ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್‌: ಅಪ್ಪಿಕೊಳ್ಳುವ ವಸ್ತ್ರ.. ಫ್ಯಾಷನ್‌ ಲೋಕದಲ್ಲಿ ಖಾದಿ ಖದರ್‌!

ಬೇಸಿಗೆಗೂ ಸೈ, ಚಳಿಗಾಲಕ್ಕೂ ಸೈ. ಈ ಖಾದಿ ವಿಶೇಷವೇ ಇದು. ಒಮ್ಮೆ ಒಪ್ಪಿಕೊಂಡವರು ಜೀವನಪೂರ್ತಿ ಅಪ್ಪಿಕೊಳ್ಳುವ ವಸ್ತ್ರ
Published 29 ಸೆಪ್ಟೆಂಬರ್ 2023, 22:00 IST
Last Updated 29 ಸೆಪ್ಟೆಂಬರ್ 2023, 22:00 IST
ಅಕ್ಷರ ಗಾತ್ರ

ಖಾದಿ; ಬೇಸಿಗೆಗೂ ಸೈ, ಚಳಿಗಾಲಕ್ಕೂ ಸೈ. ಈ ಖಾದಿ ವಿಶೇಷವೇ ಇದು. ಒಮ್ಮೆ ಒಪ್ಪಿಕೊಂಡವರು ಜೀವನಪೂರ್ತಿ ಅಪ್ಪಿಕೊಳ್ಳುವ ವಸ್ತ್ರ. 

ಖಾದಿ ಇಂದು ಕಾಲೇಜು ಯುವತಿಯರಿಂದ ಕಾರ್ಪೊರೇಟ್‌ ಮಹಿಳೆಯರವರೆಗೂ ಮುದ್ದಿನ ದಿರಿಸಾಗಿ ಬದಲಾಗಿದೆ. ಯುವತಿಯರು ಜೀನ್ಸ್‌ ಮೇಲೆ ಖಾದಿ ಕುರ್ತಿ, ಟಾಪ್‌ ಧರಿಸಿ ಆತ್ಮವಿಶ್ವಾಸದ ಹೆಜ್ಜೆ ಇಟ್ಟರೆ, ಕಾರ್ಪೊರೇಟ್‌ ಮಹಿಳೆಯರು ಖಾದಿ ಸೀರೆಗೆ ಕಾಂಟ್ರಾಸ್ಟ್ ಮ್ಯಾಚಿಂಗ್‌ ಖಾದಿ ಬ್ಲೌಸ್‌ ತೊಟ್ಟು ಮಿಂಚುತ್ತಿದ್ದಾರೆ.  

ಖಾದಿ ನೀಡುವ ಹಿತಾನುಭವ ಬೇರ್‍ಯಾವ ಬಟ್ಟೆಯೂ ನೀಡಲು ಸಾಧ್ಯವಿಲ್ಲ. ಖಾದಿ ಆತ್ಮವಿಶ್ವಾಸದ ಪ್ರತೀಕ ಎಂದೂ ತಮ್ಮ ಅನುಭವವನ್ನು ಹಂಚಿಕೊಂಡವರು ಖಾದಿಯನ್ನು ನೆಚ್ಚಿಕೊಂಡ ಧಾರವಾಡದ ಸುನಂದಾ ಭಟ್‌.

ಖಾದಿ ಬಟ್ಟೆ ತೊಳೆದ ನಂತರ ಅದಕ್ಕೆ ಸ್ಟಾರ್ಚ್‌ ಬಳಸಿ, ಇಸ್ತ್ರಿ ಮಾಡಿಯೇ ಉಡಬೇಕು. ಇಂದಿನ ಧಾವಂತದ ಬದುಕಿನಲ್ಲಿ ಇದು ಖಾದಿ ಬಳಕೆಗೆ ಸ್ಪಲ್ಪ ಹಿನ್ನೆಡೆ ನೀಡಿದೆ ಎನ್ನುತ್ತಾರೆ ಅವರು. 

ಇತ್ತೀಚೆಗೆ ಖಾದಿ ಸೀರೆಯನ್ನು ಅದರ ವಿಶೇಷತೆ ಅರಿತು ಇಷ್ಟಪಟ್ಟು ಉಡುವವರ ಜತೆಗೆ ಫ್ಯಾಷನ್‌ಗಾಗಿ ತೊಡುವವರ ಸಂಖ್ಯೆ  ಹೆಚ್ಚುತ್ತಿದೆ. ಮ್ಯಾಚಿಂಗ್‌ ಕಿವಿಯೋಲೆ, ಕಂಠಹಾರ ಧರಿಸಿ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆಯೂ ಏರುತ್ತಿದೆ.  

ಖಾದಿ ವಸ್ತ್ರವೈವಿಧ್ಯದೊಟ್ಟಿಗೆ ಖಾದಿ ಆಭರಣಗಳೂ, ಪಾದರಕ್ಷೆಗಳೂ ಜತೆಯಾಗಿವೆ. ಲ್ಯಾಕ್ಮೆ ಏರ್ಪಡಿಸುವ ಫ್ಯಾಷನ್‌ ಷೋಗಳಲ್ಲಿ ಕೂಡ ಖಾದಿ ಕಾಯಂ ಜಾಗ ಗಿಟ್ಟಿಸಿಕೊಂಡಿದೆ. ಖಾದಿಗೆ ಉತ್ತೇಜನ ನೀಡಲು ಕೇಂದ್ರ ಜವಳಿ ಮಂತ್ರಾಲಯ ಕೂಡ ಫ್ಯಾಷನ್‌ ಷೋಗಳಲ್ಲಿ ಖಾದಿ ಷೋಅನ್ನು ಒಂದು ಭಾಗವಾಗಿಸಿ ಕಡ್ಡಾಯಗೊಳಿಸಿದೆ.

ವಿಶ್ವವಿದ್ಯಾಲಯಗಳಲ್ಲಿ ವಾರದಲ್ಲಿ ಒಂದು ದಿನ ಖಾದಿ ದಿರಿಸು ಧರಿಸಲು ಆದೇಶ ಹೊರಡಿಸಿದೆ. ವಿದ್ಯಾರ್ಥಿನಿಯರು ಕುರ್ತಿ, ಮಹಿಳಾ ಪ್ರಾಧ್ಯಾಪಕರು ಖಾದಿ ಸೀರೆಯುಟ್ಟು ಸಂಭ್ರಮಿಸುವಂತೆ ಮಾಡಿದೆ ಈ ಆದೇಶ. ಘಟಿಕೋತ್ಸವದಲ್ಲಿ ಕೂಡ ಗೌನ್‌ ಬದಲು ಖಾದಿ ವಸ್ತ್ರ, ಸೀರೆಯನ್ನೇ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎನ್ನುತ್ತಾರೆ ಗಾಂಧಿ ಅನುಯಾಯಿಯಾಗಿರುವ ಧಾರವಾಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ  ಡಾ.ಬಶೆಟ್ಟಿ.

ಇತ್ತೀಚಿನ ವರ್ಷಗಳಲ್ಲಿ ಕಾರ್ಪೊರೆಟ್‌ ವುಮನ್‌ ಫ್ಯಾಷನ್‌ ಷೋಗಳಲ್ಲಿ ಖಾದಿ ಸೀರೆಯನ್ನೇ ಧರಿಸಲು ಒತ್ತು ನೀಡಲಾಗಿದೆ ಎನ್ನುತ್ತಾರೆ ಖಾದಿ ಕಸೂತಿಯಲ್ಲಿ ವಿಶೇಷ ಯೋಜನಾವರದಿ ಸಿದ್ಧ ಪಡಿಸಿದ ಹುಬ್ಬಳ್ಳಿಯ ವಸ್ತ್ರವಿನ್ಯಾಸಕಿ ಸೀಮಾ ಎಸ್‌. ಖಟಾವ್ಕರ್‌.

ಖಾದಿಯಲ್ಲಿದೆ ನೈಸರ್ಗಿಕ ಬಣ್ಣ

ಖಾದಿಯಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಲಾಗುವುದರಿಂದ ಚರ್ಮದ ಆರೋಗ್ಯವನ್ನು ಕಾಯಲಿದೆ. ಅದರಲ್ಲೂ ವಿಶೇಷವಾಗಿ ಚರ್ಮದ ಕ್ಯಾನ್ಸರ್‌ ರೋಗಿಗಳು, ಸಂತ್ರಸ್ತರು, ಸೂಕ್ಷ್ಮ ಚರ್ಮಪ್ರಕೃತಿಯುಳ್ಳವರು ಖಾದಿ ವಸ್ತ್ರ ಬಳಸುವುದರಿಂದ ಆರೋಗ್ಯವನ್ನು ಹಾನಿಕಾರಕ ರಾಸಾಯನಿಕಗಳಿಂದ ರಕ್ಷಿಸಿಕೊಳ್ಳಬಹುದು ಎನ್ನುತ್ತಾರೆ ಸೀಮಾ ಎಸ್‌. ಖಟಾವ್ಕರ್‌.

ಖಾದಿ ಬಟ್ಟೆಗಳಲ್ಲಿ ನೈಸರ್ಗಿಕ ಬಣ್ಣಗಳನ್ನೇ ಬಳಸುತ್ತಿರುವುದು ವಿಶೇಷ. ಅಡಿಕೆ ತೊಗರು, ಇಂಡಿಗೊ, ದಾಳಿಂಬೆ ಸಿಪ್ಪೆ, ಮಂಜಿಷ್ಟಾ, ನೀಲಗಿರಿ ಎಲೆಗಳನ್ನು ಬಣ್ಣಕ್ಕಾಗಿ ಬಳಸುತ್ತಿದ್ದು, ಬಣ್ಣ ಸುದೀರ್ಘ ಕಾಲ ಬಾಳಿಕೆಯೊಂದಿಗೆ, ಚರ್ಮದ ಸ್ವಾಸ್ಥ್ಯವನ್ನು ಕಾಪಿಡಲಿವೆ ಎಂಬುದು ಅವರು ನೀಡುವ ವಿವರಣೆ.

ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ಮೇಲಿನ ಪಂಕ್ತಿಯಲ್ಲಿರುವ ಹುಬ್ಬಳ್ಳಿಯ  ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ಖಾದಿ ವಸ್ತ್ರಗಳ ಭರಪೂರ ಸಂಗ್ರಹವಿದೆ. ಖಾದಿ ಸೀರೆಗಳ ಸಂಗ್ರಹವೂ ಇದೆ.

ವರ್ಷದಿಂದ ವರ್ಷಕ್ಕೆ ಖಾದಿ ಸೀರೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬಿಳಿ, ಹಳದಿ ಸಮೇತ ತಿಳಿ ಬಣ್ಣಗಳಲ್ಲಿ ಸೀರೆಗಳು ಲಭ್ಯವಿವೆ. ಅಕ್ಟೋಬರ್‌ 2ರಿಂದ 45 ದಿನಗಳ ಕಾಲ ಖಾದಿ ಮೇಲೆ ಶೇ 35ರಷ್ಟು ರಿಯಾಯಿತಿ ಇರುವುದರಿಂದ ಆ ಸಮಯದಲ್ಲಿ ಸೀರೆಗಳ ಖರೀದಿ ಹೆಚ್ಚಿರಲಿದೆ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು.

ಖಾದಿ ಸೀರೆಯಲ್ಲಿ ಮಹಿಳೆಯರು
ಖಾದಿ ಸೀರೆಯಲ್ಲಿ ಮಹಿಳೆಯರು
ಲ್ಯಾಕ್ಮೆ ಫ್ಯಾಷನ್‌ ಷೋನಲ್ಲಿ ಖಾದಿ ಧರಿಸಿದ ರೂಪದರ್ಶಿಯರು
ಲ್ಯಾಕ್ಮೆ ಫ್ಯಾಷನ್‌ ಷೋನಲ್ಲಿ ಖಾದಿ ಧರಿಸಿದ ರೂಪದರ್ಶಿಯರು
ಖಾದಿ ಸೀರೆ
ಖಾದಿ ಸೀರೆ
ಖಾದಿ ಆಭರಣ
ಖಾದಿ ಆಭರಣ
ಖಾದಿ ಪಾದರಕ್ಷೆ
ಖಾದಿ ಪಾದರಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT