ಎಂದೋ ಕೇಳಿದ ಒಂದು ಪುರಾಣ ಕಥೆ ತನ್ನ ಸುಪ್ತ ಮನಸ್ಸಿನಲ್ಲಿ ಅಡಗಿ ಕೂತಿದ್ದು ಹೀಗೆ ಏಕಾಏಕಿ ನೆನಪಿನ ಪರಿಧಿಗೆ ಬಂದು ತನ್ನನ್ನು ಕಾಡುತ್ತಿರುವ ಪರಿಗೆ ಚಂದ್ರಮತಿಗೆ ಅಚ್ಚರಿ. ಎಲ್ಲಿಯ ಋಷಿಮುನಿಗಳ ಪುರಾಣಕಾಲ? ಎಲ್ಲಿಯ ಕಲಿಗಾಲ? ಕಥೆಗಳಿಗೆ ಕಾಲದ ಹಂಗಿಲ್ಲವೇ? ಉತ್ಪ್ರೇಕ್ಷಿತ ಕೆಲ ಬದಲಾವಣೆಗಳ ಹೊರತಾಗಿ? ಯಾರವನು, ಮುನಿ ಮೃಕಂಡುವಲ್ಲವೇ? ಹೌದು, ಅವನೇ.

ಸಂತಾನಾಭಿಲಾಷೆಯಿಂದ ಘೋರ ತಪಸ್ಸು ಮಾಡಿ ದೇವರನ್ನು ಒಲಿಸಿಕೊಂಡವನಿಗೆ ಎದುರಾಗಿತ್ತು ಪ್ರಶ್ನೆ. ದೇವರು ಎನಿಸಿಕೊಂಡವನಿಗೂ ಪರೀಕ್ಷೆ ಮಾಡುವ ಚಪಲ. ಹದಿನಾರು ವರ್ಷ ಬದುಕುವ ಸತ್ಪುತ್ರನನ್ನು ಬಯಸುತ್ತೀಯಾ ಅಥವಾ ನೂರು ವರ್ಷ ಬದುಕುವ ಕುಪುತ್ರನನ್ನೋ? ಹದಿನಾರು ವರ್ಷ ಬದುಕುವ ಸತ್ಪುತ್ರನನ್ನೇ ಕರುಣಿಸು ದೇವಾ... ‘ತಥಾಸ್ತು’ ಮಾರ್ಕಂಡೇಯ ಜನಿಸಿದ. ಹೆತ್ತವರ ಬಹುಕಾಲದ ಕೊರಗನ್ನು ದೂರ ಮಾಡಿ ಸಂತಸದ ಹೊಳೆಯಲ್ಲಿ ಅವರನ್ನು ತೇಲಾಡಿಸಿದ.

ಒಂದಲ್ಲ, ಎರಡಲ್ಲ, ಮದುವೆಯಾಗಿ ಹತ್ತು ವರ್ಷಗಳು ಕಳೆದುಹೋಗಿದ್ದವು. ಪಂಡಿತರು, ಡಾಕ್ಟರು, ದೇವರು– ದಿಂಡಿರು, ಎಲ್ಲರಿಗೂ ಕೈ ಮುಗಿದು, ಕೈ ಚೆಲ್ಲಿ ಕೂತಿದ್ದಾಗಿತ್ತು. ಈ ಜನ್ಮದಲ್ಲಿ ತನಗೆ ಮಕ್ಕಳ ಫಲ ಇಲ್ಲ ಎನ್ನುವ ನಿರಾಶೆಯಲ್ಲಿ ಜಗತ್ತು ಶೂನ್ಯವಾಗಿ ಕಾಣುತ್ತಾ, ಈ ಶೂನ್ಯದಲ್ಲಿ ಚಂದ್ರಮತಿಯ ಅಸ್ತಿತ್ವ ಕರಗಿ ಹೋಗುತ್ತಿದ್ದ ಸಮಯದಲ್ಲಿ ಹಠಾತ್ತನೆ ಬೆಳಕಿನ ಕಿರಣ ಗೋಚರಿಸಿತ್ತು. ಸುದೀರ್ಘ ತಪನೆ ಫಲಿಸಿತ್ತು. ನವಮಾಸಗಳು ಉರುಳಿ ಕಂದ ಮಡಿಲು ತುಂಬಿದಾಗ ಅದೆಂಥಾ ಸಂಭ್ರಮ, ಸುಖ.

ಪಾರ್ಥ ಎಂತವರೂ ಹೆಮ್ಮೆಪಡುವ ಮಗನಾಗಿ ಬೆಳೆದ. ಅಪ್ಪ, ಅಮ್ಮನ ಕಣ್ಮಣಿಯಾಗಿ, ಓದಿನಲ್ಲಿ ಜಾಣನಾಗಿ, ವರ್ಷಗಳು ಉರುಳಿ ಹೋಗಿದ್ದು ಗೊತ್ತೇ ಆಗದ ಮಾಯೆ. ಪ್ರತಿ ವರ್ಷ ಮಗ ಪ್ರಥಮ ಸ್ಥಾನ ಪಡೆದಾಗ ಇಷ್ಟಮಿತ್ರರಿಗೆ ಸಿಹಿ ಹಂಚಿ ಸಡಗರ. ತನ್ನ ಬುದ್ಧಿವಂತಿಕೆಯೊಂದಿಗೆ ಹೆತ್ತವರ ಪ್ರತಿಷ್ಠೆ ತಳಕು ಹಾಕಿಕೊಂಡಿರುವುದನ್ನು ಅರ್ಥ ಮಾಡಿಕೊಂಡವನಂತೆ ಪಾರ್ಥ ಮಹತ್ವಾಕಾಂಕ್ಷೆಯ ಹುಡುಗನಾಗಿ ಬೆಳೆದಿದ್ದು ತಪ್ಪು ಎಂದು ಯಾರು ಹೇಳುತ್ತಾರೆ? ಎಲ್ಲರಿಗೂ ಅವರವರ ಬದುಕು, ಭವಿಷ್ಯ ಇದ್ದೇ ಇರುತ್ತದೆ. ಹೆತ್ತವರೆಂಬ ಒಂದೇ ಹಕ್ಕಿನಿಂದ ಅದಕ್ಕೆ ಅಡ್ಡಗಾಲು ಹಾಕಲು ಸಾಧ್ಯವಿಲ್ಲ. ಸಾಧುವೂ ಅಲ್ಲ.

ಹೆತ್ತವರೆಲ್ಲರ ಮಹದಾಸೆ ಯಾವತ್ತೂ ಒಂದೇ, ಮಕ್ಕಳ ಅಭ್ಯುದಯ. ಅದರೆದುರು ಮಿಕ್ಕಿದ್ದೆಲ್ಲಾ ನಗಣ್ಯ. ಮುಂದಿನ ಯೋಜನೆಯನ್ನು, ಗುರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಿ.ಯು. ಸೇರಲು ಹುಡುಗ ಆಯ್ಕೆ ಮಾಡಿಕೊಂಡಿದ್ದು ನಾಡಿನ ರಾಜಧಾನಿಯನ್ನು. ಮಹತ್ವಾಕಾಂಕ್ಷೆಯ ಮೆಟ್ಟಿಲುಗಳನ್ನೇರಲು ಬೇಕಾದ ತರಬೇತಿಯ ಆವಶ್ಯಕತೆಗೆ ಅಂಥಾ ಪಟ್ಟಣವೇ ಸರಿ ಎಂಬ ಸಮರ್ಥನೆ.

ಅಮ್ಮನೊಡನೆ ಪಾರ್ಥ ಹಂಚಿಕೊಂಡ ಕನಸುಗಳೆಲ್ಲವೂ ಭೌತಿಕವಾಗಿ ಅವನನ್ನು ತನ್ನಿಂದ ದೂರದೂರವಾಗಿಸುವ ಕುರಿತು ಚಂದ್ರ ಮತಿಗೆ ನೋವಿದೆ, ಮಗನ ಗುರಿ ಕುರಿತ ಹೆಮ್ಮೆಯೂ. ಮನೆ ತೊರೆದು ಹೋಗುವಾಗ ಹುಡುಗನಿಗೆ ತಳಮಳ ಆಗಿರಬೇಕು. ಉಣುಗೋಲಿನ ಬಳಿ ಕಣ್ತುಂಬಿ ನಿಂತ ಅಮ್ಮನನ್ನು ತಿರುತಿರುಗಿ ನೋಡುತ್ತಾ, ಅಪ್ಪನ ಜೊತೆ ಹೊರಟು ಹೋಗಿದ್ದ. ಅವನು ಕನಸಿದ ಭವಿಷ್ಯದ ಕಡೆ ಹೆಜ್ಜೆ ಹಾಕುತ್ತಾ...

ಪ್ರಾಣ ರಕ್ಷಣೆಗಾಗಿ ತನ್ನನ್ನು ಬಿಗಿದಪ್ಪಿದ ಮಾರ್ಕಂಡೇಯನಿಗೆ ಶಿವ ಬೆಂಗಾವಲಾಗಿ ನಿಂತ, ಯಮಧರ್ಮ ಬರಿಗೈಲಿ ಹಿಂದಿರುಗಿ ಹೋದ ಎನ್ನುತ್ತದಲ್ಲವೇ ಕಥೆ? ಹೆತ್ತವರು ಮಗನೊಂದಿಗೆ ಸುಖವಾಗಿ ಬಾಳಿದರು ಎಂದು ಸುಖಾಂತವಾಗುವ ಯೋಗ ಎಲ್ಲ ಕಥೆಗಳಿಗೂ ಇರುತ್ತದೆಯಾ ಅಥವಾ ಹೆತ್ತವರ ಪಾಲಿಗೆ ದಕ್ಕುವುದು ಹದಿನಾರು ವರ್ಷಗಳ ಸಾಂಗತ್ಯ ಮಾತ್ರವಾ?

ಮನೆಗೆ ಅಪರೂಪದ ಅತಿಥಿಯಾಗುವ ಆಧುನಿಕ ಮಾರ್ಕಂಡೇಯರು ಇನ್ನಷ್ಟು, ಮತ್ತಷ್ಟು ದೂರ ಹಾರುವ ಸೆಳೆತಕ್ಕೆ ಸಿಲುಕಿದರೆ ಹೆತ್ತವರ ಮಮತೆಯ ಪಾಶ ಎಲ್ಲಿಯವರೆಗೆ ಹಿಡಿದಿಡಲು ಸಾಧ್ಯ? ಅದೂ ಅಲ್ಲದೆ, ಹೀಗೆ ಹಾರಲಿ ಎನ್ನುವುದು ಹೆಚ್ಚಿನವರ ಆಂತರ್ಯದ ಇಚ್ಛೆ ಕೂಡಾ ಆಗಿರುವಾಗ? ಮಾಯಾಲೋಕದ ಆಕರ್ಷಣೆ ಕುರಿತು ಕೇಳಿ ಬಲ್ಲ ಚಂದ್ರಮತಿಗೆ ಅದರ ಬಗ್ಗೆ ದಿಗಿಲು ಮತ್ತು ಪ್ರಲೋಭನೆ ಎರಡೂ ಇರುವ ವಿಪರ್ಯಾಸ.

ಪುರಾಣದ ಕಥೆಯ ಪೂರ್ವಾರ್ಧದೊಡನೆ ತಳಕು ಹಾಕಿಕೊಂಡಿರುವ ಕಥೆ ಉತ್ತರಾರ್ಧದಲ್ಲಿ ಏನಾದೀತು ಎಂಬುದು ಕಾಲ ಒಡೆಯಬೇಕಾದ ಒಗಟು. ಸುಖಾಂತವೆಂದರೆ ಯಾವುದು, ದುಃಖಾಂತವೆಂದರೆ ಯಾವುದು ಎನ್ನುವುದರ ಕುರಿತು ಯಾವ ನಿರ್ದಿಷ್ಟ ಹೇಳಿಕೆಗೂ ನಿಲುಕದೆ ಅವರವರ ಭಾವಕ್ಕೆ ತಕ್ಕಂತೆ ಸ್ವೀಕೃತವಾಗುವ ಸಂದರ್ಭ. ಹಾಗೆ ಸ್ವೀಕೃತ ಆಗಿಸಿಕೊಳ್ಳಬೇಕಾದ್ದು ಅನಿವಾರ್ಯ ಕೂಡಾ.
–ವಸುಮತಿ ಉಡುಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.