ಭಾನುವಾರ, ಏಪ್ರಿಲ್ 18, 2021
32 °C

PV Web Exclusive: ಅವಳೊಂದಿಗೆ ಜೊತೆಯಾಗಿ ಹೆಜ್ಜೆ ಹಾಕೋಣ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಮಹಿಳಾ ದಿನಾಚರಣೆ ಅಂದಮಾತ್ರಕ್ಕೆ ಆ ದಿನ ಮಹಿಳೆಯರಿಗಷ್ಟೇ ಸೀಮಿತ ಅನ್ನುವ ಅರ್ಥ ನಮ್ಮ ನಡುವೆ ಇದೆ. ಮುಖ್ಯವಾಹಿನಿಯಲ್ಲಿ ಬೆರೆತಿರುವಾಗಲೂ ಮಹಿಳೆ ಎಂಬ ಪ್ರತ್ಯೇಕ ಚೌಕಟ್ಟಿನಲ್ಲಿ ನೋಡುವ ಪರಿಪಾಠ ನಿಂತಿಲ್ಲ. ಪ್ರತ್ಯೇಕತೆಗಿಂತ ಸಮಾಜದ ಒಳ–ಹೊರಗಿನಲ್ಲಿ ಒಳಗೊಳ್ಳುವಿಕೆ ಮತ್ತು ಸಮಾನ ಪ್ರಾಶಸ್ತ್ಯದ ಆಶಯ ಮಹಿಳಾ ದಿನದ್ದು. ಪುರುಷ–ಮಹಿಳೆ ಸಹಜೀವಿಗಳಾಗಿ ಒಟ್ಟಾಗಿ ಪಯಣಿಸಬೇಕಾದ ಹಾದಿ ಇದು. ಪ್ರತ್ಯೇಕತೆಗಿಂತ ಜೊತೆಯಾಗಿ ಹೆಜ್ಜೆ ಹಾಕುವ ಅಗತ್ಯವನ್ನು ಮಹಿಳಾ ದಿನ ಒತ್ತಿ ಹೇಳುತ್ತದೆ. ಈ ನಿಟ್ಟಿನಲ್ಲಿ  ನಮ್ಮ ನಡುವೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವವರನ್ನು ಮಹಿಳಾ ದಿನದ ನೆಪದಲ್ಲಿ ಮಾತನಾಡಿಸಿದಾಗ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಇಲ್ಲಿವೆ. 

ಜತೆಯಾಗಿ ಹೆಜ್ಜೆ ಹಾಕೋಣ: ವಸಿಷ್ಠ ಸಿಂಹ, ನಟ

‘ವೃತ್ತಿಯಲ್ಲಿ ನನ್ನ ತಾಯಿ ಶಿಕ್ಷಕಿಯಾಗಿದ್ದವರು. ಅವರು ತೀರಿಕೊಂಡು 27 ವರ್ಷಗಳಾಗಿವೆ. ಆದರೆ, ಅವರು ಹಾಕಿಕೊಟ್ಟ ಹಾದಿ ಇಂದಿಗೂ ಹಸಿರಾಗಿದೆ. ಒಬ್ಬ ಗಂಡು ಶಿಕ್ಷಣ ಪಡೆದರೆ ಅವನೊಬ್ಬನೇ ಶಿಕ್ಷಣ ಪಡೆದಂತೆ. ಆದರೆ, ಒಬ್ಬ ಹೆಣ್ಣು ಶಿಕ್ಷಣ ಪಡೆದರೆ ಬರೀ ಒಂದು ಮನೆಯಷ್ಟೇ ಅಲ್ಲ ಇಡೀ ಕಾಲೊನಿಯೇ ಶಿಕ್ಷಣ ಪಡೆದಂತೆ. ಮಕ್ಕಳಿಗೆ ತಾಯಿಯೇ ಮೊದಲ ಗುರು. ಆಕೆಯಿಂದ ಮಕ್ಕಳು ಪಡೆಯುವ ಶಿಕ್ಷಣ ಪದವಿ ಪ್ರಮಾಣಪತ್ರಗಳ ಶಿಕ್ಷಣವಲ್ಲ. ತಿಳಿವಳಿಕೆ, ಅರಿವು, ಜ್ಞಾನದ ಶಿಕ್ಷಣ’

‘ನಮ್ಮ ಸಮಾಜದಲ್ಲಿ ಎಲ್ಲಿಯ ತನಕ ಹೆಣ್ಣಿಗೆ ವಿದ್ಯಾರ್ಜನೆಗೆ ಅವಕಾಶ ಇರಲಿಲ್ಲವೋ, ಆಗ ಆಕೆ ಪುರುಷ ಪ್ರಧಾನ ಸಮಾಜದಲ್ಲಿ ತುಳಿತಕ್ಕೊಳಗಾದಳು. ನಾಲ್ಕು ಗೋಡೆಗಳ ಒಳಗೇ ನರಳುವಂತಾಯಿತು. ಮತ್ತೊಂದು ನಿಟ್ಟಿನಲ್ಲಿ ಯೋಚಿಸಿದಾಗ ಕೆಲ ಹೆಣ್ಣುಮಕ್ಕಳು ಓದಿಯೂ ಮನೆಯಲ್ಲೇ ಇರಬಯಸಿದರೆ ಅದು ಆಯ್ಕೆಯ ಸ್ವಾತಂತ್ರ್ಯವೆಂದು ನಾವು ಗೌರವಿಸಬೇಕಾಗುತ್ತದೆ. ಆದರೆ, ಅದೇ ನೀನು ಹೆಣ್ಣಾಗಿ ಹುಟ್ಟಿರುವೆ. ಅದಕ್ಕೇ ಗೃಹಿಣಿಯಾಗಬೇಕೆಂಬ ನಿಲುವು ಸರಿಯಲ್ಲ ಅನ್ನುವುದು ನನ್ನ ಅಭಿಪ್ರಾಯ’

‘ ಈ ಹಿಂದೆ ನಾವು ಕೇಳಿರುವ ಕಥೆಗಳು ಮತ್ತು ಇತಿಹಾಸವನ್ನು ಒಮ್ಮೆ ನೆನಪಿಸಿಕೊಂಡರೆ ಅಬ್ಬಾ! ಅನಿಸುತ್ತೆ. ಎಲ್ಲಿಯ ಕೇಶಮುಂಡನ, ಎಲ್ಲಿಯ ಸತಿ ಪದ್ಧತಿ? ಅದೇ ಈಗ ಎಲ್ಲಿಯ ಮೀಟೂ ಚಳವಳಿ? ಎಷ್ಟೊಂದು ಬದಲಾಗಿದೆ ಅಲ್ಲವೇ? ಮೂಲಭೂತವಾಗಿ ಹೆಣ್ಣು–ಗಂಡು ಇಬ್ಬರೂ ಸಮಾನರು. ಅವರವರ ಭಾವಾಭಿವ್ಯಕ್ತಿಗೆ ಅರ್ಹತೆ ಇರುವಂಥವರು. ಇಂದು ಯಾವುದೇ ಕ್ಷೇತ್ರ ನೋಡಿದರೂ ಸಾಧಕಿಯರು ಕಾಣಸಿಗುತ್ತಾರೆ. ಕೆಲವು ಕ್ಷೇತ್ರಗಳಲ್ಲಿ ಪುರುಷರಿಗಿಂತಲೂ ಅವರೇ ಮುಂಚೂಣಿಯಲ್ಲಿದ್ದಾರೆ. ಇಂಥದ್ದೊಂದು ಬೆಳವಣಿಗೆಯ ಹಾದಿಯು ಸಮಾಜದ ಒಳಿತಿಗೆ ಪೂರಕ’

‘ಗಂಡಿನ ಜೀವನಕ್ಕೆ ಹೆಣ್ಣಿನ ಕೊಡುಗೆ ಅಪಾರ. ಜನ್ಮ ಅವಳಿಂದ, ಬದುಕು ಅವಳಿಂದ, ಬದುಕು ಪೂರ್ತಿಗೊಳ್ಳುವುದು ಅವಳಿಂದ. ಗಂಡಿನ ಜತೆಗೆ ಎಲ್ಲೆಡೆಯೂ ಹೆಣ್ಣು ಇರುವಾಗ ಸಾಮಾಜಿಕವಾಗಿ ಯಾಕೆ ಅವಳು ಹಿಂದಿರಬೇಕು? ಅವಳು ಮುಂಚೂಣಿಯಲ್ಲಿರಬೇಕು ಅಲ್ಲವೇ? ಮಹಿಳಾ ದಿನಾಚರಣೆ ಅನ್ನುವುದು ಒಂದು ದಿನಕ್ಕೆ ಮಾತ್ರ ಮೀಸಲಾಗಿರಬಾರದು. ಅದು ಪ್ರತಿನಿತ್ಯದ ಆಚರಣೆಯಾಗಿರಬೇಕಲ್ಲವೇ? ಹೆಣ್ಣುಗಂಡು ಜತೆಜತೆಯಾಗಿ ಹೆಜ್ಜೆ ಇಡುವುದು ನಿತ್ಯದ ವಾಡಿಕೆಯಾದರೆ, ಅದು ಸಾಮಾಜಿಕವಾಗಿ ಒಳಿತು ಅನ್ನುವುದು ನನ್ನ ಅಭಿಪ್ರಾಯ’

ನೋವು ನುಂಗಿ ನಕ್ಕವಳು: ವಾಸುಕಿ ವೈಭವ್, ಸಂಗೀತ ನಿರ್ದೇಶಕ

‘ನೋವನ್ನು ನುಂಗಿಕೊಳ್ಳುವ ಶಕ್ತಿ ಇರುವುದು ಹೆಣ್ಣಿಗೆ ಮಾತ್ರ. ಗಂಡಿನ ಅಹಂನಿಂದಾಗಿ ಆಕೆ ಶತಮಾನಗಳಿಂದ ಶೋಷಣೆಗೊಳಗಾಗಿ ನೋವು ನುಂಗಿಕೊಂಡಿದ್ದಾಳೆ. ಆ ನೋವೇ ಆಕೆಗಿಂದು ಶಕ್ತಿಯಾಗಿದೆ. ಭೂಮಿ ತಾಯಿಯಾಗಿರಬಹುದು, ಹೆತ್ತ ತಾಯಿ, ಪತ್ನಿ, ಮಗಳು ಹೀಗೆ ಅವರು ನೋವು ನುಂಗಿಕೊಳ್ಳುತ್ತಿರುವುದರಿಂದಲೇ ಪ್ರಪಂಚ ಇಂದು ಸುಖಿಯಾಗಿದೆ. ಹೆಣ್ಣು ಪ್ರತಿ ಸಲವೂ ನೋವನ್ನು ನುಂಗಿಕೊಂಡಾಗಲೂ ಹೊಸದೊಂದು ಮಾಂತ್ರಿಕತೆ ಸೃಷ್ಟಿಯಾಗುತ್ತದೆ’

‘ಭೂಮ್ತಾಯಿ ನೋವು ನುಂಗಿ ಹೊಸ ಬೆಳೆ ಕೊಡ್ತಾಳೆ, ತಾಯಿ ನೋವು ನುಂಗಿ ಹೊಸ ಜೀವಕ್ಕೆ ಜನ್ಮ ನೀಡುತ್ತಾಳೆ, ನೋವನ್ನು ನುಂಗಿಕೊಂಡು ಸಂತಸ ನೀಡುವ ಹೆಣ್ಣಿನ ಈ ಗುಣವೇ ನನ್ನನ್ನು ಆಶ್ಚರ್ಯಚಕಿತನನ್ನಾಗಿಸುತ್ತದೆ. ಹೆಣ್ಣಿಲ್ಲದ ಪ್ರಪಂಚ ವ್ಯರ್ಥ’.

‘ನನ್ನ ತಾಯಿಯ ಹೆಸರು ಜಯಂತಿ. ಅವರು ನನ್ನ ಬಗ್ಗೆ ಎಷ್ಟೊಂದು ಆಸೆಗಳನ್ನಿಟ್ಟುಕೊಂಡಿದ್ದಾರೋ ಏನೋ. ಆದರೆ, ನಾವು ಮಕ್ಕಳ ತಾಯಂದಿರು ಅಂದುಕೊಳ್ಳುವ ಚೌಕಟ್ಟಿನೊಳಗೆ ಬಾರದಿದ್ದರೂ, ತಾಯಿ ತನ್ನ ಆಸೆಗಳನ್ನು ಬಿಟ್ಟು ನಮ್ಮ  ಕನಸಿಗೆ ಪುಷ್ಟಿ ನೀಡಿ ನೀರೆರೆಯುತ್ತಾಳೆ’

‘ಹೆಣ್ಣು, ಗಂಡಿಗೆ ಸಮಾನ ಅಲ್ಲ. ಯಾವತ್ತು ಗಂಡಿಗಿಂತ ಮೇಲೆಯೇ. ಅವನಿಗಿಂತ ಹೆಚ್ಚೇ ಕೆಲಸ ಮಾಡುತ್ತಾಳೆ. ಗಂಡಿನ ಅಹಂನಿಂದಾಗಿ ಶತಮಾನಗಳಿಂದ ಶೋಷಣೆಗೊಳಗಾಗಿ ನೋವು ಸಹಿಸಿಕೊಂಡಿರುವುದೇ ಹೆಣ್ಣಿನ ದೊಡ್ಡ ಗುಣ. ಗಂಡಿಗೆ ಈ ರೀತಿಯ ಗುಣವಿಲ್ಲ. ಈ ಹಿಂದೆ ದೈಹಿಕ ಶ್ರಮಗಳು ಹೆಣ್ಣಿಗೆ ಆಗೋದಿಲ್ಲ ಅನ್ನುವ ಮಾತಿತ್ತು. ಆದರೆ, ಆ ಮಿಥ್ಯೆಯನ್ನೂ ಹೆಣ್ಣುಮಕ್ಕಳು ಮುರಿದಿದ್ದಾರೆ. ಪೆಟ್ರೋಲ್ ಬಂಕ್‌ನಿಂದ ಹಿಡಿದು ವಿಮಾನ ನಡೆಸುವ ತನಕ ಎಲ್ಲಾ ಕ್ಷೇತ್ರಗಳಲ್ಲೂ ಆಕೆ ಇದ್ದಾಳೆ. ಮುಂದೊಂದು ದಿನ ಗಂಡನ್ನು ಓವರ್ ಟೇಕ್ ಮಾಡುವ ಸಾಮರ್ಥ್ಯವೂ ಅವಳಿಗಿದೆ’.

ಶೇ 33 ಮೀಸಲಾತಿ ಯಾವಾಗ?: ಪ್ರಜ್ವಲ್ ರೇವಣ್ಣ, ಸಂಸದ

‘ಸ್ವಸ್ಥ ಮತ್ತು ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಪ್ರಧಾನವಾದದ್ದು. ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ ತನ್ನ ಕರ್ತವ್ಯಗಳನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತಿರುವವಳು ಹೆಣ್ಣು. ಆದರೆ ಈ ಪುರುಷ ಪ್ರಧಾನ ಸಮಾಜ ಈ ಹೆಣ್ಣನ್ನು ಅದೆಷ್ಟರ ಮಟ್ಟಿಗೆ ನಡೆಸಿಕೊಂಡಿದೆ ಅನ್ನೋದನ್ನ ಇತಿಹಾಸವೇ ಹೇಳುತ್ತೆ. ಇಪ್ಪತ್ತು ಶತಮಾನಗಳು ಕಳೆದರೂ ಹೆಣ್ಣಿಗೆ ಪೂರ್ಣ ಪ್ರಮಾಣದ ಸಮಾನತೆ ದೊರಕಿಲ್ಲ ಅನ್ನೋದು ಕಟುಸತ್ಯ’

‘ಸಾಮಾಜಿಕವಾಗಿ, ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸುವ ಜವಾಬ್ದಾರಿ ಈ ದೇಶದ ಪುರುಷರ ಮೇಲಿದೆ. ಶಿಕ್ಷಣದಿಂದ ಮಾತ್ರ ಈ ಸಮಾಜವನ್ನು ಸಮಾನತೆಯ ಕಡೆಗೆ ಕೊಂಡೊಯ್ಯಬಹುದು. ಹೆಣ್ಣು ಮಕ್ಕಳು ಸುಶಿಕ್ಷಿತರಾದರೆ ಅಸಮಾನತೆ ಮತ್ತು ಲಿಂಗ ತಾರತಮ್ಯವನ್ನು ಮೆಟ್ಟಿ ನಿಂತು ಸಮಾಜದಲ್ಲಿ ಸಮಾನತೆಯನ್ನು ಯಶಸ್ವಿಯಾಗಿ ಸ್ಥಾಪಿಸಬಹುದು’

‘ಭಾರತದ ಒಕ್ಕೂಟ ರಾಜಕಾರಣದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ, ಈ ದೇಶದ ಪ್ರಧಾನ ಮಂತ್ರಿಯಾಗಿ, ರಾಷ್ಟ್ರಪತಿಯಾಗಿ ತಮ್ಮ ಜವಾಬ್ದಾರಿಗಳನ್ನು ಹೆಣ್ಣುಮಕ್ಕಳು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ.ಇಂದಿರಾ ಗಾಂಧಿ, ಪ್ರತಿಭಾ ಪಾಟೀಲ್ ಅಂಥವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಭಾರತ ದೇಶ ಮಹಿಳೆಯರ ಹಕ್ಕುಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ನೀಡಬೇಕೆಂಬ ನಿಟ್ಟಿನಲ್ಲಿ ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ‘ಮಹಿಳಾ ಮೀಸಲಾತಿ ಮಸೂದೆ’ ಯನ್ನು 1996ರ ಸೆಪ್ಟೆಂಬರ್ ತಿಂಗಳಲ್ಲಿ ಮಂಡಿಸಿದ್ದರು, ಆದರೆ ಈ ಮಸೂದೆ ಇಂದಿಗೂ ಅಂಗೀಕಾರ ಆಗಿಲ್ಲ ಅನ್ನೋದು ನೋವಿನ ಸಂಗತಿ. ಈ ಮಸೂದೆಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಅನ್ನೋದನ್ನ ನಾನು ಈ ಬಾರಿಯ ಮಹಿಳಾ ದಿನದಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮಹಿಳೆಯರಿಗೆ ಮೀಸಲಾತಿ ದೊರಕಿದರೆ ವಿಶ್ವದ ಭೂಪಟದಲ್ಲಿ ಭಾರತವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಅನ್ನೋ ದೃಢವಾದ ನಂಬಿಕೆ ನನಗಿದೆ’

ಹೆಣ್ಣು ಶ್ರಮಜೀವಿ: ಧರ್ಮೇಂದರ್ ಕುಮಾರ್ ಮೀನಾ, ಡಿಸಿಪಿ, ಬೆಂಗಳೂರು ಉತ್ತರ ವಿಭಾಗ

‘ಮಹಿಳೆಯರು ಪುರುಷರಿಗಿಂತ ಕಡಿಮೆ ಅಲ್ಲ. ಈಗ ಸೇನೆಯಲ್ಲೂ ಅವರಿದ್ದಾರೆ. ಗಂಡು ಎಲ್ಲಿ ಕೆಲಸ ಮಾಡಬಲ್ಲನೋ ಹೆಣ್ಣೂ ಅಲ್ಲಿ ಕೆಲಸ ಮಾಡಬಹುದು. ಮಾಧ್ಯಮ, ನಾಗರಿಕ ಸೇವೆ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲೂ ಹೆಣ್ಣುಮಕ್ಕಳಿದ್ದಾರೆ.. ಕೆಲ ಕ್ಷೇತ್ರಗಳಲ್ಲಿ ಪುರುಷರಿಗಿಂತ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿದ್ದಾರೆ. ಈಗಿನ ಹೆಣ್ಣುಮಕ್ಕಳು ಬುದ್ಧಿವಂತೆ ಮಾತ್ರವಲ್ಲ ಅವರಿಗೆ ತಮ್ಮ ಹಕ್ಕುಗಳ ಬಗ್ಗೆಯೂ ತಿಳಿವಳಿಕೆ ಇದೆ. ಇದೊಂದು ಒಳ್ಳೆಯ ಬೆಳವಣಿಗೆ’

‘ನಮ್ಮದು ರೈತ ಕುಟುಂಬ. ಹಾಗೆ ನೋಡಿದರೆ ನನ್ನ ತಾಯಿ, ತಂದೆಗಿಂತಲೂ ಹೆಚ್ಚು ಶ್ರಮಜೀವಿ. ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಲ್ಲಿ ಗಂಡಿಗಿಂತ ಹೆಣ್ಣುಮಕ್ಕಳೇ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಏನು ಬೆಳೆ ಬೆಳೆಯಬೇಕು ಎಲ್ಲಿ ಮಾರಾಟ ಮಾಡಬೇಕು ಅನ್ನೋದಷ್ಟೇ ಗಂಡಿನ ನಿರ್ಧಾರ. ಆದರೆ, ಹೊಲ ಹಸನು ಮಾಡುವುದರಿಂದ ಹಿಡಿದು ಬೆಳೆ ಬೆಳೆದು ಕೈಗೆ ಸಿಗುವ ಹಂತದ ತನಕ ಎಲ್ಲಾ ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲು ಹೆಚ್ಚು. ಹಾಗಾಗಿ, ನನಗೆ ನನ್ನ ತಾಯಿಯೇ ಕೆಲಸ ಮಾಡಲು ಪ್ರೇರಣೆ. ವೈದ್ಯೆಯಾಗಿರುವ ನನ್ನ ಪತ್ನಿ ಈಗಿನ ಕಾಲದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತಾರೆ. ಅವರು ಬುದ್ಧಿವಂತೆ ಅಷ್ಟೇ ಅಲ್ಲ ತಮಗಿರುವ ಹಕ್ಕುಗಳ ಬಗ್ಗೆಯೂ ಅರಿವು ಹೊಂದಿದ್ದಾರೆ. ನನ್ನ ಸ್ನೇಹಿತೆಯರು, ಸಹೋದರಿಯರು ವಿವಿಧ ರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಸ್ವಾಭಿಮಾನದ ಜೀವನ ರೂಪಿಸಿಕೊಂಡಿದ್ದಾರೆ. ಈ ಬೆಳವಣಿಗೆ ನೋಡಿದಾಗ ಹೆಣ್ಣುಮಕ್ಕಳ ಸಾಧನೆಯ ಕುರಿತು ಹೆಮ್ಮೆ ಮೂಡುತ್ತದೆ’

ವಸಿಷ್ಠ ಸಿಂಹ ರಚನೆಯ ಕವಿತೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು