ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗುದಿಯ ಗುಟ್ಟು ಒಳಗೊಳಗೇ ಇಟ್ಟು..

Last Updated 6 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳ ದೈಹಿಕ ಸಮಸ್ಯೆಗಳು ಒಂದಲ್ಲ, ಹಲವಾರು. ಗರ್ಭಾಶಯದ ಶಸ್ತ್ರಚಿಕಿತ್ಸೆ, ಅಧಿಕ ರಕ್ತಸ್ರಾವ, ಅನಿಯಂತ್ರಿತ ಮೂತ್ರದ ಹರಿವು... ಆದರೆ ಎಲ್ಲವನ್ನೂ ಒಳಗೊಳಗೇ ಇಟ್ಟುಕೊಂಡು ನರಳುವ ಮನಃಸ್ಥಿತಿ ಕೊನೆಯಾಗುವುದೆಂದು?

ಆಕೆ ಅನುಷ್ಕಾ ಶಂಕರ್‌. ಖ್ಯಾತ ಸಿತಾರ್‌ ವಾದಕಿ ಹಾಗೂ ಸಂಗೀತ ಕಂಪೋಸರ್‌. ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಆಕೆ ಹಾಕಿದ ದೀರ್ಘವಾದ ಪೋಸ್ಟ್‌ನಿಂದ ಸಾವಿರಾರು ಮಹಿಳೆಯರು ಅಚ್ಚರಿಗೊಂಡರು. ಓದಿ ಮುಜುಗರಗೊಂಡವರೂ ಕೂಡ ಈ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸುವ ನಿರ್ಧಾರಕ್ಕೆ ಬಂದಿದ್ದಂತೂ ನಿಜ. ಅಷ್ಟಕ್ಕೂ ಆಕೆ ಬರೆದಿರುವುದು ತಾನು ಕಳೆದುಕೊಂಡ ಗರ್ಭಾಶಯದ ಬಗ್ಗೆ.

ಫೈಬ್ರಾಯ್ಡ್‌ ಅಥವಾ ಗರ್ಭಾಶಯದ ಗಡ್ಡೆಗಳಿಂದಾಗಿ 26ರ ಹರೆಯದಲ್ಲೇ ಸಮಸ್ಯೆ ಅನುಭವಿಸಿದ್ದ ಅನುಷ್ಕಾ, ಎರಡು ಮಕ್ಕಳಾದ ನಂತರ 38ರ ಹರೆಯದಲ್ಲಿ ಉಲ್ಬಣಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದು ಹಿಸ್ಟರೆಕ್ಟಮಿ ಅಥವಾ ಗರ್ಭಾಶಯ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯಿಂದ. 13 ಗಡ್ಡೆಗಳು; ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಸತ್ತುಹೋಗುವ ಭಯ; ಎಲ್ಲಕ್ಕಿಂತ ಹೆಚ್ಚಾಗಿ ಗರ್ಭಾಶಯ ತೆಗೆದು ಹಾಕಿದರೆ ಹೆಣ್ತನವನ್ನೇ ಕಳೆದುಕೊಂಡಂತೆ ಎಂಬ ಭಾವನೆಯಿಂದ ಕಾಡಿದ ಖಿನ್ನತೆ; ದಾಂಪತ್ಯ ಸುಖದ ಮೇಲೆ ಸುಳಿದಾಡಬಹುದಾದ ಕರಿನೆರಳಿಂದ ಅನುಭವಿಸಿದ ಅಭದ್ರತೆ... ಎಲ್ಲವನ್ನೂ ಹೊರಹಾಕಿದ ಅನುಷ್ಕಾಗೆ ಕಾಡಿದ ದೊಡ್ಡ ಪ್ರಶ್ನೆಯೆಂದರೆ ‘ಯಾಕೆ ಈ ಶಸ್ತ್ರಚಿಕಿತ್ಸೆ ಬಗ್ಗೆ ಯಾರೂ ಹೆಚ್ಚು ಮಾತನಾಡುತ್ತಿಲ್ಲ; ಮಹಿಳೆಯರಲ್ಲಿ ಜಾಗೃತಿ ಮೂಡಿಸಿಲ್ಲ’ ಎಂಬುದು.

ಹೌದು, ಆಕೆಯನ್ನು ಮಾತ್ರವಲ್ಲ, ಹಲವರನ್ನು ಕಾಡುವ ಪ್ರಶ್ನೆಯಿದು. ಈ ಶಸ್ತ್ರಚಿಕಿತ್ಸೆ ಇದೀಗ ಸಾಮಾನ್ಯ. ಆದರೂ ಬಹುತೇಕ ಮಹಿಳೆಯರು ಈ ‘ಲೇಡಿ ಬಿಟ್ಸ್‌’ ಬಗ್ಗೆ ಮೌನವಹಿಸುತ್ತಾರೆ. ಹೆಣ್ತನ ಕಳೆದುಕೊಂಡ ಚಡಪಡಿಕೆಯ ಜೊತೆ, ಒಳಗೊಳಗೇ ಅವಮಾನ, ನಾಚಿಕೆಯನ್ನು ಅನುಭವಿಸುವ ಪರಿ ಕೇವಲ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಮಾತ್ರ ಸೀಮಿತವಲ್ಲ.

ಗಪ್‌ಚುಪ್‌ ಏಕೆ?

ಮಗುವಿಗೆ ಜನ್ಮ ನೀಡಿ ಸಂಭ್ರಮಕ್ಕೆ ಕಾರಣವಾಗುವ ಗರ್ಭಾಶಯ, ಅಂಡಾಶಯಗಳ ಶಸ್ತ್ರಚಿಕಿತ್ಸೆ ಮಾತ್ರವಲ್ಲ, ಮುಟ್ಟು, ಋತುಬಂಧ, ಲೈಂಗಿಕ ಆರೋಗ್ಯದ ವಿಷಯಗಳನ್ನು ಕೂಡ ಮುಚ್ಚಿಟ್ಟು ಒಂದು ರೀತಿಯ ತಳಮಳ ಅನುಭವಿಸುವುದು ಈ ಆಧುನಿಕತೆಯ ನೆರಳಲ್ಲೂ ಅಡಗಿದೆ. ಯಾರಾದರೂ ಅದರ ಬಗ್ಗೆ ಮಾತನಾಡಲಿ, ಆತಂಕ ನಿವಾರಿಸಲಿ ಎಂಬ ಮನೋಗತ ಪ್ರತಿ ಹೆಣ್ಣಿನ ಮನಸ್ಸಿನಲ್ಲೂ ಸುಪ್ತವಾಗಿರುತ್ತದೆ. ಆದರೆ ಅದು ಆಚೆ ಬರದೇ ಬರೀ ಭಾವನೆಗಳಾಗೇ ಉಳಿದು ಕೆಲವೊಮ್ಮೆ ಅಪಾಯಕ್ಕೆ ಕೂಡ ಎಡೆಮಾಡಿಕೊಡಬಹುದು. ತಮಾಷೆಯೆಂದರೆ ವೈಯಕ್ತಿಕ ವಿಷಯಗಳನ್ನು ಹೇಳಿಕೊಳ್ಳುವ ಹೆಂಗಳೆಯರು ಇಂತಹ ವಿಷಯ ಬಂದಾಗ ಗಪ್‌ಚುಪ್‌ ಆಗಿಬಿಡುತ್ತಾರೆ.

‘ಅನುಷ್ಕಾ ಶಂಕರ್‌ ಕೂಡ ಅದನ್ನು ಮರೆಮಾಚಿ ನಗುವಿನ ಮುಖವಾಡ ತೊಟ್ಟಳು. ಒಳ್ಳೆಯ ಆರೋಗ್ಯ ಸೇವೆ ಪಡೆಯುವ ಸಾಮರ್ಥ್ಯ, ಹಣ ಆಕೆಗಿದ್ದರೂ ಕೂಡ ಇದನ್ನು ಮುಚ್ಚಿಟ್ಟುಕೊಳ್ಳುವಂತೆ ಮಾಡಿದ್ದು ಹೆಣ್ತನ ಕಳೆದುಕೊಳ್ಳುವ ಭಯ. ಅದು ಇತರರಿಗೆ ಗೊತ್ತಾದರೆ ಅವಮಾನವಾಗಬಹುದು ಎಂಬ ಆತಂಕ’ ಎಂದು ವಿಶ್ಲೇಷಿಸುವ ಆಪ್ತ ಸಮಾಲೋಚಕಿ ಡಾ.ಪ್ರಮೀಳಾ ಎಸ್‌., ‘ಹಲವು ಹೆಣ್ಣುಮಕ್ಕಳು ಸಮಸ್ಯೆಯನ್ನು ಮುಚ್ಚಿಟ್ಟುಕೊಂಡು ಅಪಾಯಕ್ಕೆ ಒಳಗಾದ ಘಟನೆಗಳೂ ನಮ್ಮ ಮುಂದಿವೆ. ಖಿನ್ನತೆಗೆ ಒಳಗಾಗಿ ಸಮಾಲೋಚನೆಗೆ ಬಂದವರೂ ಇದ್ದಾರೆ’ ಎನ್ನುತ್ತಾರೆ.

ಅವರ ಪ್ರಕಾರ ಇಂಥವರಲ್ಲಿ ಬಹುತೇಕ ಮಂದಿ ಸುಶಿಕ್ಷಿತರೇ. ನಗರದಲ್ಲಿ ಬಹುತೇಕ ಹೆಣ್ಣುಮಕ್ಕಳು, ಓದಿಕೊಂಡವರು, ಉದ್ಯೋಗಸ್ಥ ಮಹಿಳೆಯರು ಇಂತಹ ವಿಷಯಗಳಲ್ಲಿ ಮುಜುಗರ ಅನುಭವಿಸುವುದು ಹೆಚ್ಚು.

‘ಫೈಬ್ರಾಯ್ಡ್‌ ಇರಲಿ ಅಥವಾ ಅಪಾಯಕಾರಿ ಗಡ್ಡೆಯೇ ಇರಲಿ, ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದು ಬಿಟ್ಟು, ಸಹೋದ್ಯೋಗಿಗಳಿಗೆ ಗೊತ್ತಾದರೆ, ಒಂದಕ್ಕೊಂದು ಸೇರಿಸಿ ಗಾಳಿಸುದ್ದಿ ಹರಿಯಬಿಟ್ಟರೆ ಅವಮಾನ ಎಂದುಕೊಳ್ಳುವುದು, ಮನೆಯಲ್ಲಿ ಪತಿ ಲೈಂಗಿಕ ಜೀವನದಲ್ಲಿ ಅನಾಸಕ್ತಿ ತೋರಿಸಿ ವಿವಾಹೇತರ ಸಂಬಂಧ ಬೆಳೆಸಿದರೆ ಎಂದು ಹೆದರುವುದು ಸರಿಯಲ್ಲ. ಇವಕ್ಕೆಲ್ಲ ಈಗ ಬೇಕಾದಷ್ಟು ಅತ್ಯಾಧುನಿಕ ಚಿಕಿತ್ಸೆಗಳಿವೆ’ ಎನ್ನುತ್ತಾರೆ ಡಾ.ಪ್ರಮೀಳಾ.

ಖಾಲಿ ಖಾಲಿ ದಿಗಿಲು

ಆದರೂ ಬಹುತೇಕ ಮಹಿಳೆಯರಿಗೆ ಇಂತಹ ಶಸ್ತ್ರಚಿಕಿತ್ಸೆಗಳ ನಂತರ ‘ಖಾಲಿ ಖಾಲಿ’ ಎನಿಸುವುದು ‘ಹೆಣ್ಣಾಗಿ ಉಳಿದಿಲ್ಲ’ ಎನಿಸಿ ದಿಗಿಲಾಗುವುದು ಸಾಮಾನ್ಯ. ಅಂಥವರು ಆಪ್ತಸಮಾಲೋಚನೆ ಮೂಲಕ ಇಂತಹ ಆತಂಕಗಳನ್ನು ನಿವಾರಿಸಿಕೊಳ್ಳಬಹುದು.
ಇದೊಂದೇ ಅಲ್ಲ, ಕೆಲವು ಮಹಿಳೆಯರಿಗೆ ಹೆತ್ತ ನಂತರ ಅಥವಾ ದೇಹದ ತೂಕ ಜಾಸ್ತಿ ಇದ್ದು, ಹೊಟ್ಟೆ ದಪ್ಪವಾಗಿದ್ದರೆ, ಋತುಬಂಧವಾದಾಗ ಹೀಗೆ ಹಲವಾರು ಕಾರಣಗಳಿಂದ ಮೂತ್ರವನ್ನು ಬಹಳ ಹೊತ್ತು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಸೀನಿದಾಗ, ಕೆಮ್ಮಿದಾಗ, ಜೋರಾಗಿ ನಕ್ಕಾಗ ಮೂತ್ರ ಸೋರುವ ಸಮಸ್ಯೆಗಳು ಸಹಜ. ಒಂದು ಅಧ್ಯಯನದ ಪ್ರಕಾರ 40ಕ್ಕಿಂತ ಅಧಿಕ ವಯಸ್ಸಿನ ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ತಲೆದೋರುತ್ತದಂತೆ. ಆದರೆ ಈ ಸಮಸ್ಯೆಯನ್ನು ಕೂಡ ಹೇಳಿಕೊಂಡರೆ ಅವಮಾನವೆಂದು ಒಳಗೊಳಗೇ ಆತಂಕ ಅನುಭವಿಸುವವರ ಸಂಖ್ಯೆಯೂ ಸಾಕಷ್ಟಿದೆ.

‘ಇದು ಅಸಹಜವೇನಲ್ಲ. ಇದರಲ್ಲಿ ಅವಮಾನ ಪಡುವಂತಹದ್ದೂ ಇಲ್ಲ. ಸಮವಯಸ್ಕರ ಜೊತೆ, ಮನೆಯವರ ಜೊತೆ ಮಾತನಾಡಿದರೆ ಪರಿಹಾರದ ಮಾರ್ಗ ಕಾಣುತ್ತದೆ’ ಎನ್ನುವ ಪ್ರಸೂತಿ ತಜ್ಞೆ ಡಾ. ಪ್ರೇಮಲತಾ ಸಾನು, ‘ಮುಟ್ಟಿನ ಸಂದರ್ಭದಲ್ಲಾಗುವ ಹೆಚ್ಚು ಸ್ರಾವದ ಬಗ್ಗೆಯೂ ಬಹುತೇಕ ತರುಣಿಯರು ಯಾರ ಜೊತೆಯೂ ಹೇಳಿಕೊಳ್ಳದೇ ಸಮಸ್ಯೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT