ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್ ತಾಯಿ

Last Updated 31 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಸುಮಾರು 50-60 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗಡಿಯಂಚಿನ ಹಳ್ಳಿಗಳಲ್ಲಿ ಹೆಣ್ಣು ಮಕ್ಕಳಿಗೆ ಹೆರಿಗೆ ಬೇನೆ ಶುರುವಾಯಿತೆಂದರೆ ಸಾಕು, ಮನೆಯವರಿಗೆಲ್ಲಾ ನೆನಪಾಗುತ್ತಿದ್ದುದು ನರಸಮ್ಮ.

ಆಸ್ಪತ್ರೆಗಳಿದ್ದರೂ ಗ್ರಾಮೀಣ ಭಾಗಕ್ಕೆ ಅವು ಮರೀಚಿಕೆಯಾಗಿದ್ದ ಆ ಸಂದರ್ಭದಲ್ಲಿ ನರಸಮ್ಮನೇ ಅವರಿಗೆಲ್ಲಾ `ಹೆರಿಗೆ ವೈದ್ಯೆ~. ಮೇಲ್ಜಾತಿಯ ಹೆಣ್ಣು ಮಕ್ಕಳಿಗೂ ಕೆಳ ಜಾತಿಯ ನರಸಮ್ಮನೇ ಆಪದ್ಬಾಂಧವ.

ಹಗಲಿರುಳೆನ್ನದೇ ಕರೆದವರ ಕೂಗಿಗೆ ಓಗೊಡುತ್ತಿದ್ದ ಸೂಲಗಿತ್ತಿ ನರಸಮ್ಮನನ್ನು ಕರ್ನಾಟಕ ಮಾತ್ರವಲ್ಲದೆ ಆಂಧ್ರ ಭಾಗದಿಂದಲೂ ಬಂದು ಕರೆದೊಯ್ದ ಸಂದರ್ಭಗಳೂ ಇದ್ದವು. ಹೀಗೆ ಸುಮಾರು 1,500ಕ್ಕೂ ಹೆಚ್ಚು ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸಿರುವ ಹೆಗ್ಗಳಿಕೆ ನರಸಮ್ಮನದು. ಈಕೆಯ ಕೈ ಮೂಲಕ ಭೂಮಿಯನ್ನು ಸ್ಪರ್ಶಿಸಿದ ಅದೆಷ್ಟೋ ಮಕ್ಕಳು ಈಗ ಮೊಮ್ಮಕ್ಕಳನ್ನು ಆಡಿಸುತ್ತಿದ್ದಾರೆ.

ಅಂತಹ ನರಸಮ್ಮನಿಗೆ ಈಗ 92 ವರ್ಷ. ಹೆರಿಗೆ ನೋವಿಗೆ ಸ್ಪಂದಿಸುತ್ತಿದ್ದುದು ಮಾತ್ರವಲ್ಲದೆ 9 ದಿನಗಳವರೆಗೆ ಬಾಣಂತನವನ್ನೂ ಮುಗಿಸಿಕೊಡುತ್ತಿದ್ದ ನರಸಮ್ಮನೆಂದರೆ ಹಲವರಿಗೆ ಗೌರವ ಭಾವ. ಅದಕ್ಕೇ ಈಗಲೂ ಜನ ಪ್ರತಿನಿತ್ಯ ಅವರಿದ್ದಲ್ಲಿಗೇ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಾರೆ.

ಪುಟ್ಟ ಗ್ರಾಮ ಕೃಷ್ಣಾಪುರದಲ್ಲಿ ಜನಿಸಿ, 12ನೇ ವಯಸ್ಸಿನಲ್ಲೇ ಬಾಲ್ಯ ವಿವಾಹಕ್ಕೆ ಒಳಗಾದ ನರಸಮ್ಮ, 12 ಮಕ್ಕಳನ್ನು ಹಡೆದವರು. 22ನೇ ವಯಸ್ಸಿನಲ್ಲೇ ಸೂಲಗಿತ್ತಿಯ ಕಾರ್ಯದಲ್ಲಿ ತೊಡಗಿಕೊಂಡ ಅವರ ಉತ್ಸಾಹ ಇನ್ನೂ ಕುಂದಿಲ್ಲ.

ದೃಷ್ಟಿ ಚೆನ್ನಾಗಿದೆ. ಕಿವಿ ಸ್ಪಷ್ಟವಾಗಿ ಕೇಳುತ್ತದೆ. ಯಾವುದೇ ಕಾಯಿಲೆಗಳಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಾರೆ. ಎಷ್ಟೇ ದೂರವಾಗಲಿ ನಡೆದೇ ಹೋಗುವ ದೃಢತೆ ಹೊಂದಿದ್ದಾರೆ. ಮನೆಯಲ್ಲಿ ದವಸ-ಧಾನ್ಯಗಳನ್ನು ಸೋಸುತ್ತಾರೆ. ಇವರದೀಗ 26 ಮೊಮ್ಮಕ್ಕಳು ಇರುವ 35 ಸದಸ್ಯರ ದೊಡ್ಡ ಸಂಸಾರ.

`ನಾನು ಮಾಡಿಸಿದ ಎಲ್ಲ ಹೆರಿಗೆಗಳೂ ಯಶಸ್ವಿಯಾಗಿವೆ. ಮಾಡುವ ಕಾರ್ಯದಿಂದ ಮನಸ್ಸಿಗೆ ತೃಪ್ತಿ ಕಂಡು ಕೊಂಡಿದ್ದೇನೆ. ನನ್ನ ಸೇವೆಯ ಫಲ ನನ್ನ ಮಕ್ಕಳಿಗೆ ಸಲ್ಲಲಿ~ ಎನ್ನುವಾಗ ಈ ಮಹಾನ್ ತಾಯಿಯ ಕಣ್ಣುಗಳಲ್ಲಿ ಮಿಂಚು ಮೂಡುತ್ತದೆ.

ಹೆರಿಗೆ ಮಾಡಿಸುವಲ್ಲಿ ನರಸಮ್ಮನಿಗಿದ್ದ ಚಾಕಚಕ್ಯತೆಯನ್ನು ಮನಗಂಡು ಪಾವಗಡ ತಾಲ್ಲೂಕು ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವಂತೆ ಬಂದ ಆಹ್ವಾನವನ್ನು ಅವರು ನಯವಾಗಿಯೇ ತಿರಸ್ಕರಿಸಿದ್ದರು. ಇದೀಗ ನರಸಮ್ಮನ ಸೇವೆಯನ್ನು ಮನಗಂಡ ರಾಜ್ಯ ಸರ್ಕಾರ ಈ ವರ್ಷದ `ದೇವರಾಜ ಅರಸು~ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ.
                                            ***

ಗರ್ಭಿಣಿಯರಿಗೆ ಕಿವಿಮಾತು
`ಹೆಚ್ಚು ಪಪ್ಪಾಯಿ ಹಣ್ಣು ತಿನ್ನಬಾರದು. ಕೂತಲ್ಲೇ ಕೂರದೆ ಸ್ವಲ್ಪ ಮಟ್ಟಿಗೆ ನಡೆದಾಡಬೇಕು, ಸಣ್ಣ ಪುಟ್ಟ ಕೆಲಸಗಳನ್ನು ಮಾಡಬೇಕು. ಹೆರಿಗೆ ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಜೀರಿಗೆ ಮತ್ತು ದನಿಯಾವನ್ನು ಚೆನ್ನಾಗಿ ಕುದಿಸಿ, ಆ ರಸವನ್ನು ಕುಡಿಯುವುದರಿಂದ ಹೆಚ್ಚು ನೋವಿಲ್ಲದೇ ಹೆರಿಗೆ ಆಗುತ್ತದೆ~ ಎನ್ನುತ್ತಾರೆ ನರಸಮ್ಮ.

ಬಾಣಂತಿಯರಿಗೆ ಸಲಹೆ
ಹೆರಿಗೆಯಾದ 11 ದಿನಗಳವರೆಗೂ ಬಾಣಂತಿಯರು ಸರಳವಾದ ಆಹಾರ ಸೇವಿಸಬೇಕು. ಈ ಅವಧಿಯಲ್ಲಿ ಸಿಹಿ, ಮಾಂಸಾಹಾರ ತಿನ್ನುವುದು ಒಳ್ಳೆಯದಲ್ಲ. ನಾಡ ಹಸುವಿನ ಹಾಲು, ಜೀರಿಗೆ ಬಜ್ಜಿ, ಊಟದ ನಂತರ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮ. ಸ್ನಾನಕ್ಕೆ ಮುನ್ನ ಬಾಣಂತಿಯ ತಲೆಗೆ ಹರಳೆಣ್ಣೆ ಹಚ್ಚಬೇಕು. ಅವರ ಬಳಿ ಹೋಗುವವರು ಸ್ನಾನ ಮಾಡಿ ಹೋಗಬೇಕು.

6 ತಿಂಗಳು ಕಳೆದ ನಂತರ ಮಗುವಿಗೆ ಒಂದು ವರ್ಷದವರೆಗೂ `ರಾಗಿ ಸರಿ~ ತಿನ್ನಿಸುವುದರಿಂದ ಉತ್ತಮ ಬೆಳವಣಿಗೆ ಸಾಧ್ಯ.

ಮಾಡುವ ವಿಧಾನ: ಬೇಳೆಕಾಳು, ಹೆಸರುಕಾಳು, ಉದ್ದಿನಕಾಳು, ಮೆಣಸು, ಜೀರಿಗೆ, ಗೋಧಿ, ಕಡ್ಲೆಬೇಳೆ, ರಾಗಿ ಇವುಗಳನ್ನು ಚೆನ್ನಾಗಿ ನೀರಿನಲ್ಲಿ ಶುಚಿಗೊಳಿಸಿ ನಂತರ ಒಣಗಿಸಿ, ಪುಡಿ ಮಾಡಿಕೊಳ್ಳಬೇಕು. ಬಿಸಿ ನೀರಿನಲ್ಲಿ ಆ ಪುಡಿಯನ್ನು ಕುದಿಸಿ, ಆರಿಸಿ, ಪ್ರತಿನಿತ್ಯ ಸ್ನಾನದ ಬಳಿಕ ತಿನ್ನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT