ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೀಜಿ ಅಂದ್ರೆ ಹೀಗೇನಾ...

ಪೀಜಿ ಲೈಫ್‌
Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಹಾಸ್ಟೆಲ್ ಮತ್ತು ಪೀಜಿ ಎಂದರೆ ಆರಾಮದಾಯಕ ಜೀವನಶೈಲಿ ಎಂದು ನಂಬಿದ್ದೆ. ಜೀವನದಲ್ಲಿ ಒಮ್ಮೆಯಾದರೂ ಹಾಸ್ಟೆಲ್ ಅಥವಾ ಪೀಜಿಯಲ್ಲಿರಬೇಕೆಂಬುದು ಹೆಬ್ಬಯಕೆಯಾಗಿತ್ತು. ಇನ್ನೇನು ಸ್ನಾತಕೋತ್ತರ ಪದವಿಯ ಅಂತಿಮ ದಿನಗಳು ಸಮೀಪಿಸುತ್ತಲೇ ನನ್ನ ಆಸಗೆ ರೆಕ್ಕೆ ಬರುತ್ತಿದೆಯಲ್ಲ, ಇನ್ನೇನು ಹಾರುವುದೊಂದೇ ಬಾಕಿ ಎಂದು ಅನ್ನಿಸುತ್ತಿತ್ತು. ಅದರಂತೆ ಬೆಂಗಳೂರಿನ ಆನ್‌ಲೈನ್ ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿತು.

ಮುಂಜಾನೆ ಕೆಲಸಕ್ಕೆ ತೆರಳುವ ಸಲುವಾಗಿ ಹಿಂದಿನ ದಿನ ರಾತ್ರಿಯೇ ಪಿಜಿಗೆ ಬಂದೆ. ಏನೋ ಒಂದು ರೀತಿಯ ಸಂತೋಷ. ಹೇಳಿಕೊಳ್ಳಲು ಯಾರೂ ಜೊತೆಗಿರಲಿಲ್ಲ. ಆಗ ಜೊತೆಗಾರನಾಗಿ ನೆನಪಿಗೆ ಬಂದಂದ್ದು ನನ್ನ ಮೊಬೈಲ್. ಪದೇ ಪದೇ ಫೋನ್ ರಿಗಣಿಸುತ್ತಿತ್ತು. ಆ ಕಡೆಯಿಂದ ನನ್ನ ಸ್ನೇಹಿತರು ಹೇಗೆಲ್ಲಾ ಇರಬೇಕು ಎಂಬುದರ ಬಗ್ಗೆ ಹೇಳುತ್ತಿದ್ದರು. ಯಾರೊಂದಿಗೂ ಅತಿಯಾಗಿ ಸ್ನೇಹ ಬೆಳೆಸಿಕೊಳ್ಳಬೇಡ, ಸಂಜೆ ಹೊತ್ತು ಯಾರೊಂದಿಗೂ ಹೊರಗಡೆ ಹೋಗಬೇಡ ಎಂದೆಲ್ಲಾ ಉದ್ದುದ್ದ ಸಲಹೆಗಳನ್ನು ನೀಡಿದರು.

ಸರಿ ಆ ರಾತ್ರಿಯನ್ನು ಕಳೆದದ್ದಾಯಿತು. ಮುಂಜಾನೆ ಕೆಲಸಕ್ಕೆ ಹೊರಟು ಹೋಗಿಬಂದೆ. ಅಲ್ಲಿನ ಹುಡುಗಿಯರೆಲ್ಲಾ ತೀರಾ ಆಧುನಿಕ ಮನೋಭಾವದವರಂತೆ ತೋರುತ್ತಿದ್ದರು. ಯಾರನ್ನು ಮಾತನಾಡಿಸಲು ಮನಸ್ಸು ಹಿಂದೇಟು ಹಾಕುತ್ತಿತ್ತು. ಅದರಂತೆಯೇ ಎರಡು ದಿನಗಳು ಕಳೆದವು. ಮೂರನೆಯ ದಿನ ರಾತ್ರಿ ನಾನಿದ್ದ ರೂಮಿಗೆ ಲಗೇಜ್‌ಗಳ ರಾಶಿಯೇ ಬಂದು ಬಿದ್ದಿತ್ತು. ಏನೊಂದು ಅರ್ಥವಾಗದೇ, ಯಾರನ್ನೂ ಕೇಳಲಾಗದೇ ಮೂಕಿಯಂತೆ ನೋಡುತ್ತಾ ಕುಳಿತೆ. ಮೂವರು ಹುಡುಗಿಯರು ಅಲ್ಲಿಗೆ ಹೊಸದಾಗಿ ಬಂದಿದ್ದಾರೆಂದು ತಿಳಿಯಿತು. ಪೀಜಿ ಉಸ್ತುವಾರಿ ನೋಡಿಕೊಳ್ಳುವ ಆಂಟಿ ಬಂದು ‘ನಿನಗೆ ಬೇರೊಂದು ರೂಮಿನ ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದು ಪಕ್ಕದ ರೂಮಿಗೆ ಕರೆದೊಯ್ದರು.

ಏನನ್ನೂ ಮಾತನಾಡದೇ ಅವರನ್ನು ಹಿಂಬಾಲಿಸಿದೆ. ಹೊಸದೊಂದು ರೂಮನ್ನು ತೋರಿಸಿ ನೀನು ಇಲ್ಲಿಯೇ ಇರಬೇಕು ಎಂದು ಹೇಳಿದರು. ಅದೇಕೋ ನನ್ನ ಮನಸ್ಸಿಗೆ ಅದು ಹಿಡಿಯಲಿಲ್ಲ. ನಿರಾಕರಿಸಲು ಆಗಲಿಲ್ಲ ನನ್ನದಲ್ಲದ ಲೋಕವೊಂದರಲ್ಲಿ ನಾನಿದ್ದೇನೆ ಎನಿಸಿತು. ದುಃಖ ಉಮ್ಮಳಿಸಿ ಬಂತು. ನೇರ ಟೆರಸ್ ಮೇಲೆ ಹೋಗಿ ಒಬ್ಬಳೇ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದೆ ಅದಾಗಲೇ ಅಲ್ಲಿದ್ದ ಹುಡುಗಿಯರು ಯಾರೂ ಸಮಾಧಾನ ಮಾಡಲಿಲ್ಲ. ಅನ್ಯಗ್ರಹದ ಪ್ರಾಣಿಯನ್ನು ನೋಡುವ ರೀತಿ ಕುಹಕ ಮಾಡಿ ನಗುತ್ತಿದ್ದರು. ಅದರಿಂದ ಮತ್ತಷ್ಟು ಮನಸ್ಸಿಗೆ ಘಾಸಿಯಾಯಿತು.

‘ನಮ್ಮ ಮನೆಯಲ್ಲಾಗಿದ್ದರೆ ನನಗೆ ಇಷ್ಟ ಬಂದ ಕಡೆಯಲ್ಲಿದ್ದರೂ ಯಾರೂ ಕೇಳುತ್ತಿರಲಿಲ್ಲ. ಸಮಾಧಾನಿಸಲು ಅಮ್ಮನಾದರೂ ಇರುತ್ತಿದ್ದಳು. ಆದರೆ ಇಲ್ಲಿ ಹಣ ಕೊಟ್ಟು ಇರಲಾರದ ಸ್ಥಿತಿಯಾಗಿದೆಯಲ್ಲ’ ಎಂದು ನೋವಾಯಿತು. ಜೊತೆಗೆ ಮನೆಯವರ ನೆನಪು ಬಹುವಾಗಿ ಕಾಡತೊಡಗಿತ್ತು. ನಾಳೆ ಊರಿಗೆ ಹೊರಡಬೇಕು ಎಂದುಕೊಳ್ಳುವಷ್ಟರಲ್ಲಿ ಆಂಟಿ ಬಂದು, ‘ಅಯ್ಯೋ ಯಾಕಮ್ಮಾ ಅಳುತ್ತಿದ್ದೀಯ? ಏನಾಯಿತು?’ ಎಂದು ಕೇಳುತ್ತಿದ್ದರೂ ನನಗೆ ಉತ್ತರಿಸಲಾಗದ ರೀತಿಯಲ್ಲಿ ಗಂಟಲು ಬಿರಿಯಿತು.

ಕಣ್ಣೀರು ಹರಿಯುತ್ತಲೇ ಇತ್ತು. ಯಾವುದಕ್ಕೂ ಪ್ರತಿಕ್ರಿಯಿಸದ ನನ್ನನ್ನು ನೋಡಿ ಬಹುಶಃ ಅವರಿಗೆ ಮರುಕ ಉಂಟಾಗಿರಬಹುದು. ‘ಆ ರೂಮು ಇಷ್ಟಾವಾಗಲಿಲ್ಲವಾ?’ ಎಂದು ಕೇಳಿದರು ನಾನು ಹಾಗೆಯೇ ಇಲ್ಲವೆಂದು ತಲೆ ಅಲ್ಲಾಡಿಸಿದೆ. ಇಷ್ಟಕ್ಕೆ ಯಾರಾದರೂ ಅಳುತ್ತಾರೆಯೇ ನೇರವಾಗಿ ನನಗೆ ಹೇಳಬಹುದಿತ್ತಲ್ಲ. ಹೋಗಲಿಬಿಡು ನಿನಗೆ ಬೇರೊಂದು ರೂಮಿನ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಸಮಾಧಾನಿಸಿದರು.

ಅಂತೂ ಇಂತೂ ಮುಂಜಾನೆಯಾಯಿತು ಪಕ್ಕದ ರೂಮಿನಲ್ಲಿದ್ದ ಅಕ್ಕ ನನ್ನನ್ನು ಕರೆದು ‘ನೀನು ನಮ್ಮ ರೂಮಿನಲ್ಲಿಯೇ ಇರು’ ಎಂದರು.
ಅಲ್ಲಿದ್ದವರೆಲ್ಲರದ್ದೂ ಭಿನ್ನ ನಡವಳಿಕೆ. ಹುಟ್ಟಿನಿಂದಲೇ ಎಲ್ಲವನ್ನೂ ಕಲಿತು ಬಂದರೇನೋ ಎಂಬಂತೆ ತೋರುತ್ತಿತ್ತು. ತೊಟ್ಟ ಉಡುಪು, ನಾವಿದ್ದ ರೀತಿ ಎಲ್ಲದಕ್ಕೂ ಆಡಿಕೊಂಡು ನಗುವವರೇ. ಮನಸ್ಸಿನ ಸೌಂದರ್ಯಕ್ಕೆ ಬೆಲೆ ಕೊಡುತ್ತಿರಲಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯವಾಗಿದ್ದ ನನಗೆ ಅವರೆಲ್ಲರ ನಡವಳಿಕೆ ನೋವನ್ನುಂಟು ಮಾಡುತ್ತಿತ್ತು. ಪೀಜಿಯಲ್ಲಿರಬೇಕು ಎಂದುಕೊಂಡು ಬಂದ ನನಗೆ ಪೀಜಿಯ ವಾಸ್ತವದ ಅರಿವು ಚೆನ್ನಾಗಿಯೇ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT