ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವ ಮಹಿಳಾ ದಿನ: ಮನೆ ನಡೀಬೇಕು, ಮನೆಯವರೇ ಮಾಡಬೇಕು..

Last Updated 7 ಮಾರ್ಚ್ 2023, 21:04 IST
ಅಕ್ಷರ ಗಾತ್ರ

ಸೂರ್ಯ ಮೂಡುವ ಮೊದಲೇ ಎದ್ದು, ಮನೆ–ಮನೆಗೆ ದಿನಪತ್ರಿಕೆ ಹಂಚುವ ಕೆಲಸದಲ್ಲಿ ಹುಡುಗರು/ಯುವಕರದ್ದೇ ಸಿಂಹಪಾಲು. ಜನದಟ್ಟಣೆ ಇಲ್ಲದೇ ಇರುವಲ್ಲಿ, ಕೊರೆಯುವ ಚಳಿಯಲ್ಲಿ ಮಣಭಾರದ ಬಂಡಲ್‌ಗಳನ್ನು ಹೊತ್ತು ಬೀದಿ–ಬೀದಿ ತಿರುಗುವ ಈ ವೃತ್ತಿಯಲ್ಲಿ ಮಹಿಳೆಯರೂ ಇದ್ದಾರೆ. ಬೆಂಗಳೂರು ನಗರ ಒಂದರಲ್ಲೇ ‘ಪ್ರಜಾವಾಣಿ’ಯ ಏಜೆಂಟರು ಮತ್ತು ವಿತರಕರಲ್ಲಿ ಇಂತಹ 15 ಮಹಿಳೆಯರು ಇದ್ದಾರೆ. ಕೆಲವರು ಇದೇ ವೃತ್ತಿಯಲ್ಲಿ 30 ವರ್ಷ ಪೂರೈಸಿದ್ದಾರೆ. ವಿಶ್ವ ಮಹಿಳಾ ದಿನದ ನೆಪದಲ್ಲಿ ಅಂತಹ ನಾಲ್ವರು ಮಹಿಳಾ ಪತ್ರಿಕಾ ವಿತರಕರು ತಮ್ಮ ವೃತ್ತಿ ಜೀವನವನ್ನು ಮತ್ತು ಅಂತಹ ಆಯ್ಕೆಗೆ ಕಾರಣವಾದ ಬದುಕನ್ನು ಸುಕೃತ ಎಸ್‌. ಅವರೊಂದಿಗೆ ಹಂಚಿಕೊಂಡಿದ್ದಾರೆ.

**
‘ಮನೆ ನಡೀಬೇಕು, ಮನೆಯವರೇ ಮಾಡಬೇಕು’
ಮಕ್ಕಳ ಓದು, ಮನೆ ನಡೀಬೇಕು ಅಂದರೆ ಕೆಲಸ ಮಾಡಬೇಕು ಅಲ್ವಾ. ನನ್ನ ಗಂಡ, ಇಬ್ಬರು ಮಕ್ಕಳು ಕೂಡ ನನಗೆ ಸಹಾಯ ಮಾಡುತ್ತಾರೆ. ನನ್ನ ಗಂಡ ಹಾಲು ಹಂಚುತ್ತಾರೆ. ನಾವು ಪತ್ರಿಕೆ ಹಂಚುತ್ತೇವೆ. ಬೆಳಿಗ್ಗೆ 3.30ಗೆ ಏಳುತ್ತೇನೆ. 4-4.15ರ ಹೊತ್ತಿಗೆ ಪತ್ರಿಕೆ ಬರುವ ಸೆಂಟರ್‌ಗೆ ಹೋಗುತ್ತೇನೆ. ಪತ್ರಿಕೆಯೆಲ್ಲಾ ಜೋಡಿಸಿಕೊಂಡು 4.45ರ ಸುಮಾರಿಗೆ ಪತ್ರಿಕೆ ಹಂಚುವ ಕಾರ್ಯ ಶುರುವಾಗುತ್ತದೆ.

ಎಲ್ಲಾ ಕೆಲಸಗಳಲ್ಲೂ ಕಷ್ಟ ಇರುತ್ತವೆ. ಅದನ್ನು ಮೀರಿ ಕೆಲಸ ಮಾಡಬೇಕು. ಹುಡುಗರನ್ನು ಇಟ್ಟುಕೊಳ್ಳಬಹುದು. ಆದರೆ ಈಗಿನ ಕಾಲದಲ್ಲಿ ಹುಡುಗರು ಒಂದು ಕಡೆ ನಿಲ್ಲುವುದಿಲ್ಲ. ಒಂದು ದಿನ ಬಂದರೆ, ಮುಂದಿನ ನಾಲ್ಕು ದಿನ ಬರುವುದಿಲ್ಲ. ಆದ್ದರಿಂದ ನಾವೇ ಮನೆಯವರು ಸೇರಿಕೊಂಡು ಪತ್ರಿಕೆ ಹಂಚುತ್ತೇವೆ. ಮೂರು ನಾಲ್ಕು ಬೀದಿಗೆ ಒಬ್ಬರು ಎಂಬಂತೆ ಹಂಚಿಕೊಂಡಿದ್ದೇವೆ.

ಪತ್ರಿಕೆ ಹಂಚಿ ಮನೆಗೆ ಬರುವುದು ಬೆಳಿಗ್ಗೆ 7.30 ಆಗುತ್ತದೆ. ನಂತರ ಅಡುಗೆ ಮಾಡುತ್ತೇನೆ. ನಂತರ ಒಬ್ಬರನ್ನು ಶಾಲೆಗೆ ಇನ್ನೊಬ್ಬರನ್ನು ಕಾಲೇಜಿಗೆ ಕಳುಹಿಸುತ್ತೇನೆ. ಪರೀಕ್ಷೆ ಸಂದರ್ಭದಲ್ಲಿ ಮಧ್ಯರಾತ್ರಿ 2 ಗಂಟೆಗೇ ಏಳಬೇಕಾಗುತ್ತದೆ. ಮಕ್ಕಳು ಓದಿಕೊಳ್ಳುತ್ತಾರೆ; ಅವರ ಓದಿಗೆ ತೊಂದರೆ ಆಗಬಾರದು. ಅದಕ್ಕಾಗಿ ಆಗಲೇ ತಿಂಡಿ ಮಾಡಿಟ್ಟುಬರುತ್ತೇನೆ. ಬೇರೆ ಉದ್ಯೋಗ ಮಾಡುವುದಿಲ್ಲ. ರಾತ್ರಿ 9 ಗಂಟೆಗೆಲ್ಲಾ ಮಲಗಿ ಬಿಡುತ್ತೇನೆ.

***

-ನಾಗರತ್ನಮ್ಮ, ಮೆಜೆಸ್ಟಿಕ್
-ನಾಗರತ್ನಮ್ಮ, ಮೆಜೆಸ್ಟಿಕ್

‘ಸ್ವಂತ ಉದ್ಯೋಗ, ನಡೆದುಕೊಂಡೇ ಜೀವನ’
ಬೆಳಿಗ್ಗೆ 4ಗಂಟೆಗೆ ಏಳುತ್ತೇನೆ. 5 ಗಂಟೆ ಹೊತ್ತಿಗೆ ಪತ್ರಿಕೆ ಬರುವ ಸೆಂಟರ್‌ಗೆ ಹೋಗುತ್ತೇನೆ. ದಿನಕ್ಕೆ ಸುಮಾರು 100 ಪತ್ರಿಕೆ ಹಂಚುತ್ತೇನೆ. ನಾನು ನಡೆದುಕೊಂಡೇ ಪತ್ರಿಕೆ ಹಂಚುವುದು. ಬೆಳಿಗ್ಗೆ ಸುಮಾರು 30 ಕಿ.ಮೀ. ನಡೆಯಬೇಕಾಗುತ್ತದೆ.

ಬೇರೆಯವರ ಕೈಕೆಳಗೆ ಕೆಲಸ ಮಾಡುವ ಇಚ್ಛೆ ಮೊದಲಿನಿಂದಲೂ ನನಗೆ ಇರಲಿಲ್ಲ. ನಾನು ಬರುವ ಮೊದಲೇ ನನ್ನ ಪತಿ ಈ ಕ್ಷೇತ್ರದಲ್ಲಿದ್ದರು. ಆದ್ದರಿಂದ ಈ ಕೆಲಸಕ್ಕೆ ಹೊಂದಿಕೊಳ್ಳಲು ನನಗೆ ಸುಲಭವೇ ಆಯಿತು. ಮನೆ ನಿರ್ವಹಣೆ ಸಮಸ್ಯೆ ಇತ್ತು. ಒಂದು ಹುಡುಗ ಇದ್ದರೆ ಸಂಬಳ ಕೊಡಬೇಕು. ಅದಕ್ಕಾಗಿ ನಾನೇ ಪತ್ರಿಕೆ ಹಂಚುತ್ತೇನೆ ಎಂದು ಪತಿಗೆ ಹೇಳಿದೆ.

ಮೆಜೆಸ್ಟಿಕ್‌ ಸುತ್ತಮುತ್ತ ಪತ್ರಿಕೆ ಹಂಚುವುದರಿಂದ, ಈ ಪ್ರದೇಶದಲ್ಲಿ ಸದಾ ಜನರಿರುತ್ತಾರೆ. ಹಾಗಾಗಿ ಭಯ ಆಗಿದ್ದೇನು ಇಲ್ಲ. ರಾತ್ರಿ 11ರ ಸುಮಾರಿಗೆ ಮಲಗುತ್ತೇನೆ. ಮೊದಲೆಲ್ಲಾ ಪತಿ ಜೊತೆಯಲ್ಲೇ ಸೆಂಟರ್‌ಗೆ ಹೋಗುತ್ತಿದ್ದೆ. ಆದರೆ, ಅವರಿಗೆ ಸ್ವಲ್ಪ ಆರೋಗ್ಯದ ಸಮಸ್ಯೆಯಾಗಿ ಅವರು ಈಗ ಬರುತ್ತಿಲ್ಲ.

ನಾನು ಒಬ್ಬಳೇ ಪತ್ರಿಕೆ ಬರುತ್ತಿದ್ದ ಸೆಂಟರ್‌ಗೆ ಹೋಗಲು ಶುರುಮಾಡಿದಾಗ ನನ್ನನ್ನು ಸ್ವಲ್ಪ ವಿಚಿತ್ರವಾಗಿ ನೋಡುತ್ತಿದ್ದರು. ಈಗ ಎಲ್ಲರೂ ನನ್ನನ್ನು ಗೌರವದಿಂದ ನೋಡುತ್ತಾರೆ.

**

-ಹೇಮಲತಾ, ರಾಜಾಜಿನಗರ
-ಹೇಮಲತಾ, ರಾಜಾಜಿನಗರ

‘ಕೆಲಸ ಮಾಡಕ್ಕೆ ಗಂಡು–ಹೆಣ್ಣು ಅಂತೇನಿಲ್ಲ’
ಕೆಲಸ ಮಾಡೋದಕ್ಕೆ ಗಂಡು–ಹೆಣ್ಣು ಅಂತೇನಿಲ್ಲ. ಎಲ್ಲಾ ಕೆಲಸಗಳನ್ನು ಎಲ್ಲರೂ ಮಾಡಬಹುದು. ನನ್ನ ಸೋದರಮಾವನ ಹತ್ತಿರ ಹಲವು ಪತ್ರಿಕೆಗಳ ಏಜೆನ್ಸಿ ಇತ್ತು. ಅವರು 1975ರಲ್ಲಿಯೇ ಕೆಲಸ ಶುರುಮಾಡಿದ್ದರು. ನಂತರ ನನ್ನ ತಾಯಿ ಇದನ್ನು ಮುಂದುವರಿಸಿದರು. ಈಗ ನಾನು.

ಸುಮಾರು ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಮೊದಲು ಅಮ್ಮನ ಜೊತೆ ಹೋಗುತ್ತಿದ್ದೆ. ಅವಳಿಗೆ ಆರೋಗ್ಯ ಸಮಸ್ಯೆಯಾಯಿತು. ಈಗ 15 ವರ್ಷದಿಂದ ನಾನು ಒಬ್ಬಳೇ ಏಜೆನ್ಸಿ ನೋಡಿಕೊಳ್ಳುತ್ತಿದ್ದೇನೆ.

ಬೆಳಿಗ್ಗೆ 3.30 ಗಂಟೆಗೆ ಏಳುತ್ತೇನೆ. ತಿಂಡಿ–ಊಟಕ್ಕೆ ಅಡುಗೆ ಮಾಡಿ 5 ಗಂಟೆ ಹೊತ್ತಿಗೆ ಪತ್ರಿಕೆ ಬರುವ ಸೆಂಟರ್‌ಗೆ ಹೋಗುತ್ತೇನೆ. ಕೆಲಸ ಮಾಡಬೇಕು ಅಂತಾದರೆ, ಕಷ್ಟ ನೋಡಿಕೊಂಡು ಕೂರೋದಕ್ಕೆ ಆಗುವುದಿಲ್ಲ. ಕೆಲಸ ಮಾಡಬೇಕಷ್ಟೆ.

ಯುಗಾದಿ, ದೀಪಾವಳಿ, ನವರಾತ್ರಿ ಸೇರಿ ನಾಲ್ಕು ರಜೆ. ಇಷ್ಟು ವರ್ಷಗಳಲ್ಲಿ ಬೇರೆ ರಜೆ ತೆಗೆದುಕೊಂಡಿಲ್ಲ. ಈ ದಿನಗಳಲ್ಲಿ ಮಾತ್ರ ಊರಿಗೆ ಹೋಗೋದು. ಇದಕ್ಕಾಗಿಯೇ ಸಂಬಂಧಿಕರ ಸಿಟ್ಟಿಗೂ ಗುರಿಯಾಗಿದ್ದೀನಿ. ಒಂದು ದಿನಾನೂ ಬರೋಕೆ ಆಗಲ್ವಾ; ಕೆಲಸ ಬಿಟ್ಟು ಬನ್ನಿ ಅಂತಾರೆ. ಆದರೆ, ಇದು ನಮ್ಮ ವೃತ್ತಿ ಅಲ್ವಾ, ಹೇಗೆ ಬಿಟ್ಟು ಹೋಗೋದು. ಇದು ಉದ್ಯೋಗ ಸರಿ. ಆದರೆ, ನಮ್ಮ ಗ್ರಾಹಕರು ನಮಗಾಗಿ ಕಾಯುತ್ತಿರುತ್ತಾರೆ. 300 ಮನೆಗಳಿಗೆ ಪತ್ರಿಕೆ ಹಾಕುತ್ತೇನೆ. ಎಲ್ಲರ ಜೊತೆಗೂ ಒಂದು ಪ್ರೀತಿಪೂರ್ವಕ ಸಂಬಂಧ ಬೆಳೆದುಬಿಟ್ಟಿದೆ.

**

-ನಾಗರತ್ನಮ್ಮ, ಹೆಗ್ಗಡೆನಗರ
-ನಾಗರತ್ನಮ್ಮ, ಹೆಗ್ಗಡೆನಗರ

‘ದಾಳಿಯಾಯಿತು; ಧೃತಿಗೆಡಲಿಲ್ಲ, ಏಜೆನ್ಸಿ ಪಡೆದುಕೊಂಡೆ’
ಪತ್ರಿಕೆ ಹಂಚುತ್ತಿದ್ದೆ. ಆಗ ಒಮ್ಮೆ ಕೆಲವರು ಮುಖ ಮುಚ್ಚಿಕೊಂಡು ನನ್ನ ಮೇಲೆ ದಾಳಿ ಮಾಡುವುದಕ್ಕೆ ಬಂದಿದ್ದರು. ನಾನು ಮೊದಲು ಕೆಲಸಕ್ಕೆ ಇದ್ದ ಏಜೆಂಟ್‌ ಸೇರಿ ಕೆಲವರು ನನ್ನ ಮೇಲೆ ದಾಳಿ ಮಾಡಲು ಬಂದಿದ್ದರು. ಅವರು ಕೆಲಸ ಮಾಡುತ್ತಿರಲಿಲ್ಲ. ನಾನು ಮಾಡುತ್ತಿದ್ದೆ. ಇದೇ ವೇಳೆಗೆ ನಾನು ಪ್ರಜಾವಾಣಿ ಪತ್ರಿಕೆಯ ಏಜೆನ್ಸಿ ತೆಗೆದುಕೊಳ್ಳಬೇಕು ಅಂತ ಸ್ನೇಹಿತರು ಒತ್ತಾಯಿಸುತ್ತಿದ್ದರು. ಆಗ ಈ ದಾಳಿ ನಡೆಸಲಾಯಿತು. ರಸ್ತೆಯಲ್ಲಿ ಹಲವು ಜನ ಇದ್ದಿದ್ದರಿಂದ ಹೇಗೋ ಪಾರಾದೆ. ಆಗಲೇ ಏಜೆನ್ಸಿ ತೆಗೆದುಕೊಳ್ಳಲೇ ಬೇಕು ಎಂದು ನಿರ್ಧರಿಸಿದೆ. ಪೊಲೀಸರಿಗೆ ದೂರು ಕೊಟ್ಟೆ. ನಂತರ ಯಾರು ನನ್ನ ತಂಟೆಗೆ ಬರಲಿಲ್ಲ.

ಸಾಯುವವರೆಗೂ ನಾನು ಇದೇ ಕೆಲಸ ಮಾಡುತ್ತೇನೆ. ಸೋಂಬೇರಿತನ ಮಾಡಿದರೆ ಮಾತ್ರ ವಯಸ್ಸಾಗಿದೆ ಅಂತ ಅರ್ಥ. ಚಟುವಟಿಕೆಯಿಂದ ಇದ್ದರೆ, ಯಾವ ವಯಸ್ಸು ಕಾಣುವುದಿಲ್ಲ. ಸದ್ಯ ನಾನು 1,300 ಪತ್ರಿಕೆ ಹಂಚುತ್ತಿದ್ದೇನೆ. ಇದನ್ನು 2 ಸಾವಿರ ಮಾಡಬೇಕು ಎಂಬ ಗುರಿ ಇದೆ. ಇದನ್ನು ಖಂಡಿತ ಮಾಡುತ್ತೇನೆ.

ಇಬ್ಬರು ಹುಡುಗರು, ಇಬ್ಬರು ಹುಡುಗಿಯರು ನನ್ನ ಬಳಿ ಪತ್ರಿಕೆ ಹಂಚುವುದಕ್ಕೆ ಇದ್ದಾರೆ. ಈಗಲೂ ಒಂದು ಮಾರ್ಗಕ್ಕೆ ನಾನೇ ಪತ್ರಿಕೆ ಹಂಚಲು ಹೋಗುತ್ತೇನೆ. ಹುಡುಗರು ಯಾರೂ ಬರದೇ ಇದ್ದ ದಿನಗಳೂ ಇವೆ. ಮಧ್ಯಾಹ್ನ ಒಂದು ಗಂಟೆಯಾದರೂ ನಾನೇ ಎಲ್ಲರಿಗೂ ಪತ್ರಿಕೆ ಹಂಚುತ್ತೇನೆ. ಮೊದಲು ಗಾಡಿ ಓಡಿಸಲು ಬರುತ್ತಿರಲಿಲ್ಲ. ಮಕ್ಕಳು ಹೇಳಿಕೊಟ್ಟರು. ಒಮ್ಮೆ ಅಪಘಾತವೂ ಆಯಿತು. ಕಾಲಿಗೆ ರಾಡ್‌ ಹಾಕಿದ್ದಾರೆ. ಆದರೂ, ನನ್ನ ಜೀವನೋತ್ಸಾಹ ಕಡಿಮೆ ಆಗಿಲ್ಲ.

*
ಮಳೆಗಾಲದಲ್ಲಿ ಸ್ಪಲ್ಪ ಕಷ್ಟ ಅನ್ನಿಸುತ್ತದೆ. ಅದು ಬಿಟ್ಟರೆ ಬೇರೆ ಯಾವ ಕಷ್ಟವೂ ಇಲ್ಲ. ಸ್ವಂತ ವ್ಯವಹಾರ ಆಗಿದ್ದರಿಂದ ಜವಾಬ್ದಾರಿಯೂ ಹೆಚ್ಚಿರುತ್ತದೆ.
-ಶ್ರೀಲಕ್ಷ್ಮಿ, ಪದ್ಮನಾಭನಗರ

*
ಪತ್ರಿಕೆ ಓದದೇ ಇರಲು ಆಗುವುದಿಲ್ಲ ಎಂದು ಹಲವು ಗ್ರಾಹಕರು ವೈಯಕ್ತಿಕವಾಗಿ ನನ್ನ ಬಳಿ ಹೇಳಿದ್ದಾರೆ. ಊರಿಗೆ ಹೋಗಬೇಕು ಎನ್ನುವ ನಮ್ಮ ಖುಷಿಗಾಗಿ ಇವರನ್ನು ಬಿಟ್ಟು ಹೋಗುವುದು ಹೇಗೆ ಹೇಳಿ.
-ಹೇಮಲತಾ, ರಾಜಾಜಿನಗರ

*
ಶಿಕ್ಷಣಕ್ಕೆ ಹಣದ ಕೊರತೆ ಅಂತ ಬಂದ ಹಲವು ಹುಡುಗಿಯರಿಗೆ ಕೆಲಸ ಕೊಡುತ್ತೇನೆ. ಮುಂದೆ ನನ್ನ ಬಳಿ ಎಲ್ಲರೂ ಹುಡುಗಿಯರೇ ಕೆಲಸ ಮಾಡುವಂತಾಗಬೇಕು ಎಂದೂ ಇಚ್ಛಿಸಿದ್ದೇನೆ.
-ನಾಗರತ್ನಮ್ಮ, ಹೆಗ್ಗಡೆನಗರ

*

30 ವರ್ಷದಲ್ಲಿ ಭಯ ಆಗುವಂಥ ಯಾವ ಘಟನೆಯೂ ನಡೆದಿಲ್ಲ. ಮಹಿಳೆಯಾಗಿದ್ದುಕೊಂಡು ಪತ್ರಿಕೆ ಹಂಚುತ್ತೀರಲ್ಲ ಎಂದು ಹಲವು ಗ್ರಾಹಕರು ನನ್ನನ್ನು ಪ್ರಶಂಸಿಸುತ್ತಾರೆ.
-ನಾಗರತ್ನಮ್ಮ, ಮೆಜೆಸ್ಟಿಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT