ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಖಾದ್ಯ

ನಮ್ಮೂರ ಊಟ
Last Updated 16 ಮೇ 2014, 19:30 IST
ಅಕ್ಷರ ಗಾತ್ರ

ಮಾವಿನ ಕಾಯಿ ಹಾಗೂ ಮಾವಿನ ಹಣ್ಣಿನಲ್ಲಿ ಕರಾವಳಿ ಜನರು ವೈವಿಧ್ಯ ಖಾದ್ಯಗಳನ್ನು ತಯಾರಿಸುತ್ತಾರೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಇಲ್ಲಿನ ಹಳ್ಳಿ ಮನೆಗಳಿಗೆ ಹೋದರೆ ಮಾವಿನಿಂದ ತಯಾರಿಸಿದ ಯಾವುದಾದರೊಂದು ಖಾದ್ಯ ಇಲ್ಲದೆ ಇರುವುದು ಅಪರೂಪ.

ನಾವು ಚಿಕ್ಕವರಿರುವಾಗ ಬೇಸಿಗೆ ರಜೆಯಲ್ಲಿ ಮಾವಿನಹಣ್ಣು, ಹಲಸಿನ ಹಣ್ಣು ತಿಂದು ಸಂಭ್ರಮ ಪಡುತ್ತಿದ್ದೆವು. ಉಪ್ಪಿನಕಾಯಿ ತಯಾರಿಸುವ ಮಿಡಿ ಮಾವಿನಕಾಯಿ (ಅದನ್ನು ಮಂಗಳೂರು ಕಡೆ ಕಾಡು ಮಾವಿನಕಾಯಿ ಅಂತಲೂ ಕರೆಯುತ್ತಾರೆ) ಬಲಿತು ಹಣ್ಣಾದುದನ್ನು ಬೋಳು ಸಾರು ಅಥವಾ ಸಾಸಮೆ ಅನ್ನುವ  ಖಾದ್ಯವನ್ನು ತಯಾರಿಸಿ ಕೊಡುತ್ತಿದ್ದರು.

ಬೇಸಿಗೆಯ ಸುಡು ಬಿಸಿಲಿಗೆ ಕುಚ್ಚಿಲಕ್ಕಿ ಊಟ ಮಾವಿನ ಹಣ್ಣಿನ ಸಾರು ತಿಂದರೆ ಅದರಷ್ಟು ರುಚಿ ಬೇರೆಯದರಲ್ಲಿ ಸಿಗುತ್ತಿರಲಿಲ್ಲ.  ಮಾವಿನ ಉಪ್ಪಿನಕಾಯಿ ಎಲ್ಲರಿಗೂ ಪ್ರಿಯವಷ್ಟೆ. ಮಂಗಳೂರು ಕಡೆ ಸಿಗುವ ಕಾಡು ಮಾವಿನ ಕಾಯಿಯನ್ನು ಅದು ಬಲಿಯುವುದಕ್ಕೆ ಮೊದಲೇ ಮರದಿಂದ ಕುಯ್ದು ಉಪ್ಪಿನಕಾಯಿ ಹಾಕುತ್ತಾರೆ. ಆದರೆ ಇದು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಾತ್ರ ಲಭ್ಯ.

ನೀರು ಮಾವಿನಕಾಯಿ ತಂಬುಳಿ
ಅಗತ್ಯ ಸಾಮಗ್ರಿ: ನೀರು ಮಾವಿನಕಾಯಿ, ಒಂದೂವರೆ ಕಪ್ ಕಾಯಿತುರಿ, ಒಂದು ಹಸಿಮೆಣಸು, ಒಂದೆರಡು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಕರಿಬೇವು, ಉಪ್ಪು,  ಒಂದು ಚಮಚ ಎಣ್ಣೆ

ವಿಧಾನ: ಉಪ್ಪು ನೀರಿನಿಂದ ಮಾವಿನಕಾಯಿ ತೆಗೆದು ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ. ಅದನ್ನು ಸಣ್ಣಗೆ ಹೆಚ್ಚಿಕೊಂಡು ಕಾಯಿತುರಿ, ಹಸಿಮೆಣಸು, ಉಪ್ಪು, ಜೀರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದನ್ನು ಪಾತ್ರೆಗೆ ಹಾಕಿ ಸ್ವಲ್ಪ ಮಜ್ಜಿಗೆ ಸೇರಿಸಿ. ಅದಕ್ಕೆ ಕರಿಬೇವು, ಸಾಸಿವೆ, ಒಣಮೆಣಸು ಒಗ್ಗರಣೆ ಕೊಡಿ. ಅನ್ನ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ಮಾವಿನಕಾಯಿ ಉಪ್ಪಿನಕಾಯಿ

ಅಗತ್ಯ ಸಾಮಗ್ರಿ: 2ರಿಂದ 3 ಮಾವಿನಕಾಯಿ, ಒಂದು ಕಪ್ ಕಲ್ಲು ಉಪ್ಪು, ಒಂದೂವರೆ ಕಪ್ ಬ್ಯಾಡಗಿ ಮೆಣಸು ಅಥವಾ ಮೆಣಸಿನ ಪುಡಿ, 5 ಚಮಚ ಸಾಸಿವೆ, ಸ್ವಲ್ಪ ಅರಿಶಿನ.

ವಿಧಾನ: ಬಟ್ಟೆಯಲ್ಲಿ ಮಾವಿನಕಾಯಿ ಉಜ್ಜಿಕೊಂಡು ಸಣ್ಣಗೆ ಹೆಚ್ಚಿ. ಅದಕ್ಕೆ ಉಪ್ಪು ಬೆರೆಸಿ ಒಂದು ಪಾತ್ರೆಯಲ್ಲಿ ಹಾಕಿಡಿ. ಎರಡು- ಮೂರು ದಿನ ಕಳೆದ ನಂತರ ಅದನ್ನು ತೆರೆಯಿರಿ. ಮೆಣಸು ಹಾಗೂ ಸಾಸಿವೆಯನ್ನು ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಅರಿಶಿನ ಸೇರಿಸಿ ಒಂದು ಜರಡಿಯಲ್ಲಿ ಮಾವಿನಕಾಯಿ ಹಾಕಿ ಅದರಿಂದ ಉಪ್ಪು ನೀರನ್ನು ಸೋಸಿಕೊಳ್ಳಿ. ಉಪ್ಪು ನೀರು ಬಿಸಿ ಮಾಡಿ, ಅದು ತಣಿದ ನಂತರ ಮೆಣಸು, ಸಾಸಿವೆ ಹಾಗೂ ಹಳದಿ ಮಿಶ್ರಣಕ್ಕೆ ಸೇರಿಸಿ. ಆಗ ಉಪ್ಪಿನಕಾಯಿ ಮಸಾಲೆ ಸಿದ್ದವಾಗುತ್ತದೆ. ನಂತರ ಇದಕ್ಕೆ ಮಾವಿನಕಾಯಿಯನ್ನು ಬೆರೆಸಿ. ಉಪ್ಪಿನಕಾಯಿ ಸಿದ್ಧ. ಇದಕ್ಕೆ ಯಾವುದೇ ಸಂದರ್ಭದಲ್ಲೂ ನೀರು ಸೇರಬಾರದು.

ಮಾವಿನಹಣ್ಣಿನ ರಸಾಯನ
ಅಗತ್ಯ ಸಾಮಗ್ರಿ: ಮಾವಿನಹಣ್ಣು 2ರಿಂದ 3, ತೆಂಗಿನಕಾಯಿ ತುರಿ 2 ಕಪ್, ಬೆಲ್ಲ ಒಂದು ಅಚ್ಚು, ಸಕ್ಕರೆ ಅರ್ಧ ಕಪ್, ಏಲಕ್ಕಿ.

ವಿಧಾನ: ಮಾವಿನಹಣ್ಣನ್ನು ಸಿಪ್ಪೆ ತೆಗೆದು ಪಾತ್ರೆಯಲ್ಲಿ ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಅದಕ್ಕೆ ಒಂದು ಚಿಟಿಕೆ ಉಪ್ಪು, ಬೆಲ್ಲ, ಸಕ್ಕರೆ ಏಲಕ್ಕಿಪುಡಿ ಬೆರೆಸಿಡಿ. ತೆಂಗಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ. ಒಂದು ತಪಲೆ ಮೇಲೆ ಬಟ್ಟೆ ಇಟ್ಟು ಅದಕ್ಕೆ ರುಬ್ಬಿಕೊಂಡ ತೆಂಗಿನಕಾಯಿಯನ್ನು ಹಾಕಿ ಚೆನ್ನಾಗಿ ಹಿಂಡಿ. ಆಗ ತೆಂಗಿನಕಾಯಿ ಹಾಲು ಪಾತ್ರೆಗೆ ಇಳಿಯುತ್ತದೆ. ಈ ಹಾಲನ್ನು ಮಾವಿನಹಣ್ಣಿಗೆ ಹಾಕಿ ಚೆನ್ನಾಗಿ ಕಲಸಿ. ರಸಾಯನ ಸಿದ್ಧ. ಇದಕ್ಕೆ ಬೇಕೆಂದರೆ ಕಪ್ಪು ಎಳ್ಳು ಒಲೆಯಲ್ಲಿ ಸಿಡಿಸಿ ಹಾಕಬಹುದು.

ಹಸಿ ಮಾವಿನಕಾಯಿ ತಂಬುಳಿ
ಅಗತ್ಯ ಸಾಮಗ್ರಿ: ಒಂದು ಮಾವಿನಕಾಯಿ, ಕಾಯಿತುರಿ, ಒಂದು ಸಣ್ಣ ಲೋಟ ಮಜ್ಜಿಗೆ, ರುಚಿಗೆ ಉಪ್ಪು, ಕರಿಬೇವು, ಕೆಂಪು ಮೆಣಸು ಅಥವಾ ಹಸಿಮೆಣಸು.

ವಿಧಾನ: ಮಾವಿನಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಮಿಕ್ಸಿಯಲ್ಲಿ ಹೆಚ್ಚಿದ ಮಾವಿನಕಾಯಿ, ಕಾಯಿತುರಿ, ಹಸಿಮೆಣಸು, ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಬೇಕಾದಷ್ಟು ಮಜ್ಜಿಗೆ ಸೇರಿಸಿ, ಸ್ವಲ್ಪ ಬೇಕೆಂದರೆ ನೀರು ಸೇರಿಸಬಹುದು. ಕೊನೆಯಲ್ಲಿ ಇದಕ್ಕೆ ವಗ್ಗರಣೆ ಕೊಡಬೇಕು.

ಮಾವಿನಕಾಯಿಯಿಂದ ಸಾರು, ಚಟ್ನಿ, ಚಿತ್ರಾನ್ನವನ್ನು ತಯಾರಿಸಬಹುದು. ಮಾವಿನಕಾಯಿಯನ್ನು ಮಳೆಗಾಲಕ್ಕೆ ಶೇಖರಿಸಿಡುವ ಸಂಪ್ರದಾಯ ಕರಾವಳಿ ಭಾಗದಲ್ಲಿದೆ. ಉಪ್ಪು ನೀರು ತಯಾರಿಸಿ ಅದರಲ್ಲಿ ಮಾವಿನಕಾಯಿ ಹಾಕಿ ಒಂದು ವರ್ಷದವರೆಗೆ ಕೆಡದಂತೆ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT