ಕಳಿಸಿ, ತಾವೇ ಮನೆಯಲ್ಲಿದ್ದು ಮಗಳನ್ನು ಸಲಹುವ ಹೊಣೆ ಹೊರುತ್ತಾರೆ ಷು. ಒಮ್ಮೆ ರಸ್ತೆ ಬದಿಯಲ್ಲಿ ಕಣ್ಸೆಳೆದ ಬಟ್ಟೆಯಿಂದ ಮಗಳಿಗಾಗಿ ಫ್ರಾಕೊಂದನ್ನು ಹೊಲಿಯಬಾರದೇಕೆ ಅನಿಸಿದ್ದೇ ತಡ, ತನ್ನಮ್ಮ ಎಂದೋ ಕೊಟ್ಟಿದ್ದ ಹೊಲಿಗೆ ಮಷೀನ್‌ ಅಟ್ಟದಿಂದ ಕೆಳಗಿಳಿಯುತ್ತದೆ. ಟೈಲರ್‌ ಸ್ನೇಹಿತನ ನೆರವಿನಿಂದ ಫ್ರಾಕ್‌ ಹೊಲಿದು ಮಗಳಿಗೆ ತೊಡಿಸೇಬಿಡುವ ಷುಗೆ ಎಲ್ಲಿಲ್ಲದ ರೋಮಾಂಚನ. ಮಗಳು ಷಿಷಿಗೂ ಹಿರಿಹಿರಿ ಹಿಗ್ಗು.

ಈ ಖುಷಿಯನ್ನು ನಿರಂತರವಾಗಿಸಲು ಬಯಸುವ ಷುಗೆ ಹೊಲಿಗೆ ಬಾರದ್ದು ತೊಡಕೆನಿಸುವುದೇ ಇಲ್ಲ. ಕಲಿಕೆಗೆ ಆನ್‌ಲೈನ್‌, ತೊಟ್ಟು ನಲಿಯಲು ಮಗಳು, ಇನ್ನೇನು ಬೇಕು? ಬಟ್ಟೆಗೆ ಬಿದ್ದ ಒಂದೊಂದು ಹೊಲಿಗೆಯ ನೂಲಿನಲ್ಲೂ ಅಪ್ಪನ ಬೆಚ್ಚನೆಯ ಪ್ರೀತಿ ಉಕ್ಕಿ ಹರಿಯುತ್ತದೆ. ಸಾಧಾರಣ ಉಡುಪಿನಿಂದ ಹಿಡಿದು ಅನುಭವಿ ದರ್ಜಿಗೂ ಸವಾಲೊಡ್ಡುವ ಕುಸುರಿ ಕೆಲಸ, ಸೂಕ್ಷ್ಮ ಹೊಲಿಗೆ ಬೇಡುವ ಚೀನಾ, ಜಪಾನ್‌ನ ಸಾಂಪ್ರದಾಯಿಕ ಉಡುಪುಗಳವರೆಗೂ ಷು ಕೈಚಳಕ ಮುಂದುವರಿಯುತ್ತದೆ. ಫ್ರಾನ್ಸ್‌ನಲ್ಲಿ ತಾವು ಪಡೆದು ಬಂದಿದ್ದ ಇಂಟರ್‌ನ್ಯಾಷನಲ್‌ ಟ್ರೇಡ್‌ ಆ್ಯಂಡ್‌ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ ಪದವಿಯಿಂದ ಈ ಕಾಯಕಕ್ಕೆ ಚಿಕ್ಕಾಸಿನ ಪ್ರಯೋಜನವಾಗದಿದ್ದರೂ ಚಿಕ್ಕಂದಿನಲ್ಲಿ ಕಲಿತಿದ್ದ ಚಿತ್ರಕಲೆ ಅವರ ಕೈಹಿಡಿಯುತ್ತದೆ, ಉಡುಪುಗಳ ಸೊಬಗು ಹೆಚ್ಚಿಸುತ್ತದೆ. ಕೆಲವು ಉಡುಪುಗಳು 24 ಗಂಟೆಗಳಲ್ಲೇ ಸಿದ್ಧಗೊಂಡರೆ, ಇನ್ನು ಕೆಲವಕ್ಕೆ ವಾರಗಟ್ಟಲೆ ತಗುಲಿದ್ದೂ ಉಂಟು. ಸಹನೆ ಕಳೆಯುವ, ರೇಜಿಗೆ ಹುಟ್ಟಿಸುವ ಗಳಿಗೆಗಳೂ ಅಪ್ಪನ ವಾತ್ಸಲ್ಯದ ಮುಂದೆ ಶರಣಾಗುತ್ತವೆ.

ಒಮ್ಮೆ ಅಣ್ಣನ ಒತ್ತಾಸೆಯಿಂದ ತನ್ನ ವಸ್ತ್ರವಿನ್ಯಾಸದ ವಿಡಿಯೊ ತುಣುಕನ್ನು ಆನ್‌ಲೈನ್‌ಗೆ ಹಾಕಿದಾಗ ಬಂದ ಜನರ ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಪುಳಕಗೊಳ್ಳುವ ಷು, ಮುಂದೆ ಮಗಳಿಗಾಗಿ ಹೊಲಿದದ್ದನ್ನೆಲ್ಲ ಪೋಸ್ಟ್‌ ಮಾಡತೊಡಗುತ್ತಾರೆ. ಅದಕ್ಕೆಲ್ಲ ಮಗಳೇ ರೂಪದರ್ಶಿ. ಇದೀಗ ಷು ಮಕ್ಕಳ ಫ್ಯಾಷನ್‌ ಉಡುಪುಗಳ ಮಳಿಗೆಯನ್ನೇ ತೆರೆದಿದ್ದಾರೆ.

‘ಮಗಳೊಂದಿಗೆ ನಾನು ಕಳೆಯುವ ಮಧುರ ಕ್ಷಣಗಳಿಗೆ ಈ ಉಡುಪುಗಳು ನಿಮಿತ್ತವಾಗಲಿವೆ. ಅವಳ ಬಾಲ್ಯದ ನೆನಪುಗಳನ್ನು ವಸ್ತ್ರಗಳ ಮೂಲಕ ಅಮರವಾಗಿಸಲು ನಾನು ನಿರ್ಧರಿಸಿದೆ. ಮುಂದೆ ದೊಡ್ಡವಳಾದಾಗ, ತನ್ನಪ್ಪನ ಈ ವಾತ್ಸಲ್ಯದ ಹೊನಲನ್ನು ಅವಳು ತನ್ನ ಮಗಳ ಮೇಲೂ ಹರಿಸುವಂತಾಗಲಿ’ ಎಂದು ಭಾವುಕರಾಗಿ ನುಡಿಯುತ್ತಾರೆ ಷು. ಭಾರತದಂತೆ ಗಂಡು ಮಗುವಿಗೇ ಹೆಚ್ಚು ಪ್ರಾಶಸ್ತ್ಯವಿರುವ ಚೀನಾದಲ್ಲಿ, ತನ್ನ ಮಗಳಿಗೂ ಮಗಳಾಗಲಿ ಎಂದು ಬಯಸುವ ಷು ಎಲ್ಲ ಬಗೆಯಲ್ಲೂ ಮಾದರಿ ಅಪ್ಪನಂತೆ ಕಾಣುತ್ತಾರೆ.

ಎಲೆನಾರ್‌ ಅವರ ‘ದಿ ಹಂಡ್ರಡ್‌ ಡ್ರೆಸಸ್‌’ ವಾಂಡಾಳ ಸ್ನೇಹಿತೆಯರ ಕಣ್ಣು ತೆರೆಸಿದಂತೆ, ಈ ಅಪ್ಪನ ‘ಹಂಡ್ರಡ್‌ ಡ್ರೆಸಸ್‌’ ಹೆಣ್ಣುಮಕ್ಕಳ ವಿಷಯದಲ್ಲಿ ಕುರುಡಾಗಿರುವವರ ಕಣ್ಣು ತೆರೆಸುವಂತಾದರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT