ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗ್ಯಾಕ ಮಾಡತಿ ಮಗಳೇ !

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ದೇವಿಕಾ ಬಹಳ ದಿನಗಳಿಂದಲೂ ಅವರ ಮನೆಗೆ ಕರೆಯುತ್ತಿದ್ದರು. ಒಂದು ರಜಾ ದಿನವೇ ಹೋದ್ರೆ ಎಲ್ಲರ ಪರಿಚಯವಾಗುತ್ತದೆ ಎಂದು ಭಾನುವಾರ ಬರ್ತೇನೆ ಎಂದಿದ್ದೆ. `ಊಟ ಒಟ್ಟಿಗೇ ಮಾಡೋಣ. ಬೇಗ ಬಂದು ಬಿಡು~ ಅಂದಿದ್ರು.

ಅವರ ಮನೆ ತಲುಪಿದಾಗ ಹನ್ನೆರಡು ಗಂಟೆ. ಬಹು ಆತ್ಮೀಯತೆಯಿಂದ ಸ್ವಾಗತಿಸಿ ಮನೆಯವರಿಗೆಲ್ಲ ಪರಿಚಯಿಸಿದ್ರು. `ಸ್ವಲ್ಪ ಕೆಲಸವಿದೆ. ಇಲ್ಲೇ ಕೂತ್ಕೊಳ್ಳಿ. ಈಗ ಮುಗಿಸ್ತೇನೆ~ ಅಂದ್ರು. ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಮುಗಿಸಿ ಊಟಕ್ಕೆ ಎಲೆ ಹಾಕಿ ನೀರಿಟ್ಟು ಎಲ್ಲರನ್ನೂ ಕರೆದರು. `ನಾವಿಬ್ರೂ ಆ ಮೇಲೆ ಮಾಡೋಣ. ಈಗ ನಮಗೆ ಬೇಡ~ ಎಂದಿದ್ದೆ.

ರಜೆಯ ದಿನವಾದ ಕಾರಣ ಅವರ ಪತಿಯೂ ಇದ್ದರು. ಮೂವರು ಹೆಣ್ಮಕ್ಕಳು, ತಂದೆ ಉಂಡು ಎದ್ದಾಗ ನಾವೂ ಊಟ ಮಾಡಿದ್ದೆವು. ಅಲ್ಪ ಸ್ವಲ್ಪ ಅವರಿಗೆ ನೆರವಾಗಿ ಅಲ್ಲಿಂದ ಹೊರಟಿದ್ದೆ.

ಇದಿಷ್ಟೇ ಆಗಿದ್ದರೆ ಬಾಧಕವೇನಿಲ್ಲ. ಎಲ್ಲರೂ ಇರ್ತಾರೆ ಎಂದು ನಾಲ್ಕಾರು ಐಟಂ ಮಾಡಿದ್ರು ದೇವಿಕಾ. ಅಡಿಗೆ ಮನೆ ಕಟ್ಟೆ ತುಂಬ ಆ ಪಾತ್ರೆಗಳು, ಸೌಟುಗಳು, ಉಂಡೆದ್ದ ಜಾಗದಲ್ಲಿ ಕುಡಿದ ನೀರಿನ ಲೋಟ, ಮಜ್ಜಿಗೆ ಗ್ಲಾಸು, ಎಂಜಲು ಎಲೆ, ಅದರ ಸುತ್ತ ಚೆಲ್ಲಿದ್ದ ಅನ್ನ, ತರಕಾರಿ ಹೋಳುಗಳು ಇತ್ಯಾದಿ ಇತ್ಯಾದಿ. ದೇವಿಕಾಳ ಪತಿಗೆ ಮನೆ ಒಳಗಡೆ ಕೆಲಸದವರು ಇರಬಾರದು.

ನಮ್ಮ ಮನೆಗೆಲಸ ನಾವೇ ಮಾಡಿಕೊಂಡಷ್ಟು ವೈದ್ಯರಿಗೆ ದುಡ್ಡು ಸುರಿಯುವ ಅಗತ್ಯ ಇಲ್ಲ ಎಂಬ ಧೋರಣೆ. ಮನೆ ಗುಡಿಸಲು, ಒರೆಸಲು, ಒಗೆಯಲು, ತೊಳೆಯಲು ಯಾರೂ ಇಲ್ಲ. ಪತ್ನಿ ಸಿಡಿಮಿಡಿ ಮಾಡಿದರೆ -

`ನನ್ನಮ್ಮನಿಗಿದ್ದ ಕಷ್ಟ ನಿನಗೇನಿದೆ ಪಾತ್ರೆಗಳು ಗ್ಯಾಸ್‌ನಲ್ಲಿಡುವ ಕಾರಣ ಮಸಿ ಇಲ್ಲ. ನೆಲ ಒರೆಸಲು ಸುಲಭ. ಬಟ್ಟೆಗೆ ವಾಷಿಂಗ್ ಮೆಶಿನ್ ಉಂಟು. ಇಡೀ ದಿನ ಮನೆಯಲ್ಲಿ ಏನಿರ್ತದೆ ಕೆಲಸ. ಮಾಡಿಕೋ ನಮ್ಮ ಹಾಗೆ ಶಾಲೆ, ಕಾಲೇಜು, ಆಫೀಸು ನಿನಗಿಲ್ಲ~ ಅನ್ನುತ್ತಾರಂತೆ.

ಪಾತ್ರೆ ತೊಳೆಯಲು ರಾಶಿ ರಾಶಿ ಬಿದ್ದಿತ್ತು. ಉಂಡೆದ್ದ ಜಾಗ ಕ್ಲೀನಾಗಬೇಕಾದರೆ ಸುಮಾರು ಹೊತ್ತು ಬೇಕು. ವಾರದ ಬಟ್ಟೆಯಿಡೀ ದೇವಿಕಾಳಿಗೆ ಒಗೆಯಲಿತ್ತು. ಅವರ ಪತಿಯೋ ಮಜ್ಜಿಗೆ ಚೆನ್ನಾಗಿದೆ ಎಂದು ಲೋಟಕ್ಕೆ ಹಾಕಿ ಕುಡಿದು ಅಲ್ಲೇ ಕುಡಿದ ಲೋಟ ಇಟ್ಟು ಹೋದರು.

ಮಕ್ಕಳದೂ ಹಾಗೇ. ಕುಡಿದ ಲೋಟದ ತಳದಲ್ಲಿ ಉಳಿಸಿದ್ದ ನಾಲ್ಕೈದು ಚಮಚೆ ಮಜ್ಜಿಗೆ ಚೆಲ್ಲಿತ್ತು. ಎಲ್ಲ ಹೋಗಿ ಅವರವರ ಕೋಣೆ ಸೇರಿಕೊಂಡಿದ್ರು. ದೇವಿಕಾ ಮಾತುಗಳಿವು:
ಇದು ನಮ್ಮ ಮನೆಯ ನಿತ್ಯದ ಚಿತ್ರಣ. ಒಂದು ಲೋಟ ಕೂಡಾ ತೊಳೆದಿಡುವುದಿಲ್ಲ.

ಉಂಡ ತಟ್ಟೆ ನಾನೇ ತೆಗೆಯಬೇಕು. ಬೇರೆ ದಿನಗಳಲ್ಲಿ ಬೇಡ. ರಜಾ ದಿನಗಳಲ್ಲಿಯೂ ಒಂದು ತರಕಾರಿ ಹೆಚ್ಚಿ ಕೊಡಲು, ತಿಂಡಿಗೆ ನೆರವಾಗಲು, ಮನೆ ಓರಣಗೊಳಿಸಲು ಕೈ ಹಾಕುವುದಿಲ್ಲ. ಊಟ, ತಿಂಡಿಗೆ ಅತಿಥಿಗಳನ್ನು ಕರೆದ ಹಾಗೆ ನಾಲ್ಕಾರು ಬಾರಿ ಕರೆದ ಮೇಲೆ ಒಳಗೆ ತಲೆ ಹಾಕ್ತಾರೆ.

ಉಂಡು, ತಿಂದು ಕೈ ತೊಳೆದು ಎದ್ದು ಹೋದ್ರೆ, ಪುನಃ ಕಣ್ಣಿಗೆ ಕಾಣಿಸುವುದಿಲ್ಲ. ಕೋಣೆ ಸೇರಿ ಚಿಲಕ ಹಾಕಿಯೇ ಕಂಪ್ಯೂಟರು,. ಇಂಟರ್‌ನೆಟ್ ಅಂತ. ಚಿಲಕ ಹಾಕದೇ ಇದ್ರೆ ಆಗೂದಿಲ್ವಾ ಅಂತ ಹತ್ತಾರು ಬಾರಿ ಕೇಳಿದ್ರೆ ಮುಖ ಸಿಂಡರಿಸ್ತಾರೆ.

ಮನೆಯಲ್ಲಿರುವವರು ನಾವೇ ಬಾಗಿಲು ಹಾಕ್ಕೊಳ್ಬೇಕು ಅಂತ ಉಂಟಾ? ಹೇಳಿದ್ರೆ ಸಿಟ್ಟು. ಬೆಳಗ್ಗೆ ಎಂಟು ಗಂಟೆಗೆ ಮೊದಲು ರಜಾದಿನ ಹಾಸಿಗೆಯಿಂದ ಏಳುವುದಿಲ್ಲ. ಒಬ್ಬಳು ಮೆಡಿಕಲ್ಲು, ಇನ್ನೊಬ್ಬಳು ಡೆಂಟಲ್ಲು. ನನಗೇನಾದರೂ ಆ ಶಬ್ದಗಳು ಗೊತ್ತಾಗದೆ ಕೇಳಿದ್ರೆ ಅಪಹಾಸ್ಯದ ನಗು ಬೇರೆ. ಅದರ ಶಬ್ದಗಳು, ಅರ್ಥ ಅದು ಹೇಗೆ ಗೊತ್ತಿರ್ತದೆ ನಮಗೆ?
ಇಡೀ ದಿನದ ಕೆಲಸ ಮಾಡಿ ಸಾಕಾಗಿರ್ತದೆ.

ರಾತ್ರಿ ಬೇಗನೆ ಊಟ ಮುಗಿಸಿ ಮಲಗುವಾ ಅಂದ್ರೆ ಒಬ್ರೂ ಬರುವುದಿಲ್ಲ. ಅವರು ಹತ್ತಕ್ಕೋ, ಹನ್ನೊಂದಕ್ಕೋ ಊಟಕ್ಕೆ ಬರುವವರೆಗೂ ಕಾಯ್ತಾ ಇರಬೇಕು. ಕಿವಿ ತೂತು ಬೀಳುವಷ್ಟು ಗಟ್ಟಿ ಟಿ.ವಿ. ವಾಲ್ಯೂಂ ಏರಿಸ್ತಾರೆ. ನನಗೆ ಅದು ಕೇಳಿದ್ರೆ ನಿತ್ಯ ತಲೆನೋವು.

ಎಲ್ಲಾ ಕೂತಕಡೆಗೆ ಸಪ್ಲೈ ಆಗಬೇಕು. ಒಳ್ಳೇ ಅತಿಥಿಗಳ ಹಾಗೆ ಮನೆಯಲ್ಲಿ ಇರ್ತಾರೆ. ವಿಶೇಷ ಅಂದ್ರೆ ನನ್ನ ಯಜಮಾನ್ರು ಹೀಗೇ. ನನಗೆ ಮನೆಗೆಲಸ ಮಾಡಿಕೊಂಡ್ರೆ ಆರೋಗ್ಯಕ್ಕೆ ಒಳ್ಳೇದು ಎಂದು ಅಪ್ಪಣೆ ಮಾಡುವವರು ಅವರು ಉಂಡ ತಟ್ಟೆ ಕೂಡಾ ತೊಳೆಯುವುದಿಲ್ಲ. ಎಲ್ಲರೂ ಸ್ವಲ್ಪ ಸ್ವಲ್ಪ ಕೈ ಹಾಕಿದ್ರೆ ನನಗೆ ಕಷ್ಟವಿಲ್ಲ. ಗದರಿಸಿ ಹೇಳಿದೆ ಮಕ್ಕಳಿಗೆ. ತಿರುಗಿ ನಿಷ್ಠುರವಾಗಿ ನನಗೇ ಹೇಳ್ತಾರೆ ಈ ಮಕ್ಕಳು.

ನಾನು ಕಾಲೇಜಿಗೆ ಹೋಗುತ್ತಿರುವಾಗ ನಮ್ಮನೆಯಲ್ಲಿ ಅದೆಷ್ಟು ಕೆಲಸ ಮಾಡಿಕೊಳ್ತಿದ್ದೆ. ಎಂದಿಗೂ ನನ್ನ ತಾಯಿಗೆ ಹೀಗೆ ಮಾಡಿರಲೇ ಇಲ್ಲ. ತಪ್ಪು ಯಾರದು ಅಂತ ಹೇಳಲು ತಿಳಿಯದು. ಗಂಡನಾದೋರು ಪತ್ನಿಗೆ ನೆರವಾಗುವ ಸ್ವಭಾವ ಬೆಳೆಸಿಕೊಂಡ್ರೆ, ಅದನ್ನು ನೋಡ್ತಾ ನೋಡ್ತಾ ಇವರೂ ನೆರವಾಗ್ತಿದ್ದರೇನೋ? ಅಮ್ಮ ಅನ್ನುವ ಅಂತಃಕರಣ ಕಾಣುವುದಿಲ್ಲ. `ನನ್ನದು~ ಎನ್ನುವ ಸ್ವಭಾವ ಎದ್ದು ಕಾಣ್ತದೆ.

ಅಪ್ಪನಿಗೆ ಮಾತ್ರ ಆಹ್ವಾನ
ಇವರನ್ನು ಬೆಳೆಸುವಲ್ಲಿ ನಾನೇ ತಪ್ಪಿದ್ದೇನಾ ಅಲ್ಲ ಇಂದಿನ ದಿನಗಳ ಪ್ರಭಾವ ಮನೆ ಮನೆಗಳಲ್ಲಿ ಇದೇ ಸ್ಥಿತಿಯಾ ತಿಳಿಯದು. ಅಮ್ಮನಲ್ಲಿ ಏನೂ ಹಂಚಿಕೊಳ್ಳುವುದಿಲ್ಲ.

ಕಾಲೇಜಿನ ವಿಚಾರ ಹೇಳುವುದಿಲ್ಲ. ಅಪ್ಪನ ಜೊತೆ ಹರಟುತ್ತಾರೆ. ನಗುತ್ತಾರೆ. ಅದಕ್ಕೆ ವೇಳೆಯಿದೆ. ಅಮ್ಮನಲ್ಲಿ ಮಾತಾಡಲು, ಸಹಾಯ ಮಾಡಲು ಗೊತ್ತಾಗುವುದಿಲ್ಲ. ಹೆತ್ತ ತಾಯಿ ಅನ್ನುವ ಮಮಕಾರ ಹೈಸ್ಕೂಲ್‌ವರೆಗೂ ಇತ್ತು. ಕಾಲೇಜಿನಲ್ಲಿ ಏನಾದರೂ ಫಂಕ್ಷನ್ ಇದ್ರೆ ಅಪ್ಪನಿಗೆ ಮಾತ್ರ ಆಹ್ವಾನ. ನಾನು ಬರುವುದು ಬೇಡ ಎಂಬ ಧೋರಣೆ. ಅಮ್ಮ ಮನೆಯಲ್ಲಿ ಅಡಿಗೆ, ತಿಂಡಿ, ತೊಳೆ, ಬಳಿ, ಒಗೆ ಅನ್ನುವ ಕೆಲಸಕ್ಕೇ ಫಿಟ್ ಅನ್ನುವ ಮನೋಭಾವ.

ನಾನೇ ಇವರನ್ನು ಬೆಳೆಸುವಲ್ಲಿ ತಪ್ಪು ಮಾಡಿದ್ದೇನಾ? ಅಲ್ಲ ಇಂದಿನ ಹದಿಹರೆಯದವರೆಲ್ಲ ಹೀಗೇನಾ? ಎಲ್ಲರ ಮನೆ ದೋಸೆಯೂ ತೂತೇ ಎನ್ನುವ ನಾಣ್ನುಡಿ ಇಲ್ಲಿಗೆ ಹೊಂದಿಕೊಳ್ತದಾ?

ಬಹುತೇಕ ಮನೆಗಳಲ್ಲಿ ಮಕ್ಕಳು ದೊಡ್ಡವರಾದರೂ ಅಮ್ಮನಿಗೆ ನೆರವಾಗುವುದು ಬಹಳ ಕಡಿಮೆ ಎನ್ನಬೇಕು. ತಾಯಿಗೆ ಸುಸ್ತು ಹೆವಿವರ್ಕ್ ಆಗ್ತದೆ ಅಂತ ಪರಿಗಣಿಸುವ ಅಂತಃಕರಣವಿರುವ ಮಕ್ಕಳು ಕಡಿಮೆ ಎನ್ನಬಹುದು. ತಮ್ಮದೇ ಮನೆಯಲ್ಲಿ ತಾವು ಅತಿಥಿಗಳಂತೆ ಇರುವ ಬದಲಿಗೆ ಹೆತ್ತವರ, ಹಿರಿಯರ ಕೆಲಸ ಕಾರ್ಯದಲ್ಲಿ ಸಹಕರಿಸಿದರೆ, ಪ್ರೀತಿ ವಿಶ್ವಾಸಗಳಿಂದ ಒಂದಾಗಿ ನೆರವಾಗಿ ಎಲ್ಲವನ್ನೂ ಹಂಚಿಕೊಂಡರೆ ಅದು ಬೆಲೆ ಕಟ್ಟಲಾಗದ ಮಧುರ ಸಂಬಂಧ.
 
ಪತಿ ಪತ್ನಿಗೆ ಮನೆಗೆಲಸದಲ್ಲಿ ಸಹಾಯ ಮಾಡಿದರೆ ಅದರಿಂದ ಪಡೆದುಕೊಳ್ಳುವುದೇ ಹೆಚ್ಚು ಹೊರತು ಕಳೆದು ಕೊಳ್ಳುವುದೇನಿಲ್ಲ. ಮಕ್ಕಳಾದರೂ ಅದೇ ಬಂಧನ ಬಿಗಿಯಾಗಿ ಅಂತಃಕರಣ ಗಾಢ ಬೆಸುಗೆ ಹಾಕುತ್ತದೆ.

`ಹಿಂಗ್ಯಾಕ ಮಾಡತಿ ಮಗಳೇ~ ದೇವಿಕಾಳ ಪ್ರಶ್ನೆ ಹೆಚ್ಚಿನ ಅಮ್ಮಂದಿರ ಪ್ರಶ್ನೆಯೇ ಎನ್ನಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT