ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಅಮ್ಮಂದಿರಿಗೆ ಹೊಸ ಪಾಠ; ಮನೆಯಲ್ಲೇ ಶಾಲೆ, ಮನೆಯಲ್ಲೇ ಕಚೇರಿ

Last Updated 9 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕಳೆದ ಕೆಲ ತಿಂಗಳುಗಳಿಂದ ಕೋವಿಡ್‌-19 ಬಹಳಷ್ಟು ಮನೆಗಳ ಚಿತ್ರಣವನ್ನೇ ಬದಲಿಸಿದೆ. ಕಚೇರಿಯ ಕೆಲಸಗಳೂ, ಶಾಲೆಯ ಪಾಠಗಳೂ ಮನೆಯನ್ನೇ ಆಶ್ರಯಿಸಿರುವ ಈ ಹೊತ್ತು ಪೋಷಕರು, ಅದರಲ್ಲೂ ಅಮ್ಮಂದಿರುವ ಮನೆಯ ಚಿತ್ರಣದ ಜೊತೆಜೊತೆಗೇ ಮನಸ್ಥಿತಿಯಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕಿದೆ.

ಕೋವಿಡ್‌–19 ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಿದೆ. ಅದರಲ್ಲೂ ದುಡಿಯುವ ಅಮ್ಮಂದಿರು ತಮ್ಮೆದುರು ರಾಶಿ ಬಿದ್ದಿರುವ ಭಿನ್ನವಿಭಿನ್ನ ಸವಾಲುಗಳನ್ನು ಜಯಿಸಬೇಕಾದ ಒತ್ತಡದಲ್ಲಿದ್ದಾರೆ. ಕಚೇರಿ–ಮನೆ ಎರಡನ್ನೂ ಸಂಭಾಳಿಸುವಲ್ಲಿ ಸೈ ಎನಿಸಿಕೊಂಡವರು, ಕಚೇರಿ, ಶಾಲೆಗಳೆರಡೂ ಮನೆಗೇ ಬಂದು ಕೂತಿರುವ ಈ ಪರಿಸ್ಥಿತಿಗೆ ಬೇರೆಯದೇ ರೀತಿಯಲ್ಲಿ ಸಿದ್ಧಗೊಳ್ಳಬೇಕಿದೆ.

ನಿಜ, ಇಷ್ಟೂ ದಿನ ಬರೀ ಮನೆಯಾಗಿದ್ದ ಮನೆ ಈಗ ಕಚೇರಿಯೂ, ಶಾಲೆಯೂ ಆಗಿ ಪರಿವರ್ತನೆಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಅಪ್ಪ–ಅಮ್ಮಂದಿರ ಕಚೇರಿಗಳು, ಮೀಟಿಂಗ್‌, ಚರ್ಚೆಗಳೆಲ್ಲವೂ ಮನೆಗೇ ಬಂದು ಸೇರಿವೆ. ಹಾಗೆಯೇ ‘ಮೊದಲ ಪಾಠಶಾಲೆ’ಯಾಗಿದ್ದ ಮನೆ, ಈಗ ಪೂರ್ಣಪ್ರಮಾಣದ ಶಿಕ್ಷಣ ಕೇಂದ್ರವಾಗಿ ಬದಲಾಗಿದೆ. ಈ ಬದಲಾದ ಜವಾಬ್ದಾರಿಗಳನ್ನು, ದ್ವಿಗುಣಗೊಂಡ ಕೆಲಸಗಳನ್ನು ಜಯಿಸಬೇಕಾದ ಸವಾಲು ದುಡಿಯುವ ಅಮ್ಮಂದಿರ ಮುಂದಿದೆ. ಒಂದೆಡೆ ಕಚೇರಿ ಕೆಲಸಗಳಿಗೆ ಅನಾನುಕೂಲವಾಗದಂತೆ, ಇನ್ನೊಂದೆಡೆ ಮಕ್ಕಳ ಪಾಠಗಳಿಗೂ ತೊಂದರೆಯಾಗದಂತೆ ಮನೆಯನ್ನು ಒಪ್ಪಗೊಳಿಸುವ ಜೊತೆಗೆ ಮನಸ್ಸನ್ನೂ ಸಿದ್ಧಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ.

ಬೆಳಿಗ್ಗೆದ್ದು ತನ್ನ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಹೊರಗೋಡುತ್ತಿದ್ದ ಮನೆಯೊಡತಿ ಇದೀಗ 24x7 ಮನೆಯಲ್ಲೇ ಇದ್ದೂ ಮನೆಯನ್ನು ಸಂಭಾಳಿಸಲು ಹರಸಾಹಸ ಪಡುವಂತಾಗಿದೆ. ಕೊರೊನಾ ಕಾಲದ ಈ ಹೊಸ ಸವಾಲನ್ನು ನಿರ್ವಹಿಸಲು ಬೇಕಾಗಿರುವುದು ಹೆಚ್ಚೇನೂ ಅಲ್ಲ, ಸರಿಯಾದ ಯೋಜನೆ, ಸಮಯ ಪಾಲನೆ ಮತ್ತು ಅಗತ್ಯಕ್ಕನುಗುಣವಾದ ಬದಲಾವಣೆ.

ಹೌದು, ಮೊದಲು ಬದಲಾಗಬೇಕಿರುವುದು ಮನೆ, ಮನೆಯ ಒಳಾಂಗಣ. ಎರಡನೇಯದು ಮನಸ್ಸು ಮತ್ತು ಮನಸ್ಥಿತಿ.

ಕಚೇರಿ, ಶಾಲೆಯ ಅನುಭೂತಿ

ಮೊದಲು ನಿಮ್ಮ ಮನೆಯ ಭೌತಿಕ ಪರಿಸರ ಬದಲಾಗಲಿ. ಕಚೇರಿ ಕೆಲಸಕ್ಕೆ, ಶಾಲೆಯ ಪಾಠಗಳಿಗೆ, ಮೀಟಿಂಗ್‌, ಕಾನ್ಫರೆನ್ಸ್‌ಗಳಿಗೆ ಪ್ರತ್ಯೇಕ ಜಾಗಗಳಿದ್ದರೆ ಸರಿ, ಇಲ್ಲವೇ ಇರುವ ಜಾಗವನ್ನೇ ಅಚ್ಚಕಟ್ಟಾಗಿ ಉಪಯೋಗಿಸಿ. ಇದರಿಂದ ನಿಮಗೆ ಕಚೇರಿಯಲ್ಲಿ ಕೆಲಸ ಮಾಡುವ ಅನುಭವವೂ ಮತ್ತು ಮಕ್ಕಳಿಗೆ ಶಾಲೆಯಲ್ಲಿ ಕುಳಿತ ಅನುಭೂತಿಯೂ ದೊರಕುವಂತಾಗುತ್ತದೆ.

ಮನೆಯ ಅತಿಥಿಗಳ ಕೊಠಡಿ, ದೇವರ ಕೋಣೆ, ಸ್ಟೋರ್‌ರೂಮ್‌, ಪ್ಲೇರೂಮ್‌, ಲಾಂಡ್ರಿ ರೂಮ್‌, ಬಾಲ್ಕನಿ… ಅಷ್ಟೇ ಏಕೆ ವಿಶಾಲವಾದ ಪಾರ್ಕಿಂಗ್‌ ಅನ್ನೂ ಸಹ ನೀವೀಗ ಶಾಲೆ ಅಥವಾ ಕಚೇರಿಯನ್ನಾಗಿ ಬದಲಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಆ ಕೊಠಡಿಗಳು ಸರಿಯಾದ ಗಾಳಿ ಬೆಳಕು ಬರುವಂತಿರಬೇಕು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾದ ಅಗತ್ಯವೂ ಇಲ್ಲ. ಕರ್ಟನ್‌ಗಳು, ಫೋಲ್ಡಿಂಗ್‌ ಸ್ಕ್ರೀನ್‌ಗಳು, ಬುಕ್‌ ರ‍್ಯಾಕ್‌ಗಳು, ಶೆಲ್ಫ್‌ಗಳು ಮುಂತಾದ ವಸ್ತುಗಳನ್ನು ಬಳಸಬಹುದು. ಇದರ ಜೊತೆಗೆ ಮನೆಯಲ್ಲಿ ಕೆಲವು ಶಿಸ್ತುಗಳನ್ನು ಅಳವಡಿಸಿ:

* ಹಾಸಿಗೆ, ಸೋಫಾ ಎಲ್ಲೆಂದರಲ್ಲಿ ಕುಳಿತು ಕೆಲಸ ಮಾಡಬೇಡಿ

*ಕೆಲಸ ಮಾಡುವ ಕುರ್ಚಿ– ಟೇಬಲ್‌ಗೆ ಊಟ ಒಯ್ಯಬೇಡಿ

* ಕಚೇರಿ ಕೆಲಸಕ್ಕೂ, ಮನೆಗೆಲಸಕ್ಕೂ ಪ್ರತ್ಯೇಕ ಸಮಯ ಕೊಡಿ

*ಮಕ್ಕಳ ಕಲಿಕೆ ಹಾಗೂ ವರ್ತನೆಯನ್ನು ಉತ್ತೇಜಿಸಲು ಕಲಿಕಾ ಸ್ಟಿಕ್ಕರ್ ಚಾರ್ಟ್‌ಗಳನ್ನು ಬಳಸಿ

*ತಮ್ಮ ಜಾಗವನ್ನು ತಾವು ಸ್ವಚ್ಛವಾಗಿಟ್ಟುಕೊಳ್ಳುವ, ಕುರ್ಚಿ, ಟೇಬಲ್‌, ಲ್ಯಾಪ್‌ಟಾಪ್‌, ಇಂಟರ್‌ನೆಟ್‌ ಸೌಲಭ್ಯಗಳನ್ನೆಲ್ಲಾ ತಾವೇ ಜೋಡಿಸಿಕೊಳ್ಳುವ ಸ್ವಾವಲಂಬನೆಯನ್ನು ಮಕ್ಕಳಲ್ಲಿ ಬೆಳೆಸಿ

ಇದೆಲ್ಲದರ ಜೊತೆಗೆ ಮಾನಸಿಕ ಸಮತೋಲನ ಸಾಧಿಸುವುದನ್ನು ಮರೆಯಬೇಡಿ. ಮಕ್ಕಳಿಗೂ ಓದಿನ ನಡುವೆ ಬಿಡುವಿರಲಿ. ವಿಶ್ರಾಂತಿ, ವಿರಾಮ, ಮೋಜಿಗಾಗಿಯೂ ಸಮಯವಿರಲಿ. ನಿಮಗೂ ಮಕ್ಕಳಿಗೂ ಕೂಡಿ ಕಳೆಯಲೂ ಒಂದಷ್ಟು ಸಮಯವನ್ನು ಮೀಸಲಿಡಿ. ಇದರಿಂದ ನಿಮ್ಮ ಉತ್ಪಾದಕತೆ ಹಾಗೂ ಮಕ್ಕಳ ಕಾರ್ಯಕ್ಷಮತೆ ಎರಡೂ ಹೆಚ್ಚುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT