ಶನಿವಾರ, ಅಕ್ಟೋಬರ್ 1, 2022
20 °C

ಮಹಿಳೆ | ‘ಸ್ವಚ್ಛವಾಹಿನಿ’ಶಕ್ತಿ ಮಾನಿನಿ

ಕಿಶನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಸ ಸಂಗ್ರಹಕ್ಕಾಗಿ ನಿಯೋಜಿಸಿರುವ ‘ಸ್ವಚ್ಛವಾಹಿನಿ’ಗೆ ಮಹಿಳೆಯರೇ ಸಾರಥಿಯರು. ವಾಹನ ಚಾಲನೆಯಷ್ಟೇ ಅಲ್ಲ, ವಾಹನದ ನಿರ್ವಹಣೆಯ ಜವಾಬ್ದಾರಿಯೂ ಮಹಿಳೆಯರದ್ದೇ.

***

ಗ್ರಾಮೀಣ ಭಾಗದ ತ್ಯಾಜ್ಯದ ಸಮಸ್ಯೆಯು ಬದಲಾಗಿ ನಿಂತೈತ್ರಿ
ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯವು ಜೀವಕ ಮಾರಕವಾಗೈತ್ರಿ
ತಮ್ಮೆಲ್ಲ ಸಹಕಾರ ನಮಗೀಗ ಅನಿವಾರ್ಯವಾಗೈತ್ರಿ
ಸ್ವಚ್ಛ ಪಂಚಾಯಿತಿ ಮಾಡಲು ನೀವೆಲ್ಲ ಮುಂದೆ ಬರ‍್ರೀ..ನೀವು ಮುಂದೆ ಬರ‍್ರೀ..

ನಿತ್ಯ ಬೆಳಿಗ್ಗೆ ಹೀಗೆ ‘ಸ್ವಚ್ಛತಾ ವಾಹಿನಿ’ಯ ಧ್ವನಿವರ್ಧಕ ಮೂಲಕ  ಹೊರಡುವ ಈ ಹಾಡು ಕೇಳಿದಾಕ್ಷಣ ಗ್ರಾಮಸ್ಥರು ಕಸ ತಂದು ಹಾಕುವುದಷ್ಟೆ ಅಲ್ಲ, ಮೂಗಿನ ಮೇಲೂ ಬೆರಳಿಟ್ಟು ನೋಡುತ್ತಾರೆ. ಏಕೆಂದ್ರೆ, ಕಸ ಸಂಗ್ರಹಿಸುವ ಈ ವಾಹಿನಿಗೆ ಹೆಣ್ಣು ಮಕ್ಕಳೇ ಡ್ರೈವರ್. ಅಷ್ಟೇ ಅಲ್ಲ, ಆ ಚಾಲಕಿಗೆ ಸಹಾಯಕಿಯೂ ಮಹಿಳೆಯೇ !

ಕೊಪ್ಪಳ ಜಿಲ್ಲಾಡಳಿತವು ಜಿಲ್ಲೆಯ ಚಳಗೇರಿ, ಕಂದಕೂರು, ಮುದೇನೂರ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ‘ಸಂಜೀವಿನಿ’ ಯೋಜನೆ ಗುಂಪಿನಲ್ಲಿರುವ ಮಹಿಳೆಯರಿಗೆ ಗ್ರಾಮ ನೈರ್ಮಲ್ಯ ಕಾರ್ಯದ ಜವಾಬ್ದಾರಿ ನೀಡಿದೆ.

ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುತ್ತಾ ಮಹಿಳೆಯರು ಕೆಲಸ ಆರಂಭಿಸಿರುವ ಮಹಿಳೆಯರು, ಗ್ರಾಮದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಪಿಯುಸಿವರೆಗೆ ಓದಿರುವ ಇವರಲ್ಲಿ ಬಹುತೇಕರು ಮೂಲತಃ ಕೃಷಿ ಕಾರ್ಮಿಕರು. ಇವರೆಲ್ಲರಿಗೂ ಸದ್ಯ ಉದ್ಯೋಗ ದೊರೆತಿರುವ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ನಾವು ವಾಹನ ಓಡಿಸುವುದರ ಮೂಲಕ ಗ್ರಾಮ ಸ್ವಚ್ಛತೆಯ ಜವಾಬ್ದಾರಿ ಪಡೆದಿದ್ದೇವೆ ಎಂಬ ಅಭಿಮಾನ. ಈ ಅಭಿಮಾನವೇ ಗ್ರಾಮಗಳ ಸ್ವಚ್ಛತೆಗೆ ಕಾರಣವಾಗಿದೆ. ಜತೆಗೆ ಸ್ಥಳೀಯ ಮಹಿಳೆಯರಿಗೆ ಈ ಕೆಲಸ ನೀಡಿದ್ದು, ಗ್ರಾಮಸ್ಥರ ಸ್ವಚ್ಛತಾ ಕಳಕಳಿ ಇಮ್ಮಡಿಗೊಳ್ಳಲು ಕಾರಣವಾಗಿದೆ.

ವಾಹನಕ್ಕೆ ಒಬ್ಬ ಚಾಲಕಿ, ಸಹಾಯಕಿ
ಪ್ರತಿ ವಾಹನಗಳಲ್ಲಿ ಚಾಲಕಿಯ ಜತೆಗೆ ಒಬ್ಬ ಸಹಾಯಕಿ ಇದ್ದು, ಗ್ರಾಮಸ್ಥರು ತರುವ ಕಸವನ್ನು ವಾಹನಕ್ಕೆ ಹಾಕುವುದು ಅವರ ಕೆಲಸವಾಗಿದೆ. ಕಸ ತುಂಬಿಕೊಂಡ ವಾಹನ ಗ್ರಾಮದ ಹೊರಭಾಗದಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಸಾಗುತ್ತದೆ. ಅಲ್ಲಿ ಪದ್ಮಾವತಿ ದಾಸರ, ಸಂಗಮ್ಮ, ಸವಿತಾ ಸೇರಿದಂತೆ ನಾಲ್ಕಾರು ಮಹಿಳೆಯರು ತಂದ ಕಸದಲ್ಲಿ ಒಣ ಕಸ ಬೇರ್ಪಡಿಸಿ ಪ್ಲಾಸ್ಟಿಕ್, ಗಾಜು, ರಟ್ಟು, ತಗಡು.. ಹೀಗೆ ವಿಂಗಡಣೆ ಮಾಡುತ್ತಾರೆ.

ಈ ತಂಡದ ಸದಸ್ಯೆ ಚಳಗೇರಿ ಗ್ರಾಮದ ಪೂರ್ಣಿಮಾ ಗುಡುಗುಡಿ ಆರಂಭದಲ್ಲಿ ವಾಹನ ಚಾಲನೆಗೆ ಮುಜುಗರ ತೋರಿದ್ದರು. ಆದರೆ ಗ್ರಾಮಸ್ಥರ ಪ್ರೋತ್ಸಾಹದಿಂದಾಗಿ ಇದೀಗ ನಿರ್ಭೀತಿಯಿಂದಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ. ಕಿರಿದಾದ ಓಣಿಯಲ್ಲಿ, ಅದೂ ಆಚೀಚೆ ಕಟ್ಟಿದ ದನಕರುಗಳ ಮಧ್ಯೆ ನಾಜೂಕಿನಿಂದ ವಾಹನ ಚಾಲನೆ ಮಾಡುತ್ತಾರೆ. ವಾಹನ ಚಾಲನೆ ಮಾಡಿಕೊಂಡು ಬರುವುದನ್ನು ಕಂಡ ಗ್ರಾಮಸ್ಥರು, ಈಗ ಆಕೆಗೆ ತೊಂದರೆಯಾಗಬಾರದು ಎಂದು ರಸ್ತೆ ವಿಶಾಲಗೊಳಿಸಿ ವಾಹನ ಚಾಲನೆಗೆ ಅನುವು ಮಾಡಿಕೊಟ್ಟಿದ್ದಾರೆ.

ವಾಹನ ಚಾಲನೆ ಅಷ್ಟೇ ಅಲ್ಲ, ವಾಹನಕ್ಕೆ ನಿತ್ಯ ಗಾಳಿ ತುಂಬುವುದು, ಪಂಕ್ಚರ್ ಹಾಕುವುದು, ಗಾಡಿ ತೊಳೆಯುವಂತಹ ಎಲ್ಲ ಕೆಲಸಗಳನ್ನು ಪೂರ್ಣಿಮಾ ಹಾಗೂ ಸಹಾಯಕಿ ಶಾಂತಮ್ಮ ಮಾಡುತ್ತಿದ್ದಾರೆ, ಅದೂ ಯಾರ ನೆರವಿಲ್ಲದೇ.

ಒಣ ಕಸದ ವಿಲೇವಾರಿಗಾಗಿ ಗ್ರಾಮ ಪಂಚಾಯ್ತಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ತಲಾ ₹15.15 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಿದೆ. ಇಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಐದು ಗ್ರಾ.ಪಂ.ಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ.

34 ಮಹಿಳೆಯರಿಗೆ ಚಾಲನಾ ತರಬೇತಿ
ಸದ್ಯ ಪೂರ್ಣಿಮಾ ಗುಡುಗುಡಿ ಅವರ ಜೊತೆಗೆ, ಮುದೇನೂರಿನ ಸುಧಾ ಈಳಿಗೇರ, ಕಂದಕೂರು ಗ್ರಾಮದ ಸುಮಂಗಲಾ ಹಿರೇಮಠ, ಕುದರಿಮೋತಿಯ ಶಿಲ್ಪಾ ಅವರು ಸ್ವಚ್ಛತಾ ವಾಹನದ ಚಾಲಕಿಯರಾಗಿ ಕಾರ್ಯ ಆರಂಭಿಸಿದ ಮೊದಲ ಮಹಿಳೆಯರು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 34 ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿದ್ದು, ಅದರಲ್ಲಿ ಎಂಟು ಯುವತಿಯರು ಮಾತ್ರ ವಾಹನ ಚಾಲನೆ ಮಾಡುತ್ತಿದ್ದಾರೆ. ಸಂಬಂಧಪಟ್ಟ ಗ್ರಾ.ಪಂ. ನಿಧಿಯಿಂದ ₹ 6.49 ಲಕ್ಷದಲ್ಲಿ ವಾಹನ ಖರೀದಿಸಿದ್ದಾರೆ. ‘ಸರ್ಕಾರದ ಮಾರ್ಗಸೂಚಿಯನ್ವಯ ಸಂಜೀವಿನಿ ಯೋಜನೆಯಡಿಯಲ್ಲಿ ಗ್ರಾ.ಪಂ. ಮಟ್ಟದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡು ತರಬೇತಿ ನೀಡಲಾಗಿದೆ’ ಎನ್ನುತ್ತಾರೆ ಸಂಜೀವಿನಿ ಯೋಜನೆಯ ಮೇಲ್ವಿಚಾರಕ ಮಾದೇಗೌಡ ಪೊಲೀಸ್ ಪಾಟೀಲ.

ಪ್ರತಿ ಗ್ರಾ.ಪಂನಲ್ಲಿ ಘಟಕ
ಪ್ರತಿ ಗ್ರಾ.ಪಂ.ನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಕಸವನ್ನು ಸಂಸ್ಕರಣೆ ಮಾಡುವುದು ಈ ಯೋಜನೆ  ಉದ್ದೇಶ. ಜಿಲ್ಲೆಯ 8 ಗ್ರಾ.ಪಂ.ನ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪರಸ್ಪರ ಒಡಂಬಡಿಕೆಯಾಗಿದ್ದು, ಐವರು ಸ್ವಸಹಾಯ ಸಂಘದ ಮಹಿಳೆಯರು ಪ್ರತಿನಿತ್ಯ ಕಸವನ್ನು ಪ್ರತ್ಯೇಕಿಸುವ ಕಾರ್ಯ ಮಾಡುತ್ತಿದ್ದಾರೆ. ಬಳಿಕ ಸಂಗ್ರಹವಾದ ಒಣ ಕಸ ಹರಾಜು ಮಾಡಲಾಗುತ್ತದೆ ಎಂದು ಕಸ ವಿಲೇವಾರಿ ಘಟಕ ಕುರಿತು ವಿವರಿಸುತ್ತಾರೆ ಗ್ರಾ.ಪಂ. ಪಿಡಿಒ ಬಸವರಾಜ ಸಂಕನಾಳ ಹಾಗೂ ಅಧ್ಯಕ್ಷ ಬಸವರಾಜ.

‘ಸ್ವಚ್ಛ ಭಾರತ ಮಿಷನ್ ಮತ್ತು ನರೇಗಾ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗಿದೆ. ಕಸ ವಿಲೇವಾರಿಗಾಗಿ ಸಂಜೀವಿನಿ ಯೋಜನೆಯಡಿಯಲ್ಲಿ ರಚನೆಯಾಗಿರುವ ಗ್ರಾ.ಪಂ. ಮಟ್ಟದ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾ.ಪಂಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ’ ಎನ್ನುತ್ತಾರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ಪ ಸುಬೇದಾರ.

***

’ಆರಂಭದಲ್ಲಿ ವಾಹನ ಚಲಾಯಿಸಲು ನನಗೆ ಮುಜುಗರ ಎನಿಸುತ್ತಿತ್ತು. ಗ್ರಾಮಸ್ಥರ ಪ್ರೋತ್ಸಾಹದಿಂದ ಈಗ ಮುಜುಗರ ಮರೆಯಾಗಿದೆ. ಕಸ ಸಂಗ್ರಹಿಸಲು ನಾವು ಹೋಗುವುದು ತಡವಾದರೆ ನಮ್ಮ ಗೆಳತಿಯರು ಹಾಗೂ ಸಾರ್ವಜನಿಕರು ಕರೆ ಮಾಡಿ ಕರೆಯುತ್ತಾರೆ.
ಪೂರ್ಣಿಮಾ ಗುಡುಗುಡಿ, ಸ್ವಚ್ಛ ವಾಹಿನಿ ವಾಹನದ ಚಾಲಕಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು